ಅರಾಮೈಕ್‌(ಭಾಷೆ)

"ತಾಲಿಥಾ ಕೂಮ್‌" 
ಹೀಬ್ರೂ ಭಾಷೆಯಂತೆಯೇ 'ಅರಾಮೈಕ್‌' ಭಾಷೆಯೂ ಆಫ್ರೋ-ಏಷಿಯಾಟಿಕ್ಕುಟುಂಬಕ್ಕೆ ಸೇರಿದ ಸೆಮಿಟಿಕ್ಭಾಷೆಯಾಗಿದೆ. ಆದರೆ ಹೀಬ್ರೂ ಭಾಷೆಯಂತೆ ಇದು ಪುರಾತನ ಭಾಷೆಯಲ್ಲ. ಮಧ್ಯಪ್ರಾಚ್ಯದ ಸಣ್ಣಪುಟ್ಟ ಸಮುದಾಯಗಳಲ್ಲಿ ಬಳಸುತ್ತಿದ್ದ ಭಾಷೆ ಇದಾಗಿತ್ತು. ಆರಂಭದಲ್ಲಿ ಜುದೇಯದ ಭಾಷೆಯಾಗಿದ್ದ ಇದು‌ ಯೇಸುವಿನ ಕಾಲದಲ್ಲಿ ಅನೇಕ ಕಡೆಗಳಿಗೆ ವಿಸ್ತರಿಸಿತ್ತು. ಬೈಬಲ್‌ನಲ್ಲಿ ಬಳಕೆಯಾಗಿರುವ ಯೇಸುವೇ ಉಚ್ಚರಿಸಿದರೆನ್ನಲಾಗುವ ಕೆಲವು ಪದ ಮತ್ತು ವಾಕ್ಯಗಳಿಂದ ಅರಿವಾಗುತ್ತದೆ.

ಬೈಬಲ್‌ನ ಹೊಸ ಒಡಂಬಡಿಕೆಯಲ್ಲಿನ ಸುಸಂದೇಶಗಳಲ್ಲಿ ಯೇಸು ಉಚ್ಚರಿಸಿದರೆನ್ನಲಾಗಿರುವ 'ಅರಾಮೈಕ್‌' ಭಾಷೆಯ ಕೆಲವು ಮಾತುಗಳ ಬಳಕೆ ಇಲ್ಲಿವೆ; ಉದಾ; ಮೃತಳಾದ ಯಾಯಿರನ ಮಗಳಿಗೆ ಜೀವದಾನವನ್ನು ನೀಡುವ ಸಂದರ್ಭದಲ್ಲಿ ಯೇಸು, "ತಾಲಿಥಾ ಕೂಮ್‌" ಎಂಬ ಪದಗಳನ್ನು ಉಚ್ಚರಿಸಿದ್ದನ್ನು ಬೈಬಲ್‌ನಲ್ಲಿ ದಾಖಲಿಸಲಾಗಿದೆ.; ಅದರರ್ಥ 'ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು'(ಮಾರ್ಕ 5:41). ಅದೇ ರೀತಿಯಲ್ಲಿ ಗಲಿಲೇಯ ಸಮುದ್ರದ ತೀರದಲ್ಲಿ ಮಾತನಾಡಲಾರದ ಕಿವುಡನ ನಾಲಗೆಯನ್ನು ಮುಟ್ಟಿ "ಎಫ್ಫಥಾ" ಅರ್ಥಾತ್‌ 'ತೆರೆಯಲಿ'(ಮಾರ್ಕ 7:34) ಎಂದು ಹೇಳುತ್ತಾರೆ. ಅಂತೆಯೇ ಗೆತ್ಸೆಮನಿ ತೋಪಿನಲ್ಲಿ ಶಿಷ್ಯರನ್ನು ಬಿಟ್ಟು ಪ್ರಾರ್ಥನೆ ಮಾಡಲು ಮುಂದಕ್ಕೆ ಹೋಗಿ, "ಅಬ್ಬಾ" ಎನ್ನುವ ಪದವನ್ನು ಉಚ್ಚರಿಸುತ್ತಾರೆ; ಅದರರ್ಥ, 'ಪಿತನೇ' ಎಂಬುದು.

ಬೈಬಲ್‌ನ ಮತ್ತಾಯನು ಬರೆದ ಸುಸಂದೇಶದಲ್ಲಿ, 'ಯೇಸುವನ್ನು ಶಿಲುಬೆಗೆ ಏರಿಸಿದ ಮೇಲೆ, 'ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸು, "ಏಲೀ, ಏಲೀ, ಲೆಮಾ ಸಬಕ್ತಾನಿ?" ಅಂದರೆ. 'ನನ್ನ ದೇವರೇ, ನನ್ನ ದೇವರೇ, ನನ್ನನೇಕೆ ಕೈಬಿಟ್ಟಿರಿ' ಎಂದು ಗಟ್ಟಿಯಾಗಿ ಕೂಗಿಕೊಂಡರು'(ಮತ್ತಾಯ 27:46) ಎಂಬ 'ಅರಾಮೈಕ್‌' ವಾಕ್ಯವನ್ನು ಗಮನಿಸಬಹುದು. 'ಯೇಸುವನ್ನು ಸಮಾಧಿ ಮಾಡಿದ ಬಳಿಕ 'ಭಾನುವಾರ ಮುಂಜಾನೆ ಸಮಾಧಿಯ ಬಳಿಗೆ ಬಂದ ಮಗ್ದಲದ ಮರಿಯಳು ಯೇಸುವನ್ನು ಹುಡುಕುತ್ತಿದ್ದಾಗ ಯೇಸು, "ಮರಿಯಾ" ಎಂದು ಹೆಸರಿಡಿದು ಕರೆಯುತ್ತಾರೆ. ಆಕೆ ಹಿಂದಿರುಗಿ ನೋಡಿ, "ರಬ್ಬೂನಿ" ಎನ್ನುತ್ತಾಳೆ'(ಯೊವಾನ್ನ 20:16) ಎಂಬುದು ಬೈಬಲ್‌ ವಾಕ್ಯ. ಇಲ್ಲಿ ಕಾಣಿಸಿರುವ  'ರಬ್ಬೂನಿ' ಎಂಬ ಪದದ ಅರ್ಥ 'ಗುರುದೇವ' ಎಂಬುದಾಗಿದೆ. ಅಂತೆಯೇ 'ಹೊಸಾನ್ನ' ಎಂಬ 'ಜೈಕಾರ' ಪದವೂ ಸಹ 'ಅರಾಮೈಕ್‌' ಭಾಷೆಯ ಪದವೇ ಆಗಿದೆ.

ಬೈಬಲ್‌ನ ಹಳೆ ಒಡಂಬಡಿಕೆಯಲ್ಲಿನ 'ದಾನಿಯೆಲ್‌' ಮತ್ತು 'ಎಜ್ರಾ' ಎಂಬ ಕೃತಿಗಳನ್ನು ಮತ್ತು ಯೆಹೂದ್ಯರ 'ತಾಲ್ಮುದ್‌' ಎಂಬ ಮಹಾಗ್ರಂಥವನ್ನೂ ರಚಿಸಿದ್ದು ಅರಾಮೈಕ್ಭಾಷೆಯಲ್ಲಿ ಎಂಬುದು ಗಮನಾರ್ಹ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ