'ಯೇಸು ಹೋಗುತ್ತಿರುವಾಗ ಸಮಾರಿಯದ ಸಿಖಾರೆಂಬ ಊರನ್ನು ತಲುಪಿದರು. ಈ ಊರಿನ ಪಕ್ಕದಲ್ಲೇ ಯಕೋಬನು ತನ್ನ ಮಗನಾದ ಜೋಸೆಫನಿಗೆ ಕೊಟ್ಟ ಭೂಮಿ ಇದೆ. ಅಲ್ಲೇ ಯಕೋಬನ ಬಾವಿಯೂ ಇದೆ. ಪಯಣದಿಂದ ಬಳಲಿದ್ದ ಯೇಸು ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು. ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, "ಕುಡಿಯಲು ಕೊಂಚ ನೀರು ಕೊಡು," ಎಂದು ಕೇಳಿದರು. ಶಿಷ್ಯರು ಊಟಕ್ಕೇನಾದರೂ ಕೊಂಡು ತರಬೇಕೆಂದು ಊರಿನೊಳಕ್ಕೆ ಹೋಗಿದ್ದರು. ಅದಕ್ಕೆ ಆಕೆ, "ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಾಗ ನೀವು ನನ್ನಿಂದ ನೀರನ್ನು ಕೇಳಬಹುದೇ?" ಎಂದಳು. (ಯೆಹೂದ್ಯರಿಗೂ ಸಮಾರಿಯದವರಿಗೂ ಕೊಡುಕೊಳ್ಳುವಿಕೆ ಇರಲಿಲ್ಲ).'
ಆಗ ಯೇಸು, "ದೇವರು ಕೊಡುವ ವರದಾನವನ್ನು ಮತ್ತು ಕುಡಿಯಲು ನಿನ್ನಿಂದ ನೀರನ್ನು ಕೇಳುತ್ತಿರುವ ವ್ಯಕ್ತಿಯನ್ನು ನೀನು ಅರಿತಿದ್ದರೆ ಆಗ ನೀನೇ ಅವರಲ್ಲಿ ಬೇಡುತ್ತಿದ್ದೆ, ಅವರು ನಿನಗೆ ಜೀವಜಲವನ್ನು ಕೊಡುತ್ತಿದ್ದರು," ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, "ನೀರು ಸೇದುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲ, ಬಾವಿಯು ಆಳವಾಗಿದೆ; ಹೀಗಿರುವಾಗ ನಿಮಗೆ ಜೀವಜಲ ಎಲ್ಲಿಂದ ಸಿಕ್ಕೀತು? ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹನಾದ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥಾ ಪಿತಾಮಹನಿಗಿಂತ ನೀವು ದೊಡ್ಡವರೇ?" ಎಂದಳು. ಆಗ ಯೇಸು, "ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ. ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯಜೀವವನ್ನು ತರುತ್ತದೆ," ಎಂದು ಉತ್ತರ ಕೊಟ್ಟರು(ಯೊವಾನ್ನ 4:5-14).
ಯಕೋಬನು ತೋಡಿಸಿದ ಬಾವಿಯೆಂದೇ ಹೇಳಲಾಗುವ ಈ ಬಾವಿಯು ಪ್ರಸ್ತುತ 'ಟೆಲ್ ಬಲಾತ' ಎಂಬ ಊರಿನ ಸಮೀಪದ 'ನ್ಯಾಬ್ಲಸ್' ಎನ್ನುವ ಸ್ಥಳದಲ್ಲಿಯ 'ಬಿರ್ ಯಾಕೂಬ್ ವಿರಕ್ತ ಮಠ'ದ ಒಳಭಾಗದಲ್ಲಿದೆ. ಈ ಪ್ರದೇಶವನ್ನು ಬೈಬಲ್‌ನಲ್ಲಿ ಉಲ್ಲೇಖಿಸಲಾದ 'ಶೆಕೆಮ್' ಎಂದು ಹೇಳಲಾಗುತ್ತಿದೆ. ಮೇಲುಭಾಗದಲ್ಲಿ ಕಿರಿದಾದ ಬಾಯುಳ್ಳ ಈ ಬಾವಿಯ ಒಳಭಾಗವು ಸುಮಾರು ಆರರಿಂದ ಎಂಟು ಅಡಿಗಳ ವ್ಯಾಸವಿದೆ. ಆಳ 135 ಅಡಿಗಳು. ಯೇಸು ಬಾಯಾರಿಕೆಯಿಂದ ಈ ಬಾವಿಯ ಬಳಿ ಬಂದಾಗ ಸಮಾರಿಯಾದ ಪೊತಿನಿ ಎಂಬ ಸ್ತ್ರೀ ಅವರ ದಾಹವನ್ನು ನಿವಾರಿಸಿದಳು ಎಂದು ಹೇಳಲಾಗುತ್ತಿದೆ. ಈ ಬಾವಿಯ ಮೇಲಿನ ವಿರಕ್ತ ಮಠಕ್ಕೆ 'ಸಂತ ಪೊತಿನಿಯವರ ವಿರಕ್ತಮಠ' ಎನ್ನಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ