ಸ್ನಾನಿಕ ಯೊವಾನ್ನ

ಈತ ಯೇಸುವಿನ ಮಾತೆ ಮೇರಿಯ ಸಂಬಂಧಿ ಎಲಿಜಬೆತ್‌ ಮತ್ತು ಜಕರಿಯನ ಪುತ್ರ. ಮಹಾದೇವಾಲಯದ ಯಾಜಕನಾಗಿದ್ದ ಜೆಕರಿಯಾ ಮತ್ತು ಆತನ ಪತ್ನಿ ಎಲಿಜಬೇಳಿಗೆ ಮುಪ್ಪಿನಲ್ಲಿ ಜನಿಸಿದ ಏಕೈಕ ಸಂತಾನ. ಯೇಸುವಿನ ಹಾದಿಯನ್ನು ಸುಗಮಗೊಳಿಸಲು ಯೇಸುವಿಗಿಂತ ಮುಂಚೆಯೇ ದೈವಸಂಕಲ್ಪದಿಂದ ಜನಿಸಿದಾತನೇ ಈತ ಎನ್ನುತ್ತದೆ ಸುಸಂದೇಶಗಳು(ವಿಶೇಷವಾಗಿ ಲೂಕನ ಸುಸಂದೇಶ).

ಕೆಲವು ವರ್ಷಗಳ ಕಾಲ ಬೆಂಗಾಡಿನಲ್ಲಿದ್ದು ಬಳಿಕ ಜೋರ್ಡಾನ್ನದಿ ತೀರದ ಬಳಿಯಲ್ಲೇ ಸುಳಿದಾಡುತ್ತಾ ಜನರಿಗೆ ಉಪದೇಶ ಮತ್ತು ಸ್ನಾನದೀಕ್ಷೆಯನ್ನು ನೀಡುತ್ತಿದ್ದ ಯೊವಾನ್ನ. ಈತನ ಬಳಿಗೆ ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು ಯಾಜಕರನ್ನೂ ಲೇವಿಯರನ್ನೂ ಕಳುಹಿಸಿಕೊಡುತ್ತಾರೆ. ಅವರು ಸ್ನಾನಿಕ ಯೊವಾನ್ನನನ್ನು ಕಂಡು, "ಯಾರು ನೀನು?" ಎಂದು ಪ್ರಶ್ನಿಸುತ್ತಾರೆ. ಪ್ರಶ್ನೆಗೆ ಯೊವಾನ್ನನು ನೀಡಿದ ಉತ್ತರ ಮಾರ್ಮಿಕ; "ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ," ಎಂಬುದೇ ಉತ್ತರವಾಗಿರುತ್ತದೆ. "ಹಾಗಾದರೆ ನೀನು ಎಲೀಯನೋ?" ಎಂದವರು ಮತ್ತೆ ಪ್ರಶ್ನಿಸಿದಾಗ, ಅಲ್ಲವೆಂಬ ಚುಟುಕಾದ ಉತ್ತರ ದೊರೆಯುತ್ತದೆ. "ಬರಬೇಕಾಗಿದ್ದ ಪ್ರವಾದಿ ನೀನೋ?" ಎಂದವರು ಮತ್ತೊಮ್ಮೆ ಪ್ರಶ್ನೆ ಹಾಕಿದಾಗ, "ಅದೂ ಅಲ್ಲ," ಎಂದು ನುಡಿಯುತ್ತಾನೆ. ಮತಿಭ್ರಮಣೆ ಹಿಡಿದಂತೆ ಆದ ಅವರು, "ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುವೆ?" ಎಂದು ಕೇಳುತ್ತಾರೆ, "ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು," ಎಂಬುದು ಆತನ ಉತ್ತರವಾಗುತ್ತದೆ. ಇದು ಯೆಶಾಯ ಪ್ರವಾದಿಯ ಗ್ರಂಥದ ವಾಕ್ಯ. 

ಆಗ ಫರಿಸೇಯರ ಕಡೆಯಿಂದ ಬಂದಿದ್ದ ಕೆಲವರು, "ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?" ಎಂದು ಪ್ರಶ್ನಿಸುತ್ತಾರೆ. ಪ್ರತ್ಯುತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆಯನ್ನು ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರೂ ಅವರೇ. ಆವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ," ಎಂಬ ತಾರ್ಕಿಕ ಉತ್ತರವನ್ನು ನೀಡುತ್ತಾನೆ. ಇದು ನಡೆದದ್ದು ಜೋರ್ಡನ್ ನದಿಯ ಆಚೆ ದಡದಲ್ಲಿದ್ದ ಬೆಥಾನಿಯ ಎಂಬ ಸ್ಥಳದಲ್ಲಿ(ಯೊವಾ 1:19-28).

'ಸ್ನಾನಿಕ' ಎಂಬ ಬಿರುದಾಂಕಿತ ಯೊವಾನ್ನನು ಹುಟ್ಟುವ ಮೊದಲೇ, ಯಾಜಕ ಜಕರೀಯನಿಗೆ ಗಬ್ರಿಯೇಲ್ದೇವದೂತನು, ಯೊವಾನ್ನನ ಜನನದ ಕುರಿತು ಸಂದೇಶವನ್ನು ನೀಡಿರುತ್ತಾನೆ. ಆದರೆ ಅದನ್ನು ನಂಬಲು ಹಿಂದೇಟು ಹಾಕಿದ ತಪ್ಪಿಗೆ ಸಂದೇಶವು ನೆರವೇರುವವರೆಗೂ ಜಕರೀಯನು ಮೂಕನಾಗಿಯೇ ಉಳಿಯುತ್ತಾನೆ(ಲೂಕ 1:5-25). ಮುಂದೆ ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ ಅವಳನ್ನು ನೋಡಲು ಯೇಸುವನ್ನು ಗರ್ಭದಲ್ಲಿ ಹೊತ್ತಿದ್ದ ಆಕೆಯ ಸಂಬಂಧಿ ಮರಿಯಳು ಆಗಮಿಸುತ್ತಾಳೆ. ಜಕರೀಯನ ಮನೆಯನ್ನು ಪ್ರವೇಶಿಸಿದ ಮರಿಯಳು ಎಲಿಜಬೇತಳನ್ನು ವಂದಿಸಿತ್ತಾಳೆ. ಎಲಿಜಬೇತಳು ಮರಿಯಳ ವಂದನೆಯನ್ನು ಸ್ವೀಕರಿಸಿದ್ದೇ ತಡ  ಅವಳ  ಗರ್ಭದಲ್ಲಿದ್ದ ಶಿಶು ನಲಿದಾಡುತ್ತದೆ(ಲೂಕ 1:39-41). ದಿನ ತುಂಬಿದ ಬಳಿಕ ಎಲಿಜಬೇತಳು ಓರ್ವ ಮಗನಿಗೆ ಜನ್ಮನೀಡುತ್ತಾಳೆ. ಸರ್ವೇಶ್ವರನ ಮಹಾಕರುಣೆ ಆಕೆಯ ಮೇಲೆ ಇದ್ದುದ್ದನ್ನು ಅರಿತ ನೆರೆಹೊರೆಯವರೂ ಮತ್ತು ಬಂಧುಗಳೂ ಆಕೆಯ ಜೊತೆ ಸೇರಿ ಸಂತೋಷಪಡುತ್ತಾರೆ. ಎಂಟನೆಯ ದಿನ ಮಗುವಿಗೆ ಸುನ್ನತಿ ಮಾಡುವುದಕ್ಕಾಗಿ ಅವರೆಲ್ಲರೂ ಬಂದು ಮಗುವಿನ ತಂದೆಯ ಹೆಸರಿನಂತೆ 'ಜಕರೀಯ'ನೆಂದು ಕರೆಯಲು ಸನ್ನದ್ಧರಾಗುತ್ತಾರೆ. ಆದರೆ ಮಗುವಿನ ತಾಯಿಯು, ಅವನಿಗೆಯೊವಾನ್ನಎಂದು ಹೆಸರಿಡಬೇಕು ಎಂದು ಅವರ ಅಪೇಕ್ಷೆಗೆ ತಣ್ಣೀರು ಸುರಿಯುತ್ತಾಳೆಅವರು ಅವನನ್ನು ಯಾವ ಹೆಸರಿನಿಂದ ಕರೆಯಬೇಕೆಂದು ಮಗುವಿನ ತಂದೆಗೆ ಸನ್ನೆ ಮಾಡಿ ಕೇಳುತ್ತಾರೆ. ಆಗ ಜಕರಿಯನು ಬರೆಯುವ ಹಲಗೆಯೊಂದನ್ನು ಕೇಳಿ ಪಡೆದು ಅದರ ಮೇಲೆಯೊವಾನ್ನಎಂದು ಬರೆಯುತ್ತಾನೆ. ಅದನ್ನು ಕಂಡು ಅಲ್ಲಿದ್ದವರೆಲ್ಲರೂ ಆಶ್ಚರ್ಯಪಡುತ್ತಾರೆ. ಕ್ಷಣವೇ ಅವನಿಗೆ ಬಾಯಿ ಬರುತ್ತದೆ; ಅವನ ನಾಲಿಗೆ ಸಡಿಲವಾಗುತ್ತದೆ; ಅವನು ಮಾತನಾಡಲು ಆರಂಭಿಸಿ ಮೊದಲು ದೇವರನ್ನು ಸ್ತುತಿಸುತ್ತಾನೆ. ವಿಷಯವು ಜುದೇಯದ ಗುಡ್ಡಗಾಡು ಪ್ರಾಂತದಲ್ಲೆಲ್ಲಾ ಹರಡುತ್ತದೆ. ವಿಷಯವನ್ನು ಕೇಳಿದವರೆಲ್ಲರೂ ಮಗು ಮುಂದೆ ಎಂಥವನಾಗುವನೋ ಎಂದು ವಿಸ್ಮಯಗೊಳ್ಳುತ್ತಾರೆ(ಲೂಕ 1:57-66).
ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾಗುತ್ತಾನೆ. 'ಇಸ್ರಯೇಲ್ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದ' ಎನ್ನುತ್ತದೆ ಲೂಕನ ಸುಸಂದೇಶ(1:80). ಸ್ನಾನಿಕ ಯೊವಾನ್ನನ  ಬಾಲ್ಯದ ವಿವರಗಳು ಹೆಚ್ಚಿಗೆ ಲಭ್ಯವಾಗುವುದು ಲೂಕನ ಸುಸಂದೇಶದಲ್ಲಿ ಮಾತ್ರವೇ.

ಯೇಸುವಿನಂತೆಯೇ ಸ್ನಾನಿಕ ಯೊವಾನ್ನನ, ಬಾಲ್ಯದಿಂದ ಯೌವನಾವಸ್ಥೆಗೆ ಕಾಲಿರಿಸುವ ಸಂದರ್ಭದ ವಿವರಗಳು ಎಲ್ಲೂ ಲಭ್ಯವಾಗುವುದಿಲ್ಲ. ತರುಣ ಯೊವಾನ್ನನಿಗೆ 'ಬೆಂಗಾಡಿನಲ್ಲಿ ದೇವರ ಸಂದೇಶದ ಬೋಧೆ'ಯಾಗುತ್ತದೆ ಎಂಬ ವಾಕ್ಯದೊಂದಿಗೆ ಲಭ್ಯವಾಗುವ ವಿವರಗಳು ಮುಂದುವರಿದಂತೆ, ‘
ಸಿದ್ಧಪಡಿಸಿರಿ ಪ್ರಭುವಿಗಾಗಿ ಮಾರ್ಗವನ್ನು 
ನೇರಗೊಳಿಸಿರಿ ಅವರಾಗಮನಕ್ಕೆ ಹಾದಿಯನು
ಎಂದು ಬೆಂಗಾಡಿನಲಿ ಘೋಷಿಸುವನೋರ್ವನು
ಎಂಬ ಯೆಶಾಯ ಪ್ರವಾದಿಯ ಗ್ರಂಥದ ವಾಕ್ಯದಂತೆ ಜೋರ್ಡನ್ನದಿಯ ಪರಿಸರ ಪ್ರಾಂತದಲ್ಲೆಲ್ಲಾ ಸಂಚರಿಸುತ್ತಾ ಯೊವಾನ್ನನು, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಸಾರಿ ಹೇಳುತ್ತಾನೆ,' ಎಂಬಲ್ಲಿಂದ ಯೊವಾನ್ನನ ಮುಂದಿನ ವಿವರಗಳು ಸುಸಂದೇಶಗಳಲ್ಲಿ ತೆರೆದುಕೊಳ್ಳಲಾರಂಭಿಸುತ್ತದೆ. ಯೊವಾನ್ನನ ಬಳಿಗೆ ಸ್ನಾನದೀಕ್ಷೆ ಪಡೆಯಲು ಜನರು ಗುಂಪುಗುಂಪಾಗಿ ಬರತೊಡಗುತ್ತಾರೆ. ಆತನು ಅವರಿಗೆ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು? ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ. ‘ಅಬ್ರಹಾಮನೇ ನಮ್ಮ ಪಿತಾಮಹ,’ ಎಂದು ನಿಮ್ಮ ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ; ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತಿಯಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು,” ಎಂದು ಹೇಳುತ್ತಾನೆ. ಅದನ್ನು ಕೇಳಿದ ಜನಸಮೂಹವು, “ಹಾಗಾದರೆ ನಾವೇನು ಮಾಡಬೇಕು?” ಎಂದು ಯೊವಾನ್ನನಿಗೆ ಕೇಳುತ್ತಾರೆ. "ಎರಡು ಅಂಗಿಗಳು ನಿಮ್ಮಲ್ಲಿದ್ದರೆ, ಒಂದನ್ನು ಏನೂ ಇಲ್ಲದವನಿಗೆ ಕೊಡಿ; ಅಂತೆಯೇ ಆಹಾರವುಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಯೊವಾನ್ನನು ಅವರಿಗೆ ಹಿತನುಡಿಯುತ್ತಾನೆ. ಅನಂತರ ಸುಂಕದವರು ಸಹ ಸ್ನಾನದೀಕ್ಷೆ ಪಡೆಯಲು ಬಂದು, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದಾಗ, ಗೊತ್ತುಮಾಡಿರುವುದಕ್ಕಿಂತ ಹೆಚ್ಚಾಗಿ ಕಿತ್ತುಕೊಳ್ಳಬೇಡಿ,” ಎಂದವರಿಗೆ ಬುದ್ದಿ ಹೇಳುತ್ತಾನೆ. “ನಾವು ಮಾಡಬೇಕಾದುದೇನು?” ಎಂದು ಸಿಪಾಯಿಗಳು  ಪ್ರಶ್ನಿಸಿದಾಗ, “ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ,” ಎಂಬ ಉತ್ತರ ಸ್ನಾನಿಕ ಯೊವಾನ್ನನದಾಗುತ್ತದೆ.

ಕಾಲದಲ್ಲಿ ಜನರೆಲ್ಲರೂ 'ಅಭಿಷಿಕ್ತನಾದ ಲೋಕೋದ್ಧಾರಕ' ಜಗತ್ತಿಗೆ ಬರುಲಿರುವನೆಂದು ಎದುರು ನೋಡುತ್ತಾ ಇದ್ದರು. ಯೊವಾನ್ನನೇ ಅಭಿಷಿಕ್ತನಾದ ಲೋಕೋದ್ಧಾರಕನಾಗಿರಬಹುದೇ ಎಂದು ಕೆಲವರು ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. ಯೊವಾನ್ನನು ಅದಕ್ಕೆ ಉತ್ತರವಾಗಿ, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಿಮಗೆ ಪವಿತ್ರಾತ್ಮರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು. ಅವರ ಕೈಯಲ್ಲಿ ಮೊರವಿದೆ. ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ, ಗಟ್ಟಿಕಾಳನ್ನು ಮಾತ್ರ ಕಣಜಕ್ಕೆ ತುಂಬುವರು. ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು,” ಎಂದು ನುಡಿಯುತ್ತಾನೆ. ಹೀಗೆ ಯೊವಾನ್ನನು ಪ್ರಬೋಧಿಸುತ್ತಾ, ಜನರಿಗೆ ಶುಭಸಂದೇಶವನ್ನು ಸಾರುತ್ತಾನೆ(ಲೂಕ 2:7-20). ಯೊವಾನ್ನನ ಶುಭಸಂದೇಶಕ್ಕೆ ತಲೆಬಾಗಿದ ಅನೇಕರು ಸ್ನಾನದೀಕ್ಷೆಯನ್ನು ಪಡೆಯುತ್ತಾರೆ.

ಇದೇ ವೇಳೆಯಲ್ಲಿ ಯೇಸು ಸಹ ಯೊವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಗಲಿಲೇಯದಿಂದ ಜೋರ್ಡನ್ ನದಿಯ ಬಳಿಗೆ ಬರುತ್ತಾರೆ. ಆದರೆ ಯೊವಾನ್ನನು ಅವರನ್ನು ತಡೆದು, "ನಾನು ನಿಮ್ಮಿಂದ ಸ್ನಾನದೀಕ್ಷೆ ಮಾಡಿಸಿಕೊಳ್ಳಬೇಕು, ಆದರೆ ನೀವು ನನ್ನ ಬಳಿಗೆ ಬರುವುದು ಸರಿಯೇ?" ಎಂದು ಕೇಳುತ್ತಾನೆ. ಯೇಸು ಪ್ರತ್ಯುತ್ತರವಾಗಿ, "ಸದ್ಯಕ್ಕೆ ಒಪ್ಪಿಕೋ; ಏಕೆಂದರೆ ದೈವನಿಯಮಗಳನ್ನು ಹೀಗೆ ಪರಿಪಾಲಿಸುವುದೇ ಸರಿ", ಎನ್ನುತ್ತಾರೆ. ಅದನ್ನು ಒಪ್ಪಿಕೊಂಡು ಯೊವಾನ್ನನು ಯೇಸುವಿಗೆ ಸ್ನಾನದೀಕ್ಷೆಯನ್ನು ಕೊಡುತ್ತಾನೆ. ಯೇಸು ಸ್ನಾನದೀಕ್ಷೆಯನ್ನು ಪಡೆದು ನೀರಿನಿಂದ ಮೇಲಕ್ಕೆ ಬರುತ್ತಿದ್ದಂತೆಯೇ, ಆಕಾಶವು ತೆರೆಯಲ್ಪಟ್ಟು ದೇವರ ಆತ್ಮವು ಪಾರಿವಾಳದ ರೂಪದಲ್ಲಿ ಆವರ ಮೇಲೆ ಇಳಿಯುವುದನ್ನು ಯೊವಾನ್ನನು ಕಾಣುತ್ತಾನೆ. ಅಲ್ಲದೆ, "ಇಗೋ, ಈತನು ನನ್ನ ಪ್ರಿಯಪುತ್ರನು; ಈತನು ನನ್ನ ಪ್ರೀತಿಪಾತ್ರನು", ಎಂದು ಆಕಾಶದಿಂದ ಧ್ವನಿಯೊಂದು ಕೇಳಿಸುತ್ತದೆ.

ಯೇಸುವನ್ನು 'ಬಲಿಯರ್ಪಣೆಯ ದೇವರ ಕುರಿಮರಿ' ಎಂದು ಪರಿಚಯಿಸುವವನೇ ಸ್ನಾನಿಕ ಯೊವಾನ್ನ. ತಮ್ಮ ಬಳಿಗೆ ಬರುತ್ತಿದ್ದ ಯೇಸುವನ್ನು ತಮ್ಮ ಶಿಷ್ಯರಿಗೆ ಪರಿಚಯಿಸುತ್ತಾ, "ಇದೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಇವರು ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ 'ಇವರು ನನಗಿಂತಲೂ ಶ್ರೇಷ್ಟರು,' ಇಸ್ರಯೇಲರಿಗೆ ಇವರನ್ನು ತೋರ್ಪಡಿಸಿಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳೀದಿರಲಿಲ್ಲ," ಎಂದು ನುಡಿಯುತ್ತಾನೆ. ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ, "ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದು ಬಂದು ಯಾವ ವ್ಯಕ್ತಿಯ ಮೇಲೆ ನೆಲೆಸುವುದನ್ನು ನೋಡುವಿರೋ ಅವರೇ ಪವಿತ್ರಾತ್ಮರಿಂದ ದೀಕ್ಷಾಸ್ನಾನ ಕೊಡುವವರು, ಎಂದಿದ್ದರು. ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರಪುತ್ರರು ಎಂದು ಸಾಕ್ಷಿ ನೀಡುತ್ತಿದ್ದೇನೆ," ಎಂದೂ ಹೇಳುತ್ತಾನೆ(ಯೊವಾ 1:29-34).

ಆಗ ಜುದೇಯವನ್ನು ಆಳುತ್ತಿದ್ದವನು ಸಾಮಂತನಾದ ಹೆರೋದನೆಂಬುವವನು. ಅವನು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದ. ಅಲ್ಲದೆ ತನ್ನ ಸೋದರನಾದ ಫಿಲಿಫ್ಪನ ಹೆಂಡತಿ ಹೆರೋದಿಯಳನ್ನು ತನ್ನಲ್ಲಿಯೇ ಇಟ್ಟುಕೊಂಡಿರುತ್ತಾನೆ. ಯೊವಾನ್ನನು ಇದನ್ನು ವಿರೋಧಿಸಿ ಅವನನ್ನು ಖಂಡಿಸುತ್ತಾನೆ. ಇದರಿಂದ ಕೆರಳಿದ ಹೆರೋದನು ಯೊವಾನ್ನನನ್ನು ಬಂಧಿಸಿ ಕಾರಾಗೃಹದಲ್ಲಿರಿಸುತ್ತಾನೆ. ಅವನನ್ನು ಕೊಲ್ಲಿಸಬೇಕೇಂದಿದ್ದರೂ ಜನರಿಗೆ ಹೆದರಿ ಸುಮ್ಮನಾಗಿರುತ್ತಾನೆ. ಅಲ್ಲದೆ ಯೊವಾನ್ನನು ನೀತಿವಂತನೂ, ಪರಿಶುದ್ಧನೂ ಆದ ಮನುಷ್ಯನೆಂದು ನಂಬಿದ್ದ ಕಾರಣಕ್ಕೆ ಭಯಪಟ್ಟು ಹೆರೋದನು ಅವನಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡಿದ್ದ. ಯೊವಾನ್ನನು ಹೇಳಿದ್ದನ್ನೆಲ್ಲಾ ಕೇಳಿ ಕೊಂಚ ಗಲಿಬಿಲಿಗೊಳ್ಳುತ್ತಿದ್ದರೂ ಅನೇಕ ಕಾರ್ಯಗಳನ್ನು ಅವನು ಪಾಲಿಸುತ್ತಾನೆ. ಆದರೆ ಹೆರೋದಿಯಳು ಮಾತ್ರ ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದು ತೀರ್ಮಾನಿಸಿರುತ್ತಾಳೆ. ಹೀಗಿರಲಾಗಿ ಹೆರೋದ್ಯಳಿಗೆ ಅನುಕೂಲಕರವಾದ ಒಂದು ದಿನವು ಬರುತ್ತದೆ. ಹೆರೋದನು ತನ್ನ ಹುಟ್ಟಿದ ದಿನದಂದು ತನ್ನ ಪ್ರಭುಗಳಿಗೂ, ಸೈನ್ಯಾಧಿಪತಿಗಳಿಗೂ, ಗಲಿಲೇಯದ ಪ್ರಮುಖರಿಗೂ ಔತಣವನ್ನು ಏರ್ಪಡಿಸುತ್ತಾನೆ; ಆಗ ಹೆರೋದ್ಯಳ ಮಗಳಾದ ಸಲೋಮೆಯು ಔತಣಕೂಟದಲ್ಲಿ ನಾಟ್ಯವಾಡಿ ಹೆರೋದನನ್ನೂ, ಅವನ ಸಂಗಡ ಕುಳಿತಿದ್ದವರನ್ನೂ ಮೆಚ್ಚಿಸುವಳು. ಅರಸನು ಹುಡುಗಿಗೆ, "ನಿನಗೆ ಬೇಕಾದುದನ್ನು ಕೇಳಿಕೋ; ನಾನದನ್ನು ನಿನಗೆ ಕೊಡುತ್ತೇನೆನೀನು ನನ್ನಿಂದ ಏನನ್ನು ಕೇಳಿಕೊಂಡರೂ, ಅದು ನನ್ನ ರಾಜ್ಯದ ಅರ್ಧಭಾಗವೇ ಆಗಿದ್ದರೂ ನಾನು ನಿನಗೆ ಕೊಡುತ್ತೇನೆ," ಎಂದು ಅವಳಿಗೆ ವಾಗ್ದಾನ ಮಾಡುತ್ತಾನೆ. ಆಗ ಅವಳು ತನ್ನ ತಾಯಿಯ ಬಳಿಗೆ ಹೋಗಿ, "ನಾನು ಏನನ್ನು ಕೇಳಿಕೊಳ್ಳಲಿ?" ಎಂದು ಕೇಳುತ್ತಾಳೆ. ಆಕೆ, "ಸ್ನಾನಿಕ ಯೊವಾನ್ನನ ತಲೆಯನ್ನು ತಂದುಕೊಡಲು ಕೇಳಿಕೋ," ಎನ್ನುತ್ತಾಳೆ. ಕೂಡಲೆ ಅರಸನ ಬಳಿ ಹೋದ ಸಲೋಮೆಯು, "ಸ್ನಾನಿಕ ಯೊವಾನ್ನನ ತಲೆಯನ್ನು ನನಗಾಗಿ ಹರಿವಾಣದಲ್ಲಿ ತರಿಸಿಕೊಡಿ," ಎಂದು ಕೇಳಿಕೊಳ್ಳುತ್ತಾಳೆ. ಅರಸನು ಅವಳ ಮಾತನ್ನು ಕೇಳಿ ಬಹಳವಾಗಿ ದುಃಖಿಸುತ್ತಾನಾದರೂ ತಾನು ಕೊಟ್ಟ ವಾಗ್ದಾನವನ್ನು ಈಡೇರಿಸುವ ಸಲುವಾಗಿ ಕೂಡಲೆ ಯೊವಾನ್ನನ ತಲೆಯನ್ನು ತರಿಸಲು ಒಬ್ಬ ಕೊಲೆಗಡುಕನಿಗೆ ಆದೇಶಿಸುತ್ತಾನೆ; ಅವನು ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿದು ಹರಿವಾಣದಲ್ಲಿಟ್ಟು ಹುಡುಗಿಗೆ ತಂದೊಪ್ಪಿಸುತ್ತಾನೆ. ವಿಷಯವನ್ನು ತಿಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇರಿಸುತ್ತಾರೆ(ಮಾರ್ಕ 6:14-29).

ಸ್ನಾನಿಕ ಯೊವಾನ್ನನು ಸತ್ತ ಬಳಿಕವೂ ಹೆರೋದನನ್ನು ಕಾಡುತ್ತಾನೆ. ಯೇಸುವಿನ ವಿಷಯವನ್ನು ಜನರಿಂದ ಹೆರೋದರಸನು ಕೇಳಿಸಿಕೊಂಡಿರುತ್ತಾನೆ. ಅವರ ಹೆಸರು ಎಲ್ಲಾ ಕಡೆಗೂ ಪ್ರಖ್ಯಾತವಾಗಿರುತ್ತದೆ. 'ಸ್ನಾನಿಕ ಯೊವಾನ್ನನು ಮತ್ತೆ ಬದುಕಿ ಬಂದಿದ್ದಾನೆ; ಆದುದರಿಂದ ಮಹತ್ಕಾರ್ಯಗಳನ್ನು ನಡೆಸುವ ಶಕ್ತಿ ಆತನಲ್ಲಿ ಇವೆ' ಎಂದು ಜನರಾಡುವ ಮಾತುಗಳೂ ಅವನ ಕಿವಿಯನ್ನು ತಲುಪುತ್ತವೆ. ಕೆಲವರು, 'ಎಲೀಯನೇ ಈತ' ಎಂದೂ, ಮತ್ತೆ ಕೆಲವರು, 'ಈತನೂ ಒಬ್ಬ ಪ್ರವಾದಿ ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನಂತೆ ಈತ' ಎನ್ನುತ್ತಾರೆ. ಮಾತುಗಳು ಹೆರೋದನ ಕಿವಿಗೆ ಬಿದ್ದಾಗ, "ನಾನು ತಲೆ ಕಡಿಸಿದ ಯೊವಾನ್ನನು ಇವನೇ; ಇವನು ಸತ್ತವರೊಳಗಿಂದ ಎದ್ದು ಬಂದಿದ್ದಾನೆ," ಎಂದು ಭೀತನಾಗುತ್ತಾನೆ(ಮಾರ್ಕ 6:14-16). ಯೇಸುವನ್ನು ಕುರಿತು, "ಇದೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿದ ಕುರಿಮರಿ' ಎಂಬುದಾಗಿ ಸ್ನಾನಿಕ ಯೊವಾನ್ನನು ಹೇಳಿದ ವಿವರ ಸುಸಂದೇಶಕರ್ತ ಯೊವಾನ್ನನ ಸುಸಂದೇಶದಲ್ಲಿ ಕಾಣಲು ಸಿಗುತ್ತದೆ. "ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಇವರು ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲು ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಟರು," ಎಂಬ ಸ್ನಾನಿಕ ಯೊವಾನ್ನನ ಸಾಕ್ಷ್ಯ ಅದೇ ಸುಸಂದೇಶದ ಮೊದಲ ಅಧ್ಯಾಯದಲ್ಲಿ ದೊರಕುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ