ಇಸ್ರಾಯೇಲ್ ಮತ್ತು ಜುದೇಯದ ಅರಸರಲ್ಲೇ ಮಹಾ ಅರಸನೆನಿಸಿಕೊಂಡವನು ದಾವೀದ ಅರಸ. ಅರಸ 'ಸೌಲ'ನ ಬಳಿಕ ಅವನ ಮಗ 'ಇಷ್ಬೊಶೆತ್' ಇಸ್ರಾಯೇಲರ ರಾಜನಾಗುತ್ತಾನೆ. ಅವನ ಬಳಿಕ ದೈವನಿರ್ಣಯದಂತೆ ಅರಸನ ಪಟ್ಟಕ್ಕೇರಿದ್ದು ದಾವೀದ.
'ದಾವೀದ' ಎನ್ನುವ ಹೆಸರಿನ ಅರ್ಥ ಪ್ರಾಯಶಃ 'ಪ್ರೀತಿಪಾತ್ರ' ಎಂದಿರಬೇಕೆಂದು ಅಭಿಪ್ರಾಯ ಪಡಲಾಗುತ್ತಿದೆ.
ಹೊಸ ಒಡಂಬಡಿಕೆಯ ಸುಸಂದೇಶಗಳಲ್ಲಿ 'ದಾವೀದನ ಪುತ್ರ ಯೇಸು' ಎಂಬುದಾಗಿ ಉಚ್ಚರಿಸುವುದನ್ನು ನೋಡಬಹುದು. ಇದಕ್ಕೆ ಯೇಸುವೂ ಮಾರ್ಮಿಕವಾಗಿ ಉತ್ತರಿಸುತ್ತಾರೆ. ಯೇಸುವನ್ನು 'ದಾವೀದನ ಕುಮಾರ' ಎನ್ನುವುದು ಎಷ್ಟರ ಮಟ್ಟಿಗೆ ಸರಿಯೆಂಬುದು ಚರ್ಚಾಸ್ಪದ ವಿಷಯವಾಗಿದೆ.
ದಾವೀದನು ಹಲವು ವ್ಯಕ್ತಿತ್ವಗಳನ್ನು ಮೇಳೈಸಿಕೊಂಡಿರುವ ಬೈಬಲ್‌ನ ಪ್ರಮುಖ ವ್ಯಕ್ತಿ. ಮೇಷಪಾಲಕನಾಗಿದ್ದ ದಾವೀದ ಇದ್ದಕ್ಕಿದ್ದಂತೆ ಪರಾಕ್ರಮಿಯಾದ ಯೋಧನಾಗುತ್ತಾನೆ, ಪರಮಶೂರನಾಗಿ ಯುದ್ದರಂಗದಲ್ಲಿ ಕಾದಾಡುತ್ತಾನೆ. ಇಸ್ರಾಯೇಲರ ರಾಜನಾಗಿ ಮೆರೆಯುತ್ತಾನೆ. ಇವನು ಪ್ರವಾದನೆಯನ್ನು ಮಾಡುತ್ತಾನೆ. ಇವೆಲ್ಲದರ ಜೊತೆಗೆ ಅವನೊಬ್ಬ ಸಂಗೀತಗಾರನಾಗಿ ಸೌಲನ ಅರಮನೆಯಲ್ಲಿ ಸಂಗೀತ ನುಡಿಸುತ್ತಾನೆ. ಕವಿಯಾಗಿ 'ಕೀರ್ತನೆ' ಎಂಬ ಬೈಬಲ್‌ನ ಒಂದು ಪುಸ್ತಕವು ಒಳಗೊಂಡಿರುವ ಹಲವು ಕೀರ್ತನೆಗಳ ರಚನೆಯಲ್ಲಿ ದಾವೀದನ ಪಾಲೂ ಇದೆಯೆನ್ನಲಾಗಿದೆ. ಓರ್ವ ನಾಯಕನಾಗಿ ಮೆರೆದ ದಾವೀದ ದೇವರ ಆಜ್ಞಾವರ್ತಿಯಾಗಿಯೂ ಆಗಿರುತ್ತಾನೆ; ಹುಲುಮಾನವನಂತೆ ತಪ್ಪುಗಳನ್ನೂ ಎಸಗುತ್ತಾನೆ; ಮಾಡಿದ ತಪ್ಪುಗಳಿಗಾಗಿ ಪ್ರಾಯಶ್ಚಿತ್ತವನ್ನೂ ಅನುಭವಿಸುತ್ತಾನೆ.
ದಾವೀದನು ಬೆತ್ಲೆಹೆಮ್‌ನ ನಿವಾಸಿ 'ಜೆಸ್ಸೆ'(ಇಷಾಯಿ)'ಯ ಮಗ. ತಾಯಿ, 'ನಿತ್ಸೆವೆತ್'. ಜೆಸ್ಸೆಯ ಏಳು
ಗಂಡು ಮಕ್ಕಳಲ್ಲಿ ಅತ್ಯಂತ ಕಿರಿಯನಾದವನು ದಾವೀದ. ಇವನಿಗೆ ಈರ್ವರು ಸಹೋದರಿಯರೂ ಇದ್ದರು1. ದಾವೀದರಸನಿಗೆ ಲೆಖ್ಖವಿಲ್ಲದಷ್ಟು ಪತ್ನಿಯರೂ ಉಪಪತ್ನಿಯರೂ ಇರುತ್ತಾರೆ. ರಾಜಕೀಯ ಮತ್ತು ರಾಷ್ಟ್ರೀಯ ಸಂಘಟನೆಗಳೊಂದಿಗೆ ಭಾವೈಕ್ಯ ಸ್ಥಾಪನೆಗಾಗಿ ಅನೇಕರನ್ನು ಅವನು ಮದುವೆಯಾಗಬೇಕಾಗಿ ಬಂತು ಎನ್ನುತ್ತದೆ ಒಂದು ಐತಿಹ್ಯ. ಅದೇನೇ ಇದ್ದರೂ ಬೆತ್ಸೆಬೆ(ಈಕೆಯ ಗಂಡನನ್ನು ಕೊಲ್ಲಿಸಿ ದಾವೀದನು ಈಕೆಯ ವಿವಾಹಗೈದಿರುತ್ತಾನೆ)ಯೊಂದಿಗಿನ ಅವನ ಸಂಬಂಧ ಅವನಿಗೊಂದು ಕಪ್ಪು ಚುಕ್ಕೆಯಾಗುತ್ತದೆ. ಇತರ ಹೆಂಡತಿಯರಲ್ಲಿ ಅವನಿಗೆ ಹಲವು ಮಕ್ಕಳಿದ್ದರೂ ಬೆತ್ಸೆಬೆಯ ಮೂವರು ಮಕ್ಕಳಲ್ಲಿ ಕಿರಿಯನಾದ 'ಸೊಲೊಮೊನ'ನು ದಾವೀದನ ನಂತರ ಅರಸ ಪಟ್ಟಕ್ಕೆ ಏರುವ ಸೌಭಾಗ್ಯ ಹೊಂದುತ್ತಾನೆ.
ಕೀರ್ತನೆಯನ್ನು ಹಾಡುತ್ತಿರುವ ದಾವೀದ |
ಫಿಲಿಸ್ಟಿನಿಯರ ದೈತ್ಯ ಯೋಧ ಗೊಲಿಯಾತ್‌ನನ್ನು ಏಕಾಂಗಿಯಾಗಿ ಕೊಂದ ಬಾಲಕ ದಾವೀದ್ ಅರಸ ಸೌಲನ ಮೆಚ್ಚುಗೆಗೆ ಪಾತ್ರನಾದದ್ದು, ದಾವೀದನ ಜನಪ್ರಿಯತೆಗೆ ಅರಸ ಸೌಲನು ಕನಲಿದ್ದು, ಸೌಲನ ಪುತ್ರ ಯೋನಾತನೊಂದಿಗಿನ ದಾವೀದನ ಗೆಳೆತನ ಮತ್ತು ಅರಸನಾದ ಬಳಿಕ ಅವನು ಮಾಡಿದ ಯುದ್ದಗಳು, ಮಗ ಅಬ್ಸಾಲೊಮ್‌ನು ದಾವೀದನ ವಿರುದ್ದ ಮಾಡಿದ ದಂಗೆ, ಇವು ದಾವೀದನ ಜೀವನದ ಪ್ರಮುಖ ಘಟನೆಗಳು.
ಜೆರುಸಲೇಮಿನಲ್ಲಿ
ದೇಗುಲ ನಿರ್ಮಾಣದ ಕಾರ್ಯಕ್ರಮ ಹಮ್ಮಿಕೊಂಡಿದ್ದು ದಾವೀದನಾದರೂ ಅದನ್ನು ನೆರವೇರಿಸಿದ್ದು ಮಾತ್ರ ಆತನ ಪುತ್ರ 'ಸೊಲೊಮೊನ್'.
1ಪೂರ್ವ 2:13
1ಪೂರ್ವ 2:13
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ