ಪ್ರೇಷಿತ
ಅರ್ಥಾತ್ 'ಕಳುಹಿಸಲ್ಪಟ್ಟವನು'. ಸುಸಂದೇಶವನ್ನು ಎಲ್ಲೆಡೆ ಸಾರಲು ಯೇಸು
ತಮ್ಮ ಶಿಷ್ಯ ಬಳಗವನ್ನು ನಿಯೋಜಿಸುತ್ತಾರೆ.
ಹೀಗೆ ಕಳುಹಿಸಲ್ಪಟ್ಟವರನ್ನು 'ಪ್ರೇಷಿತರು' ಅಥವಾ 'ಅಪೊಸ್ತಲರು' ಎಂದು
ಕರೆಯಲಾಗುತ್ತದೆ. ಸಂತ ಪೌಲನೂ ಸಹ
ಓರ್ವ ಪ್ರೇಷಿತ. ಧರ್ಮಪ್ರಚಾರಕರನ್ನೂ ಪ್ರೇಷಿತನೆಂದು ಕರೆಯಲಾಗುತ್ತದೆ.
ಯೇಸು
ಹನ್ನೆರಡು ಜನರನ್ನು ತಮ್ಮ ಶಿಷ್ಯರನ್ನಾಗಿ ಆಯ್ಕೆ
ಮಾಡಿಕೊಳ್ಳುತ್ತಾರೆ. ಅವರುಗಳು ಯಾರೆಂದರೆ: 'ಸೀಮೋನಪೇತ್ರ' ಮತ್ತು ಅವನ ಸೋದರ
'ಅಂದ್ರೆಯ', ಜೆಬೆದೇಯನ ಮಕ್ಕಳಾದ 'ಯಕೋಬ' ಮತ್ತು 'ಯೊವಾನ್ನ',
'ತೋಮ', 'ಮತ್ತಾಯ', 'ಫಿಲಿಪ್ಪ' ಮತ್ತು 'ಬಾರ್ತೊಲೊಮಾಯ', ಆಲ್ಫಾಯನ
ಮಗ 'ಯಕೋಬ' ಮತ್ತು 'ತದ್ದಾಯ';
ದೇಶಾಭಿಮಾನಿ 'ಸಿಮೋನ' ಮತ್ತು 'ಯೂದ
ಇಸ್ಕಾರಿಯೋತ'. ಗಲಿಲೇಯ ಸಮುದ್ರದ ಬೆಟ್ಟವೊಂದರ
ಮೇಲೆ ಯೇಸು ತಮ್ಮ ಹನ್ನೆರಡು
ಮಂದಿ ಶಿಷ್ಯರಿಗೆ 'ಪ್ರೇಷಿತರು' ಎಂದು ಹೆಸರಿಡುತ್ತಾರೆ. ಅವರಿಗೆ,
"ನನ್ನ ಜೊತೆಯಲ್ಲಿರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ,"
ಎಂದು ಹೇಳುತ್ತಾರೆ(ಮಾರ್ಕ 3:14).
ಈ
ಹನ್ನೆರಡು ಮಂದಿಯ ನಿಯೋಗಕ್ಕೆ ಯೇಸು
ಕೆಲವು ನಿಬಂದನೆಗಳನ್ನು ಹಾಕಿರುತ್ತಾರೆ, "ಪರಕೀಯರತ್ತ
ಹೋಗಲೇಬೇಡಿ; ಸಮಾರಿಯಾದವರ ಯಾವ ಊರಿಗೂ ಕಾಲಿಡಬೇಡಿ.
ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತಿರುವ
ಇಸ್ರಯೇಲ್ ಜನರ ಬಳಿಗೆ ಹೋಗಿರಿ;
ಹೋಗುತ್ತಾ, 'ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ' ಎಂದು ಬೋಧನೆ ಮಾಡಿರಿ.
ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು
ಸ್ವಸ್ಥಮಾಡಿರಿ. ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ,
ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ
ಜೋಡನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ.
ಏಕೆಂದರೆ ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. ನೀವು ಒಂದು ಪಟ್ಟಣಕ್ಕಾಗಲಿ,
ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು
ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ
ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು
ಒಂದು ಮನೆಗೆ ಹೋದಾಗ, 'ಈ
ಮನೆಗೆ ಶುಭವಾಗಲಿ' ಎಂದು ಹರಸಿರಿ. ಆ
ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದವು ಅವರ
ಮೇಲೆ ನೆಲೆಸಲಿ. ನಿಮ್ಮನ್ನು ಸ್ವಾಗತಿಸಿದೆ ಹೋದರೆ, ನಿಮ್ಮ ಆಶೀರ್ವಾದ
ನಿಮಗೇ ಹಿಂದಿರುಗಿ ಬರಲಿ. ಒಂದು ಮನೆಯೇ
ಆಗಲಿ, ಊರೇ ಆಗಲಿ, ನಿಮ್ಮನ್ನು
ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆ
ಹೋದರೆ, ಆ ಮನೆಯನ್ನು ಅಥವಾ
ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ.
ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ
ಧೂಳನ್ನು ಝಾಡಿಸಿಬಿಡಿ.." ಇತ್ಯಾದಿಯಾದ ನಿಬಂಧನೆಗಳನ್ನು ಹಾಕಿ ಅವರನ್ನು ಧರ್ಮಪ್ರಸಾರಕ್ಕೆ
ಕಳುಹಿಸಿಕೊಡುತ್ತಾರೆ(ಮತ್ತಾಯ 10:1-14).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ