ಕ್ರೈಸ್ತಧರ್ಮ

ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದಿ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. 'ಪವಿತ್ರ ಬೈಬಲ್' ಎನ್ನಲಾಗುವ ಆ ದಿನಚರಿಯ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ, ರಾಜವಂಶಗಳು, ಧಿರಿಸುಗಳು, ಆಚಾರ ವಿಚಾರಗಳ ಕುರಿತಂತೆ ಬೆಳಕು ಚೆಲ್ಲುತ್ತದೆ.

ಸಕಲಕ್ಕೂ ಸೃಷ್ಟಿಕರ್ತನಾದ ಸರ್ವಶಕ್ತ ದೇವರು ಒಬ್ಬನೇ. ಆತ ಸಕಲ ಜನ ಪ್ರಾಣಿಪಕ್ಷಿ ಆಕಾಶ ಭೂಮಿಗಳೆಲ್ಲದಕ್ಕೂ ಒಡೆಯ. ಆತ ಆರಿಸಲ್ಪಟ್ಟ ಪ್ರವಾದಿಗಳ ಮೂಲಕ ಮಾತನಾಡುತ್ತಾನೆ. ಅವನನ್ನು ಓಲೈಸುವವರಿಗೆ ರಕ್ಷಣೆಯಿದೆ, ವಿರೋಧಿಸುವವರಿಗೆ ಶಿಕ್ಷೆಯೂ ಇದೆ ಎಂದು ನಂಬುವ ಯೆಹೂದ್ಯರು ಆಧುನಿಕ ವಿಚಾರವಾದದಿಂದ ಎಂದೂ ವಿಚಲಿತರಾದವರಲ್ಲ. 'ತೋರಾ' ಎಂಬ ಧರ್ಮಸಂಹಿತೆಯಿಂದ(ಹೀಬ್ರೂ ಕ್ಯಾನೋನ್‌ನ ಒಂದು ಭಾಗ ಅರ್ಥಾತ್‌ 'ಧರ್ಮಗ್ರಂಥ') ಬಂಧಿತರಾದ ಅವರು ಮೂರ್ತಿ ಪೂಜೆಯಿಂದ ದೂರವೇ ಉಳಿದರು. ಪ್ರವಾದಿ ಮೋಸೆಸನ ಮೂಲಕ ದೇವರು ದಶಕಟ್ಟಳೆಗಳನ್ನು ಕೊಡಮಾಡಿದರೆಂದೂ ಆ ಕಟ್ಟಳೆಗಳಲ್ಲಿ ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮುಂತಾದವುಗಳು ವರ್ಜ್ಯವೆಂದು ಹೇಳಲಾಗಿದೆಯಲ್ಲದೆ ಸರ್ವಶಕ್ತನಾದ ಏಕೈಕ ದೇವರನ್ನು ಮಾತ್ರ ಆರಾಧಿಸು, ದೇವರ ಹೆಸರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಳಸಬೇಡ, ತಂದೆ ತಾಯಿಯರನ್ನು ಗೌರವಿಸು, ಪರಸ್ತ್ರೀಯರನ್ನೂ ಪರರ ವಸ್ತುಗಳನ್ನೂ ಬಯಸಬೇಡ ಎಂದೂ ತಾಕೀತು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಬಯಲಲ್ಲಿ ನಿಲ್ಲಿಸಿ ಸಮಾಜದ ಇತರರೆಲ್ಲರೂ ಕಲ್ಲಿನಿಂದ ಹೊಡೆದು ಸಾಯಿಸಬಹುದು ಎಂಬ ಕಠೋರ ನೀತಿಗಳು ಇವರಲ್ಲಿವೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಹಮ್ಮರಾಬಿಯ ನೀತಿಯೂ ಯೆಹೂದ್ಯ ನೀತಿಯಿಂದಲೇ ಪ್ರೇರಿತವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಇಂದಿಗೆ ಸುಮಾರು 2000 ವರ್ಷಗಳಿಗೂ ಹಿಂದೆ ಇದೇ ಯೆಹೂದಿ ಸಮಾಜದಲ್ಲೇ ಯೇಸುಕ್ರಿಸ್ತ ಹುಟ್ಟಿ ಬಂದು ಅವರ ಸನಾತನ ಧರ್ಮದ ಕಠೋರತೆಯನ್ನು ಧಿಕ್ಕರಿಸಿ ಹೊಸ ಮಾನವಧರ್ಮಕ್ಕೆ ನಾಂದಿ ಹಾಡಿದ್ದು ಹಾಗೂ ಇದೇ ಯೆಹೂದಿ ಸಂಸ್ಕೃತಿಯಿಂದಲೇ ಮಹಮದ್ ಪೈಗಂಬರನು ಹುಟ್ಟಿ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ್ದು. ಹಾಗೆ ನೋಡಿದರೆ ಬೈಬಲ್ ಮತ್ತು ಕುರಾನುಗಳೆರಡರಲ್ಲೂ ಯೆಹೂದ್ಯ ಸಂಸ್ಕೃತಿಯ ಲೇಪನ ಹಾಸುಹೊಕ್ಕಾಗಿದೆ.

'ಪವಿತ್ರ ಬೈಬಲ್'ನಲ್ಲಿ ಹೇಳಿದಂತೆ ಅಂದು ದೇವ-ಮಾನವ ಸಂಬಂಧ ಎಷ್ಟು ಆತ್ಮೀಯವಾಗಿತ್ತೆಂದರೆ ದೇವರು ಮತ್ತು ಪ್ರಥಮ ಮಾನವನೊಂದಿಗೆ ಮುಕ್ತ ಸಂಭಾಷಣೆ ನಡೆಯುತ್ತಿತ್ತು. ದೇವರು ಅವನನ್ನು ತಮ್ಮ ಹೋಲಿಕೆಯಲ್ಲೇ ಸೃಷ್ಟಿಸಿದ್ದರು. ತಮ್ಮ ಧ್ವನಿಯನ್ನೇ ಅವನ ಕೊರಳೊಳಗೆ ತುಂಬಿದ್ದರು. ಆದರೆ ಆತ ಪ್ರಲೋಭನೆಗೊಳಗಾಗಿ ದೇವರಿಗೆ ಗೊತ್ತಾಗದಂತೆ ಮನೋವಿಕಾಸಕ್ಕೆ ತೊಡಗಿದ. ಅರಿವಿನ ಹಣ್ಣನ್ನು ಕಚ್ಚಿ ರುಚಿಯಾಗಿದೆ ಎಂದುಕೊಂಡ. ಆದರೆ ದೇವರಿಗೆ ಗೊತ್ತಾಗದ ಸಂಗತಿಯಾದರೂ ಏನು? ಮಾನವನು ವಿಚಾರವಂತಿಕೆಯನ್ನು ಸನ್ಮಾರ್ಗದಿಂದ ರೂಢಿಸಿಕೊಳ್ಳಬೇಕೇ ಹೊರತು ದುರ್ಮಾರ್ಗದಿಂದಲ್ಲ ಎಂದು ಹೇಳಿ ಅವರು ಮಾನವನನ್ನು ಶಪಿಸಿದರು. ವಾಸ್ತವವಾಗಿ ಮಾನವನು ಅರಿವು ಹೊಂದಬೇಕೆಂಬುದು ದೇವರ ಇಚ್ಛೆಯಾಗಿದ್ದರಿಂದಲೇ ಆ ಹಣ್ಣಿನ ಮರವನ್ನು ಈಡನ್ ತೋಟದ ಮಧ್ಯೆ ಇರಿಸಿ ಸೂಚ್ಯವಾಗಿ ಅದರ ಪ್ರಾಮುಖ್ಯತೆಯನ್ನು ಹೇಳಿದ್ದರು.

ಈ ಘಟನೆಯ ನಂತರ ದೇವರು ಮನುಷ್ಯರೊಂದಿಗೆ ನೇರವಾಗಿ ಮಾತನಾಡಲೇ ಇಲ್ಲ ಎಂಬುದನ್ನು ಪವಿತ್ರಬೈಬಲ್‌ನಲ್ಲಿ ನಾವು ನೋಡುತ್ತೇವೆ. ನೋವ, ಅಬ್ರಹಾಂ, ಇಸಾಕ, ಯಕೋಬ, ಮೋಸೆಸ್, ಎಲೀಯ, ದಾವಿದ, ಸೊಲೊಮೋನ್, ದಾನಿಯೆಲ, ಯೆಶಾಯ ಮುಂತಾದ ಎಲ್ಲರೊಂದಿಗೆ ಅವರು ದೃಗ್ಗೋಚರವಿಲ್ಲದ ಧ್ವನಿರೂಪದಲ್ಲಿಯೇ ಸಂವಾದಿಸಿದ್ದಾರೆ. ಈ ವ್ಯಕ್ತಿಗಳೆಲ್ಲ ದೇವರಿಂದ ಅಭಿಷಿಕ್ತರಾಗಿದ್ದವರು ಇಲ್ಲವೇ ವಿಶೇಷವಾಗಿ ಆಯ್ಕೆಯಾಗಿದ್ದವರು. ಇವರಿಗೆ ಮಾತ್ರ ದೇವರ ಧ್ವನಿಭಾಗ್ಯ, ಉಳಿದ ಸಾಮಾನ್ಯ ಜನ ದೇವಧ್ವನಿಯಿಂದ ದೂರ. ಅವರ ಧರ್ಮಸಂಹಿತೆಗಳನ್ನು ಎಲ್ಲ ಕಾಲ ದೇಶ ಸಂದರ್ಭಕ್ಕೆ ಅನ್ವಯ ಮಾಡಲು ಅಸಾಧ್ಯವಾಗಿತ್ತಲ್ಲದೆ ಸಾಮಾಜಿಕ ವೈಪರೀತ್ಯಗಳನ್ನು ಉಂಟುಮಾಡುವುದಾಗಿತ್ತು. ಹೀಗೆ ಧರ್ಮಪಂಡಿತರ ಹಟಮಾರಿತನದಿಂದ ಸನಾತನ ಯೆಹೂದಿ ಧರ್ಮ ಜಡ್ಡುಗಟ್ಟಿಹೋಗಿತ್ತು. ಪ್ರತಿಯೊಂದಕ್ಕೂ ಅದೇ ಹಳೆಯ ಧಾರ್ಮಿಕ ಕಟ್ಟುಪಾಡುಗಳನ್ವಯ ನೀತಿ ನಿಯಮಗಳನ್ನು ಉಲ್ಲೇಖಿಸಲಾಗುತ್ತಿತ್ತು. ಅದರಲ್ಲಿ ಮಾನವೀಯತೆಗೆ ಸ್ಥಳವೇ ಇರಲಿಲ್ಲ.

ಯೇಸುಕ್ರಿಸ್ತ ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿತ್ತು. ಆ ಸಂದರ್ಭದಲ್ಲಿ ಆ ನಾಡಿಗರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಆಚಾರವಾದಿಗಳ ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ.

ಯೇಸುಕ್ರಿಸ್ತನ ಆಗಮನದೊಂದಿಗೆ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವನಿಗೆ ಎಡಗೆನ್ನೆಯನ್ನು ತೋರು' ಎಂಬ ಉದಾತ್ತ ವಾಕ್ಯಗಳು ಪ್ರಚುರಗೊಂಡವು. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದರು. 'ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು', ಎಂದ ಯೇಸುಕ್ರಿಸ್ತನ ನುಡಿಗಳು ಅದುವರೆಗೆ ಯಾವ ಮನುಷ್ಯನೂ ಆಡಿದ್ದಾಗಿರಲಿಲ್ಲ. ಅವು ದೈವೀ ನುಡಿಗಳೇ ಆಗಿವೆ.

ಪವಿತ್ರ ಬೈಬಲ್ಲಿನಲ್ಲಿ ಶಬ್ದವನ್ನು ದೇವರಿಗೆ ಹೋಲಿಸಲಾಗಿದೆ. ಆದಿಯಲ್ಲಿ ದೇವರು ಸಿಡಿಲಿನ ಆರ್ಭಟವನ್ನು, ಕಡಲ ಮೊರೆತವನ್ನು, ನೀರ ಜುಳುಜುಳು ನಾದವನ್ನು, ಹಕ್ಕಿಗಳ ಕಲರವವನ್ನು ಸೃಷ್ಟಿಸಿ ಆ ಎಲ್ಲ ಶಬ್ದಗಳನ್ನು ಕಲಸಿ ತೇಯ್ದು ನಾದಿ ಸ್ಫುಟವಾದ ಕಣಕವನ್ನು ತೆಗೆದು ಮಾನವನ ಕೊರಳೊಳಗೆ ಇಟ್ಟನು. ಮನುಷ್ಯನ ಬಾಯಿಂದ ಮಾತಾಗಿ ಅದು ಹೊರಬಂತು. 'ಮಾತಿನಿಂ ಸರ್ವಸಂಪದವು', 'ಲೋಕಕ್ಕೆ ಮಾತೇ ಮಾಣಿಕ್ಯ' ಎಂಬ ಸರ್ವಜ್ಞ ನುಡಿಯಾಗಲಿ, 'ಮಾತೇ ಜ್ಯೋತಿರ್ಲಿಂಗ' ಎಂಬ ಶರಣ ನುಡಿಯಾಗಲಿ ಮಾತಿನ ಶ್ರೇಷ್ಠತೆಯನ್ನು ಸಾರುತ್ತಿವೆ. ನಿಜವಾಗಿಯೂ ಮಾತೆಂಬುದು ನಮ್ಮ ಬದುಕಿನ ಜೀವಾಳವಾಗಿದೆ. ಮಾತು ಎಂಬುದು ಇಲ್ಲದೇ ಇದ್ದರೆ ನಾವು ಒಬ್ಬರಿಗೊಬ್ಬರು ಸಂವಾದಿಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು, ಯೋಚಿಸುವುದು, ತರ್ಕ ಮಾಡುವುದು, ಚರ್ಚೆ ವಾದ ವಿವಾದ ಏನೆಲ್ಲವನ್ನು ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. 'ಜಗತ್ತು ಸೃಷ್ಟಿಯಾಗುವ ಮೊದಲೇ ದೇವರಿದ್ದರು. ದೇವರೊಂದಿಗೆ ವಾಣಿಯಿತ್ತು. ದೇವರೂ ವಾಣಿಯೂ ಬೇರೆ ಬೇರೆಯಾಗಿರದೆ ವಾಣಿಯೇ ದೇವರಾಗಿತ್ತು' ಎಂಬ ಪವಿತ್ರಬೈಬಲ್ಲಿನ ಆ ಸಾಲುಗಳನ್ನು ಜ್ಞಾಪಕ ಮಾಡಿಕೊಂಡು 'ಮಾತೆಂಬುದು ಮಾನವನಾಗಿ ನಮ್ಮೊಡನೆ ಜೀವಿಸಿತು' ಎಂಬ ವಾಕ್ಯದೊಡನೆ ಸಮೀಕರಿಸಿ ದೇವರು ಮನುಜನಾಗಿ ಅಂದರೆ ಯೇಸುಕ್ರಿಸ್ತನಾಗಿ ಭುವಿಗೆ ಬಂದು ನಮ್ಮೊಂದಿಗೆ ಜೀವಿಸಿದರು ಎಂದು ಅರ್ಥೈಸಿಕೊಂಡಾಗ ಯೇಸುಕ್ರಿಸ್ತ ಸ್ವತಃ ದೇವರೇ ಎಂಬುದು ಸ್ಫುರಣೆಯಾಗುತ್ತದೆ.

ಯೇಸುಕ್ರಿಸ್ತನ ಕಾಲದಲ್ಲಿ ಅವನ ವಿರೋಧಿಗಳು ರಾಜ್ಯಪಾಲನಾದ ಪಿಲಾತನ ಮುಂದೆ ಯೇಸುಕ್ರಿಸ್ತನನ್ನು ಎಳೆದು ತರುತ್ತಾರೆ. ವಿಚಾರಣೆಯ ವೇಳೆ ಪಿಲಾತ ಯೇಸುಕ್ರಿಸ್ತನನ್ನು ಕುರಿತು, 'ನೀನು ದೇವರು ಹೌದೋ ಅಲ್ಲವೋ?', ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಏನೂ ಹೇಳದ ಯೇಸುಕ್ರಿಸ್ತ ಸತ್ಯಕ್ಕೆ ಸಾಕ್ಷಿಯಾಗಲು ಬಂದಿದ್ದೇನೆ ಎಂದಾಗ ಪಿಲಾತ ಗಲಿಬಿಲಿಗೊಳ್ಳುತ್ತಾನೆ. ಕಾಣದ ಸತ್ಯಕ್ಕೆ ಜೀವಂತ ಸಾಕ್ಷಿ ಯೇಸು ಎಂಬುದನ್ನು ಅರಿಯದೇ ಯಾವುದು ಆ ಸತ್ಯ ಎಂಬ ಜಿಜ್ಞಾಸೆಗೊಳಗಾಗುತ್ತಾನೆ. ಸತ್ಯದ ಎದುರೇ ನಿಂತಿದ್ದರೂ ಪಿಲಾತ ಸತ್ಯಸ್ವರೂಪಿಯಾದ ಯೇಸುಕ್ರಿಸ್ತನನ್ನು ಕುರಿತು, 'ಸತ್ಯವೆಂದರೇನು?' ಎಂದು ಪ್ರಶ್ನಿಸುತ್ತಾನೆ. ಮಾನವನ ಸ್ವಭಾವವೇ ಹಾಗೆ. ನಾವೂ ಸಹ ಜೀವನದಲ್ಲಿ ಎಷ್ಟೋ ಸಾರಿ ಸತ್ಯ ನಮ್ಮ ಕಣ್ಣಿಗೆ ನಿಚ್ಚಳವಾಗಿ ಗೋಚರಿಸುತ್ತಿದ್ದರೂ ಕಾಣದೆ ಹುಡುಕುವ ಪ್ರಯತ್ನ ಮಾಡುತ್ತೇವೆ.

ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: 'ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ...' ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ 'ಸತ್ಯ' ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವನ ಸ್ವಭಾವವೇ ಹಾಗೆ. ಅಮೂಲ್ಯವಾದ ಚಿನ್ನದ ಪಾತ್ರೆಯಲ್ಲಿ ಮತ್ತಷ್ಟು ಅಮೂಲ್ಯವಾದ ಇನ್ನೇನೋ ಇರಬಹುದೆಂಬ ತರ್ಕ ಅವನದು. ಆ ಪಾತ್ರೆಯೊಳಗೆ ಶೂನ್ಯವೆಂಬುದು ಇದೆ, ಬರಿಗಣ್ಣಿಗೆ ಕಾಣದು ಎಂಬ ಸತ್ಯ ಅವನಿಗೆ ಗೋಚರವಾಗುವುದಿಲ್ಲ.

ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಅವನ ತತ್ವಗಳನ್ನು ಅಂದರೆ ಮಾನವಪ್ರೇಮದ ಹರಹನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು.

ಇದರಿಂದ ನಿಜವಾಗಿಯೂ ಕಂಗೆಟ್ಟವರು ರೋಮನ್ ಸಾಮ್ರಾಜ್ಯದ ಊಳಿಗದಲ್ಲಿದ್ದ ಅಧಿಕಾರಿಗಳು ಹಾಗೂ ಸಾಮಂತರು. ಅವರಿಗೆ ಯಾವುದೇ ಕೆಲಸಕ್ಕೂ ಜೀತದಾಳುಗಳು ದೊರಕದೆ ಅಸಹನೆ ಮೊಳೆತು ಈ ಕ್ರಿಸ್ತತತ್ವ ಪ್ರಚಾರದಲ್ಲಿ ತೊಡಗಿದ್ದವರನ್ನು ಸಿಕ್ಕಸಿಕ್ಕಲ್ಲಿ ಹಿಡಿದು ಹಿಂಸಿಸತೊಡಗಿದರು. ಕ್ರಿಸ್ತಮತ ಪ್ರಚಾರದ ಚುಕ್ಕಾಣಿ ಹಿಡಿದಿದ್ದ ಪೇತ್ರ, ಪೌಲ, ಮುಂತಾದ ಅನೇಕರು ಯಾವುದೇ ಪ್ರತಿರೋಧವಿಲ್ಲದೆ ತಲೆದಂಡ ತೆತ್ತರು. ಆದರೂ ಕ್ರಿಸ್ತಾವಲಂಬಿಗಳ ಸಂಖ್ಯೆಯೇನೂ ಕಡಿಮೆಯಾಗಲಿಲ್ಲ. ಕ್ರಿಸ್ತಶಕ 2ನೇ ಶತಮಾನದ ವೇಳೆಗೆ ರೋಮನ್ ಚಕ್ರಾಧಿಪತ್ಯವೇ ಕ್ರಿಸ್ತಮತಕ್ಕೆ ಶರಣಾಗಿ ಅದನ್ನೇ ತನ್ನ ರಾಜಧರ್ಮವೆಂದು ಘೋಷಿಸಿತು.

-ಸಂಗ್ರಹ ಲೇಖನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ