ಸಂತ ಬಾರ್ತಾಲೋಮಿಯ, ಪ್ರೇಷಿತ

ಯೇಸುವಿನ ಹನ್ನೆರಡು ಮಂದಿ ಪ್ರೇಷಿತರಲ್ಲಿ ಒಬ್ಬ. ಹೀಬ್ರೂ ಭಾಷೆಯಲ್ಲಿ 'ಬಾರ್‌-ತಾಲೋಮಿ' ಅಂದರೆ 'ತಾಲೋಮಿಯ ಮಗ'ನೆಂದು ಅರ್ಥ. ಜುದೇಯದ 'ಕಾನಾ' ಎಂಬುದು ಈತನ ಊರು. ಈತನ ತಂದೆ-ತಾಯಿಯ ಬಗ್ಗೆ ಯಾವ ವಿವರವೂ ಲಭ್ಯವಿಲ್ಲ. ಈತನ ಮೂಲ ನಾಮ 'ನಥಾನಿಯೆಲ‌' ಎನ್ನಲಾಗುತ್ತಿದೆ. ನಥಾನಿಯೆಲ ಬಾರ್ತಾಲೋಮಿಯನಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಯೊವಾನ್ನನ ಸುಸಂದೇಶದ ಪ್ರಕಾರ ನೋಡಿದರೆ ಅವರಿಬ್ಬರೂ ಒಬ್ಬನೇ ಎನಿಸುತ್ತದೆ. ಹಾಗೆ ನೋಡುವುದಾದರೆ ನಥಾಲೇನಿಯನ ಬಗ್ಗೆ ಇತರ ಮೂರು ಸುಸಂದೇಶಗಳಲ್ಲೂ ಕಂಡು ಬರುವುದು ಕೇವಲ ಪ್ರೇಷಿತರ ಪಟ್ಟಿಯಲ್ಲಿನ ಹೆಸರು ಮಾತ್ರ ಅದನ್ನು ಹೊರತು ಪಡಿಸಿದರೆ ಬೇರೆ ವಿವರಗಳು ಲಭಿಸುವುದಿಲ್ಲ. ಆದರೆ ಯೊವಾನ್ನನ ಸುಸಂದೇಶದಲ್ಲಿ ಒಂದಷ್ಟು ವಿವರಗಳು ಲಭ್ಯವಾಗುತ್ತದೆ. ಈತನ ಹೆಸರು ಸಾಮಾನ್ಯವಾಗಿ ಫಿಲಿಪ್ಪನ ಜೊತೆಗೆ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು. ಅಲ್ಲದೆ ಅವರಿಬ್ಬರು ಗೆಳೆಯರೋ ಸಂಬಂಧಿಕರೋ ಆಗಿದ್ದಿರಬೇಕು. ಹೇಗೆ ಅಂದ್ರೆಯ ತನ್ನ ಸಹೋದರ ಸಿಮೋನ್ಪೇತ್ರನನ್ನು ಯೇಸುವಿನ ಬಳಿಗೆ ಕರೆದೊಯ್ಯುತ್ತಾನೋ ಅದೇ ರೀತಿಯಲ್ಲಿ ಫಿಲಿಪ್ಪನೂ ನಥಾನಿಯೇಲನನ್ನು ಯೇಸುವಿನ ಬಳಿಗೆ ಕರೆದೊಯ್ಯತ್ತಾನೆ. ಇವೆರಡೂ ಘಟನೆಗಳು ಯೊವಾನ್ನನ ಸುಸಂದೇಶದಲ್ಲಿ ಓದಲು ಸಿಗುತ್ತವೆ.

ಯೇಸುವು ಗಲಿಲೇಯ ನಾಡಿಗೆ ಹೋಗಲು ನಿರ್ಧರಿಸಿ, ಅವರು ಫಿಲಿಪ್ಪನನ್ನು ಕಂಡು, "ನನ್ನೊಡನೆ ಬಾ," ಎಂದು ಕರೆಯುತ್ತಾರೆ. ಆಗ ಫಿಲಿಪ್ಪನು ನಥಾನಿಯೇಲನನ್ನು ಕಂಡು, "ಧರ್ಮಶಾಸ್ತ್ರದಲ್ಲಿ ಮೋಶೆಯು ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ನಜ಼ರೆತ್ ಊರಿನ ಜೋಸೆಫನ ಮಗನಾದ ಯೇಸು," ಎಂದು ಹೇಳುತ್ತಾನೆ. ಅದಕ್ಕೆ ನಥಾನಿಯೇಲನು, "ಏನು? ನಜ಼ರೇತಿನಿಂದ ಒಳ್ಳೆಯದೇನಾದರೂ ಬರುವುದುಂಟೆ?" ಎಂದು ಕೇಳುತ್ತಾನೆ. ಹೀಗೆ ನತಾನಿಯೇಲನು ಕೇಳಲು ಕಾರಣ ಅವನ ಊರಾದ ಕಾನಾದ ಸಮೀಪವೇ ನಜರೇತ್ಎಂಬ ಊರಿರುವುದು. ಪ್ರಾಯಶಃ ಊರಿನವರು ಬಹು ಒರಟು ಜನರೂ ತಿಳುವಳಿಕೆಯಿಲ್ಲದವರೂ ಆಗಿದ್ದಿರಬೇಕು. ಅದೇ ಕಾರಣಕ್ಕೆ ನತಾನಿಯೇಲನು ಹಾಗೆ ಹೇಳಿದ್ದು. ಆದರೆ ಫಿಲಿಪ್ಪನು, "ಬಾ ನೋಡುವಿಯಂತೆ," ಎಂದು ನಥಾನಿಯೇಲನಿಗೆ ಹೇಳುತ್ತಾನೆ.

ತಮ್ಮ ಬಳಿಗೆ ಬರುತ್ತಿದ್ದ ನಥಾನಿಯೇಲನನ್ನು ಕಂಡ ಯೇಸು, "ಇದೋ ನೋಡಿ ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ," ಎಂದು ನುಡಿಯುತ್ತಾರೆ. ನಥಾನಿಯೇಲನು, "ನನ್ನ ಪರಿಚಯ ನಿಮಗೆ ಹೇಗಾಯಿತು?" ಎಂದು ಕೇಳಲು ಯೇಸು, "ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ," ಎಂದು ಉತ್ತರ ಕೊಡುತ್ತಾರೆ. ಅದಕ್ಕೆ ನಥಾನಿಯೇಲನು, "ಗುರುದೇವಾ, ದೇವರಪುತ್ರ ನೀವೇ; ಇಸ್ರಯೇಲರ ಅರಸ ನೀವೇ," ಎನ್ನುತ್ತಾನೆ. ಆಗ ಯೇಸು, "ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆನೆಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ," ಎಂದು ನುಡಿಯುತ್ತಾರೆ.

ತಮ್ಮ ಮಾತನ್ನು ಮುಂದುವರಿಸುವ ಯೇಸು ಅವರಿಗೆ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ," ಎಂದು ಹೇಳುತ್ತಾರೆ. ಹೀಗೆ ಮೊದಲು ಅಪಸ್ವರವೆತ್ತಿದ ನಥಾನಿಯೇಲನು ಅನಂತರ ನಮ್ರತೆಯಿಂದ ಯೇಸುವನ್ನು ಹಿಂಬಾಲಿಸುತ್ತಾನೆ.

ಘಟನೆಯ ಬಳಿಕ ನಥಾನಿಯೇಲನ ಹೆಸರು ಕಣ್ಣಿಗೆ ಬೀಳುವುದು ಯೇಸು ಶಿಲುಬೆಯಲ್ಲಿ ಮರಣಹೊಂದಿ ಪುನರುತ್ಥಾನರಾದ ಬಳಿಕ ಮೂರನೆಯ ಸಲ ತಮ್ಮ ಶಿಷ್ಯರಿಗೆ ಕಾಣಿಸಿಕೊಳ್ಳುವ ವೇಳೆ ಏಳು ಮಂದಿ ಗಲಿಲೇಯ ಸಮುದ್ರದಲ್ಲಿ ಮೀನನ್ನು ಹಿಡಿಯುತ್ತಾ ಇರುತ್ತಾರೆ. ಅವರಲ್ಲಿ ನಥಾನಿಯೇಲನೂ ಒಬ್ಬನಾಗಿರುತ್ತಾನೆ.

ಧರ್ಮಪ್ರಸಾರಕಾರ್ಯಕ್ಕಾಗಿ ಎಲ್ಲಾ ಪ್ರೇಷಿತರೂ ಚದುರಿದಾಗ ನಥಾನಿಯೇಲನು ಭಾರತಕ್ಕೆ ಬಂದು ಮುಂಬಯಿಯ 'ಕಲ್ಯಾಣ್‌' ಎಂಬಲ್ಲಿ ಧರ್ಮಪ್ರಚಾರವನ್ನು ಮಾಡಿದ ಎಂಬ ಸಂಗತಿ ಪ್ರಚಲಿತದಲ್ಲಿದೆ. ಸೆಜಾರಿಯದ 'ಯೂಸೆಬಿಯುಸ್‌' 'ಕ್ರೈಸ್ತ ಯಾಜಕತ್ವದ ಇತಿಹಾಸ' ಎಂಬ ಕೃತಿಯ ಐದನೆಯ ಪುಟದ ಹತ್ತನೆಯ ವಾಕ್ಯವು, ಧರ್ಮಪ್ರಸಾರಕ್ಕಾಗಿ ಬಾರ್ತಾಲೋಮಿಯ ಭಾರತಕ್ಕೆ ಹೋಗಿದ್ದರು. ಅಲ್ಲಿ ಮತ್ತಾಯನ ಸುಸಂದೇಶವನ್ನು ಬಿಟ್ಟು ಬಂದಿದ್ದಾರೆ' ಎಂಬ ವಿವರವಿದೆ. ಇದು ನಥಾನಿಯೇಲನು ಭಾರತಕ್ಕೆ ಬಂದು ಮುಂಬಯಿಯ 'ಕಲ್ಯಾಣ್‌' ಎಂಬಲ್ಲಿ ಧರ್ಮಪ್ರಚಾರವನ್ನು ಮಾಡಿದ ಎನ್ನುವ ನಂಬಿಕೆಗೆ ಪುಷ್ಟಿಯನ್ನು ಕೊಡುತ್ತದೆ.

ಬಾರ್ತಾಲೋಮಿಯನು ಪ್ರಾಯಶಃ ಬೆತ್ಲೆಹೆಮ್ನಲ್ಲಿ ಮರಣಹೊಂದಿರುವ ಸಾಧ್ಯತೆ ಇರಬಹುದು ಎನ್ನಲಾಗುತ್ತಿದೆಯಾದರೂ ಯಾವಾಗ ಮರಣಹೊಂದಿದ ಎಂಬುದರ ಬಗ್ಗೆ ಯಾವ ಸುಳಿವೂ ದೊರೆಯುವುದಿಲ್ಲ. ಆದರೆ ನಥಾನಿಯೇಲನ ಸಾವಿನ ಬಗ್ಗೆ ಮೂರು ವದಂತಿಗಳಿವೆ. ಬಾರ್ತಾಲೋಮಿಯಾನನ್ನು ಅಪಹರಿಸಿ ಕೊಂದು ಸಮುದ್ರದಲ್ಲಿ ಎಸೆಯಲಾಯಿತು ಎಂಬ ಒಂದು ವದಂತಿಯಿದೆ. ಅಂತೆಯೇ ತಲೆಕೆಳಗಾಗಿ ಶಿಲುಬೆಗೆ ಹಾಕಿ ಕೊಲ್ಲಲಾಯಿತು ಎಂದೂ ಹೇಳಲಾಗುತ್ತಿದೆ. ಇನ್ನೊಂದು ವದಂತಿಯ ಪ್ರಕಾರ ಬಾರ್ತಾಲೋಮಿಯಾನು ಜೀವಂತನಾಗಿದ್ದಾಗಲೇ ವಿರೋಧಿಗಳು ಆತನ ಚರ್ಮವನ್ನು ಸುಲಿದು ನಂತರ ತಲೆಯನ್ನು ಕಡಿದು ಕೊಂದರು ಎನ್ನಲಾಗುತ್ತಿದೆ. ಮೂರನೆಯ ವದಂತಿಯೇ ಹೆಚ್ಚು ಕಡಿಮೆ ಸರಿಯೆನ್ನಲಾಗುತ್ತಿದೆ.


ಅರ್ಮೇನಿಯಾದಲ್ಲಿ ಸಂತನ ಹೆಸರಿನಲ್ಲಿ ಪ್ರಮುಖವಾದಂತಹ 'ಬಾರ್ತಾಲೋಮಿಯ ವಿರಕ್ತಮಠ'ವೂ, ಪವಿತ್ರಕ್ಷೇತ್ರವೂ ಇದೆ. ಸಂತನ ನೆನಪಿನಲ್ಲಿ ಪಾಶ್ಚಿಮಾತ್ಯ ಹಾಗೂ ಪೌವಾರ್ತ್ಯ ಕ್ರೈಸ್ತರು ಕ್ರಮವಾಗಿ ಆಗಸ್ಟ್ 24ರಂದು ಜೂನ್‌ 11ರಂದು ಹಬ್ಬಗಳನ್ನು ಆಚರಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ