ಸಂತ ತೋಮಾಸ್‌, ಪ್ರೇಷಿತ

ತೋಮನು ಎಂದು ಕರೆಯಲ್ಪಡುವ ತೋಮಾಸ್‌ ಹುಟ್ಟಿದ್ದು ಕ್ರಿ.. ಮೊದಲ ಶತಮಾನದ ಆದಿಯಲ್ಲಿ. ಈತನ ಪೂರ್ಣ ಹೆಸರು 'ದಿದಿಮಸ್ಯೂದಾಸ್ತೋಮಾಸ್.‌' ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಈತನಿಗೆ 'ದಿದಿಮ' ಅರ್ಥಾತ್‌ 'ಅವಳಿ' ಎಂಬ ಅಡ್ಡ ಹೆಸರಿದ್ದು ಅದಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಸಾಮಾನ್ಯವಾಗಿ 'ತೋಮಾಸ್‌' ಎಂಬ ಹೆಸರಿನ ಹಿಂದೆ 'ಸಂಶಯಗ್ರಸ್ತ' ಎಂಬ ಪದ ತಳುಕು ಹಾಕಿಕೊಂಡಿರುತ್ತದೆ ಅಥವಾ ತೋಮಸ್ ಎಂಬ ಹೆಸರಿರುವವರನ್ನು 'ಸಂಶಯಗ್ರಸ್ತ ತೋಮಾಸ್‌' ಎಂದು ಕರೆಯುವ ವಾಡಿಕೆ ಇದೆ. ಅದಕ್ಕೆ ಕಾರಣ: ಶಿಲುಬೆಯಲ್ಲಿ ಮರಣಹೊಂದಿದ ನಂತರ ಪುನರುತ್ಥಾನರಾಗಿ ಬಂದ ಯೇಸುವನ್ನು ಎಲ್ಲಾ ಶಿಷ್ಯರೂ ನಂಬುತ್ತಾರಾದರೂ ವೇಳೆಯಲ್ಲಿ ಹಾಜರಿರದ ತೋಮನು ಅನಂತರ ಸಹಶಿಷ್ಯರಿಂದ ವಿಷಯವನ್ನು ತಿಳಿದಾಗ ನಂಬಲಾರದೇ ಹೋಗುತ್ತಾನೆ. ಅಲ್ಲದೆ ಅವರ ಗಾಯದ ಗುರುತುಗಳನ್ನು ನೋಡದ, ಮೊಳೆಗಳು ಜಡಿದಿದ್ದ ಜಾಗದಲ್ಲಿ, ಅವರ ಪಕ್ಕೆಯಲ್ಲಿ  ಬೆರಳುಗಳನ್ನಿಡದ ಹೊರತು ತಾನು ವಿಶ್ವಾಸಿಸುವುದಿಲ್ಲ ಎನ್ನುತ್ತಾನೆ(ಯೊವಾನ್ನ 20:20-28). ಎಂಟು ದಿನಗಳ ಬಳಿಕ ಮತ್ತೊಮ್ಮೆ ಶಿಷ್ಯರಿಗೆ ಕಾಣಿಸಿಕೊಂಡ ಯೇಸು ಸ್ವಯಂ ತೋಮನಿಗೆ ನಿನ್ನ ಬೆರಳನ್ನು ತಂದು ಇಲ್ಲಿಡು ಎಂದು ತಮ್ಮ ಕೈಗಳನ್ನೂ ಪಕ್ಕೆಯನ್ನೂ ತೋರಿಸುತ್ತಾರೆ. ಆಗ ತೋಮನು, "ನನ್ನ ಪ್ರಭುವೇ, ನನ್ನ ದೇವರೇ," ಎನ್ನುತ್ತಾನೆ. ಯಾವ ಶಿಷ್ಯರೂ ಅದುವರೆಗೆ ಯೇಸುವನ್ನು 'ದೇವರೇ' ಎಂದಿರುವುದಿಲ್ಲ. ತೋಮನ ಬಾಯಿಂದ ನುಡಿಗಳು ಹೊರಬೀಳುತ್ತವೆ. ಆಗ ಯೇಸುವು, "ಕಂಡು ವಿಶ್ವಾಸಿಸುವವರಿಗಿಂತ ಕಾಣದೇ ವಿಶ್ವಾಸಿಸುವವರು ಧನ್ಯರು," ಎಂದು ಉದ್ಘರಿಸುತ್ತಾರೆ.

ಮಲಂಕರ ಸಭೆಯ ಚಿಹ್ನೆಯಾದ ಶಿಲುಬೆ
ಹಾಗೆ ನೋಡುವುದಾದರೆ ತೋಮನು ಕೊಂಚ ಅಸಹನಶೀಲ ವ್ಯಕ್ತಿ. ಹಿಂದೆ ಲಾಜರನು ತೀರಿಕೊಂಡಾಗ ಯೇಸು ತಮ್ಮ ಶಿಷ್ಯರಿಗೆ, "ಲಾಜರನು ನಿದ್ರೆ ಮಾಡುತ್ತಿದ್ದಾನೆ; ಅವನನ್ನು ಎಬ್ಬಿಸಲು ನಾನು ಹೋಗಬೇಕು," ಎಂದು ಹೇಳಿದಾಗ ಶಿಷ್ಯರು, 'ಅವನು ನಿದ್ರೆ ಮಾಡುತ್ತಿರುವನಾದರೆ ಎಚ್ಚೆತ್ತುಕೊಳ್ಳುತ್ತಾನೆ' ಎನ್ನುತ್ತಾರೆ. ಆಗ ಯೇಸು ಲಾಜರನು ಸತ್ತುಹೋಗಿದ್ದಾನೆ ಎನ್ನುತ್ತಾರೆ. ವಿಷಯವನ್ನು ಸರಿಯಾಗಿ ಅರಿಯದ ತೋಮನು ಅಸಹನೆಯಿಂದ, "ನಾವೂ ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ," ಎನ್ನುತ್ತಾನೆ. ಇದಕ್ಕೆ ಮೂಲ ಕಾರಣ, ಹಿಂದೊಮ್ಮೆ ಯೇಸು ತಮ್ಮ ಶಿಷ್ಯರೊಂದಿಗೆ ಜುದೇಯ ಸೀಮೆಗೆ ಹೋಗಿದ್ದಾಗಅಲ್ಲಿಯ ಜನರು ಯೇಸುವನ್ನು ಕಲ್ಲಿನಿಂದ ಹೊಡೆಯಲು ಮುಂದಾಗಿದ್ದರು. ಅದನ್ನು ಗಮನಿಸಿದ್ದ ತೋಮನು ಅವರನ್ನು ಜುದೇಯಕ್ಕೆ ಹೋಗಲು ಅನುಮತಿಸುವುದಿಲ್ಲ. ಬದಲಾಗಿ 'ಪ್ರಭುವಿನೊಡನೆ ಹೋಗಿ ನಾವೂ ಸಾಯೋಣ' ಎಂದು ಅಸಹನೆಯನ್ನು ವ್ಯಕ್ತಪಡಿಸುತ್ತಾನೆ, ಅಂದ ಹಾಗೆ ಸತ್ತುಹೋಗಿದ್ದ ಲಾಜರನ ಮನೆಯಿದ್ದುದು ಜುದೇಯ ಸೀಮೆಯ ಬೆಥಾನಿ ಎಂಬ ಊರಿನಲ್ಲಿ.

ಒಮ್ಮೆ ಯೇಸು, ಶಿಷ್ಯರಿಗೆ, "ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವೆಡೆಯ ಮಾರ್ಗ ನಿಮಗೆ ತಿಳಿದೇ ಇದೆ," ಎಂದು ಹೇಳುತ್ತಾರೆ. ಅವರೇನು ಹೇಳುತ್ತಿದ್ದಾರೆಂಬುದನ್ನೇ ಅರಿಯದ ತೋಮನು, "ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವನ್ನು ತಿಳಿಯುವುದಾದರೂ ಹೇಗೆ?" ಎಂದು ಅಮಾಯಕನಾಗಿ ಪ್ರಶ್ನಿಸುತ್ತಾನೆ. ಯೇಸು ಅದಕ್ಕೆ, "ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ನೀವು ಅವರನ್ನು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ," ಎಂದು ನುಡಿಯುತ್ತಾರೆ(ಯೊವಾನ್ನ 14:1-6).

ಹೊಸ ಒಡಂಬಡಿಕೆಯ ಸುಸಂದೇಶಗಳಲ್ಲಿ ತೋಮನ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ತೋಮನು ಬರೆದಿದ್ದನೆನ್ನಲಾದ 'ಸುಸಂದೇಶ'ಗಳೂ, 'ತೋಮನ ಕ್ರಿಯೆಗಳು' ಎಂಬ ಎರಡು ಕೃತಿಗಳನ್ನು ಕ್ರೈಸ್ತಸಭೆಗಳು ಅಂಗೀಕರಿಸಲಿಲ್ಲ ಎನ್ನಲಾಗುತ್ತದೆ. ಯೇಸುವಿನ ಮಾತೆ ಮರಿಯಮ್ಮನವರು ಸ್ವರ್ಗಾರೋಹಣವನ್ನು ಕಂಡ ಏಕೈಕ ಪ್ರೇಷಿತ ಸಂತ ತೋಮ ಎನ್ನಲಾಗುತ್ತಿದೆ ಅಲ್ಲದೆ ತೋಮನ ಕೃತಿಗಳಲ್ಲಿ ಸಂತ ಮರಿಯಮ್ಮನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದೂ ಹೇಳಲಾಗುತ್ತಿದೆ.

ಕ್ರಿ.. 52ರಲ್ಲಿ ತೋಮನೂ ಮಲಬಾರ್ 'ಮುಚ್ಚರಿ(ಮುಜ಼ರೀಸ್‌)' ಎಂಬ ಬಂದರಿನಲ್ಲಿ ಕಾಲಿರಿಸುವ ಮುಖೇನ ಭಾರತಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಅಂದಿನ ಕಾಲದಲ್ಲಿ ಭಾರತದಿಂದ ಹೊರದೇಶಗಳಿಗೆ ಸಂಬಾರ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದ ಮುಖ್ಯ ಬಂದರು ಮುಚ್ಚರಿಯಾಗಿತ್ತು. ಪ್ರಸ್ತುತ ಸ್ಥಳ ಯಾವುದು ಎಂದು ತಿಳಿದು ಬರದಿದ್ದರೂ ಕೊಚ್ಚಿಯಿಂದ ಉತ್ತರಕ್ಕೆ  ಸುಮಾರು 28 ಕಿ.ಮೀ. ದೂರದ ಕೊಡಂಗಲ್ಲೂರು ಎಂಬ ಊರಿನ ಬಳಿ ಆ ಬಂದದರು ಇದ್ದಿರಬೇಕು ಎಂಬ ಶಂಕೆಯಿದೆ ಇಲ್ಲವೇ ಅದರ ಆಸುಪಾಸಿನಲ್ಲಿ ಅದು ಇದ್ದಿರಬಹುದಾಧ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 1341ರಲ್ಲಿ ಆದ ಭಾರಿ ಪ್ರವಾಹಕ್ಕೆ ಬಂದರು ನಿರ್ನಾಮವಾಗಿರಬಹುದೆಂದು ಊಹಿಸಲಾಗುತ್ತಿದೆ. ಅದೇನೇ ಇರಲಿ ಭಾರತಕ್ಕೆ ಕಾಲಿರಿಸಿದ ಪ್ರಪ್ರಥಮ 'ಕ್ರೈಸ್ತಧರ್ಮಪ್ರಚಾರಕ' ಎಂಬ ಹೆಗ್ಗಳಿಕೆ ತೋಮನಿಗಿದೆ. ಒಂದು ಸಂಪ್ರದಾಯದ ಪ್ರಕಾರ ತೋಮನು ಕೇರಳದಲ್ಲಿ ಏಳೂವರೆ ಚರ್ಚುಗಳನ್ನು ನಿರ್ಮಿಸಿದ್ದನೆಂದು ಹೇಳಲಾಗುತ್ತಿದೆ. ಚರ್ಚುಗಳನ್ನು ಕ್ರಾಂಗನೂರು(ಕೊಡಂಗಲ್ಲೂರು), ಪಾಲಯೂರ್‌, ಮೋಟಕಾವು, ಕೊಕ್ಕಮಂಗಲಮ್‌, ನಿರಣಂ, ನಿಲಕ್ಕಲ್‌, ಕೊಲ್ಲಂ ಮತ್ತು ತಿರುವಿದಂಕೋಡ್‌(ಅರ್ಧ ಚರ್ಚ್ಇದಿರುವುದು ತಮಿಳುನಾಡಿನಲ್ಲಿ) ಎಂಬ ಊರುಗಳಲ್ಲಿ ನಿರ್ಮಿಸಲಾಗಿದೆ.

ಕ್ರಿ.. 72 ಡಿಸೆಂಬರ್‌ 21ರಂದು ತಮಿಳುನಾಡಿನ ಮೈಲಾಪೂರ್ಎಂಬಲ್ಲಿ ಪ್ರಾರ್ಥನೆಯಲ್ಲಿ ನಿರತನಾಗಿದ್ದ ತೋಮನನ್ನು ಹಿಂದು ಧರ್ಮಾಂಧರು ಬೆನ್ನಿನಲ್ಲಿ ಇರಿದು ಕೊಲೆ ಮಾಡಿದರೆಂಬ ಪ್ರತೀತಿ ಇದೆ. ಸಂತ ಎಫ್ರೇಮ್ಎಂಬ ವೈದ್ಯನ ಪ್ರಕಾರ ತೋಮನ ಅವಶೇಷಗಳನ್ನು ಮೆಸೆಪೊಟೇಮಿಯಾದ 'ಎಡೆಸಾ' ಎಂಬಲ್ಲಿ ಇಡಲಾಗಿದೆಯಂತೆ. ಆದರೆ ಭಾರತದ ಕ್ರೈಸ್ತರು ಇದನ್ನು ಒಪ್ಪವುದಿಲ್ಲ. ಸಂತ ತೋಮನ ಅವಶೇಷಗಳಲ್ಲಿ ಕೆಲವು ಭಾಗಗಳು ಚೆನ್ನೈನ ಮೈಲಾಪೂರದಲ್ಲಿರುವ ಸಂತ ತೋಮನ ಬಸಿಲಿಕಾದಲ್ಲಿ ಇನ್ನೂ ಇದೆಯೆನ್ನುತ್ತಾರೆ. ಕೇರಳದ ಮಲಂಕರ ಕ್ರೈಸ್ತಸಭೆಯು ಸಂತ ತೋಮನ ಹೆಸರಿನಲ್ಲಿದ್ದು ಸ್ವಯಂ ತೋಮನಿಂದಲೇ ಸ್ಥಾಪಿತವಾಗಿದೆ ಎನ್ನಲಾಗುತ್ತಿದೆ.


ಜುಲೈ 3 ರಂದು ಸೀರೋ ಮಲಬಾರ್‌, ಸಿರಿಯನ್ಕಥೋಲಿಕರು ಮತ್ತಿತರರು ಸಂತ ತೋಮಾಸರ ಹಬ್ಬವನ್ನು ಆಚರಿಸುತ್ತಾರೆ. ಲತೀನ್ಕಥೋಲಿಕರು ಡಿಸೆಂಬರ್‌ 21ರಂದು ಇವರ ಹಬ್ಬವನ್ನು ಆಚರಿಸುತ್ತಾರೆ. ಭಾರತದ ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಭಾಗದ ಜನರ ಪಾಲಕ ಸಂತರಿವರು. ಶ್ರೀಲಂಕಾದಲ್ಲೂ ಸಂತ ತೋಮಾಸರ ಬಗ್ಗೆ ಅಭಿಮಾನ ತೋರುವವರು ಇದ್ದಾರೆನ್ನಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ