ಸಂತ ಜೋಸೆಫ್‌

ಜೋಸೆಫ್‌(ಹೀಬ್ರೂ ಭಾಷೆಯಲ್ಲಿ 'ಯೋಸೆಫ್‌'), ಯೇಸುವಿನ ಸಾಕು ತಂದೆ. ಈತನ ತಂದೆಯ ಹೆಸರು 'ಯಕೋಬ' ಎನ್ನಲಾಗುತ್ತಿದೆ(ಮತ್ತಾ1:16). 'ಜೋಸೆಫನು 'ಹೇಲಿಯ'ನಿಗೆ ಹುಟ್ಟಿದನು' ಎನ್ನುತ್ತದೆ ಲೂಕನ ಸುಸಂದೇಶ(3:23). ಆದರೆ 'ಹೇಲಿ' ಎಂಬುದು ಜೋಸೆಫನ ಮಾವನ ಹೆಸರೆಂದು ಹೇಳುತ್ತದೆ ಇನ್ನೊಂದು ಮೂಲ. ಜೋಸೆಫನ ಬಗ್ಗೆ ಮತ್ತಾಯ ಮತ್ತು ಲೂಕನ ಸುಸಂದೇಶಗಳನ್ನು ಹೊರತುಪಡಿಸಿದಂತೆ ಇನ್ನೆಲ್ಲೂ ವಿವರಗಳು ಲಭ್ಯವಾಗುವುದಿಲ್ಲ.


ವೃತ್ತಿಯಲ್ಲಿ ಬಡಗಿಯಾದ ಜೋಸೆಫ್ ಹುಟ್ಟಿದ್ದು ಬೆತ್ಲೆಹೇಮ್‌(ಇದೇ ಕಾರಣಕ್ಕೆ ಜೋಸೆಫ್ಖಾನೇಷುಮಾರಿಗಾಗಿ ಬೆತ್ಲೆಹೇಮಿಗೆ ತೆರಳಿದ್ದು)ನಲ್ಲಾದರೂ ವಾಸವಿದ್ದುದು ನಜರೇತಿನಲ್ಲಿ. ಕಷ್ಟಸಹಿಷ್ಣುವೂ ಒಳ್ಳೆಯ ಮನಸ್ಸಿನವನೂ ಆದ ಜೋಸೆಫನಿಗೆ ಮೇರಿಯ ಜೊತೆಗೆ ನಿಶ್ಚಿತಾರ್ಥವಾಗಿರುತ್ತದೆ. ಆದರೆ ಮೇರಿಯು ಗರ್ಭವತಿಯೆಂದು ತಿಳಿದಾಗ ನೀತಿವಂತನಾದ ಜೋಸೆಫನು ಆಕೆಯು ಅವಮಾನಕ್ಕೆ ಗುರಿಯಾಗದಂತೆ ಯಾವ ಗದ್ದಲ ಗಲಾಟೆಗಳಿಗೂ ಆಸ್ಪದವಾಗದಂತೆ ರಹಸ್ಯವಾಗಿಯೇ ಆಕೆಗೆ ವಿಚ್ಛೇದನ ನೀಡಿ ಬಿಟ್ಟುಬಿಡಬೇಕೆಂಬ ಆಲೋಚನೆಯಲ್ಲಿರುತ್ತಾನೆ. ಆದರೆ ಕನಸಿನಲ್ಲಿ ಕಾಣಿಸಿಕೊಂಡ ದೇವದೂತನು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮರ ಪ್ರಭಾವದಿಂದಲೇ. ಆಕೆ ಒಬ್ಬ ಮಗನಿಗೆ ಜನ್ಮ ನೀಡುವಳು. ನೀನು ಆತನಿಗೆ 'ಯೇಸು' ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ" ಎಂದು ಹೇಳುತ್ತಾನೆ(ಮತ್ತಾ 1:18-21). ಎಚ್ಚರಗೊಂಡ ಜೋಸೆಫನು ದೇವರ ಆಜ್ಞೆಯನ್ನು ನಮ್ರತೆಯಿಂದ ಪಾಲಿಸಲು ನಿರ್ಧರಿಸತ್ತಾನೆ. ಮೇರಿಯನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತಾನೆ. ಶಿಶು ಯೇಸುವಿನ ಪಾಲಕನೂ ಮತ್ತು ಪೋಷಕನೂ ಆಗುತ್ತಾನೆ. ಹುಟ್ಟಿದ ಮಗುವಿಗೆ 'ಯೇಸು' ಎಂದು ನಾಮಕರಣವನ್ನೂ ಮಾಡುತ್ತಾನೆ.

ಇದಕ್ಕೂ ಮೊದಲು ಚಕ್ರವರ್ತಿ ಅಗಸ್ತುಸ್ಸೇಜರನ ಆಜ್ಞೆಯ ಮೇರೆಗೆ ಜನಗಣತಿಗಾಗಿ ಪೂರ್ವಜರ ನಾಡಾದ ಬೆತ್ಲೆಹೇಮಿಗೆ ಪತ್ನಿ ಮೇರಿಯೊಂದಿಗೆ ಹೊರಡುತ್ತಾನೆ. ಆಗ ಆಕೆ ತುಂಬು ಗರ್ಭಿಣಿಯಾಗಿರುತ್ತಾಳೆ. ಬೆತ್ಲೆಹೇಮಿನಲ್ಲಿ ಮೇರಿ ಮಗುವಿಗೆ ಜನ್ಮ ನೀಡುತ್ತಾಳೆ. ಉಳಿದುಕೊಳ್ಳಲು ಮನೆಯೊಂದೂ ಸಿಗದ ಕಾರಣ ಆಕೆ ತನ್ನ ಮಗನಿಗೆ ಜನ್ಮವಿತ್ತದ್ದು ಒಂದು ಕೊಟ್ಟಿಗೆಯಲ್ಲಿ. ಜ್ಯೋತಿಷ್ಶಾಸ್ತ್ರಜ್ಞರ ಮುಖಾಂತರ ಮಗುವಿನ ಬಗ್ಗೆ ತಿಳಿದ ಜುದೇಯದ ಅರಸ ಹೆರೋದನು ಮಗುವನ್ನು ಕೊಲ್ಲಿಸುವ ಪ್ರಯತ್ನದಲ್ಲಿದ್ದಾನೆ ಎಂಬ ವಿಷಯವನ್ನು ದೇವದೂತನಿಂದ ತಿಳಿದ ಜೋಸೆಫನು ಪತ್ನಿಯನ್ನೂ ಮಗುವನ್ನು ಕರೆದುಕೊಂಡು ಈಜಿಪ್ಟಿಗೆ ಪಲಾಯನ ಮಾಡುತ್ತಾನೆ. ಹೆರೋದನು ಮರಣ ಹೊಂದಿದ ಬಳಿಕವಷ್ಟೆ ಜೋಸೆಫನು ಕುಟುಂಬ ಸಮೇತ ನಜರೇತಿಗೆ ಹಿಂದಿರುಗಿ ಬರುವುದು. ಅವನು ನಜರೆತಿನಲ್ಲೇ ನೆಲೆಸುತ್ತಾನೆ.

ಮಗುವಿಗೆ ನಲವತ್ತು ದಿನಗಳಾದ ಬಳಿಕ ಅವನು ಜೆರುಸಲೇಮಿಗೆ ಪತ್ನಿ ಮೇರಿಯೊಂದಿಗೆ ಬಂದು ಮಗುವನ್ನು ವಾಡಿಕೆಯಂತೆ ದೇವಾಲಯಕ್ಕೆ ಅರ್ಪಿಸುತ್ತಾನೆ. 


ಪ್ರತಿ ವರ್ಷವೂ ಜೋಸೆಫನು ಪಾಸ್ಕಹಬ್ಬದ ಆಚರಣೆಗಾಗಿ ಜೆರುಸಲೇಮಿಗೆ ಕುಟುಂಬ ಸಮೇತ ಆಗಮಿಸುತ್ತಾನೆ. ಯೇಸು ಹನ್ನೆರಡು ವರ್ಷದವನಿದ್ದಾಗಲೂ ಅವರು ಜೆರುಸಲೇಮಿಗೆ ಆಗಮಿಸುತ್ತಾರೆ. ಕುಟುಂಬದಲ್ಲಿ ಜೋಸೆಫನ ಸಹೋದರ ಕ್ಲೆಯೋಫನೂ ಅವನ ಕುಟುಂಬದ ಸದಸ್ಯರೂ, ಅವರ ಮಕ್ಕಳೂ ಸೇರಿದಂತೆ ಪ್ರಾಯಶಃ ಕುಟುಂಬದ ಸದಸ್ಯರ ಬಳಗ ದೊಡ್ಡದೇ ಇರಬೇಕುಏಕೆಂದರೆ ಪಾಸ್ಕಹಬ್ಬದಾಚರಣೆಯ ಬಳಿಕ ಅವರು ಹಿಂದಿರುಗಿ ಹೋಗುವಾಗ ಕುಟುಂಬದ ಬಳಗದವರ ಜೊತೆಗೆ ಯೇಸು ಇರಬಹುದು ಎಂದುಕೊಂಡು ಎಲ್ಲರೂ ನಜರೇತನ್ನು ತಲುಪುತ್ತಾರೆ. ಅಲ್ಲಿಗೆ ತಲುಪಿದಾಗಲೇ ತಿಳಿದುಬರುವುದು ತಮ್ಮ ಪುತ್ರ ಯೇಸು ತಮ್ಮೊಂದಿಗೆ ಹಿಂದಿರುಗಿಲ್ಲ ಎನ್ನುವುದು. ಗಾಬರಿಯಾದ ಜೋಸೆಫ್ಮತ್ತು ಮೇರಿ ಯೇಸುವನ್ನು ಅರಸುತ್ತಾ ಮೂರು ದಿನಗಳ ಬಳಿಕ ಜೆರುಸಲೇಮಿಗೆ ಬರುತ್ತಾರೆ. ಅವರು ಅಲ್ಲಿಯ ಮಹಾದೇಗುಲದಲ್ಲಿ ಬೋಧಕರ ಜೊತೆಗೆ ಯೇಸು ಚರ್ಚೆಯಲ್ಲಿ ನಿರತನಾಗಿರುವುದನ್ನು ಕಂಡು ವಿಸ್ಮಯಗೊಳ್ಳುತ್ತಾರೆ. ಘಟನೆಯ ಬಳಿಕ ಜೋಸೆಫನ ಬಗ್ಗೆ ಬೈಬಲ್ಸಂಪೂರ್ಣ ಮೌನವನ್ನು ತಾಳುತ್ತದೆ. ಆತನ ಬಗ್ಗೆ ಯಾವ ವಿವರವನ್ನೂ ನೀಡುವುದಿಲ್ಲ. ಪ್ರಾಯಶಃ ಯೇಸುವಿನ 33ನೇ ವಯಸ್ಸಿಗೂ ಮೊದಲೇ ಜೋಸೆಫನು ಮೃತನಾಗಿರಬೇಕು ಎಂದೆನಿಸುತ್ತದೆ. ಯೇಸು ತಮ್ಮ ಮೊಟ್ಟಮೊದಲ ಪವಾಡವನ್ನೆಸಗಿದ, ಕಾನಾ ಎಂಬ ಊರಲ್ಲಿ ನಡೆದ ಮದುವೆಗೆ ಅವರ ಮಾತೆ ಮರಿಯಮ್ಮ ಆಗಮಿಸಿದ್ದರೂ ಜೋಸೆಫ್ಅಲ್ಲಿ ಕಂಡು ಬರುವುದಿಲ್ಲ. ಪ್ರಾಯಶಃ ಮದುವೆಗೆ ಮೊದಲೇ ಜೋಸೆಫನು ಮೃತನಾಗಿರಬಹುದಾದ ಸಾಧ್ಯತೆ ಇದೆ. ಯೆಹೂದ್ಯ ಸಂಪ್ರದಾಯದಂತೆ ಶಿಲುಬೆಯಲ್ಲಿ ಮೃತರಾದ ಯೇಸುವಿನ ಶರೀರವನ್ನು ಪಡೆಯಲು ತಂದೆ ಜೋಸೆಫ್ಬರಬೇಕಾಗಿತ್ತು; ಆದರೆ ಯೇಸುವಿನ ಶರೀರವನ್ನು ಪಡೆದದ್ದು 'ಅರಿಮತಾಯದ ಜೋಸೆಫ್‌' ಎಂಬಾತ. ಅಂತೆಯೇ ಯೇಸು ಶಿಲುಬೆಯಲ್ಲಿ ಸಾಯುವ ಮೊದಲು ತಮ್ಮ ಮಾತೆ ಮರಿಯಮ್ಮನನ್ನು ತಮ್ಮ ಶಿಷ್ಯ ಯೊವಾನ್ನನಿಗೆ ಮಾತೆಯಾಗಿ ಒಪ್ಪಿಸುತ್ತಾರೆ; ಯಾರೂ ದಿಕ್ಕಿಲ್ಲದ ಆಕೆಗೆ ಯೊವಾನ್ನ ಆಸರೆಯಾಗಿರಲಿ ಎಂದು.


ಕಥೋಲಿಕ ಕ್ರೈಸ್ತಧರ್ಮಪೀಠವು ಇವರನ್ನು ಸಂತರೆಂದು ಗೌರವಿಸಿದೆ; ಇವರ ಚಿಹ್ನೆ 'ಮೂಲೆಮಟ್ಟ'. ಸಂತರ ಹಬ್ಬವನ್ನು ಮಾರ್ಚ್‌ 19ರಂದು ಪಾಶ್ಚಿಮಾತ್ಯ ಕ್ರೈಸ್ತರು ಆಚರಿಸುತ್ತಾರೆ. ಅಂತೆಯೇ ಕಾರ್ಮಿಕರ ಪಾಲಕರೂ ಆದ ಸಂತ ಜೋಸೆಫರ ಸ್ಮರಣಾರ್ಥ ಜಗತ್ತಿನಾದ್ಯಂತ ಕಾರ್ಮಿಕ ದಿನಾಚರಣೆಯನ್ನು ಮೇ 1ರಂದು ಆಚರಿಸಲಾಗುತ್ತದೆ. ಸಂತ ಜೋಸೆಫರು ಪಾಲಕರಾಗಿರುವ ಅನೇಕ ದೇವಾಲಯಗಳೂ, ಧರ್ಮಕ್ಷೇತ್ರಗಳೂ ಜಗತ್ತಿನಾದ್ಯಂತ ಇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ