ಪೋಂತಿಯುಸ್‌ ಪಿಲಾತ

ತಿಬೇರಿಯುಸ್‌ ಚಕ್ರವರ್ತಿಯ ಆಡಳಿತದ ಅಡಿಯಲ್ಲಿ ಕ್ರಿ.ಶ.26 ರಿಂದ 36ರವರೆಗೆ ಜುದೇಯದ ರೋಮನ್‌ ಪ್ರಾಂತ್ಯದ ಐದನೆಯ ರಾಜ್ಯಪಾಲನಾಗಿ ಕಾರ್ಯನಿರ್ವಹಿಸಿದವನು ಪೊಂತಿಯುಸ್‌ ಪಿಲಾತ. ಈತ ದಕ್ಷಿಣ ಇಟಲಿಯ 'ಸಮ್ನಿಯ' ಪ್ರದೇಶದ ಪ್ರತಿಷ್ಟಿತ 'ಪೊಂತಿಯ' ಕುಟುಂಬದ ಸದಸ್ಯನೆಂಬುದು ಈತನ ಹೆಸರಿನಿಂದ ತಿಳಿದು ಬರುತ್ತದೆ. ಇದನ್ನು ಹೊರತುಪಡಿಸಿದರೆ ಈತನ ರಾಜ್ಯಪಾಲನ ಹುದ್ದೆಗೆ ಪೂರ್ವದ ಇತಿವೃತ್ತಗಳು ತಿಳಿದು ಬರುವುದಿಲ್ಲ. 'ಪಿಲಾತನ ಕಲ್ಲು' ಎನ್ನುವ ಮಾಸ್ತಿಕಲ್ಲಿನ ನೆರವಿನಿಂದ ಈತನ ರಾಜ್ಯಪಾಲನ ಹುದ್ದೆ ಮತ್ತು ಕಾರ್ಯನಿರ್ವಹಿಸಿದ ಅವಧಿಯ ಬಗ್ಗೆ ತಿಳಿದುಬರುತ್ತದೆ.

ಯೇಸುಕ್ರಿಸ್ತರ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಲ್ಲದೆ ಯೆಹೂದ್ಯರ ಒತ್ತಡಕ್ಕೊಳಗಾಗಿ ಯೇಸುವಿಗೆ ಮರಣದಂಡನೆ ವಿಧಿಸಿದ್ದೂ ಈತನೇ ಎಂಬುದು ಬೈಬಲಿನ ಅಂಶ. ಇದೇ ಕಾರಣಕ್ಕೆ ಅನೇಕ ಕ್ರೈಸ್ತರು ಈತನನ್ನು ಖಳನಾಯಕನಂತೆ ಕಾಣುತ್ತಾರೆ. ಆದರೆ ಈಜಿಪ್ಟ್‌ ಮತ್ತು ಇಥಿಯೋಪಿಯಾದ ಕೆಲವು ಕ್ರೈಸ್ತ ಸಭೆಗಳು ಈತನನ್ನು ಹುತಾತ್ಮ ಮತ್ತು ಸಂತನನ್ನಾಗಿ  ಪರಿಗಣಿಸುತ್ತದೆ.

ಯೇಸು ಶಿಲುಬೆ ಮರಣವನ್ನಪ್ಪಿದ್ದು ಆಕಸ್ಮಿಕವಲ್ಲ; ಯೇಸುವೇ ಅದನ್ನು ಮುಂತಿಳಿಸಿದ್ದರು. ಅಂತೆಯೇ ಅದು ನೆರವೇರಬೇಕಿತ್ತು, ನೆರವೇರಿತು. ನೆರವೇರಲು ಪಿಲಾತ ಒಂದು ಆಯುಧವಾಗಿದ್ದನಷ್ಟೆ. ಯೇಸು ನಿರಪರಾಧಿ ಎಂಬುದು ವಿಚಾರಣೆಯಿಂದ ಪಿಲಾತನಿಗೆ ತಿಳಿದು ಬಂದಿತ್ತು. ಆದರೆ ಯೆಹೂದ್ಯರ ಒತ್ತಡದ ಪರಿಣಾಮ ಶಿಲುಬೆಗೆ ಏರಿಸಲು ಯೆಹೂದ್ಯರ ಕೈಗೆ ಯೇಸುವನ್ನು ಒಪ್ಪಿಸಬೇಕಾಗಿ ಬರುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಜುದೇಯ ಪ್ರಾಂತ್ಯವು ಸೇರಿದಂತೆ ಯೆಹೂದ್ಯರ ಪ್ರದೇಶಗಳು ರೋಮನರ ಅಧಿಪತ್ಯಕ್ಕೆ ಸೇರಿರುತ್ತದೆ. ರೋಮನರೆಂದರೆ ಯೆಹೂದ್ಯರಿಗೆ ಅಷ್ಟಕ್ಕಷ್ಟೆ. ದಂಗೆ ಮತ್ತಿತರ ರಾಜವಿರೋಧಿ ಕೃತ್ಯಗಳು ಆಗಾಗ್ಯೆ ಸಂಭವಿಸುತ್ತಿರುತ್ತದೆ. ಅದನ್ನು ಬಹು ಪರಿಶ್ರಮದಿಂದ ರಾಜ್ಯಪಾಲನಾದವನು ತಹಬಂದಿಗೆ ತರಬೇಕಾಗುತ್ತಿತ್ತು. ಹಾಗೆ ಮಾಡದಿದ್ದರೆ ರಾಜ್ಯಪಾಲನ ಹುದ್ದೆಗೆ ಸಂಚಕಾರವಾಗುತ್ತಿತ್ತು. ಪರಿಸ್ಥಿತಿ ಹೀಗೆ ಇರುವಾಗ ಆತ ಶಾಂತಿ ಮತ್ತು ಆರಾಜಕ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಯೆಹೂದ್ಯರೊಂದಿಗೆ ಸಂಯಮದಿಂದ ವರ್ತಿಸಲೇ ಬೇಕಾಗಿತ್ತು. ಹಾಗಾಗಿ ಪಿಲಾತ ಯೇಸುವನ್ನು ಮರಣದಂಡನೆಗೆ ಒಪ್ಪಿಸುತ್ತಾನೆ. ಇದೇನಾದರೂ ಸಂಭವಿಸದೇ ಹೋಗಿದ್ದಲ್ಲಿ ಮತ್ತು ಪಿಲಾತನು ಯೇಸುವನ್ನು ಉಳಿಸಿದ್ದೇ ಆಗಿದ್ದಲ್ಲಿ, ಹಿಂದೆ ಪ್ರವಾದಿಗಳು ಹೇಳಿದ ಮಾತುಗಳೆಲ್ಲವೂ ಸುಳ್ಳಾಗುತ್ತಿತ್ತು. ಅದೇನಿದ್ದರೂ ಪಿಲಾತ ಯೇಸುವನ್ನು ಉಳಿಸುವ ಪ್ರಯತ್ನ ಮಾಡುತ್ತಾನೆ ಎಂಬುದು ಗಮನಾರ್ಹ ಸಂಗತಿ.

ಬಂಧಿತನಾಗಿ ಬಂದ ಯೇಸುವಿನದು ಏನೂ ತಪ್ಪಿಲ್ಲ ಎಂಬ ನಿರ್ಣಯಕ್ಕೆ ಬಂದಿದ್ದ ಪಿಲಾತ ಅಂತಿಮವಾಗಿ, ಯೆಹೂದ್ಯರೊಂದಿಗೆ, ಯೇಸು ಮತ್ತು ಆಗಲೇ ಸೆರೆಯಲ್ಲಿರುವ ಬರಬ್ಬ ಎಂಬಿಬ್ಬರನ್ನು ಹೆಸರಿಸಿ ಯಾರನ್ನು ಬಿಡುಗಡೆ ಮಾಡಲಿ ಎಂದು ಕೇಳುತ್ತಾನೆ. ಏಕೆಂದರೆ ವರ್ಷಕ್ಕೊಮ್ಮೆ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವ ವಾಡಿಕೆ ಇತ್ತು. ಬರಬ್ಬನಾದರೆ ದಂಗೆ ಕೊಲೆಗಳನ್ನು ಮಾಡಿದ್ದ ಕುಖ್ಯಾತ ಖೈದಿಯಾಗಿದ್ದ. ಅವನಿಗೆ ಮರಣದಂಡನೆಯ ಶಿಕ್ಷೆ ವಿಧಿಸಲ್ಪಟ್ಟಿತ್ತು. ಸಹಜವಾಗಿಯೇ ಇಸ್ರಾಯೇಲರು ಅವನನ್ನು ನಿರಾಕರಿಸಿ ಯೇಸುವಿನ ಬಿಡುಗಡೆಗೆ ಒಪ್ಪಬಹುದೆಂಬ ದೂರಾಲೋಚನೆ ಪಿಲಾತನದಾಗಿತ್ತು. ಆದರೆ ಅವನ ಯೋಜನೆ ತಲೆಕೆಳಗಾಗುತ್ತದೆ. ವಿಪರ್ಯಾಸವೆಂದರೆ ಯೆಹೂದ್ಯರು ಕುಖ್ಯಾತ ಬರಬ್ಬನ ಬಿಡುಗಡೆಯನ್ನು ಬಯಸಿದ್ದು ಸರ್ವಕಾಲಕ್ಕೂ ಅನ್ವಯಿಸುವ ಸಂಗತಿ. ವಿಧಿಯಿಲ್ಲದೆ ಪಿಲಾತನು ತನ್ನ ಮಡದಿಯ ಸಲಹೆಯ ಮೇರೆಗೆ ಯೇಸುವಿನ ಮರಣಕ್ಕೆ ತಾನು ಕಾರಣಕರ್ತನಲ್ಲ ಎಂದು ನೀರಿನಿಂದ ಕೈಯನ್ನು ತೊಳೆದುಕೊಳ್ಳುತ್ತಾ ಯೇಸುವನ್ನು ರಕ್ತಪಿಪಾಸುಗಳ ಕೈಗೆ ಒಪ್ಪಿಸುತ್ತಾನೆ. ಇದು ಬೈಬಲ್‌ನಿಂದ ಅರಿವಾಗುವ ಅಂಶ.

ಮುಂದೆ ಗೆರಿಜಿ಼ಮ್‌ ಬೆಟ್ಟದಲ್ಲಿ ನಡೆದ ಸಮಾರಿಯನ್‌ ಚಳುವಳಿಯನ್ನು ಹಿಂಸಾತ್ಮಕವಾಗಿ ನಿಗ್ರಹಿಸಿದನೆಂಬ ಕಾರಣಕ್ಕೆ ಪಿಲಾತ ತನ್ನ ಹುದ್ದೆಯನ್ನು ಕಳೆದುಕೊಳ್ಳುತ್ತಾನೆ, ಎಂಬುದಾಗಿ ಅಂದಿನ ಇತಿಹಾಸ ತಜ್ಞ ಜೋಸೆಫಸ್‌ ಬರೆದಿದ್ದಾನೆ.

ಪೊಂತಿಯುಸ್‌ ಪಿಲಾತನ ಮರಣದ ಬಗ್ಗೆ ಅನೇಕ ಊಹಾಪೋಹಗಳಿವೆ. ಆತನದು ಸಹಜ ಸಾವು ಎನ್ನುವವರು ಕೆಲವರಾದರೆ; ಆತ ಆತ್ಮಹತ್ಯೆ ಮಾಡಿಕೊಂಡನೆನ್ನುತ್ತಾರೆ ಮತ್ತೆ ಕೆಲವರು. ಇತ್ತ ಈಜಿಪ್ಟ್‌ ಮತ್ತು ಇಥಿಯೋಪಿಯಾದ ಕ್ರೈಸ್ತರ ಒಂದು ಪಂಗಡ ಮತ್ತು ವಿಶೇಷವಾಗಿ ಪೌರ್ವಾತ್ಯ ರೋಮನ್‌ ಸಾಮ್ರಾಜ್ಯದ ಕೆಲವು ಗ್ರಂಥಗಳು, ಯೇಸುವಿನ ಮರಣಾನಂತರ ಕ್ರೈಸ್ತಮತವನ್ನಪ್ಪಿದ  ಪಿಲಾತನು ಕ್ರೈಸ್ತಧರ್ಮಸಂಸ್ಥಾಪನೆಯ ಸಂಬಂಧವಾಗಿ  ಹುತಾತ್ಮನಾದನೆಂದು ಹೇಳುತ್ತದೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ