ಯೆಹೂದ್ಯರನ್ನು
ಈಜಿಪ್ಟಿನವರ ದಾಸ್ಯದಿಂದ ಬಿಡುಗಡೆ ಮಾಡಿದ ಯೆಹೂದ್ಯರ
ನಾಯಕ, ಇಸ್ರಯೇಲ್ ರಾಷ್ಟ್ರದ ನಾಯಕ, 'ನಿಯಮ'ದ
ಒಡಂಬಡಿಕೆಯ ಮಧ್ಯಸ್ಥ, ಪ್ರವಾದಿ,
ನ್ಯಾಯಸ್ಥಾಪಕ, ಇತಿಹಾಸಜ್ಞ, ಮತ್ತು ಲೇಖಕ ಇತ್ಯಾದಿ
ವಿಶೇಷಣಗಳನ್ನು ಹೊಂದಿದ ಮೋಸೆಸ್ ಎಂಬ
ಹೆಸರಿನ ಅರ್ಥ (ನೀರಿನಿಂದ) 'ಎತ್ತಲ್ಪಟ್ಟವನು',
'ತೆಗೆಯಲ್ಪಟ್ಟವನು' ಎಂದು ಹೇಳಲಾಗುತ್ತದೆ. ಇವನ
ತಂದೆ 'ಅಮ್ರಾಮ್' ಲೇವಿಯ ಮರಿಮೊಮ್ಮಗ. ಮೋಸೆಸ್ನ ಅಣ್ಣ 'ಅರೋನ';
ಇವರಿಬ್ಬರಿಗೂ ಅಕ್ಕ 'ಮಿರಿಯಮ್'.
ಈಜಿಪ್ಟಿನ
ಅರಸ ಫರೋಹನು ತನ್ನ ಸಾಮ್ರಾಜ್ಯದಲ್ಲಿ ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ ಅವರನ್ನು ಅಧೀನದಲ್ಲಿರಿಸಲು ಕಷ್ಟಸಾಧ್ಯ
ಎಂದುಕೊಂಡು ಅವರನ್ನು ಗುಲಾಮರನ್ನಾಗಿ
ಮಾಡುತ್ತಾನೆ. ಕಿರುಕುಳ ಕೊಡಲು ಆರಂಭಿಸುತ್ತಾನೆ.
ಅವರಿಂದ ಬಿಟ್ಟಿ ಕೆಲಸ ಮಾಡಿಸಲು
ಅಧಿಕಾರಿಗಳನ್ನು ನೇಮಿಸಿ 'ಪಿತೋಮ್' ಮತ್ತು
'ರಾಮ್ಸೆಸ್' ಎಂಬ ಉಗ್ರಾಣ ಪಟ್ಟಣಗಳನ್ನು
ಕಟ್ಟಿಸುತ್ತಾನೆ. ಈಜಿಪ್ಟರು ಇಸ್ರಯೇಲರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ
ಅಷ್ಟು ಅವರ ಸಂಖ್ಯೆ ಹೆಚ್ಚತೊಡಗುತ್ತದೆ.
ಆಗ ಅರಸನು ಶಿಪ್ರಾ ಮತ್ತು
ಪೂಗಾ ಎಂಬ ಸೂಲಗಿತ್ತಿಯರನ್ನು ಕರೆಸಿ ಹೀಬ್ರೂ ಜನಾಂಗದಲ್ಲಿ
ಹುಟ್ಟುವ ಗಂಡು ಮಕ್ಕಳನ್ನು ಕೊಲ್ಲಲು
ಆದೇಶಿಸುತ್ತಾನೆ. ಆದರೆ ಅವರು ದೇವರಿಗೆ
ಭಯಪಟ್ಟು ಮಕ್ಕಳನ್ನು ಕೊಲ್ಲದೆ ಉಳಿಸುತ್ತಾರೆ. ಕಟ್ಟಕಡೆಗೆ
ಅರಸನು ಹೀಬ್ರೂಗಳ ಗಂಡು ಮಕ್ಕಳನ್ನು ನೈಲ್
ನದಿಯಲ್ಲಿ ಹಾಕಬೇಕು ಮತ್ತು ಹೆಣ್ಣು
ಮಕ್ಕಳನ್ನು ಉಳಿಸಬೇಕು ಎಂದು ಆದೇಶಿಸುತ್ತಾನೆ.
ಪರಿಸ್ಥಿತಿ ಹೀಗಿರುವಾಗ ಮೋಸೆಸನ ಜನನವಾಗುತ್ತದೆ(ಕ್ರಿ.ಪೂ. 1593ರಲ್ಲಿ). ತಾಯಿ
ಜೋಖೆಬೆದ್ ಹುಟ್ಟಿದ ಮಗುವನ್ನು ರಕ್ಷಿಸುವ
ಸಲುವಾಗಿ ಪಾಪಿರಸ್ ಜೊಂಡಿನಿಂದ ಮಾಡಿದ ರಾಳ ಮೆತ್ತಿದ
ಪೆಟ್ಟಿಗೆಯಲ್ಲಿ ಮಗುವನ್ನಿಟ್ಟು ನೈಲ್ ನದಿಯಲ್ಲಿ ಬಿಡುತ್ತಾಳೆ.
ಮೋಸೆಸ್ನ ಅಕ್ಕ 'ಮಿರಿಯಮ್'
ಪೆಟ್ಟಿಗೆಯನ್ನು ಹಿಂಬಾಲಿಸುತ್ತಾಳೆ. ನದಿಯಲ್ಲಿ ಮೀಯಲು ಬಂದ ಅರಸುಕುಮಾರಿ
'ಬಿಥಿಯಾ' ಅತ್ಯಂತ ಸುಂದರವಾದ ಆ
ಮಗುವನ್ನು ಕಂಡು ಸಾಕಲು ನಿರ್ಧರಿಸುತ್ತಾಳೆ.
ಆ ಮಗುವಿಗೆ ಮೋಸೆಸ್
ಎಂಬ ಹೆಸರನ್ನಿಡುತ್ತಾಳೆ. ಆಗ ಅಲ್ಲಿಗೆ ಬಂದ
'ಮಿರಿಯಮ್' ಆ ಮಗುವನ್ನು ನೋಡಿಕೊಳ್ಳಲು
ಯಾರನ್ನಾದರೂ ಕರೆದು ತರಲೇ ಎಂದು
ಬಿಥಿಯಾಳನ್ನು ಕೇಳುತ್ತಾಳೆ. 'ಕರೆದು ತಾ' ಎಂದು
ಆಕೆ ಆಜ್ಞಾಪಿಸಿದಾಗ ಸ್ವಂತ ತಾಯಿಯನ್ನೇ ಕರೆತಂದು
ಮಗುವಿನ ಪೋಷಣೆಗೆ ಒಪ್ಪಿಸುತ್ತಾಳೆ. ಹೀಗೆ
ಆ ಮಗು ಫರೋಹನ
ಅರಮನೆಯಲ್ಲಿ ರಾಜಕುಮಾರಿಯ ಮಗುವಾಗಿ ಬೆಳೆಯುತ್ತದೆ.
ಸುಖದ
ಸುಪ್ಪತ್ತಿಗೆಯಲ್ಲಿ ದೊಡ್ಡವನಾಗಿ ಬೆಳೆದರೂ ಮೋಸೆಸ್ನ
ಮನ ದೇವರ ವಿಶಿಷ್ಟ ಪ್ರಜೆಗಳಾಗಿದ್ದರೂ
ಫರೋಹನ ದಾಸ್ಯತ್ವದಲ್ಲಿ ನಲುಗುತ್ತಿರುವ ಇಸ್ರಯೇಲ್ ಜನಾಂಗದತ್ತ ತುಡಿಯುತ್ತಿರುತ್ತದೆ. ಹಾಗಾಗಿ ಫರೋಹನ ಕುಮಾರಿಯ
ಪುತ್ರ ಎಂದು ಕರೆಸಿಕೊಳ್ಳಲು ಅವನು
ನಿರಾಕರಿಸುತ್ತಾನೆ. ಕ್ಷಣಿಕ
ಪಾಪಭೋಗಗಳನ್ನು ಸವಿಯುವುದಕ್ಕಿಂತ ದೇವಜನರೊಂದಿಗೆ ಕಷ್ಟಕ್ಕೆ ಈಡಾಗುವುದೇ ಲೇಸೆಂದು ನಿರ್ಧರಿಸುತ್ತಾನೆ. ಒಮ್ಮೆ
ತನ್ನ ಜನಾಂಗದ ಸದಸ್ಯರನ್ನು ಥಳಿಸುತ್ತಿದ್ದ
ಈಜಿಪ್ಟ್ನ ಅಧಿಕಾರಿಯೊಬ್ಬನನ್ನು ಕೊಂದು
ಮರಳಿನಲ್ಲಿ ಹೂತುಹಾಕಿದ ತಪ್ಪಿಗೆ ಈಜಿಪ್ಟನ್ನು ಬಿಟ್ಟು
ಅನ್ಯ ದೇಶಕ್ಕೆ ನಡೆಯುತ್ತಾನೆ. ಮಿದಿಯಾ
ಎಂಬ ನಾಡಿನಲ್ಲಿ ನಲವತ್ತು ವರ್ಷಗಳನ್ನು ಕಳೆಯುತ್ತಾನೆ.
ಈ ಅವಧಿಯಲ್ಲಿ ರೆಗುವೇಲನೆಂಬವನ
ಮಗಳನ್ನು ಮದುವೆಯಾಗಿ ಹೋರೆಬ್ ಬೆಟ್ಟದ ಬುಡದಲ್ಲಿ
ಕುರಿಗಳನ್ನು ಮೇಯಿಸುತ್ತಾ ಇರುತ್ತಾನೆ. ಆಗ ಅವನೊಂದು ಅಪೂರ್ವ
ದೃಶ್ಯವನ್ನು ಕಾಣುತ್ತಾನೆ. ಮುಳ್ಳಿನ ಪೊದೆಯೊಂದರ ಮೇಲೆ
ಪ್ರಜ್ವಲಿಸುವ ಬೆಂಕಿಯು ಅವನ ಮನಸ್ಸನ್ನು
ಸೆಳೆಯುತ್ತದೆ. ಆದರೆ ಆ ಬೆಂಕಿ
ಪೊದೆಯನ್ನು ಸುಡುತ್ತಿರಲಿಲ್ಲ. ಅಲ್ಲಿ ಕಾಣಿಸಿದ ಸರ್ವೇಶ್ವರ
ದೇವರು ಮೋಸೆಸ್ನಿಗೆ, "ಹೋಗು,
ನನ್ನ ಜನರಾದ ಇಸ್ರಯೇಲರನ್ನು ಈಜಿಪ್ಟಿನಿಂದ
ವಿಮೋಚನೆಗೊಳಿಸಿ ಹಾಲೂ ಮೊಸರೂ ಹರಿಯುವ
ವಾಗ್ದತ್ತ ನಾಡಿಗೆ ಕರೆದೊಯ್ಯುವ ಸಲುವಾಗಿ
ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತಿದ್ದೇನೆ,"
ಎಂದು ಹೇಳುತ್ತಾರೆ. ಆದರೆ ವಾಕ್ಚಾತುರ್ಯವರಿಯದ ಮೋಸೆಸ್
ಹೇಗೆ ಹೇಗೆ ತಾನು ಫರೋಹನೊಂದಿಗೆ
ವ್ಯವಹರಿಸಲಿ ಎಂದು ತನ್ನ ಅಸಹಾಯಕತೆಯನ್ನು
ಪ್ರದರ್ಶಿಸಿದಾಗ ಆ ಕೆಲಸವನ್ನು ಆರೋನನು
ನೋಡಿಕೊಳ್ಳುತ್ತಾನೆ ಎಂದು ದೇವರು ಆಶ್ವಾಸನೆಯನ್ನು
ನೀಡುತ್ತಾರೆ. ಮೋಸೆಸನು ಈಜಿಪ್ಟಿಗೆ ಹಿಂದಿರುಗುತ್ತಾನೆ.
ತನ್ನ ಜನಾಂಗವನ್ನು ದೇವರ ಅಪ್ಪಣೆಯ ಮೇರೆಗೆ
ಈಜಿಪ್ಟಿನವರ ಕೈಯಿಂದ ಬಿಡಿಸಿ ಕೆಂಪು
ಸಮುದ್ರವನ್ನು ದಾಟಿಸಿ ಸಿನಾಯ್ ಪರ್ವತದ
ಬಳಿಗೆ ಕರೆ ತರುತ್ತಾನೆ. ಆ
ಪರ್ವತದ ಮೇಲೆ ಕಾಣಿಸಿಕೊಂಡ ದೇವರು
ಅವನಿಗೆ 'ದಶಾಜ್ಞೆ'ಗಳನ್ನೂ, 'ಲಿಪಿ'ಯ ಮತ್ತು 'ಮೌಖಿಕ'
ರೂಪದ 'ನಿಯಮ' ಅಥವಾ 'ಬೋಧನೆ'(Torah)ಯ ಕಲ್ಲಿನ ಫಲಕಗಳನ್ನು
ನೀಡುತ್ತಾರೆ. ಮುಂದೆ ವಾಗ್ದತ್ತ ನಾಡಿನತ್ತ ಇಸ್ರಯೇಲರನ್ನು ನಡೆಸಿದ ಮೋಸೆಸ್ ಆ
ನಾಡನ್ನು ಪ್ರವೇಶಿಸದೆ ಮೊವಾಬ್ಯರ ನಾಡಿನ ಜೆರಿಕೋ ಪಟ್ಟಣಕ್ಕೆ
ಎದುರಾಗಿ ಇರುವ ನೆಬೋ ಪರ್ವತದ
ಪಿಸ್ಗಾ ಎಂಬ ಶಿಖರದ ಮೇಲೆ
ಕುಳಿತು ದೇವರ ವಾಗ್ದತ್ತ ನಾಡನ್ನು
ನೋಡುತ್ತಾ ಮರಣಹೊಂದುತ್ತಾನೆ.
ಮೋಸೆಸ್ನ ಬಗ್ಗೆ ಇನ್ನಷ್ಟು
ವಿವರಗಳು ಮೋಸೆಸ್ನದೆನ್ನಲಾದ 'ಪಂಚಸುರುಳಿ'ಯ ಅಥವಾ ಹೀಬ್ರೂ
ಬೈಬಲ್ನ ಮೊದಲ ಐದು
ಪುಸ್ತಕಗಳಲ್ಲಿ ಎರಡನೆಯದಾದ ವಿಮೋಚನಾಕಾಂಡ(Exodus)ದಲ್ಲೂ ನಂತರದ ಪುಸ್ತಕಗಳಲ್ಲೂ
ಕಾಣಲು ಸಿಗುತ್ತದೆ.
ಪೊದೆಯೊಂದರ ಮೇಲೆ ಪ್ರಜ್ವಲಿಸುವ ಬೆಂಕಿ! |
"ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ಕರೆದು ತರಲೇ?" |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ