ಕ್ರಿ.ಪೂ.132ರಲ್ಲಿ 'ತನಾಖ್'ನ್ನು ಹೆಲ್ಲೆನಿಸ್ಟಿಕ್ 1 ಯುಗದ ವ್ಯಾವಹಾರಿಕ ಭಾಷೆಯಾದ 'ಕೊಯಿನ್
ಗ್ರೀಕ್(ಸಾಮಾನ್ಯ ಗ್ರೀಕ್)'ಗೆ
ತರ್ಜುಮೆ ಮಾಡಿ ಪ್ರಕಟಿಸಲಾಯಿತು. ಅಲೆಕ್ಸಾಂಡರನು
ಮರಣ ಹೊಂದಿದ ಅವಧಿಯಿಂದ ಬೈಜಾಂಟಿಯನ್
ಅವಧಿ(ಕ್ರಿ.ಪೂ.323 ರಿಂದ
ಕ್ರಿ.ಶ.600)ಯವರೆಗೆ ಎಲ್ಲಾ
ಗ್ರೀಕ್ ರಾಜ್ಯಗಳಲ್ಲೂ ಬಳಕೆಯಲ್ಲಿದ್ದ ಸಾಮಾನ್ಯ ಗ್ರೀಕ್ ಭಾಷೆಗೆ
ಅದನ್ನು ತರ್ಜುಮೆ ಮಾಡಲಾಯಿತು. ಹೀಗೆ
ಗ್ರೀಕ್ ಭಾಷೆಗೆ ತರ್ಜುಮೆಯಾದ ಕೃತಿಗೆ
ಇಟ್ಟದ್ದು ಲತೀನ್ ಭಾಷೆಯ ಹೆಸರು,
ಅದುವೇ 'ಸೆಪ್ತುವಾಜಿಂತ್'; ಅಂದರೆ 'ಎಪ್ಪತ್ತು'. 'ಸೆಪ್ತುವಾಜಿಂತ್'
ಎಂಬ ಹೆಸರಿನ ಮೂಲ ಲ್ಯಾಟಿನ್ನ 'versio septuaginta
interpretum', ಅಂದರೆ '70 ಅರ್ಥ ವಿವರಣಕಾರರ ಭಾಷಾಂತರ'
ಎಂದು ಅರ್ಥ. ದೀರ್ಘವಾದ ಆ
ಹೆಸರು ಸಂಕ್ಷಿಪ್ತಗೊಂಡು, 'ಸೆಪ್ತುವಾಜಿಂತ್' ಆಗಿದೆ.
'ಸೆಪ್ತುವಾಜಿಂತ್'
ಅಥವಾ 'LXX' ಗ್ರಂಥವು ಗ್ರೀಕ್ ಭಾಷೆಯಲ್ಲಿ
ರಚನೆಯಾದ 'ಹೀಬ್ರೂ
ಬೈಬಲ್'. ಪ್ರಸ್ತುತ ಈ ಗ್ರಂಥದಲ್ಲಿ ಹೀಬ್ರೂ
ಮತ್ತು ಅರಾಮೈಕ್ ಭಾಷೆಗಳಿಂದ ತರ್ಜುಮೆಗೊಂಡ ಪುರಾತನ 'ಹಳೆ ಒಡಂಬಡಿಕೆ'ಯ ಅನೇಕ ಭಾಗಗಳು,
ಬೈಬಲ್ನ 'ಅಪೊಕ್ರಿಫ'(ನಂಬಿಕಾರ್ಹವಲ್ಲವೆಂದು
ಕೈ ಬಿಡಲಾದ ಆದರೆ ಕೆಲವು
ಬೈಬಲ್ಗಳಲ್ಲಿ ಈಗಲೂ ಇರುವ),
16ನೇ ಶತಮಾನದಿಂದೀಚೆಗೆ ಚರ್ಚ್ ಸೇರಿಸಿಕೊಂಡ ಬೈಬಲ್ನ ಕೆಲವು ಭಾಗಗಳೂ
ಸೇರಿಕೊಂಡಿವೆ.
ಯೆಹೂದ್ಯರ
ಸಾಮಾಜಿಕ ನ್ಯಾಯಶಾಸ್ತ್ರ ಮತ್ತು ಸಾಂಪ್ರದಾಯಿಕ ಆಚಾರ
ವಿಧಿಗಳನ್ನು ಒಳಗೊಂಡ ಅವರ ಧರ್ಮಶಾಸ್ತ್ರವಾದ
'ತಾಲ್ಮುದ್'ನ ಪ್ರಕಾರ; 'ದ್ವಿತೀಯ
ಟೋಲೆಮಿ' ಎಂಬ ದೊರೆಯು ಯಾವ
ಕಾರಣವನ್ನೂ ನೀಡದೆ ಯೆಹೂದ್ಯರ ಹನ್ನೆರಡು
ಪಂಗಡಗಳಿಂದ ತಲಾ ಆರರಂತೆ ಒಟ್ಟು
72 ವಿದ್ವಾಂಸರನ್ನು ಆಯ್ಕೆಮಾಡಿ 72 ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿ ಹಾಕಿ ಅವರಿಗೆ
ಮೊದಲು 'ತೋರಾ'ವನ್ನು ಬರೆಯಲು
ಆಜ್ಞಾಪಿಸಿದನಂತೆ. ಅವರೆಲ್ಲರೂ 72 ದಿನಗಳಲ್ಲಿ 'ತೋರಾ'ದ 72 ಪ್ರತಿಗಳನ್ನು
ಬರೆದು ತಂದಾಗ. ಅವುಗಳನ್ನು ವಿಶ್ಲೇಷಣೆಗೆ
ಒಳಪಡಿಸಲಾಯಿತಂತೆ. ಅಲ್ಲಿದ್ಧ ಎಲ್ಲಾ
ಪ್ರತಿಗಳ ಪ್ರತಿ
ವಾಕ್ಯಗಳಲ್ಲೂ ಇರುವ ಪ್ರತಿ ಪದಗಳೂ
ಯಥಾವತ್ತಾಗಿ ಇರುವುದನ್ನು ಕಂಡು ಟೋಲೆಮಿಗೆ ಅಚ್ಚರಿಯಾಯಿತಂತೆ!
ಆ ನಂತರ ಅಲೆಕ್ಸಾಂಡ್ರಿಯಾದಲ್ಲಿರುವ
'ಗ್ರಂಥಾಲಯ'ಕ್ಕಾಗಿ ಉಳಿದೆಲ್ಲಾ ಗ್ರಂಥಗಳನ್ನು
ರಚಿಸಲು ಅವರೆಲ್ಲರಿಗೂ ಅನುಮತಿಯನ್ನು ನೀಡಲಾಯಿತಂತೆ. ಆ ನೆನಪಿಗಾಗಿಯೇ ಗ್ರೀಕ್ನಲ್ಲಿ ಪ್ರಕಟವಾದ ಗ್ರಂಥಕ್ಕೆ
ಲತೀನ್ ಭಾಷೆಯ 'ಸೆಪ್ತುವಾಜಿಂತ್ ' ಎಂಬ
ಹೆಸರನ್ನು ಇಡಲಾಯಿತಂತೆ. ಅಂದ ಹಾಗೆ 'ಸೆಪ್ತುವಾಜಿಂತ್'
ಅಂದರೆ ಲತೀನ್ ಭಾಷೆಯಲ್ಲಿ ‘ಎಪ್ಪತ್ತು’
ಎಂದು ಅರ್ಥ.
___________
1 ಅಲೆಕ್ಸಾಂಡರ್ನ ಆಕ್ರಮಣದ ನಂತರ ಗ್ರೀಕ್ ಸಾಮ್ರಾಜ್ಯವು ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ವಿಸ್ತರಿಸಿದ್ದ ಕಾಲವನ್ನು 'ಹೆಲ್ಲೆನಿಸ್ಟಿಕ್ ಯುಗ'ವೆನ್ನುತ್ತಾರೆ. ಕ್ರಿ.ಪೂ. 323-30ರ ನಡುವಿನ ಈ ಕಾಲವನ್ನು 'ಹೆಲ್ಲೆನಿಸ್ಟಿಕ್ ಸುವರ್ಣಯುಗ 'ವೆಂದೂ ಕರೆಯುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ