ಇವರಿಬ್ಬರೂ
ಸ್ನಾನಿಕ ಯೊವಾನ್ನನ ಮಾತಾಪಿತೃಗಳು. ಇವರ ಬಗೆಗಿನ ವಿವರಗಳು
ಲೂಕನ ಸುಸಂದೇಶದಲ್ಲಿ ಮಾತ್ರ ಲಭ್ಯವಾಗುತ್ತವೆ. ಜಕರೀಯನು
ಅಬೀಯನ ವರ್ಗಕ್ಕೆ ಸೇರಿದ್ದ ಯಾಜಕ. ಆಗ
ಅರ್ಚಕರನ್ನು ವರ್ಗಗಳಾಗಿ ವಿಂಗಡಿಸಲಾಗುತ್ತಿತ್ತು. ಒಂದೊಂದು ವರ್ಗವೂ ನಿಗದಿತ
ಸಮಯಗಳಲ್ಲಿ ಯಾಜಕಸೇವಾಕಾರ್ಯಗಳನ್ನು ಮಾಡಬೇಕಾಗಿತ್ತು. ಪ್ರತಿಯೊಂದು ಗುಂಪಿಗೂ ನಾಯಕನಿರುತ್ತಿದ್ದ. ಅಬೀಯನೆಂಬವನು
ಅಂತಹ ಒಂದು ವರ್ಗದ ನಾಯಕ.
ಆ ವರ್ಗದಲ್ಲಿರುವ ಸದಸ್ಯರಿಗೆ
ಚೀಟಿ ಎತ್ತುವ ಮೂಲಕ ದೇವರಿಗೆ
ದೂಪವನ್ನರ್ಪಿಸುವ ಕಾಯಕವನ್ನು ನೀಡಲಾಗುತ್ತಿತ್ತು. ಈ ಅಬೀಯನ ವರ್ಗದಲ್ಲಿ
ಜಕರೀಯ ಕಾರ್ಯನಿರ್ವಹಿಸುತ್ತಿದ್ದ. ಆತನ ಪತ್ನಿ ಎಲಿಜಬೇತ್
ಯೇಸುವಿನ ಮಾತೆ ಮರಿಯಳ ಸಂಬಂಧಿ.
ಈಕೆ ಆರೋನನ ಯಾಜಕ ವಂಶಕ್ಕೆ
ಸೇರಿದವಳು. ಪ್ರಾಯಶಃ ಈಕೆ ಮರಿಯಳ
ಚಿಕ್ಕಮ್ಮಳಾಗಿರಬೇಕು. ಈ ದಂಪತಿಗಳು ವಾಸವಿದ್ದುದು
ಆಗಿನ ಜುದೇಯದ ಬೆಟ್ಟಗುಡ್ಡಗಳ ಪ್ರದೇಶದಲ್ಲಿ.
ದೇವರಲ್ಲಿ ಅಪರಿಮಿತ ವಿಶ್ವಾಸಿಗಳನ್ನಿರಿಸಿದ ಇವರದು
ಅನ್ಯೋನ್ಯ ದಾಂಪತ್ಯ. ತಾರುಣ್ಯ ದಾಟಿ ಮುಪ್ಪಿನತ್ತ
ಹೆಜ್ಜೆಯಿರಿಸಿದ್ದ ಅವರಿಗೆ ಮಕ್ಕಳಾಗಿರಲಿಲ್ಲ. ಅದೊಂದು
ಕೊರತೆ ಅವರನ್ನು ಸದಾ ಕಾಡುತ್ತಿತ್ತು.
ಕ್ರಿ.ಪೂ. 3ರಲ್ಲಿ ಒಂದು
ವಸಂತಕಾಲದ ಪೂರ್ವದಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ
ಸರದಿಯ ಪ್ರಕಾರ ದೇವರಿಗೆ ದೂಪಾರ್ಚನೆ
ಸಲ್ಲಿಸಬೇಕಾದ ಜಕರೀಯನು ದೇಗುಲದ ಗರ್ಭಗುಡಿಯನ್ನು
ಪ್ರವೇಶಿಸುತ್ತಾನೆ. ಆ ವೇಳೆಯಲ್ಲಿ ದೇಗುಲದಲ್ಲೊಂದು
ವಿಶೇಷ ಪ್ರಭೆಯನ್ನು ಕಂಡು ಬೆಚ್ಚಿಬೀಳುತ್ತಾನೆ. ಗಬ್ರಿಯೇಲ್
ದೂತನ ಆಗಮನವಾಗುತ್ತದೆ. ಆತನ ವಾಣಿ ಮೊಳಗುತ್ತದೆ,
"ನಿನ್ನ ಪತ್ನಿ ಎಳಿಜಬೇತಳಿಗೊಂದು ಗಂಡುಮಗುವಾಗುತ್ತದೆ.
ಆ ಹುಡುಗನು ಯೊವಾನ್ನನೆಂಬ
ಹೆಸರಿನಿಂದ ಪ್ರಖ್ಯಾತನಾಗುತ್ತಾನೆ." ಎಂದು ದೂತ ಜಕರೀಯನಿಗೆ
ವಿಜ್ಞಾಪಿಸುತ್ತಾನೆ. ಆದರೆ ದೇವದೂತನ ಮಾತನ್ನು
ನಂಬದ ಜಕರೀಯನು, "ಈ ಮಾತು ನಿಜವಾಗುವುದೆಂದು
ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ;
ನನ್ನ ಪತ್ನಿಗೂ ಮುಪ್ಪು," ಎನ್ನುತ್ತಾನೆ.
ಅದಕ್ಕೆ ದೇವದೂತನು, "ನಾನು ದೇವರ ಸನ್ನಿಧಿಯಲ್ಲಿ
ಸೇವೆ ಸಲ್ಲಿಸುವ ಗಬ್ರಿಯೇಲ; ದೇವರ ಅಪ್ಪಣೆಯಂತೆ ಈ
ಶುಭಸಂದೇಶವನ್ನು ತಿಳಿಸಲು ಬಂದವನು. ಈ
ಸಂದೇಶದಂತೆ ಎಲ್ಲವೂ ಸಕಾಲದಲ್ಲಿ ನೆರವೇರುವುದು.
ಈ ಸಂದೇಶವನ್ನು ನಂಬದ
ನೀನು ಇವೆಲ್ಲವೂ ನೆರವೇರುವವರೆಗೆ ಮೂಕನಾಗಿ ಉಳಿಯುವೆ," ಎನ್ನುತ್ತಾನೆ.
ದೂಪಾರ್ಚನೆ
ಸಲ್ಲಿಸಿ ಹೊರಬರಬೇಕಾಗಿದ್ದ ಜಕರೀಯ ಹೊರಕ್ಕೆ ಬಾರದಿರುವುದನ್ನು
ಕಂಡು ಹೊರಗೆ ಕಾದಿದ್ದ ಜನರು
ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಳಗಿನ ಪ್ರಹಸನಗಳು ನಡೆದಾದ
ಬಳಿಕ ಹೊರಬಂದ ಜಕರೀಯನನ್ನು ಜನರು
ಪ್ರಶ್ನಿಸಿದಾಗ ಆತನ ಮಾತು ನಿಂತುಹೋಗಿರುವುದು
ತಿಳಿದು ಬರುತ್ತದೆ. ಜಕರೀಯ ಬರಿಯ ಕೈಸನ್ನೆಯಿಂದಲೇ
ಉತ್ತರಿಸುವ ಪ್ರಯತ್ನ ಮಾಡುತ್ತಾನೆ. ಜನರು
ವಿಸ್ಮಯಗೊಂಡು ಅವನಿಗೇನೋ ದಿವ್ಯದರ್ಶನವಾಗಿರಬೇಕು ಎಂದು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾರೆ.
ದೇವದೂತನು
ನುಡಿದ ಸಂದೇಶದಂತೆಯೇ ಎಲಿಬೇತಳು ಗರ್ಭವನ್ನು ಧರಿಸುತ್ತಾಳೆ. ಆದರೆ ಐದು ತಿಂಗಳು
ಮನೆಯಲ್ಲಿ ಮರೆಯಾಗಿ ಉಳಿಯುತ್ತಾಳೆ. ಬಳಿಕ,
"ಸರ್ವೇಶ್ವರನ ದಯೆಯಿಂದ ನನಗಿದ್ದ ಅವಮಾನವು
ತೊಲಗಿದೆ," ಎನ್ನುತ್ತಾ ಸಂಭ್ರಮಿಸುತ್ತಾಳೆ. ಇದಾದ ಕೆಲವು ದಿನಗಳ
ಬಳಿಕ ಮರಿಯಳು ಎಲಿಜಬೇತಳನ್ನು ಸಂಧಿಸುತ್ತಾಳೆ.
ಯೇಸುವನ್ನು ಉದರದಲ್ಲಿ ಹೊತ್ತಿದ್ದ ಮರಿಯಳನ್ನು ಕಾಣುತ್ತಲೇ ಎಲಿಜಬೇತಳ ಉದರದಲ್ಲಿದ್ದ ಶಿಶು ನಲಿದಾಡುತ್ತದೆ.
ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವನ್ನು ನೀಡುತ್ತಾಳೆ. ನೆರೆಹೊರೆಯವರೂ, ಬಂಧುಬಳಗದವರೂ ಆಕೆಯೊಂದಿಗೆ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ. ಎಂಟನೆಯ ದಿನ ಮಗುವಿಗೆ ಸುನ್ನತಿ ಮಾಡಿಸುವಾಗ ಎಲಿಜಬೇತಳು ಮಗುವಿಗೆ ‘ಯೊವಾನ್ನ’ನೆಂದು ಹೆಸರಿಡಲು ಮುಂದಾಗುತ್ತಾಳೆ. ತಮ್ಮ ಬಂಧುಬಳಗದವರಲ್ಲಿ ಯಾರಿಗೂ ಇಲ್ಲದ ಹೆಸರು ಅದೆಂದು ಬಂಧುಗಳು ಆಕ್ಷೇಪವೆತ್ತುತ್ತಾರೆ. ಜಕರೀಯನ ನಿಲುವೇನು ಎಂದು ತಿಳಿಯಲು ಆತನನ್ನು ಕೇಳಿದಾಗ ಅವನು ಬರೆಯುವ ಹಲಗೆಯೊಂದನ್ನು ತರಿಸಿ ಅದರ ಮೇಲೆ ಅದೇ ಹೆಸರನ್ನೇ ಬರೆಯುತ್ತಾನೆ. ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ಆ ಕ್ಷಣವೇ ಜಕರೀಯನು ಮಾತನಾಡಲಾರಂಭಿಸಿ ದೇವರನ್ನು ಸ್ತುತಿಸಲು ತೊಡಗುತ್ತಾನೆ. ಮುಂದೆ ಜಕರೀಯನು ಪವಿತ್ರಾತ್ಮಭರಿತನಾಗಿ ಪ್ರವಾದನೆಯಲ್ಲೂ ತೊಡಗುತ್ತಾನೆ(ಲೂಕ
1:5-38).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ