ಮನ್ನಾ:

ಸ್ವಂತ ನೆಲೆಯಿಲ್ಲದೆ ನಲವತ್ತು ವರ್ಷಗಳ ಕಾಲ ಬೆಂಗಾಡಿನಲ್ಲಿ ಅಲೆಯುತ್ತಿದ್ದ ಇಸ್ರಯೇಲರಿಗಾಗಿ ಸರ್ವೇಶ್ವರನಿತ್ತ ಮುಖ್ಯ ಆಹಾರ. ಇಸ್ರಯೇಲ್ ಮನೆತನದವರು ಅದನ್ನು 'ಮನ್ನ' ಅರ್ಥಾತ್‌ 'ಏನದು?' ಎಂದು ಕರೆದರು. ಈಜಿಪ್ಟಿನಿಂದ ವಿಮೋಚಿತರಾದ ಯೆಹೂದ್ಯರು ಕೆಂಪು ಸಮುದ್ರವನ್ನು ದಾಟಿದ ನಂತರ ಏಲೀಮಿನಲ್ಲಿ ವಿಶ್ರಮಿಸಿತ್ತಾರೆ. ಬಳಿಕ ಅಲ್ಲಿಂದ ಹೊರಟು ಏಲೀಮಿಗೂ ಸೀನಾಯ್‌ ಬೆಟ್ಟಕ್ಕೂ ನಡುವೆಯಿರುವ 'ಸೀನ್‌' ಎಂಬ ಮರುಭೂಮಿಗೆ ಬಂದು ತಲುಪುತ್ತಾರೆ. ಅದು ಎರಡನೆಯ ತಿಂಗಳಿನ ಹದಿನೈದನೆಯ ದಿನವಾಗಿರುತ್ತದೆ. ದಿನ ಯೆಹೂದ್ಯರು ಹಸಿವಿನಿಂದ ಕಂಗಾಲಾಗಿ ಮೋಸೆಸ್ಮತ್ತು ಆರೋನ ವಿರುದ್ಧ ಗೊಣಗಾಡುತ್ತಾರೆ. 'ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲ್ಲೇ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು; ಹಸಿವೆಯಿಂದ ಸಾಯಿಸಲು ಮರುಭೂಮಿಗೆ ತಂದಿದ್ದಾರೆ' ಎನ್ನುತ್ತಾರೆ. ಆಗ ಸರ್ವೇಶ್ವರ ದೇವರು ಅವರಿಗಾಗಿ ಆಕಾಶದಿಂದ ಆಹಾರವನ್ನು ಸುರಿಸುತ್ತಾರೆನೋಡಲು 'ಅದು ಬಿಳಿ ಕೊತ್ತಂಬರಿ ಕಾಳಿನಂತಿತ್ತು. ರುಚಿಯಲ್ಲಿ ಅದು ಜೇನುತುಪ್ಪ ಹಾಕಿ ಕಲೆಸಿದ ದೋಸೆಯಂತಿತ್ತು' ಎನ್ನುತ್ತದೆ ಬೈಬಲ್‌(ವಿಮೋಚನಾ16:31). 

ಸಂಖ್ಯಾಕಾಂಡದಲ್ಲಿ, ' ಮನ್ನ' ಕೊತ್ತಂಬರಿ ಬೀಜದಂತೆ ಇತ್ತು. ಗುಗ್ಗುಲದಂತೆ ಕಾಣಿಸುತ್ತಿತ್ತು. ಜನರು ಹೊರಗೆ ಹೋಗಿ ಅದನ್ನು ಸಂಗ್ರಹಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೇ ಒರಳಲ್ಲಿ ಕುಟ್ಟಿ, ಮಡಿಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆ ಬೆರೆಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ 'ಮನ್ನ'ವೂ ಬೀಳುತ್ತಿತ್ತು' ಎಂದು ಸಂಖ್ಯಾಕಾಂಡದಲ್ಲಿ(11:7-9) ನಿರೂಪಣೆಯಿದೆ. ಆದರೆ ಜನರು ತನ್ನ ಮಾತನ್ನು ಅನುಸರಿಸುತ್ತಾರೋ ಇಲ್ಲವೋ ಎಂದು ತಿಳಿಯಲು ದೇವರು ಕೆಲವು ನಿಯಮಗಳನ್ನೂ ಅವರ ಮೇಲೆ ವಿಧಿಸುತ್ತಾರೆ. ನಿಯಮದ ಪ್ರಕಾರ ಯೆಹೂದ್ಯರು ಪ್ರತಿದಿನವೂ ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಮನ್ನಾವನ್ನು ಸಂಗ್ರಹಿಸಬೇಕಾಗಿತ್ತು. ಅದಕ್ಕಿಂತಲೂ ಹೆಚ್ಚಿಗೆ ಕೂಡಿಸಿಕೊಂಡ 'ಮನ್ನ' ಹುಳು ಬಿದ್ದು ಹಾಳಾಗುತ್ತಿತ್ತು. ಆರನೆಯ ದಿನದಲ್ಲಿ ಮಾತ್ರ ಪ್ರತಿದಿನ ಕೂಡಿಸಿದ್ದಕ್ಕಿಂತಲೂ ಎರಡರಷ್ಟು ಮನ್ನಾವನ್ನು ಕೂಡಿಸಿ ಸಿದ್ಧಪಡಿಸಿಕೊಳ್ಳಬೇಕಾಗಿತ್ತು ಎನ್ನುತ್ತದೆ ವಿಮೋಚನಾ ಕಾಂಡ(16:1-5). ಆರನೆಯ ದಿನ ಆಯ್ದುಕೊಂಡ ಹೆಚ್ಚುವರಿ 'ಮನ್ನ' ಹಾಳಾಗುತ್ತಿರಲಿಲ್ಲ. ಏಕೆಂದರೆ ಅದನ್ನು ಸಬ್ಬತ್ತಿನ ದಿನಗಳಂದು ಉಪಯೋಗಿಸಬೇಕಾಗಿತ್ತು. ಸಬ್ಬತ್ತಿನ ದಿನ ಯಾರೂ ಅದನ್ನು ಕೂಡಿಸಿಕೊಳ್ಳುವಂತಿರಲಿಲ್ಲ. ಅದು ದೇವರು ವಿಶ್ರಮಿಸಿದ ದಿನವಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ