ಫರಿಸೇಯರು(Pharisees) ಮತ್ತು ಸದ್ದೂಕಾಯರು(saducees)

ಫರಿಸೇಯರು: 'ಫರಿಸೇಯ(Pharicee)' ಎಂದರೆ 'ಪ್ರತ್ಯೇಕಗೊಂಡವರು' ಎಂಬ ಅರ್ಥವಿದೆ.ಸದಾ ಶುದ್ಧಾಚಾರವನ್ನು ಆಚರಿಸುವವರು’ ಎಂದು ಲೂಕನ ಸುಸಂದೇಶದಲ್ಲಿ(11:38-42) ಇವರ ಬಗ್ಗೆ ಹೇಳಲಾಗಿದೆ; ‘ತಾವು ಮಾಡಿದ್ದೇ ಸರಿ’ ಎಂದು ಇವರು ವಾದಿಸುತ್ತಾರೆ(ಲೂಕ 18:11); ಯಾವುದೇ ಸಭಾ ಸಮಾರಂಭಗಳಲ್ಲಿ ಸದಾ ಉನ್ನತ ಸ್ಥಾನಮಾನಗಳನ್ನು ಬಯಸುವುದು(ಮತ್ತಾಯ 23:16) ಇವರಲ್ಲಿರುವ ಹವ್ಯಾಸ. ವಾರಕ್ಕೆರಡು ಸಲದಂತೆ ಉಪವಾಸವ್ರತವನ್ನಾಚರಿಸುತ್ತಾರೆ ಎಂದು ಇವರ ಬಗ್ಗೆ ಹೇಳಲಾಗಿದೆ(ಮತ್ತಾಯ 9:14; ಮಾರ್ಕ 2:13; ಲೂಕ 5:33). ಸದಾ ಉದ್ದುದ್ದನೆಯ ಫ್ರಾರ್ಥನೆಗಳನ್ನು ಸಲ್ಲಿಸುತ್ತಾ ದೇವರಲ್ಲಿ ಅತಿ ವಿನಯವಂತರು, ಭಯಭಕ್ತಿಯುಳ್ಳವರು ತಾವು ಎಂಬುದನ್ನು ತೋರ್ಪಡಿಸುತ್ತಾರೆ; ಇವರು ಕುರುಡ ಮಾರ್ಗದರ್ಶಕರು; ನುಡಿದಂತೆ ನಡೆಯದವರು(ಮತ್ತಾಯ 23:3; 23-16) ಇತ್ಯಾದಿಯಾಗಿ ಇವರ ಬಗ್ಗೆ ಬೈಬಲ್ನಲ್ಲಿ ಹೇಳಲಾಗಿದೆ. ತಮ್ಮನ್ನು ತಾವು ಮೋಸೆಸನ ಅಪರಾವತಾರ ಎಂದುಕೊಂಡವರು ಫರಿಸೇಯರು(ಮತ್ತಾಯ23:2).    

ಫರಿಸೇಯರು ಸಾಮಾನ್ಯವಾಗಿ ಸದ್ದೂಕರ(ಸದ್ದೂಕಾಯರ)ನ್ನೂ ಅವರ ನಂಬಿಕೆಗಳನ್ನು ವಿರೋಧಿಸುತ್ತಾರೆ. ಅದಕ್ಕೆ ಕಾರಣ ಇವರಲ್ಲಿ, ಸತ್ತ ಮೇಲೆ ಪುನರುತ್ಥಾನವಿದೆಯೆಂಬ ನಂಬಿಕೆ ಇದೆ. ಆತ್ಮ, ದೇವದೂತರನ್ನು ಇವರು ನಂಬುತ್ತಾರೆ. ಇವುಗಳನ್ನು ಸದ್ದೂಕರು ನಂಬುವುದಿಲ್ಲ. ಊಟದ ನಿಯಮಗಳಲ್ಲಾಗಲಿ, ಶುದ್ಧತೆಯಲ್ಲಾಗಲಿ, ಪಾವಿತ್ರ್ಯತೆಯಲ್ಲಾಗಲಿ ಇವರು ಅತ್ಯಂತ ಕಟ್ಟುನಿಟ್ಟು ನಿಯಮಗಳನ್ನು ಪಾಲಿಸುತ್ತಾರೆ. ಧರ್ಮಶಾಸ್ತ್ರದ ಅತ್ಯಂತ ಸೂಕ್ಷ್ಮವಿಷಯಗಳನ್ನೂ ಇವರು ಅಷ್ಟೇ ಸೂಕ್ಷ್ಮವಾಗಿ ಅರಿತುಕೊಳ್ಳಬಲ್ಲರು. ಸ್ನಾನಿಕ ಯೊವಾನ್ನನೊಂದಿಗೆ ಹಾಗೂ ಯೇಸುವಿನೊಂದಿಗೆ ಇವರು ವಾಗ್ವಾದಕ್ಕೂ ಒಮ್ಮೆ ಇಳಿದಿದ್ದರು.

'ಯೇಸುವನ್ನು ಕದ್ದೊಯ್ಯುತ್ತಾರೆ. ಅವರ ಸಮಾಧಿಗೆ ಕಾವಲಿರಿಸಿ', ಎಂದು ಪಿಲಾತನಲ್ಲಿ ಬೇಡಿಕೊಂಡು ಸಮಾಧಿಯ ಸ್ಥಳದಲ್ಲಿ ಸೈನಿಕರನ್ನು ಪಹರೆ ಇಡಿಸಿದವರು ಫರಿಸೇಯರು(ಮತ್ತಾಯ 27:62-64).

ಯೇಸುವಿನ ಶಿಷ್ಯರನ್ನೂ, ಅವರ ಧರ್ಮಪ್ರಚಾರಕಾರ್ಯವನ್ನು ಖಂಡಿಸಿ ವಿರೋಧಿಸುತ್ತಿದ್ದ ಸಂತ ಪೌಲನೂ ಓರ್ವ ಫರಿಸೇಯನೆಂಬುದು ಇಲ್ಲಿ ಗಮನಾರ್ಹ

ಸದ್ದೂಕಾಯರು: ಯೆಹೂದ್ಯರ ಪಂಗಡಗಳಲ್ಲಿ ಪ್ರಧಾನವಾದ ಧಾರ್ಮಿಕ ಪಂಗಡವೇ 'ಸದ್ದೂಕಾಯರು'. ಸೊಲೊಮೋನ ಕಾಲದಲ್ಲಿ ಯಾಜಕತ್ವದ ಗದ್ದುಗೆಯಲ್ಲಿ ಉನ್ನತ ಯಾಜಕನಾಗಿ ನೇಮಕಗೊಂಡಿದ್ದ 'ಜ಼ದೋಕ' ವಂಶದವರು ಇವರು ಎನ್ನಲಾಗುತ್ತದೆ. 'ಮೃತರು ಪುನರುತ್ಥಾನ ಹೊಂದುತ್ತಾರೆ', 'ದೇವದೂತರು ಇದ್ದಾರೆ', 'ಸಾವಿನ ನಂತರ ಶಿಕ್ಷೆಯಾಗಲಿ, ಪುರಸ್ಕಾರವಾಗಲಿ ಇರುತ್ತದೆ' ಎಂಬ ನಂಬಿಕೆಗಳನ್ನು ವಿರೋಧಿಸುವವರು ಸದ್ದೂಕಾಯರು.

ಜೆರುಸಲೇಮಿನ ಯಾಜಕವರ್ಗದೊಂದಿಗೆ ಸಹಭಾಗಿತ್ವ ಹೊಂದಿರುವ ಇವರಲ್ಲಿ ಬಹುತೇಕರು ಐಶ್ವರ್ಯವಂತರು. ದೇವಾಲಯದ ನಿರ್ವಹಣೆಯೊಂದಿಗೆ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲೂ ಇವರು ಮಹತ್ವದ ಪಾತ್ರ ವಹಿಸುತ್ತಿದ್ದರು. ಇವರು ಕ್ರಿ.ಪೂ. ಎರಡನೆಯ ಶತಮಾನದಿಂದ ಕ್ರಿ.. 70(ಎರಡನೆಯ ದೇವಾಲಯದ ವಿನಾಶ)ರವರೆಗೆ ಅತ್ಯಂತ ಕ್ರಿಯಾಶೀಲರಾಗಿದ್ದರು ಎಂದು ತಿಳಿದುಬರುತ್ತದೆ.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ