ಯೇಸುಕ್ರಿಸ್ತರ ಸಹೋದರರು

ಯೇಸುವು 1'ತಮ್ಮ ಸ್ವಗ್ರಾಮದ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದ್ದನ್ನು ಕೇಳಿದ ಅಲ್ಲಿಯ ಜನರು, ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಈತ ಮಾಡುವುದಾದರೂ ಹೇಗೆ? ಇವನು ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್‌, ಸಿಮೋನ, ಯೂದ ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?" ಎಂದು ಮಾತನಾಡಿಕೊಂಡು ಯೇಸುವನ್ನು ತಿರಸ್ಕರಿಸಿದ್ದರು,' ಎಂಬ ಘಟನೆಯನ್ನು ಮತ್ತಾಯನ ಸುಸಂದೇಶದಲ್ಲಿ ಓದಬಹುದು. ಮಾರ್ಕನ ಸುಸಂದೇಶದಲ್ಲೂ ಯೇಸುವಿನ ಸೋದರರ ಹೆಸರುಗಳು ಪುನರಾವರ್ತನೆಯಾಗಿವೆ (ಮತ್ತಾಯನ ಗ್ರಂಥದ 'ಜೋಸೆಫ್‌' ಮಾರ್ಕನ ಗ್ರಂಥದಲ್ಲಿ 'ಯೋಸೆ'ಯಾಗಿದ್ದಾನೆ); ಮತ್ತಾಯ ಮತ್ತು ಮಾರ್ಕನ ಗ್ರಂಥಗಳು ಯೇಸುವಿಗೆ ನಾಲ್ವರು ಸಹೋದರರು ಇದ್ದರು ಎಂಬುದನ್ನು ಸೂಚಿಸುತ್ತದೆ. ಅವರಿಗೆ ಸಹೋದರಿಯರೂ ಇದ್ದರು ಎಂಬ ಬಗ್ಗೆ ಉಲ್ಲೇಖವಿದೆಯಾದರೂ ಅವರೆಷ್ಟು ಜನರಿದ್ದರು ಎಂಬುದರ ಬಗ್ಗೆ ಬೈಬಲ್‌ ಗ್ರಂಥದಲ್ಲಿ ವಿವರಣೆ ದೊರಕುವುದಿಲ್ಲ. ವಿಪರ್ಯಾಸವೆಂದರೆ ಯೇಸುವು  ಶಿಲುಬೆಯಲ್ಲಿ ಮರಣವೇದನೆಯನ್ನು ಅನುಭವಿಸುತ್ತಿದ್ದಾಗ ಅವರ ಬಳಿಗೆ ಯಾವೊಬ್ಬ ಸಹೋದರ, ಸಹೋದರಿಯೂ ಧಾವಿಸಿ ಬಂದ ಉಲ್ಲೇಖ ದೊರಕುವುದಿಲ್ಲ.

ಅದೇ ರೀತಿಯಲ್ಲಿ ಯೇಸುವಿನ ಸ್ವಗ್ರಾಮದ ಪ್ರಾರ್ಥನಾಲಯದಲ್ಲಿ ಸಂಭವಿಸಿದ ಘಟನೆಯ ಮುಂದುವರಿದ ಭಾಗವನ್ನು ಸ್ವಲ್ಪ ಗಮನಿಸೋಣ:  2'ತಮ್ಮ ಗ್ರಾಮದ ಪ್ರಾರ್ಥನಾಮಂದಿರದಲ್ಲಿ ಬೋಧಿಸಿದ ಯೇಸುವನ್ನು ಕಂಡು ಪ್ರಾರ್ಥನಾಮಂದಿರದಲ್ಲಿದ್ದ ಎಲ್ಲರೂ ಕಡುಕೋಪಗೊಂಡರು. ಅವರನ್ನು ಆ ಊರಹೊರಕ್ಕೆ ಎಳೆದುಕೊಂಡು ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು ಅಲ್ಲಿಂದ ಕೆಳಕ್ಕೆ ದೂಡಬೇಕೆಂದಿದ್ದರು. ಆದರೆ ಯೇಸು ಅವರ ನಡುವೆಯೇ ನಡೆದು ತಮ್ಮ ದಾರಿ ಹಿಡಿದು ಹೋದರು,' ಎಂಬ ವಿವರವು ಲೂಕನ ಸುಸಂದೇಶದಿಂದ ದೊರಕುತ್ತದೆ.

ಆದರೆ ಯೇಸುವನ್ನು ಸ್ವಂತ ಊರಿನ ಜನರು ಬೆಟ್ಟದಿಂದ ಕೆಳಕ್ಕೆ ತಳ್ಳಿ ಕೊಲ್ಲಲು ಯತ್ನಿಸುವಂತಹ ಪರಿಸ್ಥಿತಿ ನಿರ್ಮಾಣವಾದಾಗ ಅದೇ ಊರಿನಲ್ಲಿದ್ದ; ಪ್ರಾಯಶಃ ಅದೇ ಪ್ರಾರ್ಥನಾ ಮಂದಿರದಲ್ಲೂ ಇದ್ದಿರಬಹುದಾದ ಯೇಸುವಿನ ಸಹೋದರರು ಅವರ ಸಹಾಯಕ್ಕೆ ಧಾವಿಸಿ ಬರುವುದಿಲ್ಲ. ಅಂದರೆ ತಮ್ಮ ಹಿರಿಯ ಸಹೋದರನ ಬಗ್ಗೆ ಅವರಿಗೆ ವಿಶ್ವಾಸ ಕಾಳಜಿ ಇಲ್ಲವೆಂದು ಇದರ ಅರ್ಥವೇ?

ಇದಕ್ಕೆ ಇಂಬು ಕೊಡುವಂತಹ ಮತ್ತೊಂದು ಘಟನೆ ಇಲ್ಲಿದೆ. ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿದ್ದ ಸಂದರ್ಭ. 'ಯೇಸುವಿನ ಸಹೋದರರು, "ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಅಲ್ಲಿ ನೀನು ಮಾಡುವುದನ್ನೆಲ್ಲಾ ನಿನ್ನ ಅನುಯಾಯಿಗಳು ನೋಡಲಿ. ಪ್ರಖ್ಯಾತನಾಗಬೇಕೆಂದಿರುವ ಯಾರೂ ತನ್ನ ಕಾರ್ಯಗಳನ್ನು ಮರೆಯಲ್ಲಿ ಮಾಡುವುದಿಲ್ಲ. ಇವನ್ನೆಲ್ಲಾ ನೀನು ಮಾಡುವುದಾದರೆ ಲೋಕಕ್ಕೆ ಪ್ರಕಟವಾಗುವಂತೆ ಮಾಡಬೇಕು," ಎಂದು ಯೇಸುವಿಗೆ ಹೇಳುತ್ತಾರೆ. ಇದು ಅವರ ಸಹೋದರರಿಗೂ ಕೂಡ ಅವರಲ್ಲಿ ವಿಶ್ವಾಸವಿರಲಿಲ್ಲ.' ಎಂದು ಯೊವಾನ್ನನ ಸುಸಂದೇಶವು ಹೇಳುತ್ತದೆ. ಇದು ಯೇಸುವಿನ ಬಗ್ಗೆ ಅವರ ಸಹೋದರರಿಗೂ ವಿಶ್ವಾಸವಿರಲಿಲ್ಲ ಎಂಬುದನ್ನು ಪುಷ್ಟೀಕರಿಸುತ್ತದೆ.

ಇಲ್ಲಿ ಯೇಸುವಿನ ಬಗ್ಗೆ ಅವರ ಸಹೋದರರಲ್ಲಿದ್ದ ಭಾವನೆಯೇ ಬೇರೆಯಾಗಿತ್ತು. ಯೇಸು ಮಾಡುತ್ತಿದ್ದುದ್ದನ್ನೆಲ್ಲಾ ಕಂಡ ಅವರು ಜಗತ್ತಿನಲ್ಲಿ ತಾನು ಪ್ರಖ್ಯಾತನಾಬೇಕೆಂಬ ಅಭಿಲಾಷೆ ಯೇಸುವಿಗೆ; ಅದಕ್ಕಾಗಿಯೇ ಇದನ್ನೆಲ್ಲಾ ಮಾಡುತ್ತಿದ್ದಾನೆ ಎಂದುಕೊಂಡಿರುವ ಸಾಧ್ಯತೆ ಇದೆ. ಹಾಗಾಗಿಯೇ ಐಎಸುವಿನ ಸಹೋದರರು, 'ನೀನೇನೆ ಮಾಡುವುದಿದ್ದರೂ ಅದನ್ನು ಮಹಾ ಪ್ರಾರ್ಥನಾಮಂದಿರವಿದ್ದ ಜುದೇಯಕ್ಕೆ ಹೋಗಿ ಮಾಡು; ಅಲ್ಲಿನ ಜನರು ಅದನ್ನು ಗಮನಿಸುತ್ತಾರೆ; ಆಗ ಅದು ಲೋಕಕ್ಕೆ ಪ್ರಕಟವಾಗುತ್ತದೆ', ಎಂಬ ಅಭಿಪ್ರಾಯ ಸೂಚಿಸಿದ್ದರು. ಈ ರೀತಿಯಲ್ಲಿ ಯೇಸುವಿಗೆ ಬುದ್ಧಿವಾದವನ್ನು ಅವರು ಹೇಳಿದ್ದರು. ಆದರೆ ಅವರಲ್ಲಿ, ಯೇಸುವಿನ ಬಗ್ಗೆ ಸ್ಪಷ್ಟ ಜ್ಞಾನವಿರುವುದಿಲ್ಲ. ಅವರು 'ದೇವಪುತ್ರರು' ಎಂಬ ಅರಿವು ಅವರಿಗೆ ಇರುವುದಿಲ್ಲ. ಹಾಗಾಗಿಯೇ ಯೇಸು ಶಿಲುಬೆಯ ಮೇಲಿದ್ದಾಗ ಮರಣವೇದನೆಯನ್ನು ಅನುಭವಿಸುತ್ತಿದ್ದಾಗ ನಮಗೇಕೆ ಈ ಗೊಡವೆ ಎಂದು ದೂರವೇ ಉಳಿದುಕೊಂಡಿರುತ್ತಾರೆ. ಆದರೆ ಹೆತ್ತ ಕರುಳಾದ ಮಾತೆ ಮೇರಿ ಅಲ್ಲಿಗೆ ಧಾವಿಸಿ ಬರುತ್ತಾರೆ; ಅವರ ಜೊತೆಗೆ ಯೇಸುವಿನ ಮೇಲೆ ಅಪಾರ ನಂಬಿಕೆಯಿರಿಸಿದ್ದ ಇತರ ಮಹಿಳೆಯರೂ ಕೂಡ ಬರುತ್ತಾರೆ. ಯೇಸುವಿನ ಶಿಷ್ಯರಲ್ಲಿ ಯೊವಾನ್ನನನ್ನು ಹೊರತು ಪಡಿಸಿ ಉಳಿದೆಲ್ಲಾ ಶಿಷ್ಯರೂ ಆ ವೇಳೆಯಲ್ಲಿ ಅಂತರ್ಗತರಾಗಿ ಉಳಿದು ಬಿಡುತ್ತಾರೆ.

ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ, 'ಯೇಸುವಿನ ಸಹೋದರರು...' ಎಂದಷ್ಟೇ ಹೇಳುವ ಬೈಬಲ್‌ ಆ ಸಹೋದರರು ಯೇಸುವಿನ ನಿಜವಾದ ಸಹೋದರರೇ ಅಥವಾ ಸಂಬಂಧಿಕರೇ ಎಂಬುದನ್ನು ತಿಳಿಸುವುದಿಲ್ಲ. ನಿಜಕ್ಕೂ ಸಹೋದರರು ಎಂದ ತಕ್ಷಣ ಅವರು ಸ್ವಂತ ಸಹೋದರರಾಗಲೇ ಬೇಕೆಂದಿಲ್ಲ ಎಂಬ ಹೇಳಿಕೆಯನ್ನು ನೀಡಿದರೂ ಸಹ ಅದಕ್ಕೆ ಪುರಾವೆಯೇನು? ಎಂಬ ಪ್ರಶ್ನೆ ಖಂಡಿತವಾಗಿ ಎದುರಾಗುತ್ತದೆ. ಏಕೆಂದರೆ ಬೈಬಲ್‌ನಲ್ಲಿ ಇದಕ್ಕೆ ಪೂರಕವಾಗುವ ನೇರ ಮಾಹಿತಿ ಲಭ್ಯವಾಗುವುದಿಲ್ಲ. ಯೇಸುವಿನ ಕುಟುಂಬಕ್ಕೆ ಸೇರಿದ ವ್ಯಕ್ತಿಗಳು ನಮಗೆ ತಿಳಿದಂತೆ ಬೈಬಲ್‌ನಲ್ಲಿ ಸ್ಪಷ್ಟವಾಗಿ ತಿಳಿದು ಬರುವುದು ಇಬ್ಬರೇ. ಯೇಸುವಿನ ಮಾತಾಪಿತೃ 'ಮರಿಯ' ಮತ್ತು 'ಜೋಸೆಫ್'.

ಲೂಕನ ಸುಸಂದೇಶದ ಮೂಲಕ ಯೇಸುವಿನ ತಾಯಿಯ ಕುಟುಂಬಕ್ಕೆ ಸಂಬಂಧಿಸಿದ ಇನ್ನೂ ಈರ್ವರು ಸದಸ್ಯರಿದ್ದಾರೆ ಎಂಬ ಅಂಶ ತಿಳಿದು ಬರುತ್ತದೆ. ಅವರು ವೃದ್ದ ದಂಪತಿಗಳಾದ ಜ಼ಕರೀಯ ಮತ್ತು ಎಲಿಜ಼ಬೇತ್‌. ಗಬ್ರಿಯೆಲ್‌ ದೂತನು ಮರಿಯಳನ್ನು ಸಂಧಿಸಿ ಮಂಗಳವಾರ್ತೆಯನ್ನು ಅರುಹುವ ಸಂದರ್ಭದಲ್ಲಿ, 3"ನಿನ್ನ ಸಂಬಂಧಿಕಳಾದ ಎಲಿಜ಼ಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಪಡೆಯಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ..." ಎಂದು ಹೇಳುವಾಗ ಎಲಿಜ಼ಬೇತಳು ಮರಿಯಳ ಸಂಬಂಧಿ ಎಂಬುದು ನಮಗೆ ಅರಿವಾಗುತ್ತದೆ. ಆದರೆ ಜ಼ಕರೀಯ ಮತ್ತು ಎಲಿಜ಼ಬೇತ್‌ರಿಗೆ ಹುಟ್ಟಿದ್ದು ಸ್ನಾನಿಕ ಯೊವಾನ್ನ ಮಾತ್ರವೇ. ಹಾಗಾಗಿ ಸ್ನಾನಿಕ ಯೊವಾನ್ನನೂ ಸಹ ಯೇಸುವಿನ ಸಹೋದರ ಸಂಬಂಧಿಯೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಯಕೋಬ, ಜೋಸೆಫ್‌, ಸಿಮೋನ ಮತ್ತು ಯೂದ ಎಂಬ ಹೆಸರನ್ನು ಹೇಳಿ ಅವರು ಯೇಸುವಿನ ಸಹೋದರರು ಎಂದು ಹೇಳಿರುವುದೇಕೆ? ಅವರು ನಿಜಕ್ಕೂ ಯೇಸುವಿನ ಸಹೋದರರೇ? ಈ ಪ್ರಶ್ನೆಗೆ ಎಲ್ಲಾ ಸುಸಂದೇಶಗಳ ಕೃತಿಗಳನ್ನು ಆಳವಾಗಿ ಅಭ್ಯಸಿಸಬೇಕಾಗುತ್ತದೆ.

ಸುಸಂದೇಶಗಳಲ್ಲಿ ವರ್ಣನೆಯಾಗಿರುವ ವಿಷಯಗಳನ್ನು ಅಭ್ಯಸಿಸುವುದಾದರೆ, ಯೇಸುವನ್ನು ಶಿಲುಬೆಗೇರಿಸಿದ ಸಂದರ್ಭದಲ್ಲಿ ಅವರ ಸನಿಹ ಮೂವರೂ, ಮತ್ತೊಬ್ಬರೂ ಮಹಿಳೆಯರು ಇದ್ದುದಾಗಿ ವಿವರಗಳಿವೆ. ಮತ್ತಾಯನ ಗ್ರಂಥದಲ್ಲಿ, ಅವರನ್ನು ಮಗ್ದಲದ ಮರಿಯ, ಯಕೋಬ ಮತ್ತು ಜೋಸೆಫನ ತಾಯಿ ಮರಿಯ ಮತ್ತು ಜೆಬೆದಾಯನ ಮಕ್ಕಳ ತಾಯಿ ಎಂಬುದಾಗಿ ಹೇಳಲಾಗಿದೆ(ಮತ್ತಾ. ೨೭:೫೬). ಆದರೆ ಯೇಸುವಿನ ತಾಯಿಯ ಬಗ್ಗೆ ಅದರಲ್ಲಿ ಉಲ್ಲೇಖವಿಲ್ಲ.  ಬದಲಾಗಿ ಯಕೋಬ ಮತ್ತು ಜೋಸೆಫನ ತಾಯಿ ಮರಿಯ ಎಂದು ಹೇಳಲಾಗಿದೆ. ಪ್ರಾಯಶಃ ಮರಿಯಳ ನಾಲ್ಕು ಮಕ್ಕಳಲ್ಲಿ ಯಕೋಬ ಮತ್ತು ಜೋಸೆಫ್‌ ಹಿರಿಯರಾಗಿರಬೇಕು. ಹಾಗಾಗಿ ಮತ್ತಾಯನು ಅವರಿಬ್ಬರ ಹೆಸರನ್ನು ಮತ್ರ ಉಲ್ಲೇಖಿಸಿದ್ದಾನೆ. ಇದು ಯೇಸುವಿನ ಸಹೋದರರ ತಾಯಿ ಯಾರೆಂಬುದನ್ನು ಸೂಚಿಸುತ್ತದೆ. ಇನ್ನು ಮಾರ್ಕನ ಗ್ರಂಥದಲ್ಲಿ ಅದೇ ಮೂವರು ಮಹಿಳೆಯರ ಬಗ್ಗೆ ಪ್ರಸ್ತಾಪವಿದೆ. ಯೇಸುವಿನ ತಾಯಿಯ ಬಗ್ಗೆ ಉಲ್ಲೇಖವಿಲ್ಲ. ಮತ್ತಾಯನು ತನ್ನ ಗ್ರಂಥದಲ್ಲಿ 'ಜೆಬುದಾಯನ ಮಕ್ಕಳ ತಾಯಿ' ಎಂದು ಬರೆದಿದ್ದರೆ,  ಮಾರ್ಕನು ತನ್ನ ಗ್ರಂಥದಲ್ಲಿ ಜೆಬುದಾಯನ ಮಕ್ಕಳ ತಾಯಿಯ ಹೆಸರು, 4'ಸಲೋಮೆ' ಎಂಬುದಾಗಿ ಸೂಚಿಸಿದ್ದಾನೆ. ಇಲ್ಲೂ ಸಹ ಯೇಸುವಿನ ಸಹೋದರರ ಹೆಸರನ್ನು ಸೂಚಿಸಿ ಅವರ ತಾಯಿ ಮರಿಯಳು ಹಾಜರಿದ್ದಳು ಎಂಬುದಾಗಿ ಹೇಳಿದ್ದಾನೆ. ಆದರೆ ಯೇಸುವಿನ ಸಹೋದರರ ಹೆಸರನ್ನು, 'ಚಿಕ್ಕ ಯಕೋಬ' ಮತ್ತು 'ಯೋಸೆ' ಎಂಬುದಾಗಿ ಹೇಳಿದ್ದಾನೆ. ಜೋಸೆಫ್‌ ಮತ್ತು ಯೋಸೆ ಎರಡೂ ಒಂದೇ ಹೆಸರು ಎಂಬುದನ್ನಿಲ್ಲಿ ಗಮನಿಸಬೇಕಾಗಿದೆ.

ಲೂಕನು ತನ್ನ ಗ್ರಂಥದಲ್ಲಿ ಇವರಾರನ್ನೂ ಹೆಸರಿಸದೆ, ಯೇಸುವನ್ನು 'ಹಿಂಬಾಲಿಸಿಕೊಂಡು ಬಂದ ಮಹಿಳೆಯರು ಎಂದಷ್ಟೇ ಹೇಳಿದ್ದಾನೆ. ಗಮನಾರ್ಹವಾದ ಸುಸಂದೇಶವೆಂದರೆ ಯೊವಾನ್ನನ ಸುಸಂದೇಶ. ಇದರಲ್ಲಿ ಯೇಸುವನ್ನು ಶಿಲುಬೆಗೇರಿಸಿದಾಗ, ಯೇಸುವಿನ ತಾಯಿಯೂ ಅಲ್ಲೇ ಇದ್ದರು ಎಂದನ್ನು ಸ್ಪಷ್ಟವಾಗಿ ಹೇಳಿದ್ದು ಯೊವಾನ್ನನೊಬ್ಬನೆ. ಏಕೆಂದರೆ ಯೇಸುವನ್ನು ಶಿಲುಬೆಗೇರಿಸಿದಾಗ ಅಲ್ಲಿ ಹಾಜರಿದ್ದ ಯೇಸುವಿನ ಏಕೈಕ ಶಿಷ್ಯ ಆತನೇ ಎಂಬುದನ್ನು ಯೊವಾನ್ನನು ತನ್ನ ಗ್ರಂಥದಲ್ಲಿ ವಿಶದಪಡಿಸಿದ್ದಾನೆ. ಆದರೆ ತನ್ನ ಹೆಸರನ್ನು ಮಾತ್ರ ಎಲ್ಲೂ ಸೂಚಿಸಿಲ್ಲ. ಕೆಲವು ಭಾಹ್ಯ ಪುರಾವೆಗಳನ್ನು ಮಾತ್ರ ಆತ ನೀಡಿದ್ದಾನೆ. ಇನ್ನು ಯೇಸುವಿನ ಶಿಲುಬಾರೋಹಣದ ವೇಳೆ ಮತ್ತಾಯ ಎಲ್ಲಿ ಮಾಯವಾಗಿದ್ದನೆಂಬುದು ತಿಳಿಯುವುದಿಲ್ಲ. ಮಾರ್ಕನದು ಎಳೆಯ ವಯಸ್ಸು ಅಲ್ಲದೆ ಯೇಸುವಿನ ಬಂಧನದ ವೇಳೆ ಸಿಕ್ಕಿಬೀಳಬೇಕಾಗಿದ್ದ ಮಾರ್ಕ ಕತ್ತಲಲ್ಲಿ ನಗ್ನನಾಗಿ ತಪ್ಪಿಸಿಕೊಂಡದ್ದೇ ದೊಡ್ಡಕತೆ. ಹಾಗಾಗಿ ಆತನೂ ಅಲ್ಲಿರುವ ಸಾಧ್ಯತೆ ಕಮ್ಮಿ. ಲೂಕನಂತೂ ಯೇಸುವಿನ ಶಿಷ್ಯನೇ ಅಲ್ಲ. ಯೇಸುವಿನ ಮರಣಾನಂತರವಷ್ಟೇ ಆತ ರಂಗಪ್ರವೇಶ ಮಾಡಿದ್ದು. ಹಾಗಾಗಿ ಯೇಸುವಿನ ಮಾತೆಗೆ ಸಂಬಂಧಿಸಿದಂತೆ ಯೋವಾನ್ನನ ಬರಹವೊಂದೇ ನಂಬಲರ್ಹವಾದುದು. ತನ್ನ ಗ್ರಂಥದಲ್ಲಿ ಯೊವಾನ್ನನು, 'ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೋಪನ ಹೆಂಡತಿ ಮರಿಯ ಮತ್ತು ಮಗ್ದಲದ ಮರಿಯ- ಇವರು ಶಿಲುಬೆಯ ಬಳಿ ನಿಂತಿದ್ದರು' ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಇಲ್ಲಿಯೂ ಮೂವರು ಸ್ತ್ರೀಯರ ಬಗ್ಗೆ ಮಾತ್ರ ಬರೆದಿದ್ದಾನೆ. ಆದರೆ ಮತ್ತಾಯ ಮತ್ತು ಮಾರ್ಕರು ತಿಳಿಸಿದಂತೆ ಅವರ ಜೊತೆಗಿದ್ದ ತನ್ನ ತಾಯಿ ಸಲೋಮೆಯು  ಬಗ್ಗೆ ಯೊವಾನ್ನನು ತಿಳಿಸದಿದ್ದುದು ಏಕೆ ಎಂಬುದು ಅರ್ಥವಾಗುವುದಿಲ್ಲ.

ಯೇಸುವಿನ ತಾಯಿ 'ಮೇರಿ' ಅಥವಾ 'ಮರಿಯ', ಇವರ  ಸಹೋದರಿಯ ಹೆಸರೂ ಅದೇ'. ಇಲ್ಲಿ ನಮಗೆ ಬರುವ ಸಂದೇಹವೆಂದರೆ, ಒಂದೇ ಮನೆಯ ಇಬ್ಬರು ಮಕ್ಕಳನ್ನು ಒಂದೇ ಹೆಸರಿನಿಂದ ಕರೆದಿರುವುದು ಏಕೆಂದು. ಈ ವಾಡಿಕೆ  ಸಾಮಾನ್ಯವಾಗಿ ಎಲ್ಲೂ ಇರುವುದಿಲ್ಲ. ಹೆಸರಿಡುವ ಉದ್ದೇಶ, ಇಟ್ಟ ಹೆಸರಿನಿಂದ ಆ ವ್ಯಕ್ತಿಯನ್ನು ಗುರುತಿಸುವುದು ಸುಲುಭವಾಗಲಿ ಎಂದು. ಹಾಗಾಗಿ ಒಂದೇ ಹೆಸರನ್ನು ಪುನಃ ಇನ್ನೊಬ್ಬರಿಗೆ ಇಡುವುದಿಲ್ಲ. ಒಂದು ವೇಳೆ ಇಟ್ಟದ್ದೇ ಆದರೆ ಅದು ಅವರ ನಿಜನಾಮವಾಗುವುದಿಲ್ಲ ಅಥವಾ ಅವರನ್ನು ಕರೆಯುವ ಹೆಸರೂ ಸಹ ಆಗಿರುವುದಿಲ್ಲ. ಕುಲವನ್ನೋ ಮನೆತನವನ್ನೋ ಸೂಚಿಸುವ ಹೆಸರುಗಳು ಮಾತ್ರ ಒಂದೇ ಕುಟುಂಬದ ಸದಸ್ಯರಲ್ಲಿ ಪುನರಾವರ್ತನೆಯಾಗುತ್ತವೆ. ವಿಶೇಷವೆಂದರೆ ಯೇಸು ಶಿಲುಬೆಯ ಮೇಲಿದ್ದಾಗ ಅವರ ಬಳಿ ಇದ್ದ ಮೂವರು ಮಹಿಳೆಯರ ಹೆಸರೂ 'ಮರಿಯ' ಎಂಬುದು ಗಮನಿಸಲೇಬೇಕಾದ ಅಂಶ. ಯೇಸುವಿನ ಮಾತೆ ಮತ್ತು ಆಕೆಯ ಸಹೋದರಿಯೆಂದು ಹೇಳಲ್ಪಡುವ ಇನ್ನೊಬ್ಬಾಕೆಯನ್ನೂ ಹೊರತುಪಡಿಸಿದರೆ ಮೂರನೆಯ ಮಹಿಳೆಯನ್ನು 'ಮಗ್ದಲದ ಮರಿಯ' ಎಂದು ಕರೆಯಲಾಗಿದೆ. ಈಕೆಯ ಹೆಸರೂ ಮರಿಯ ಎಂದಿದ್ದುದರಿಂದಲೇ ಆಕೆಯನ್ನು ಪ್ರತ್ಯೇಕಿಸಲು 'ಮಗ್ದಲದ ಮರಿಯ' ಎಂದು ಹೇಳಿರಬೇಕು.  ಆದರೆ ಉಳಿದಿಬ್ಬರ ಹೆಸರುಗಳನ್ನು 'ಮರಿಯ' ಎಂದಷ್ಟೇ ಹೇಳಲಾಗಿದೆ. ಅದರರ್ಥ ಅವರಿಗೆ ಇನ್ಯಾವ ಉಪನಾಮವೂ ಇರಲಿಲ್ಲ. 

ಈ ಮೇಲ್ಕಂಡ ಅಂಶಗಳು ಯೇಸುವಿನ ನಾಲ್ವರು ಸಹೋದರರು ಯಾರ ಮಕ್ಕಳು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇನ್ನು ಆ ನಾಲ್ವರು ಸಹೋದರರು ಮುಂದೆ ಏನಾಗುತ್ತಾರೆ ಎನ್ನುವುದು ಕುತೂಹಲದ ಸಂಗತಿ. ಯೇಸುವನ್ನು ಅಪಾರ್ಥ ಮಾಡಿಕೊಂಡು ಅವರನ್ನು ವಿಶ್ವಾಸಿಸದೆ ಹೋಗಿದ್ದ ಹಾಗೂ ಯೇಸುವನ್ನು ಶಿಲುಬೆಗೆ ಏರಿಸಿದಾಗ ಅಲ್ಲೆಲ್ಲೂ ಕಾಣಿಸದೇ ಹೋಗಿದ್ದ ಆ ನಾಲ್ವರು ಸಹೋದರರು ಯೇಸುವು ಶಿಲುಬೆಯ ಮರಣಹೊಂದಿ ಮೂರನೆಯ ದಿನ ಪುನರುತ್ಥಾನರಾಗಿ ಎದ್ದ ಬಳಿಕ ಅವರನ್ನು ತಮ್ಮ ಪ್ರಭುವನ್ನಾಗಿ ಸ್ವೀಕರಿಸಿತ್ತಾರೆ; ಮತ್ತು ಅವರು ಯೇಸುವಿನ  ಅನುಯಾಯಿಗಳೂ ಆಗುತ್ತಾರೆ.

ಯೇಸುವಿನ ಪುನರುತ್ಥಾನದ ಬಳಿಕ ಇಸ್ಕಾರಿಯೋತ ಯೂದನ ಸ್ಥಾನದಲ್ಲಿ ಮತ್ತೀಯನನ್ನು ಚೀಟು ಹಾಕಿ ಆಯ್ಕೆ ಮಾಡುವ ಮೊದಲು, ಒಂದು ಕೊಠಡಿಯಲ್ಲಿ ಸೇರಿದ್ದ ಪ್ರೇಷಿತವರ್ಗವು 5'ಒಮ್ಮತದಿಂದ ಪ್ರಾರ್ಥನೆಯಲ್ಲಿ ನಿರತರಾಗುತ್ತಿದ್ದರು. ಕೆಲವು ಮಹಿಳೆಯರೂ ಯೇಸುವಿನ ತಾಯಿ ಮರಿಯಳೂ ಯೇಸುವಿನ 'ಸಹೋದರ'ರೂ ಅವರೊಡನೆ ಇದ್ದರು,' ಎಂಬ ವಿವರವು ಪ್ರೇಷಿತರ ಕಾರ್ಯಕಲಾಪಗಳು ಕೃತಿಯಲ್ಲಿದೆ.

ಸೆರೆಮನೆಗೆ ಹಾಕಲ್ಪಟ್ಟ ಪೇತ್ರನನ್ನು ಹೆರೋದನ ಕೈಯಿಂದ ದೇವದೂತರು ಬಿಡುಗಡೆಗೊಳಿಸಿದಾಗ ಪೇತ್ರನು ನೇರವಾಗಿ ನಡೆದದ್ದು ಮಾರ್ಕನೆಂದು ಹೆಸರಾದ ಯೊವಾನ್ನನ ತಾಯಿಯ ಮನೆಗೆ. ಅಲ್ಲಿಗೆ ಧಾವಿಸಿದ ಪೇತ್ರನು ತಾನು ಬಿಡುಗಡೆಗೊಂಡ ಸುದ್ದಿಯನ್ನು ಯೇಸುವಿನ ಸಹೋದರ 6'ಯಕೋಬನಿಗೂ ಮತ್ತಿತರ ಸಹೋದರ'ರಿಗೂ ತಿಳಿಸುವಂತೆ ಹೇಳಿ ಅಲ್ಲಿಂದ ಹೊರಡುತ್ತಾನೆ. ಇದೇ ಯಕೋಬನು ಮುಂದೆ ಜೆರುಸಲೇಮಿನ ಧರ್ಮಾಧ್ಯಕ್ಷನೂ ಆಗುತ್ತಾನೆ. ಜೆರುಸಲೇಮಿನಲ್ಲಿ ಪೇತ್ರ, ಪೌಲ, ಬಾರ್ನಬರು ಸೇರಿದಂತೆ ಅನೇಕರು ಪಾಲ್ಗೊಂಡ 7ಸಮ್ಮೇಳನದಲ್ಲಿ ಅಂತಿಮ ತೀರ್ಮಾನವನ್ನು ಕೈಗೊಳ್ಳುವವನೂ ಯಕೋಬನೇ. ಪೌಲನು ಗಲಾತಿಯರಿಗೆ ಬರೆದ ಪತ್ರದಲ್ಲಿ ಪೇತ್ರ(ಕೇಫ) ಮತ್ತು ಯೊವಾನ್ನರೂ ಸೇರಿದಂತೆ  ಯೇಸುವಿನ ಸೋದರ ಯಕೋಬನನ್ನು 8'ಸಭಾಸ್ಥಂಭ'ಗಳು ಎಂದು ಕರೆದಿದ್ದಾನೆ.

ಕ್ರೈಸ್ತ ಸಭೆಯೊಂದಕ್ಕೆ ಸ್ವಯಂ ಯಕೋಬನು ಬರೆದ ಪತ್ರದ ಪೀಠಿಕೆಯಲ್ಲಿ ತನ್ನನ್ನು 'ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬ' ಎಂದು ಹೇಳಿಕೊಂಡಿದ್ದಾನೆ. ಅವನು ಬರೆದ ಪತ್ರವು ಸ್ವಾರಸ್ಯಕರವಾಗಿಯೂ, ಮನೋಜ್ಞವಾಗಿಯೂ ಇದೆ. ಯಕೋಬನ ಇನ್ನೊಬ್ಬ ಸಹೋದರ 'ಯೂದ'ನೂ ಸಹ ಕ್ರೈಸ್ತ ಸಭೆಗಾಗಿ ಬರೆದ ಪತ್ರದ ಪೀಠಿಕೆಯಲ್ಲಿ ತನ್ನನ್ನು, 'ಯೇಸುಕ್ರಿಸ್ತರ ದಾಸನೂ ಯಕೋಬನ ಸಹೋದರನೂ ಆದ ಯೂದನು' ಎಂಬುದಾಗಿ ಬರೆದುಕೊಂಡಿದ್ದಾನೆ. ಇವೆರಡು ಪತ್ರಗಳೂ ಬೈಬಲ್‌ನ ಹೊಸ ಒಡಂಬಡಿಕೆಯ ಉತ್ತರಾರ್ಧ ಭಾಗದ ಕೊನೆಯಲ್ಲಿ ಸೇರ್ಪಡೆಗೊಂಡಿವೆ.
______________________


            1.       )ಮತ್ತಾಯ 13:54-56)ಮಾರ್ಕ 6:3
2.       ಲೂಕ 4:16-30
3.       ಲೂಕ 1:36
4.       ಮಾರ್ಕ 15:40
5.       ಪ್ರೇಷಿತರ ಕಾರ್ಯಕಲಾಪಗಳು 1:14
6.       ಪ್ರೇಷಿತರ ಕಾರ್ಯಕಲಾಪಗಳು 12:17
7.       ಪ್ರೇಷಿತರ ಕಾರ್ಯಕಲಾಪಗಳು 15:6-31
8.       ಗಲಾತಿಯರಿಗೆ 2:9

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ