ಮರಣದಂಡನೆಗೊಳಗಾದ
ಅಪರಾಧಿಗಳನ್ನು ಕೊಲ್ಲಲು ಪ್ರಾಚೀನ ಕಾಲದಿಂದ ಹಲವು ವಿಧಾನಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಶಿರಚ್ಛೇಧನ ಮಾಡುವುದು, ಶೂಲಕ್ಕೇರಿಸುವುದು, ಕ್ರೂರ ಪ್ರಾಣಿಗಳ ಗೂಡಿಗೆ
ಎಸೆಯುವುದು, ಉದ್ದವಾದ ಕಬ್ಬಿಣದ ಮುಳ್ಳುಗಳಿರುವ
ಚಲಿಸುವ ಗೋಡೆಗಳ ನಡುವೆ ಸಿಲುಕಿಸುವುದು,
ಎತ್ತರವಾದ ಪ್ರದೇಶದಿಂದ ಕೆಳಕ್ಕೆ ತಳ್ಳುವುದು ಮುಂತಾದವು
ಪ್ರಾಚೀನ ವಿಧಾನಗಳಾಗಿದ್ದು ಅವುಗಳನ್ನು ಅತ್ಯಂತ ಕ್ರೂರ ಶಿಕ್ಷೆಗಳ
ಗುಂಪಿಗೆ ಸೇರಿಸಬಹುದು. ಆ ಪದ್ಧತಿಗಳಲ್ಲಿ ಕೆಲವನ್ನು
ಈಗಲೂ ಒಂದಲ್ಲಾ ಒಂದು ದೇಶದಲ್ಲಿ
ಗುಪ್ತವಾಗಿ ಅಥವಾ ಸಾರ್ವಜನಿಕವಾಗಿ ಮರಣದಂಡನೆಗಾಗಿ
ಅಥವಾ ತಮ್ಮನ್ನು ಎದುರಿಸಿದವರನ್ನು ಮಟ್ಟ ಹಾಕುವ ಸಲುವಾಗಿ
ಆಯಾ ದೇಶದ ರಾಜತಾಂತ್ರಿಕವರ್ಗ ಅನುಸರಿಸಿಕೊಂಡು
ಬರುತ್ತಿದೆ. ಎರಡನೆಯ ಮಹಾಯುದ್ದದ ಕಾಲದಲ್ಲಿ
ರಾಜಕೀಯ ಕೈದಿಗಳಿಗೆ ಗಲ್ಲುಶಿಕ್ಷೆ, ದೇಹಕ್ಕೆ ವಿದ್ಯುತ್ ಹರಿಸಿ
ಕೊಲ್ಲುವುದು, ಗ್ಯಾಸ್ ಚೇಂಬರ್ಗೆ
ತಳ್ಳಿ ವಿಷಭರಿತ ಅನಿಲವನ್ನು ಚೇಂಬರ್ನೊಳಕ್ಕೆ ಹಾಯಿಸಿ ಕೊಲ್ಲುವುದು,
ಗುಂಡಿಟ್ಟು ಕೊಲ್ಲುವುದು ಮುಂತಾದ ಪದ್ಧತಿಗಳನ್ನು ಅನುಸರಿಸಲಾಗುತ್ತಿತ್ತು.
ಪ್ರಾಚೀನ
ಪದ್ಧತಿಗಳಲ್ಲಿ ಕೆಲವು ಪದ್ಧತಿಗಳು ಮನುಷ್ಯನ
ಜೀವಹರಣವನ್ನು ಸುಲುಭವಾಗಿ ಮಾಡುತ್ತದೆಯಾದರೆ; ಇನ್ನು ಕೆಲವು ಪದ್ಧತಿಗಳಲ್ಲಿ
ಸಾವು ಅತ್ಯಂತ ನಿಧಾನವಾಗಿದ್ದು ಕೆಲವೊಮ್ಮೆ
ವಾರಗಟ್ಟಲೆ ಮನುಷ್ಯ ನರಳಿ ಸಾಯಬೇಕಾದ
ಪರಿಸ್ಥಿತಿ ಉಂಟಾಗುತ್ತಿತ್ತು. ಇಂತಹ ಪದ್ಧತಿಗಳು ದುಷ್ಕೃತ್ಯಗಳನ್ನು
ಎಸಗಿದ ಮನುಷ್ಯನನ್ನು ಶಿಕ್ಷಿಸುವ ಅತ್ಯಂತ ಕ್ರೂರವಾದ ಮತ್ತು
ಅನಾಗರಿಕ ಶಿಕ್ಷೆಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಒಬ್ಬ
ಅಪರಾಧಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ
ಬೇರಾರೂ ಅಂತಹ ತಪ್ಪನ್ನು ಮಾಡಬಾರದು
ಎಂಬ ಭಯವನ್ನು ಇತರರಲ್ಲಿ ಮೂಡಿಸುವ ಧೋರಣೆಯಿಂದ
ಅಪರಾಧಿಗೆ ಇಂತಹ ಶಿಕ್ಷೆಗಳನ್ನು
ವಿಧಿಸಲಾಗುತ್ತಿತ್ತಾದರೂ, ಅನೇಕ ಸಂದರ್ಭಗಳಲ್ಲಿ ಅಪರಾಧಿಯ ಸಾವು ಅದನ್ನು ವಿಧಿಸುವವರಿಗೆ ಆನಂದಿಸಿ ಆಸ್ವಾಧಿಸುವ
ಮನರಂಜನೆಯೇ ಆಗಿರುತ್ತದೆಯೆಂಬುದೂ ಗಮನಾರ್ಹ.
ಹೀಗೆ
ದುಷ್ಕೃತ್ಯಗಳನ್ನು ಎಸಗಿದ ಅಪರಾಧಿಗಳಿಗೆ ನೀಡುವ
ಶಿಕ್ಷೆಗಳಲ್ಲಿ ಅಪರಾಧಿಯನ್ನು ಶಿಲುಬೆಗೆ ಜಡಿಯುವ ಶಿಕ್ಷೆಯೂ
ಒಂದು. ‘ಶಿಲುಬೆ’ ಎಂಬ ಪದಕ್ಕೆ ಕನ್ನಡದ
ಅರ್ಥಕೋಶದಲ್ಲಿ ‘ಕ್ರಿಸ್ತನನ್ನು ಕೊಲ್ಲಲು ನಿರ್ಮಿಸಿದ್ದ ಮರದ
ಒಂದು ಸಾಧನ, ಕ್ರೈಸ್ತರ ಒಂದು
ಧಾರ್ಮಿಕ ಲಾಂಛನ’ ಎಂಬ ಅರ್ಥಗಳಿವೆ. ಆದರೆ
ಶಿಲುಬೆಯು ಕ್ರಿಸ್ತನನ್ನು ಕೊಲ್ಲುವ ಸಲುವಾಗಿಯೇ ನಿರ್ಮಿಸಲಾಗಿರುವ ಸಾಧನವಾಗಿರಲಿಲ್ಲ. ಕ್ರಿಸ್ತನ ಸಾವಿನಿಂದಾಗಿ ಶಿಲುಬೆ ಪ್ರಸಿದ್ಧಿಯಾಯಿತಷ್ಟೆ.
ಕ್ರಿಸ್ತನ ಸಾವಿಗೂ ಮೊದಲೇ ಅನೇಕರನ್ನು ಶಿಲುಬೆಗೇರಿಸಿ ಕೊಂದಿರುವ ಬಗ್ಗೆ ದಾಖಲೆಗಳಿವೆ. ಖ್ಯಾತ
ಗ್ರೀಕ್ ಲೇಖಕ ‘ಹೆರೊಡೊಟಸ್’ನು ಬರೆದಿರುವ ಪ್ರಕಾರ,
ಕ್ರಿ.ಪೂ. 479ರಲ್ಲಿ ಗ್ರೀಸ್ನ ಅಥೇನಿಯನ್ನರು ಪರ್ಷಿಯಾದ
ಪ್ರಧಾನ ಮುಖಂಡ 'ಆರ್ಟೆಕೈಟ್ಸ್' ಎಂಬಾತನನ್ನು
ಶಿಲುಬೆಗೇರಿಸಿ ಕೊಂದ ವಿವರವಿದೆ. ಇದು
ನಡೆದದ್ದು ಪರ್ಷಿಯಾದಲ್ಲೇ. ಮುಂದುವರಿದು 'ಇದೊಂದು ಅನಾಗರೀಕ ಪದ್ಧತಿಯಾಗಿದ್ದು
ಈ ದಂಡನೆಯು ಗ್ರೀಸ್ನ ಇತರೆಡೆಗಳಲ್ಲಿಯೂ ಸಾಮಾನ್ಯವಾಗಿತ್ತು'
ಎಂಬುದಾಗಿಯೂ ಅವನು ಬರೆದಿದ್ದಾನೆ. ಸೋಜಿಗದ
ಸಂಗತಿಯೆಂದರೆ ಈ ರೀತಿಯಲ್ಲಿ ಸಾವನಪ್ಪಿದವರ
ಪಳೆಯುಳಿಕೆಗಳು ಲಭ್ಯವಾಗಿರುವುದು ತೀರಾ ವಿರಳ. ಅದಕ್ಕೆ
ಕಾರಣವೂ ಇಲ್ಲದಿಲ್ಲ. ಶಿಲುಬೆ ಮರಣದಂಡನೆಯ ಶಿಕ್ಷೆಗೆ
ಒಳಗಾದ ಅಪರಾಧಿಗಳ ಶವಸಂಸ್ಕಾರ ಮಾಡಲು ಸಾಮಾನ್ಯವಾಗಿ ಯಾರೂ
ಮುಂದೆ ಬರುತ್ತಿರಲಿಲ್ಲ. ಹಾಗಾಗಿ ಅವರ ಶರೀರವನ್ನು
ಶಿಲುಬೆಯಲ್ಲೇ ಕೊಳೆಯಲು ಬಿಡಲಾಗುತ್ತಿತ್ತು. ಅದು
ಅಲ್ಲೇ ಕೊಳೆತು ಪ್ರಾಣಿಪಕ್ಷಿಗಳ ಆಹಾರವಾಗಿ
ಬಿಡುತ್ತಿದ್ದುದರಿಂದ ಅವರ ದೇಹದ ಭಾಗಗಳು
ಒಂದೇ ಸ್ಥಳ ಅಥವಾ ಸಮಾಧಿಗಳಲ್ಲಿ ಲಭ್ಯವಾಗುತ್ತಿರಲಿಲ್ಲ.
ಶಿಲುಬೆಗೆ
ಪರ್ಯಾಯವಾಗಿ ‘ಕ್ರೂಜೆ’ ಎಂಬ ಪದವನ್ನು ಕನ್ನಡದಲ್ಲಿ
ಬಳಸಲಾಗುತ್ತಿದೆ. ಇದು ಇಂಗ್ಲಿಷ್ ಅಕ್ಷರ
‘ಕ್ರಾಸ್’ನ ತದ್ಭವ. ಕ್ರಾಸ್(Cross)
ಎಂಬ ಪದವು ಲತೀನ್ ಭಾಷೆಯ 'ಕ್ರೂಜ಼್'(Cruz) ಎಂಬ ಪದದಿಂದ ಉದ್ಭವವಾದ
ಪದ. ಅತ್ಯಂತ ದುಷ್ಕರ್ಮಿಗಳಿಗೆ ಅಥವಾ
ಕ್ರೂರವಾದ ಅಪರಾದಗೈದವರಿಗೆ ವಿಧಿಸುವ ಶಿಕ್ಷಾ ಪದ್ಧತಿಯೇ
ಶಿಲುಬಾರೋಹಣ(Crucifixion) ಶಿಕ್ಷೆ. ನಂತರದ ದಿನಗಳಲ್ಲಿ
ಪರ್ಷಿಯಾ(ಇರಾನ್)ದ ಆಸುಪಾಸಿನ
ನಾಡುಗಳಾದ ಸಿರಿಯಾ, ಪಾಲೆಸ್ಟಿನ್, ಜೋರ್ಡಾನ್,
ಮೆಸೆಪೊಟೇಮಿಯ(ಇರಾಕ್), ಟರ್ಕಿ ಮತ್ತು
ಸೌದಿ ಅರೇಬಿಯಾಗಳಲ್ಲೂ ಈ ಪದ್ಧತಿ ಜಾರಿಗೆ
ಬಂತು ಎನ್ನಲಾಗುತ್ತಿದೆ. ಅನಂತರದ ದಿನಗಳಲ್ಲಿ ರೋಂಗೂ
ಹಬ್ಬಿದ ಈ ಪದ್ಧತಿಯನ್ನು ಕ್ರಿ.
ಪೂ. 100ರ ಸುಮಾರಿನಲ್ಲಿ ರೋಮನ್ನರು
ಪರಿಷ್ಕರಿಸಿದ್ದರು. ಇಂಗ್ಲೀಷಿನ 'ಪ್ಲಸ್' ರೂಪ ಶಿಲುಬೆಗೆ
ದೊರೆತದ್ದು ಆಗಲೇ. ಪಾಲೆಸ್ತೀನ್ನ
ಜುದೇಯವೂ ಸೇರಿದಂತೆ ಅನೇಕ ದೇಶಗಳ ಮೆಲೆ
ಚಕ್ರಾಧಿಪತ್ಯವನ್ನು ಸ್ಥಾಪಿಸಿದ್ದ ರೋಮನರು ಅಪರಾಧಿಗಳನ್ನು ಈ ಪದ್ಧತಿ ಅನುಸರಿಸಿ ಕೊಲ್ಲುತ್ತಿದ್ದರು ಎಂಬುದು ತಿಳಿದು ಬಂದಿದೆ.
ಆದರೆ ದುಷ್ಕೃತ್ಯಗಳನ್ನು ಎಸೆಗಿದವರಿಗೆ ಮಾತ್ರ ನೀಡುತ್ತಿದ್ದ ಶಿಕ್ಷೆ
ಇದಾಗಿದ್ದರೂ ಅಂತಹುದೇ ಅಪರಾಧಗಳನ್ನೆಸಗಿದ ಮಹಿಳೆಯರಿಗೆ
ಹಾಗೂ ರೋಮನ್ ನಾಗರೀಕರಿಗೆ ಮಾತ್ರ ಈ
ದಂಡನೆಯಿಂದ ವಿನಾಯ್ತಿಯನ್ನು ನೀಡಲಾಗಿತ್ತು.
ಯೇಸುವು
ಶಿಲುಬೆಗೇರಿ ಮರಣಿಸಿದರು ಎನ್ನುವುದನ್ನು ಒಪ್ಪುವುದು ಎಷ್ಟು ಸುಲುಭವೋ ಅಷ್ಟು
ಸರಳವಾಗಿರಲಿಲ್ಲ ಅವರ ಶಿಲುಬೆಯ ಮರಣ.
ಅಲ್ಲಿ ಕ್ಷಣಕ್ಷಣಕ್ಕೂ ಅವರು ಅನುಭವಿಸಿದ್ದು ವರ್ಣಿಸಲು
ಅಸಾಧ್ಯವಾದ ನೋವು, ಸಂಕಟಗಳನ್ನು. ನಮ್ಮ
ವಿರೋಧಿಯೂ ಅನುಭವಿಸಬಾರದಂತಹ ಯಾತನೆಯನ್ನು ಅವರಂದು ಅನುಭವಿಸಿದ್ದರು. ಇತ್ತ
ತಕ್ಷಣಕ್ಕೆ ಸಾವೂ ಬರದಂತಹ, ಅತ್ತ
ಬದುಕಲೂ ಆಗದಂತಹ ಹೀನಾಯಮಾನವಾದ ಪರಿಸ್ಥಿತಿ.
ಸಹಿಸಲಸಾಧ್ಯವಾದ ನೋವು, ಯಾತನೆ, ಸಂಕಟಗಳ
ಸರಮಾಲೆ! ಯೇಸು ಶಿಲುಬೆಯ ಮೇಲೆ
ಸುಮಾರು ಆರು ಗಂಟೆಗಳಿಗೂ ಅಧಿಕ
ಕಾಲ ಯಾತನೆಯನ್ನು ಅನುಭವಿಸಿದ್ದರು. ಆ ಯಾತನೆ, ಸಂಕಟ,
ನೋವುಗಳನ್ನು ‘ಅರಿಜ಼ೋನ ವೈದ್ಯಕೀಯ ಸಂಘ’ದ ಡಾ.ಟ್ರೂಮನ್ ಡೇವಿಸ್,
‘ನ್ಯೂವೈನ್ ಮ್ಯಾಗಜ಼ೈನ್’ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ
ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ.
ಮನುಷ್ಯನೊಬ್ಬ
ಇನ್ನೊಬ್ಬ ಮನುಷ್ಯನನ್ನು ಕೊಲ್ಲಲು ಕಂಡು ಹಿಡಿದ
ಪದ್ಧತಿಗಳಲ್ಲಿ ಅತ್ಯಂತ ನೋವಿನಿಂದ ಕೂಡಿದ
ಕ್ರೂರವೂ ದಾರುಣವೂ ಆದ ಕೃತ್ಯ
ಇದಾಗಿದೆ ಎನ್ನುತ್ತಾರೆ ಅವರು. ಇದು ಕೇವಲ ಪುರುಷ
ಅಪರಾಧಿಗಳಿಗೆಂದೇ ಮೀಸಲಾಗಿದ್ದ ಶಿಕ್ಷಾಪದ್ಧತಿಯಾಗಿತ್ತು.
ಯೇಸುವನ್ನು
ಶಿಲುಬೆಗೇರಿಸಿದ ನಂತರ ಶಿಲುಬೆಯ ಮೇಲೆ
ತಮ್ಮ ಭಾರವನ್ನು ಹೊತ್ತು ನೇರವಾಗಿ ನಿಲ್ಲದಂತಹ
ಪರಿಸ್ಥಿತಿ ಯೇಸುವಿನದಾಗಿತ್ತು. ಅದಕ್ಕೆ ಕಾರಣ, ಮೊಣಕಾಲುಗಳು 45 ಡಿಗ್ರಿ ಕೋನಕ್ಕೆ ಬಾಗಿರುವಂತೆ
ಇಳಿಜಾರಾದ ಪದತಲದ ಮೇಲೆ ಯೇಸುವಿನ ಕಾಲುಗಳನ್ನು
ಒಂದರ ಮೇಲೆ ಇನ್ನೊಂದನ್ನು ಇರಿಸಿ
ಮೊಳೆಯನ್ನು ಹೊಡೆಯಲಾಗಿತ್ತು. ಊಹಿಸಿ ನೋಡಿ ಯೇಸುವಿನ
ಪರಿಸ್ಥಿತಿ ಎಂತಹ ಭಯಾನಕ ಪರಿಸ್ಥಿತಿಯಾಗಿತ್ತು
ಎನ್ನುವುದನ್ನು. ಒಂದು ಪಾದದ ಮೇಲೆ
ಇನ್ನೊಂದು ಪಾದವನ್ನಿರಿಸಿ ಕೈಗಳನ್ನು ಅಗಲಿಸದೆಯೂ ಮೊಳೆಗಳನ್ನು ಹೊಡಯದೆದೆಯೂ ಮುವತ್ತು ನಿಮಿಷಕ್ಕೂ ಅಧಿಕ
ಕಾಲ ಮಟ್ಟಸವಾದ ಆದರೆ ಪಾದಗಳನ್ನಷ್ಟೆ ಇರಿಸಬಹುದಾದ(ಆಗಾಗ್ಯೆ ದೇಹದ ಭಾರವನ್ನು ಒಂದು ಪಾದದಿಂದ ಇನ್ನೊಂದು
ಪಾದಕ್ಕೆ ಬದಲಾಯಿಸಲು ಆಗದಂತಹ) ಸ್ಥಳದಲ್ಲಿ ನೆಲದಿಂದ
ಕೊಂಚ ಎತ್ತರದ ಸ್ಥಳದಲ್ಲಿ ಹೆಚ್ಚುಸಮಯ ನಿಲ್ಲಲು ನಮ್ಮಿಂದ
ಆಗುವುದಿಲ್ಲ(ಉದಾ: 2015ರ 'ಬಿಗ್ ಬಾಸ್'ಕಾರ್ಯಕ್ರಮ ನೋಡಿದವರಿಗೆ ತಿಳಿಯುತ್ತದೆ) ಎಂದ ಮೇಲೆ 45 ಡಿಗ್ರಿ
ಕೋನದಲ್ಲಿರುವ ಇಳಿಜಾರಾದ ಪದತಲದ ಮೇಲೆ
ಒಂದು ಕಾಲಿನ ಮೇಲೆ ಇನ್ನೊಂದನ್ನಿರಿಸಿ
ಅವುಗಳಿಗೂ ಹಾಗೂ ಅಗಲಿಸಿದ ಕೈಗಳಿಗೂ
ಮೊಳೆಗಳನ್ನು ಜಡಿದಾಗ ಉಂಟಾಗುವ ಸಹಿಸಲಸಾಧ್ಯ ನೋವು
ಮತ್ತು ಸಮತೋಲನವಿಲ್ಲದ ದೇಹದ ಭಾರದಿಂದಾಗುವ ಒತ್ತಡಗಳನ್ನು ಯೇಸು ಆರು ಗಂಟೆಗಳ ಕಾಲ
ಹೇಗೆ ಸಹಿಸಿಕೊಂಡಿರಬಹುದು?
ಕಾಲುಗಳನ್ನು
ನೇರವಾಗಿಸಿ ಮೊಳೆಗಳನ್ನು ಜಡಿದಿದ್ದರೆ ದೇಹದ ಭಾರವನ್ನು ಕಾಲು
ಮತ್ತು ತೊಡೆಗಳ ಮೇಲೆ ತಂದುಕೊಂಡು
ಹೇಗೋ ಸಂಭಾಳಿಸಬಹುದಾಗಿತ್ತು. ಆದರೆ ಮೊಣಕಾಲು ಸುಮಾರು
45 ಡಿಗ್ರಿ ಕೋನಕ್ಕೆ ಬಾಗಿರುವಾಗ ದೇಹದ
ಭಾರವನ್ನು ಹೊರಲು ಕಾಲುಗಳಿಂದ ಸಾಧ್ಯವಾಗುವುದಿಲ್ಲ.
ಇಳಿಜಾರಾದ ಪದತಲದ ಮೇಲೆ ನಿಂತಾಗ ಕಾಲುಗಳಿಗೆ
ಹೊಡೆದ ಮೊಳೆಗಳ ಮೇಲೆ ಕಾಲಿನ ಗಾಯ ಒತ್ತುತ್ತಿದ್ದಾಗ ಆಗುವ ನೋವು ವಿವರಿಸಲಸಾಧ್ಯ! ಇಂತಹ ಸಂದರ್ಭದಲ್ಲಿ ದೇಹದ ಭಾರವು ಹೆಚ್ಚಾಗಿ
ಕೈಗಳ ಮೇಲೆ ಬೀಳುತ್ತದೆ. ಕೈಗಳಿಗೂ
ಮೊಳೆಗಳನ್ನು ಹೊಡೆದಿದ್ದ ಕಾರಣ ದೇಹದ ಭಾರ ಕೈಗಳ ಮೇಲೆ ಬಿದ್ದು ಗಾಯಗಳು ಕೈಗೆ ಹೊಡೆದಿರುವ ಮೊಳೆಗಳನ್ನು
ಒತ್ತುತ್ತಾ ತೀವ್ರವಾದ ನೋವನ್ನೂ ಉರಿಯನ್ನೂ ಉಂಟು ಮಾಡುತ್ತದೆ. ಆಗ ಶಿಲುಬೆಗೇರಿದ
ವ್ಯಕ್ತಿಯ ಶಕ್ತಿಯು ಉಡುಗುತ್ತಾ ಅವನು
ಕ್ಷಣದಿಂದ ಕ್ಷಣಕ್ಕೆ ಕುಸಿಯುತ್ತಾ ಹೋಗುತ್ತಾನೆ. ಎದೆಯ ಗೂಡುಗಳು ಸಂಕುಚಿತಗೊಂಡು
ವಿರೂಪಗೊಳ್ಳತೊಡಗುತ್ತವೆ. ಉಸಿರಾಟ ಸರಾಗವಾಗಿರುವುದಿಲ್ಲ; ಮೇಲುಸಿರು
ಬಿಡುತ್ತಾ ಅವನು ಚಡಪಡಿಸತೊಡಗುತ್ತಾನೆ. ಆಗ
ಕೈಗಳ ಮೂಳೆಗಳು ಒಂದನ್ನೊಂದು ಸೇರುವ
ಸ್ಥಳದಲ್ಲಿ ಆಗುವ ಹಿಗ್ಗುವಿಕೆಯಿಂದಾಗಿ ಅವು
ಸ್ಥಾನಪಲ್ಲಟಗೊಳ್ಳುತ್ತವೆ ಮಾತ್ರವಲ್ಲ ಆ ಭಾಗಗಳಲ್ಲಿ ವಿಪರೀತ
ನೋವು ಕಾಣಿಸಿಕೊಳ್ಳುತ್ತವೆ. ಒಮ್ಮೆ ಊಹಿಸಿನೋಡಿ: ನಡೆಯುತ್ತಿದ್ದ
ನಿಮ್ಮ ಕಾಲುಗಳು ಅನಿರೀಕ್ಷಿತವಾಗಿ ಹಳ್ಳದಲ್ಲಿಳಿದು ಬಳುಕಿ ಉಳುಕಿದಾಗ ಅನುಭವಿಸುವ ಯಾತನೆಯ ಪರಿಸ್ಥಿತಿಯನ್ನು. ಇದಕ್ಕಿಂತಲೂ ಭೀಕರವಾದ ಪರಿಸ್ಥಿತಿಯನ್ನು ಯೇಸುವು ಶಿಲುಬೆಯ ಮೇಲೆ
ಅನುಭವಿಸಬೇಕಾಗಿ ಬಂದಿತ್ತು.
ಹೀಗೆ
ಭುಜದ, ಮೊಣಕೈಯ ಮತ್ತು ಮಣಿಕಟ್ಟಿನ
ಸಂದುಗಳು ಹಿಗ್ಗಿ ಸ್ಥಾನಪಲ್ಲಟಗೊಂಡ ನಂತರ ಕೈ
ಮತ್ತು ಎದೆಯ ಮುಖ್ಯಸ್ನಾಯುಗಳು ದೇಹದ
ಭಾರವನ್ನು ಹೊರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಪರಿಸ್ಥಿತಿಯಲ್ಲಿ ಶಿಲುಬೆಯಲ್ಲಿ
ತೂಗಾಡುವ ವ್ಯಕ್ತಿಯ ಎದೆಯ ಗೂಡು ಉಸಿರಾಟಕ್ಕಾಗಿ
ಒಳಕ್ಕೂ ಹೊರಕ್ಕೂ ಹಿಗ್ಗುವ ಮತ್ತು
ಸಂಕುಚಿಸುವ ಕ್ರಿಯೆಗೆ ಒಳಗಾಗುತ್ತವೆ. ಈ ಪರಿಸ್ಥಿತಿಯಲ್ಲಿ ಸರಾಗವಾಗಿ
ಉಸಿರಾಡುವ ಸಲುವಾಗಿ ಆತ ತನ್ನ
ಕಾಲುಗಳನ್ನು ನೇರಗೊಳಿಸುವ ಪ್ರಯತ್ನವನ್ನು ಮಾಡುತ್ತಾನಾದರೂ ಅದು ಅಸಾಧ್ಯವಾಗುತ್ತದೆ. ದೇಹದ
ಭಾರವನ್ನು ಹೊರುವ ಪ್ರಯತ್ನದಲ್ಲಿ ಬಾಗಿದ
ಕಾಲುಗಳ ಮತ್ತು ತೊಡೆಗಳ ಸ್ನಾಯುಗಳಲ್ಲಿ
ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಡುವ
ಪ್ರಯತ್ನದಲ್ಲಿ ದೇಹವು ಅಲುಗಾಡುವುದರಿಂದ ಮೊಳೆಗಳನ್ನು
ಹೊಡೆದ ಜಾಗದಲ್ಲಿ ಸಹಿಸಲಸಾಧ್ಯವಾದ ನೋವು ಕಾಣಿಸಿಕೊಳ್ಳುತ್ತವೆ ಮಾತ್ರವಲ್ಲ
ರಕ್ತಸ್ರಾವವೂ ಆಗುತ್ತದೆ. ಉಸಿರಾಡುವ ಪ್ರಯತ್ನ ಮತ್ತು ದೇಹದ
ಎಲ್ಲಾ ಭಾಗಗಳಲ್ಲೂ ಉಂಟಾದ ಸಹಿಸಲಸಾಧ್ಯ ನೋವಿನಿಂದಾಗಿ
ದೇಹವು ವಿಪರೀತವಾಗಿ ಬೆವತು ತೊಯ್ದು ಹೋಗಿರುತ್ತದೆ.
ಆದರೆ ಯೇಸುವನ್ನು ಶಿಲುಬೆಗೆ ಏರಿಸುವ ಮೊದಲು ಕೊರಡೆಗಳಿಂದ
ಹೊಡೆದಿದ್ದರು. ಅವರ ದೇಹದ ಮಾಂಸಖಂಡಗಳು
ಕಿತ್ತು ದೇಹದ ತುಂಬಾ ಗಾಯಗಳಾಗಿದ್ದವು
ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳುವುದು ಉಚಿತ. ಇಂತಹ
ಪರಿಸ್ಥಿತಿಯಲ್ಲಿ ದೇಹವು ಬೆವತು, ಬೆವರಿನಿಂದ
ಹೊರಬರುವ ಲವಣಾಂಶಗಳು ಗಾಯಗಳ ಮೇಲೆ ಹರಿದಾಗ
ಉಂಟಾಗುವ ಅಸಾಧ್ಯ ಉರಿಯನ್ನೂ ಸಹ ಅವರು
ಸಹಿಸಬೇಕಾಗಿತ್ತು. ಇಷ್ಟಲ್ಲದೆ ಯೇಸುವನ್ನು ಶಿಲುಬೆಗೇರಿಸಿದ್ದು ಮಟಮಟ ಮಧ್ಯಾಹ್ನದ ವೇಳೆಯಲ್ಲಿ
ಎಂಬುದೂ ಸಹ ಗಮನಿಸಬೇಕಾದ ಅಂಶ. ಹಾಗಾಗಿ ರಕ್ತಸ್ರಾವ ಹಾಗೂ ಅಸಾಧ್ಯ ನೋವಿನ ಜೊತೆಗೆ ಬಿಸಿಲಿನ ಝಳದಿಂದಾಗಿ ವಿಪರೀತ ಬಾಯಾರಿಕೆ ಆಗುತ್ತದೆ. ಇದೇ ಕಾರಣಕ್ಕಾಗಿ ಸೈನಿಕನೊಬ್ಬ
ಸ್ಪಂಜನ್ನು ಈಟಿಯಲ್ಲಿ ಚುಚ್ಚಿ ದ್ರಾಕ್ಷಾರಸಕ್ಕೆ ಅದ್ದಿ
ಯೇಸುವಿನ ತುಟಿಗೆ ಇಡುತ್ತಾನೆ. ಬಾಯಾರಿಕೆಯನ್ನು
ಹೋಗಲಾಡಿಸುವುದು ಒಂದು ಕಾರಣವಾದರೆ ದ್ರಾಕ್ಷರಸ
ನೋವು ನಿವಾರಕವೂ ಆಗಿರುತ್ತದೆಯೆನ್ನುವುದು ಇನ್ನೊಂದು ಕಾರಣ. ಆದರೆ ಯೇಸು
ಅದನ್ನು ಸ್ವೀಕರಿಸುವುದಿಲ್ಲ. ನೋವು ತನಗಿರಲಿ ಎಂದು ಅದನ್ನವರು ಸ್ವೀಕರಿಸುತ್ತಾರೆ.
ಮುಂದೆ
ಉಸಿರಾಟ ಸರಾಗವಾಗಿ ಆಗದಿದ್ದಾಗ ರಕ್ತದಲ್ಲಿ ಆಮ್ಲಜನಕದ ಕೊರತೆಯುಂಟಾಗುತ್ತದೆ. ಆಮ್ಲಜನಕವು ದೇಹದ ಭಾಗಗಳನ್ನು ಸರಿಯಾಗಿ
ತಲುಪದಿದ್ದಾಗ ಹೃದಯದ ಬಡಿತ ಏರುಪೇರಾಗುತ್ತದೆ.
ಆಗ ಉಸಿರಾಟ ತೀವ್ರಗತಿಯನ್ನು ತಲುಪುತ್ತದೆ.
ಅಂತಿಮವಾಗಿ ಹೃದಯ ಮತ್ತು ಶ್ವಾಸಕೋಶಗಳ
ವೈಫಲ್ಯವುಂಟಾಗಿ ಶಿಲುಬೆಗೇರಿಸಲಾದ ವ್ಯಕ್ತಿಯು ಸಾವಿಗೀಡಾಗುತ್ತಾನೆ. ಪ್ರಾಯಶಃ ಯೇಸು ಮೃತರಾದದ್ದು
ಹೀಗೆ. ಶಿಲುಬೆಗೇರಿದವರೆಲ್ಲರೂ ಯೇಸುವಿನಂತೆ ಶೀಘ್ರವಾಗಿ ಸಾವಿಗೀಡಾಗುವುದಿಲ್ಲ. ಅವರ ಸಾವು ನಿಧಾನವಾದರೆ
ಅವರ ಕಾಲುಗಳನ್ನು ಮುರಿದು ಛಿದ್ರಗೊಳಿಸಿ ಬೇಗ
ಸಾಯುವಂತೆ ಮಾಡಲಾಗುತ್ತದೆ. ಅದೇ ತೆರನಾಗಿ ಯೇಸುವಿನ
ಜೊತೆಗೆ ಶಿಲುಬೆಗೇರಿಸಲಾಗಿದ್ದ ಇಬ್ಬರು ಕಳ್ಳರ
ಕಾಲುಗಳನ್ನು ಸುತ್ತಿಗೆಯಿಂದ ಹೊಡೆದು ಛಿದ್ರಗೊಳಿಸಿ ಸಾಯುವಂತೆ
ಮಾಡಲಾಗಿತ್ತು ಎಂಬುದನ್ನು ಬೈಬಲ್‌ನಲ್ಲಿ ಓದುತ್ತೇವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ