ಖರ್ಜೂರದ ತೋಪಿನ ಹಿಂದಿದೆ ಮೃತ ಸಮುದ್ರ |
ಅನೇಕ
ವರ್ಷಗಳಿಂದ ಅಸಂಖ್ಯಾತ ಯಾತ್ರಿಕರ ಕುತೂಹಲದ ತಾಣವೆನಿಸಿರುವ ಮೃತ
ಸಮುದ್ರವು ಸಮುದ್ರವೇ ಅಲ್ಲದಿದ್ದರೂ ಸಮುದ್ರದ ಹೆಸರಿನಲ್ಲಿ ಜಗತ್ತಿನ
ಭೂಪಟದಲಿ ವಿರಾಜಮಾನವಾಗಿರುವ ಒಂದು ವಿಶಾಲವಾದ ಸರೋವರ.
ಸರೋವರದ ಮೇಲ್ಮೈ ಸಮುದ್ರಮಟ್ಟದಿಂದ 1300 ಅಡಿಗಳಷ್ಟು
ತಗ್ಗಿನಲ್ಲಿದ್ದು, ಸಮುದ್ರ ಮಟ್ಟಕ್ಕಿಂತ ಕೆಳಗಿರುವ
ಒಣಭೂಮಿಯ ಸರೋವರವು ಇದಾಗಿದೆ. ಇದರ
ಅಕ್ಕಪಕ್ಕಗಳಲ್ಲಿರುವ ರಸ್ತೆಗಳೂ ಸಹ ಜಗತ್ತಿನ ಅತ್ಯಂತ
ತಗ್ಗಿನ ರಸ್ತೆಗಳೆನಿಸಿಕೊಂಡಿವೆ. ಆದರೆ ಈ ಸರೋವರದ
ನೀರು ಇತರ ಸರೋವರಗಳ ನೀರಿನಂತೆ
ಸಿಹಿ ನೀರಲ್ಲ. ಈ ಸರೋವರದ
ನೀರಿನಲ್ಲಿ ಅನೇಕ ವಿಧದ ಲವಣಗಳು
ಮಿಶ್ರಣಗೊಂಡಿವೆ. ಹಾಗಾಗಿ ಸಮುದ್ರದ ನೀರಿಗಿಂತಲೂ ಇದರ
ನೀರು ಅತೀವ ಉಪ್ಪಾಗಿದ್ದು, ಹೆಚ್ಚಿನ ಸಾಂದ್ರತೆಯನ್ನೂ ಹೊಂದಿದೆ.
ಈ ಸರೋವರವು ಮೂವತ್ತೆರಡಕ್ಕೂ
ಅಧಿಕ ಖನಿಜಾಂಶಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿದೆ. ಸನಿಹದ ಜೋರ್ಡಾನ್, ಸಿರಿಯಾಗಳ
ಒಣ ನೆಲದ ಮೇಲೆ ಬಿದ್ದ
ಮಳೆಯ ನೀರು ಅಲ್ಲಿರುವ ಲವಣಾಂಶಗಳನ್ನು
ಕೊಚ್ಚಿಕೊಂಡು ಬಂದು ಈ ಸರೋವರಕ್ಕೆ
ಸೇರಿಸುತ್ತದೆ. ಹಾಗಾಗಿ ಈ ಸರೋವರವು
ಒಂದು ರೀತಿಯಲ್ಲಿ ಲವಣಾಂಶಗಳ ಸಂಗ್ರಹಾಗಾರವೆಂದರೂ ತಪ್ಪಲ್ಲ. ಶೇ.33.7 ರಷ್ಟು ಲವಣಾಂಶಗಳ
ಮಿಶ್ರಣವಾದ ಈ ಸರೋವರದ ನೀರು
ಅನೇಕರ ಚರ್ಮರೋಗಗಳನ್ನು ವಾಸಿಮಾಡುವ ವಿಶಿಷ್ಟ ಗುಣವನ್ನು ಹೊಂದಿರುವ
ಕಾರಣ ಈ ಸರೋವರವನ್ನು ಚರ್ಮರೋಗದ
ಆಸ್ಪತ್ರೆಯೆನ್ನಲು ಅಡ್ಡಿಯಿಲ್ಲ. ಈ ವಿಶಿಷ್ಟ ಗುಣಗಳಿಂದಾಗಿಯೇ
ಇದು ಜಗತ್ತಿನಲ್ಲೇ ಅಪರೂಪದ ಸಮುದ್ರವೆನಿಸಿದೆಯಲ್ಲದೇ ಅನೇಕ ವಿಸ್ಮಯಗಳ
ಆಗರವೂ ಇದಾಗಿದೆ. ಇತಿಹಾಸದ ಪುಟಗಳಲ್ಲಿ ಸೇರಿಹೋದ
ಅನೇಕ ಘಟನೆಗಳಿಗೆ ಮೂಕಸಾಕ್ಷಿಯಾಗಿಯೂ ಇದು ನಿಂತಿದೆ.
ವಿಷಾದದ
ಸಂಗತಿಯೆಂದರೆ ಜಗತ್ತಿನ ತಾಪಮಾನಕ್ಕೆ ಸಿಲುಕಿ
ಈಗಾಗಲೇ ಈ ಸಮುದ್ರದ ಮೂರನೆಯ
ಒಂದು ಭಾಗವು ಒಣಗಿ ಹೋಗಿದ್ದು
ಮುಂದೊಂದು ದಿನ ಈ ಸರೋವರವು
ಇತಿಹಾಸದ ಪುಟದಲ್ಲಷ್ಟೇ ಉಳಿದರೆ ಅಚ್ಚರಿಯಿಲ್ಲ. ಜಾಗತಿಕ
ತಾಪಮಾನಕ್ಕೆ ಸಿಲುಕಿ ದ್ರುವ ಪ್ರದೇಶದಲ್ಲಿ
ಸಂಚಯವಾಗಿರುವ ಹಿಮ ಕರಗಿ ಸಮದ್ರದ
ಮಟ್ಟ ಮೇಲೇರಿ ಧರೆಯು ಇಂಚಿಂಚಾಗಿ
ಮುಳುಗತೊಡಗಿದರೆ ಈ ಸಮುದ್ರವು ಕ್ರಮೇಣ
ತನ್ನ ಮಟ್ಟವನ್ನೇ ಕುಗ್ಗಿಸಲಾರಂಭಿಸಿದೆ. ಪ್ರಸ್ತುತ ಇದು ನಿಧಾನವಾಗಿ ಒಣಗುತ್ತಾ
ಭೂಪಟದಿಂದಲೇ ಮರೆಯಾಗುವ ಲಕ್ಷಣಗಳನ್ನು ತೋರುತ್ತಿರುವುದು ನಿಜಕ್ಕೂ ಒಂದು ಆತಂಕಕಾರಿ
ವಿಷಯ.
ಚರ್ಮರೋಗ ತಡೆಗಟ್ಟಲು ಕೆಸರಿನ ಲೇಪನ! |
ನೀರಲ್ಲಿ ಬಿದ್ದರೂ ಮುಳುಗುವುದಿಲ್ಲ |
ವಿಜ್ಞಾನಿಗಳ
ಒಂದು ಅಂದಾಜಿನ ಪ್ರಕಾರ ಈ
ಸರೋವರವು ಪ್ರತಿ ವರ್ಷ ಹದಿಮೂರು
ಅಂಗುಲಗಳಷ್ಟು ಕುಗ್ಗುತ್ತಿದೆಯಂತೆ. ಸರೋವರದ ತಳದಲ್ಲಂತೂ ಉಪ್ಪಿನ
ದೊಡ್ಡ ಸಂಗ್ರಹವೇ ಇದೆ. ಈ ನೀರಿನಲ್ಲಿ
ಕರಗಿರುವ ಲವಣಗಳಿಂದಾಗಿ ಯಾವ ಚಲಿಸುವ ಜೀವಿಗಳೂ
ಇದರಲ್ಲಿ ಬದುಕುವುದಿಲ್ಲ. ಹರಿಯುವ ನದಿಗಳಲ್ಲಿರುವ ಮೀನುಗಳು
ಈ ನೀರಿನ ಸಂಪರ್ಕಕ್ಕೆ
ಬಂದಕೂಡಲೇ ಸತ್ತು ಹೋಗುತ್ತವೆ. ಕೆಲವು
ವಿಧದ ಬ್ಯಾಕ್ಟೀರಿಯಾಗಳನ್ನು ಹೊರತು ಪಡಿಸಿದರೆ ಚಲಿಸುವ
ಯಾವುದೇ ಜೀವಿಗಳಿಗೂ ಈ ಸರೋವರದ ನೀರನಲ್ಲಿ
ಬದುಕಲು ಅವಕಾಶವಿಲ್ಲ. ಇದರ ಸುತ್ತಲಿನ ದಡದ
ತುಂಬಾ ಹಿಮ ಹರಡಿದಂತೆ ಬೆಳ್ಳನೆಯ
ಉಪ್ಪಿನ ಹರಳುಗಳ ರಾಶಿ ಬಿದ್ದಿದೆ.
ಜಗತ್ತಿನ ಸಮುದ್ರಗಳಲ್ಲಿರುವ ಉಪ್ಪಿನ ಅಂಶಕ್ಕ್ಕಿಂತ
ಒಂಬತ್ತರಷ್ಟು ಅಧಿಕ ಉಪ್ಪಿನ ಅಂಶವನ್ನು
ಈ ಸರೋವರವೇ ಹೊಂದಿದೆ
ಎನ್ನುತ್ತಾರೆ ವಿಜ್ಞಾನಿಗಳು. ಅದೇ ಕಾರಣಕ್ಕೆ ಸ್ಥಳೀಯರು
ಈ ಸರೋವರವನ್ನು 'ಲವಣ
ಸಮುದ್ರ'(ಯಮ್ ಹ ಮೆಲಾಹ್)
ಎಂದೇ ಕರೆಯುತ್ತಾರೆ.
ಜೋರ್ಡಾನ್,
ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ಗಳ ಸರಹದ್ದ್ದುಗಳನ್ನು ಹೊಂದಿರುವ
ಈ ಸಮುದ್ರವನ್ನು ಕೆಲವೇ
ಕೆಲವು ತೊರೆಗಳು, ಒರತೆಗಳು, ನದಿಗಳಲ್ಲದ ನದಿಗಳು ಹರಿದು ಬಂದು
ಲೀನವಾಗುತ್ತವೆ. ಅವುಗಳಲ್ಲಿ ಜೋರ್ಡಾನ್ ನದಿ ಎಂಬ ತೀರಾ
ಅಗಲವೂ ಅಲ್ಲದ ಆಳವೂ ಅಲ್ಲದ,
ಕೇವಲ 127 ಕಿಲೋಮೀಟರ್ಗಳಷ್ಟೇ ದೂರ ಸಂಚರಿಸುವ
ನದಿ ಅತ್ಯಂತ ಪ್ರಮುಖವಾದುದು. ಈ
ನದಿಯಲ್ಲದೇ ಇನ್ನೂ ಕೆಲವು ನದಿಗಳು
ತಮ್ಮ ನೀರನ್ನು ಈ ಸರೋವರಕ್ಕೆ
ತಂದು ಚೆಲ್ಲಿ ಕೃತಕೃತರಾಗುತ್ತವೆ. ಅವುಗಳಲ್ಲಿ
ಪ್ರಮುಖವಾದವು; ಉತ್ತರದಲ್ಲಿ ಜೋರ್ಡಾನ್ನೊಂದಿಗೆ ಮಿಳಿತವಾಗುವ ಯೆರ್ಮುಕ್
ಮತ್ತು ಜಬ್ಬೋಕ್ ಎಂಬ ಉಪನದಿಗಳು
ಹಾಗೂ ದಕ್ಷಿಣದಲ್ಲಿ ನೇರವಾಗಿ ಮೃತಸಮುದ್ರವನ್ನು ಸೇರುವ
ಅರ್ನಾನ್ ಮತ್ತು ಜೀರೆಡ್ ಎಂಬ
ನದಿಗಳನ್ನು ಉಲ್ಲೇಖಿಸಬಹುದಾಗಿದೆ.. ಜೋರ್ಡಾನ್ ನದಿಯನ್ನು ಹೊರತು ಪಡಿಸಿದರೆ ಉಳಿದ
ಬಹುತೇಕ ನದಿಗಳು ಪೂರ್ವ ದಿಕ್ಕಿನಿಂದಲೇ
ಹರಿದು ಬಂದು ಮೃತ ಸಮುದ್ರವನ್ನು
ಸೇರುತ್ತವೆ.
ಈ
ಸರೋವರದ ನೀರಲ್ಲಿ ಬಿದ್ದವನನ್ನು ಇದು
ಮುಳುಗಿಸದೆ ಮೇಲೆತ್ತಿ ಹಿಡಿಯುತ್ತದೆ. ಈಜು ಬಾರದವನನ್ನೂ ಧೈರ್ಯವಾಗಿ
ಈಜುವಂತೆ ಮಾಡುತ್ತದೆ. ಹಾಗಾಗಿ ಇದು ಆತ್ಮಹತ್ಯೆಗೆ
ತಕ್ಕ ಸ್ಥಳವಂತೂ ಅಲ್ಲ. ಬದಲಾಗಿ ಇಲ್ಲಿಯ
ಸಂಜೆಯ ತಂಪುಗಾಳಿ ಮಾನಸಿಕವಾಗಿ ಕುಗ್ಗಿಹೋಗಿರುವವನ ಮನಸ್ಸಿಗೆ ಸಾಂತ್ವನವನ್ನು ನೀಡುತ್ತದೆ. ಹಗಲಲ್ಲಿ ಭಾಸ್ಕರನ ಬೆಳ್ಳಿಯ
ಕಿರಣಗಳನ್ನು ಪ್ರತಿಫಲಿಸುತ್ತಾ, ರಾತ್ರಿಯಲ್ಲಿ ತಣ್ಣಗೆ ಅಲೆಗಳ ಸದ್ದಿಲ್ಲದೇ
ಮೌನಕ್ಕೆ ಶರಣಾದ ಯೋಗಿಯಂತೆ ತನ್ಮಯವಾಗಿರುವ
ಇದರ ದಡಗಳಲ್ಲಿ ರಾತ್ರಿಯ ಹುಣ್ಣಿಮೆಯ ಬೆಳಕಲ್ಲಿ
ಅಲೆಯುವುದೇ ಒಂದು ರೋಚಕ ಅನುಭವ!
ಲವಣಗಟ್ಟುತ್ತಿರುವ ಸಮುದ್ರ |
ಸಾಮಾನ್ಯವಾಗಿ
ನೀರೆಂದರೆ ಅನೇಕ ಜೀವವೈವಿಧ್ಯಗಳ ಆವಾಸ
ಸ್ಥಾನ! ಆದರೆ
ಈ ನೀರಿನಲ್ಲಿ ಯಾವ
ಜೀವಿಗಳಿಗೂ ಉಸಿರಾಡಲು ಅವಕಾಶವೇ ಇಲ್ಲ. ಪ್ರಾಣಿ,
ಪಕ್ಷಿಗಳ್ಯಾವುವೂ ಈ ಸರೋವರದ ನೀರನ್ನು
ಕುಡಿಯುವುದು ಹೋಗಲಿ ಇದರ ಸಮೀಪಕ್ಕೂ
ಬರುವುದಿಲ್ಲ. ಹಾಗಾಗಿಯೇ ಇದಕ್ಕೆ 'ಮೃತ ಸರೋವರ'ವೆಂಬ ಹೆಸರೂ ಬರಲು
ಕಾರಣ. ಹೀಬ್ರೂ ಭಾಷೆಯಲ್ಲಿ ಇದನ್ನು
'ಯಮ್ ಹ ಮಾವೆಟ್(ಮೃತ್ಯು
ಸಮುದ್ರ) ಎಂದೂ ಕರೆಯುವರು.
67 ಕಿ.ಮೀ. ಉದ್ದವೂ, 18 ಕಿ.ಮೀ.ಗಳ ಅಗಲವೂ
ಇರುವ ಮೃತ ಸಮುದ್ರದ ಸುತ್ತಲೂ
ರಮಣೀಯವಾದ ಪ್ರದೇಶಗಳಿವೆ; ಹಸಿರ ಸೋಂಕಿಲ್ಲದ ಬೆಟ್ಟಗುಡ್ಡಗಳು
ಕಾಣಸಿಗುತ್ತವೆ. ಇದರ ಸನಿಹದಲ್ಲಿ ಎರಡು
ಅಳಿದು ಹೋದ ಪಟ್ಟಣಗಳಿವೆ ಎಂಬ
ಪ್ರತೀತಿಯಿದೆ. ಸೊದೊಮ್ ಮತ್ತು ಗೊಮೊರಾ
ಎಂಬುದು ಆ ಪಟ್ಟಣಗಳು. ಆ
ಪಟ್ಟಣದ ನಿವಾಸಿಗಳ ಅನೀತಿ, ಅಕ್ರಮ ಹಾಗೂ
ದುರ್ನಡತೆಗಳಿಗೆ ಬೇಸತ್ತ ದೇವರು ಬೆಂಕಿ
ಹಾಗು ರಂಜಕದ ಮಳೆಯನ್ನು ಸುರಿಸಿ
ಆ ಪಟ್ಟಣಗಳನ್ನೂ ಅದರ
ನಿವಾಸಿಗಳನ್ನು ಸರ್ವನಾಶಮಾಡಿದರೆಂದು ಬೈಬಲ್ನ ಹಳೆಯ
ಒಡಂಬಡಿಕೆ ಹೇಳುತ್ತದೆ. ಮೃತ ಸಮುದ್ರದ ಬಳಿ
ಕಾಣಸಿಗುವ ಹೇರಳವಾದ ಬೂದಿ ಮತ್ತು
ರಂಜಕದ ಅಂಶಗಳು ಹಾಗೂ ಕೆಲವು
ಪಳೆಯುಳಿಕೆಗಳು ಇದಕ್ಕೆ ಸಾಕ್ಷಿ ಎನ್ನುತ್ತಾರೆ
ಸ್ಥಳೀಯರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ