ಸಂತ ಸಿಮೋನ ಪೇತ್ರ, ಪ್ರೇಷಿತ

ಹೀಬ್ರೂ ಭಾಷೆಯಲ್ಲಿ 'ಶಿಮಯೋನ್ಕೇಪ್ಪಾ'ಎನ್ನಲಾಗುವ ಹೆಸರಿನ ಮೊದಲರ್ಧ ಭಾಗವನ್ನು ಗ್ರೀಕ್ಭಾಷೆಯಲ್ಲಿ ಸಿಮೋನ್‌' ಎಂದೂ, ಅರಾಮೈಕ್ಭಾಷೆಯಲ್ಲಿ 'ಸಿಮೆಯೊನ್‌' ಎಂದೂ ಹೇಳಲಾಗುತ್ತಿದೆ. ಇದರರ್ಥ 'ಕೇಳು', 'ಆಲಿಸು' ಎಂದಾಗಿದೆ. ಇನ್ನರ್ಧ ಭಾಗವಾದ 'ಪೇತ್ರ'(ಪೀಟರ್‌) ಎಂಬ ಹೆಸರಿನ ಮೂಲ ಪದ ಲ್ಯಾಟಿನ್ಭಾಷೆಯ 'ಪೆತ್ರೂಸ್‌‌' ಅರ್ಥಾತ್‌ 'ಬಂಡೆಯ ತುಣುಕು' ಎಂಬುದಾಗಿದೆ. ಸೆಮಿಟಿಕ್ಭಾಷೆಯಲ್ಲಿ 'ಕೇಫಾಸ್‌' ಎಂದರೆ ಬಂಡೆ ಎಂಬ ಅರ್ಥವಿದೆ. 'ಕೇಫ' ಎನ್ನುವ ಪದದ ಅನುವಾದ 'ಪೆತ್ರೂಸ್‌', 'ಪೆದ್ರೋ' ಅಥವಾ 'ಪೀಟರ್‌'. 'ಪೇತ್ರ' ಎಂಬ ಹೆಸರು ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಸಿಮೋನನಿಗೆ ಹೊರತು ಪಡಿಸಿ ಬೈಬಲ್ ಇನ್ನು ಯಾರಿಗೂ, ಯಾವ ಭಾಗದಲ್ಲೂ ಕಂಡು ಬರುವುದಿಲ್ಲ

ಪೇತ್ರನು ಯೋನ್ನ(ಯೊವಾನ್ನ) ಮಗ. ಬೆತ್ಸಾಯಿದದ ನಿವಾಸಿಯಾದ ಪೇತ್ರ ನಂತರ ಕಫೆರ್ನೌಮ್ಗೆ ಸ್ಥಳಾಂತರಗೊಳ್ಳುತ್ತಾನೆ. ಇವೆರಡೂ ಪ್ರದೇಶಗಳು ಉತ್ತರದ ಗಲಿಲೇಯ ಸಮುದ್ರದ ತೀರದಲ್ಲೇ ಇವೆ. ಇವನಿಗೊಬ್ಬ ಸಹೋದರನೂ ಇರುತ್ತಾನೆ. ಅವನ ಹೆಸರು 'ಅಂದ್ರೇಯ'. ಇವನೂ ಸಹ ತನ್ನ ಸೋದರನೊಂದಿಗೆ ಅವನ ಮನೆಯಲ್ಲೇ ನೆಲೆಸಿರುತ್ತಾನೆ. ಇವರಿಬ್ಬರ ಕಸುಬು ಮೀನುಗಾರಿಕೆ, ಪೇತ್ರ ಮತ್ತು ಅಂದ್ರೆಯರು ಜೆಬೆದೇಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರೊಂದಿಗೆ ಸೇರಿ ಮೀನುಗಾರಿಕೆಯ ವ್ಯವಹಾರವನ್ನು ನಡೆಸುತ್ತಿರುತ್ತಾರೆ.

ಪೇತ್ರನು ಮದುವೆಯಾಗಿದ್ದ. ಆತನಿಗೆ ಹೆಂಡತಿಯೊಬ್ಬಳು ಇದ್ದಳೆಂಬುದು ಪೌಲನ ಪತ್ರಗಳಿಂದ ತಿಳಿದು ಬರುತ್ತದೆ. ಆಕೆಯೂ ಸಹ ಧರ್ಮಪ್ರಸಾರಕಾರ್ಯದಲ್ಲಿ ಭಾಗವಹಿಸುತ್ತಿದ್ದಳು ಎಂಬುದಕ್ಕೆ ಪತ್ರವೇ ಪುರಾವೆಯಾಗಿದೆ(1ಕೊರಿ. 9:5). ಆತನ ಅತ್ತೆ ಅಳಿಯನ ಮನೆಯಲ್ಲೇ ತಂಗಿದ್ದಳು ಹಾಗೂ ಸಹೋದರ ಅಂದ್ರೆಯನೂ ಅವನೊಂದಿಗೆ ಇದ್ದನೆಂಬುದು ಮಾರ್ಕನ ಸುಸಂದೇಶ(1:29-30)ದಿಂದ ತಿಳಿದು ಬರುತ್ತದೆ. ಯೇಸು ಜ್ವರದಿಂದ ನರಳುತ್ತಿದ್ದ ಅತ್ತೆಯ ಕೈಹಿಡಿದಾಗ ಆಕೆ ಸ್ವಸ್ಥಳಾಗುತ್ತಾಳೆಂಬುದೂ ಮಾರ್ಕನ ಸುಸಂದೇಶದಲ್ಲಿ ಸೇರ್ಪಡೆಯಾಗಿದೆ.

ಪೇತ್ರನಿಗಿಂತ ಮೊದಲು ಯೇಸುವನ್ನು ಕಂಡವನೂ, ಯೇಸುವನ್ನು ಚೆನ್ನಾಗಿ ಅರಿತವನೂ ಅವನ ಸಹೋದರ ಅಂದ್ರೆಯನೇ. 'ಈತ ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ. ಅನಂತರ ಪೇತ್ರನ ಬಳಿ ಬಂದು, "ನಮಗೊಬ್ಬ 'ಮೆಸ್ಸಿಯ' ಸಿಕ್ಕಿದ್ದಾರೆ," ಎಂದು ಹೇಳಿ ಅವನನ್ನೂ ಯೇಸುವಿನ ಬಳಿಗೆ ಕರೆತರುತ್ತಾನೆ; ಆದರೂ ಯೇಸುವಿನ ಆಪ್ತ ಬಳಗದಲ್ಲಿ ಅವನು ಕಾಣಿಸಿಕೊಳ್ಳದಿರುವುದು ಅಚ್ಚರಿಯ ಸಂಗತಿ. ಯೇಸು ಸಿಮೋನನನ್ನು ನೋಡಿ, '"ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು 'ಕೇಫ'ನೆಂದು ಕರೆಯುವರು," ಎಂದು ನುಡಿಯುತ್ತಾರೆ' ಇದನ್ನು ಯೊವಾನ್ನನ ಸುಸಂದೇಶ(1:40-42)ದಲ್ಲಿ ಕಾಣಬಹುದು.

ಪೇತ್ರ, ಅಂದ್ರೇಯ, ಯೊವಾನ್ನ, ಯಕೋಬರು ಒಟ್ಟಿಗೆ ಸೇರಿ ಗಲಿಲೇಯ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗಲೇ ಯೇಸು ಅವರಿಗೆ ಕಾಣಿಸಿಕೊಂಡು ಹೇರಳವಾಗಿ ಮೀನು ಅವರಿಗೆ ದೊರಕುವಂತೆ ಮಾಡುವುದು ಮತ್ತು  ಆಗಲೇ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುವುದು ಸಹ. ಯೇಸು ಸಿಮೋನನಿಗೆ, "ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನಾಗುವೆ" ಎನ್ನುತ್ತಾ ಪೇತ್ರನನ್ನೂ ಮತ್ತು ಅವನ ಸಂಗಡಿಗರನ್ನೂ ತಮ್ಮ ಶಿಷ್ಯರನ್ನಾಗಿ ಮಾಡಿಕೊಳ್ಳುತ್ತಾರೆ. ಅವರೆಲ್ಲರೂ ತಮ್ಮ ಮೀನುಗಾರಿಕೆಯ ಕಸುಬನ್ನು ತೊರೆದು ಯೇಸುವನ್ನು ಹಿಂಬಾಲಿಸಿ ನಡೆಯುತ್ತಾರೆ. ಅಲ್ಲಿಂದ ಸಿಮೋನ ಪೇತ್ರನ ಜೀವನ ಶೈಲಿಯೇ ಬದಲಾಗುತ್ತದೆ. ಯೇಸುವಿನ ಮೂವರು ಆಪ್ತರಲ್ಲಿ ಪೇತ್ರನೂ ಒಬ್ಬನಾಗುತ್ತಾನೆ.

ಫಿಲಿಪ್ಪನ ಸೆಜರೇಯ ಎಂಬ ಪ್ರಾಂತ್ಯದಲ್ಲಿ ಪೇತ್ರನು, "ಅಭಿಷಿಕ್ತ ಲೋಕೋದ್ಧಾರಕ ತಾವೇ. ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದು ಹೇಳುವ ಮೂಲಕ ತಮ್ಮ ವಿಶ್ವಾಸವನ್ನು ಯೇಸುವಿನಲ್ಲಿ ಪ್ರಕಟಪಡಿಸುತ್ತಾರೆ. ಆಗ ಯೇಸು, "ನಿನ್ನ ಹೆಸರು ಪೇತ್ರ; ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುತ್ತೇನೆ. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು." ಎನ್ನುತ್ತಾರೆ. ಅನಂತರ ಯೇಸುವು ತಮ್ಮ ಅವ್ಯಕ್ತ ರೂಪವನ್ನು ಪೇತ್ರನೂ ಸೇರಿದಂತೆ ಇತರ ಇಬ್ಬರು ಶಿಷ್ಯರಿಗೂ ತೋರ್ಪಡಿಸುತ್ತಾರೆ. ಹೀಗೆ ಪೇತ್ರನು ಯೇಸುವಿಗೆ ಆಪ್ತರಲ್ಲಿ ಹೆಚ್ಚಿನ ಆಪ್ತನಾಗುತ್ತಾನೆ.

ನೇರ ಮಾತುಗಾರಿಕೆಯ, ಹೇಳಬೇಕಾದುದನ್ನು ಯಾವ ಅಳುಕೂ ಇಲ್ಲದೆ ಹೇಳುವ ಮುಗ್ದ ಮನಸ್ಸು ಪೇತ್ರನದು. ಅವನಲ್ಲಿ ಕೊಂಚ ಹುಂಬತನವೂ ಇದೆಯಾದರೂ ಒಳಗೊಂದು ಹೊರಗೊಂದು ಗುಣ ಅವನಲ್ಲಿ ಕಂಡುಬರುವುದಿಲ್ಲ. ಅಂಜುಬುರುಕನಂತೆ ಕಂಡರೂ ಸಮಯ ಸಂದರ್ಭಗಳು ವ್ವ್ಯತಿರಿಕ್ತವಾದಾಗ ಎದುರಿಸಿ ನಿಲ್ಲುವ ಭಂಡತನವೂ ಅವನಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಪ್ರವೃತಿಗಳನ್ನು ನಾವು ಸುಸಂದೇಶಗಳಲ್ಲಿ ಬರುವ ಹಲವು ಘಟನೆಗಳಲ್ಲಿ ಕಾಣುತ್ತೇವೆ. ಮುಂಜಾವಿನ ವೇಳೆ ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಯೇಸುವನ್ನು ಕಂಡು ಭೂತವೆಂದು ಅಂಜುವುದು, ಅವರಂತೆಯೇ ನೀರಿನ ಮೇಲೆ ನಡೆಯಲು ಹೋಗಿ ಅತ್ಮಸ್ಥೈರ್ಯವನ್ನು ಕಳೆದುಕೊಂಡು ನೀರಿನಲ್ಲಿ ಮುಳುಗುವುದು, ಯಾರು ಯೇಸುವನ್ನು ಕೈಬಿಟ್ಟರೂ ತಾನು ಬಿಡುವುದಿಲ್ಲವೆಂದು ಹೇಳುವುದು, ಅನಂತರ ಯೇಸು ನುಡಿದಂತೆಯೇ ಕೋಳಿಕೂಗುವ ಮುನ್ನ ಮೂರು ಸಲ ತನಗೂ ಯೇಸುವಿಗೂ ಸಂಬಂಧವೇ ಇಲ್ಲ ಎನ್ನುವುದು, ನಂತರ ತನ್ನ ತಪ್ಪು ಅರಿವಾಗಿ ರೋಧಿಸುವುದು ಇತ್ಯಾದಿಗಳು ಅವನ ಗುಣವನ್ನು ಎತ್ತಿ ತೋರಿಸುತ್ತವೆ. ಯೇಸುವನ್ನು ಬಂಧಿಸಿದಾಗ ತನ್ನಲ್ಲಿದ್ದ ಕತ್ತಿಯಿಂದ ಪ್ರಧಾನಯಾಜಕನ ಆಳಿನ ಕಿವಿಯನ್ನು ಕತ್ತರಿಸುವುದು ಅನಂತರ ಯೇಸುವಿನ ಹಿಂದೆಯೇ ಹಿಂಬಾಲಿಸಿ ಹೋಗುವುದು ಅವನ ಭಂಡತನವನ್ನೂ ಜೊತೆಗೆ ಯೇಸುವಿನ ಬಗೆಗಿರುವ ಕಾಳಜಿಯನ್ನೂ ತೋರಿಸುತ್ತದೆ. ಅಂತೆಯೇ ತಂದೆಯನ್ನು ಕಳೆದುಕೊಂಡ ಸುಸಂದೇಶಕರ್ತ ಮಾರ್ಕನನ್ನು ತನ್ನ ಸ್ವಂತ ಮಗನಂತೆ ಕಾಣುವುದು ಅವನ ವಿಶಾಲ ಗುಣಕ್ಕೊಂದು ನಿದರ್ಶನ.

ಯೇಸು ಪುನರುತ್ಥಾನರಾದ ಬಳಿಕ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡಿದ್ದನ್ನು ತಿಳಿದ ಪೇತ್ರ, ಯೊವಾನ್ನನೊಂದಿಗೆ ಸಮಾಧಿಯ ಬಳಿಗೆ ಓಡುತ್ತಾನೆ. ಉಳಿದವರು ಯೇಸು ಪುನರುತ್ಥಾನರಾದುದನ್ನು ನಂಬುವುದೇ ಇಲ್ಲ. ಯೇಸು ಪುನರುತ್ಥಾನರಾದ ಬಳಿಕ ಎಲ್ಲಾ ಶಿಷ್ಯರಿಗೂ ಕಾಣಿಸಿಕೊಂಡ ಸಮಯದಲ್ಲಿ ಪೇತ್ರನಿಗೆ, "ನನ್ನ ಕುರಿಗಳನ್ನು ಮೇಯಿಸು" ಎಂದು ನುಡಿದಂತೆಯೇ ಪೇತ್ರನು ಶಿಷ್ಯಗಣದ ನೇತೃತ್ವವನ್ನು ವಹಿಸಿಕೊಳ್ಳುತ್ತಾನೆ. ಅವರನ್ನು ಮುನ್ನಡೆಸುತ್ತಾನೆ. ಪವಿತ್ರಾತ್ಮರ ಆಗಮನದ ಬಳಿಕ ಪೇತ್ರನು ಮಹಾದೇವಾಲಯದ 'ಸುಂದರದ್ವಾರ'ವೆಂಬ ಸ್ಥಳದಲ್ಲಿದ್ದ ಹುಟ್ಟು ಕುಂಟನನ್ನು ಸ್ವಸ್ಥಗೊಳಿಸುತ್ತಾನೆ. ಸೊಲೊಮೋನನ ಮಂಟಪದ ಬಳಿ ಪ್ರವಚನ ನೀಡಿದ ಪೇತ್ರನನ್ನೂ ಜೊತೆಗಿದ್ದ ಯೊವಾನ್ನನನ್ನೂ ಪ್ರವಚನದ ಬಳಿಕ ಬಂಧಿಸಲಾಗುತ್ತದೆ. ಆದರೆ ಯಾವ ತಪ್ಪಿಗೂ ಸಿಗದ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ನಡುವೆ ಅನೇಕರು ಯೇಸುವಿನಲ್ಲಿ ವಿಶ್ವಾಸವನ್ನು ಇಡುತ್ತಾರೆ. ಇದೇ ವೇಳೆಯಲ್ಲಿ ಕ್ರೈಸ್ತರನ್ನು ಹಿಂಸಿಸುತ್ತಿದ್ದ ಪೌಲನೂ ಮನಪರಿವರ್ತನೆಯಾಗಿ ಕ್ರೈಸ್ತಧರ್ಮಪ್ರಸಾರಕ್ಕಾಗಿ ತನ್ನನ್ನು ತೊಡಗಿಸಿಕೊಳ್ಳುವುದರೊಂದಿಗೆ ಪ್ರೇಷಿತರಲ್ಲಿ ಹೆಚ್ಚಿನ ಬಲ ಬಂದಂತಾಗುತ್ತದೆ. ಮುಂದೆ ಪೇತ್ರನು ಲುದ್ದ ಮತ್ತು ಜೊಪ್ಪದಲ್ಲಿ ಧರ್ಮಪ್ರಸಾರ ಮಾಡುತ್ತಾನೆ. ಅಲ್ಲಿ ಮರಣಹೊಂದಿದ 'ತಬಿಥಾ' ಎಂಬುವವಳನ್ನು ಪೇತ್ರನು ಜೀವಂತ ಎಬ್ಬಿಸಿದಾಗ ಅನೇಕರು ಯೇಸುವಿನಲ್ಲಿ ವಿಶ್ವಾಸವನ್ನು ಹೊಂದುತ್ತಾರೆ. ಇದೇ ಸಮಯದಲ್ಲಿ ಹೆರೋದ ಅಂತಿಪಾನು ಕ್ರೈಸ್ತಸಭೆಯ ಅನೇಕರನ್ನು ಹಿಂಸಿಸಲು ಆರಂಭಿಸುತ್ತಾನೆ. ಯೊವಾನ್ನನ ಸಹೋದರ ಯಕೋಬನನ್ನು ಕೊಲ್ಲಿಸುತ್ತಾನೆ. ಪೇತ್ರನನ್ನು ಬಂಧಿಸಲಾಗುತ್ತದಾದರೂ ದೇವದೂತರ ಸಹಾಯದಿಂದ ಜೈಲಿನಿಂದ ಕಣ್ಮರೆಯಾಗುವ ಪೇತ್ರನು ಜೆರುಸಲೇಮಿಗೆ ಹಿಂದಿರುಗಿ ಬಂದು ಅಲ್ಲಿದ್ದ ತನ್ನ ಸಂಗಡಿಗರಿಗೆ ವಿಶೇಷವಾಗಿ ಯೇಸುವಿನ ಸೋದರ ಯಕೋಬನಿಗೆ ಕಾಣಿಸಿಕೊಂಡು ತಾನು ಬಿಡುಗಡೆಯಾಗಿ ಬಂದುದು ಹೇಗೆಂದು ವಿವರಿಸಿ ಅಲ್ಲಿಂದ ಹೊರಟು ಆಜ್ಞಾತ ಸ್ಥಳಕ್ಕೆ ಹೋಗುತ್ತಾನೆ. ಇದಾದ ಬಳಿಕ ಹೆರೋದ ಅಂತಿಪಾನು ದೇವದೂತರಿಂದ ಹತನಾಗುತ್ತಾನೆ.

ಮುಂದೆ ಪೇತ್ರನನ್ನು ಕುರಿತ ವಿವರಗಳು ಅಲಭ್ಯವಾಗುತ್ತವೆ. ಪ್ರಾಯಶಃ ಪೇತ್ರನು ರೋಮ್ನಲ್ಲಿ ತನ್ನ ಕೊನೆಯ ದಿನಗಳನ್ನು ಕಳೆಯುತ್ತಿದ್ದಿರಬೇಕು; ಅಲ್ಲೇ ಆತ ಹುತಾತ್ಮನೂ ಆಗುತ್ತಾನೆ ಎನ್ನಲಾಗುತ್ತಿದೆ

ಪೇತ್ರನು ಎರಡು ಪತ್ರಗಳನ್ನು ಕ್ರೈಸ್ತಸಭೆಗಳಿಗಾಗಿ ಬರೆದಿದ್ದಾನೆ. ಮೊದಲ ಪತ್ರವು ಏಷ್ಯಾ ಮೈನರ್ ಉತ್ತರ ಭಾಗದಲ್ಲಿ ಚದುರಿಹೋಗಿದ್ದ ಕ್ರೈಸ್ತವಿಶ್ವಾಸಿಗಳಿಗಾಗಿ ಬರೆದ ಪತ್ರವಾದರೆ, ಎರಡನೆಯ ಪತ್ರವು, ಯೇಸುವು ಶೀಘ್ರವಾಗಿ ಪುನರಾಗಮಿಸುವುದಿಲ್ಲವೆಂಬ ಇತರರ ಅಪಪ್ರಚಾರಕ್ಕೆ ವಿರುದ್ಧವಾಗಿ, ಅವರ ಆಗಮನವೇಕೆ ತಡವಾಗುತ್ತಿದೆ ಎಂಬುದನ್ನು ಸಮರ್ಥಿಸುವ ಪತ್ರವಾಗಿದೆ. ಇವಲ್ಲದೆ, 'ಪೇತ್ರನ ಕ್ರಿಯಾಕಲಾಪಗಳು', 'ಪೇತ್ರನ ಸುಸಂದೇಶಗಳು', 'ಪೇತ್ರನ ಬೋಧನೆಗಳು', 'ಪೇತ್ರನ ನ್ಯಾಯತೀರ್ಪು' ಇತ್ಯಾದಿ ಪುಸ್ತಕಗಳನ್ನು ಪೇತ್ರನು ರಚಿಸಿದ್ದಾನೆ ಎನ್ನಲಾಗುತ್ತಿದೆ. ಆದರೆ ಅವುಗಳು ನಂಬಿಕಾರ್ಹವಲ್ಲ ಎಂಬ ಕಾರಣಕ್ಕೆ ಬೈಬಲ್ನಲ್ಲಿ ಸೇರ್ಪಡೆಯಾಗಿಲ್ಲವೆಂದೂ ಹೇಳಲಾಗುತ್ತಿದೆ.


ಡಿಸೆಂಬರ್‌ 28 ಸಂತ ಪೇತ್ರನ ಹಬ್ಬ; ಅಂದೇ ಸಂತ ಪೌಲನ ಹಬ್ಬವೂ ಸಹ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ