ಕಥೋಲಿಕ
ಕ್ರೈಸ್ತ ಮದುವೆಗಳ ಬಲಿಪೂಜೆಯ ಸಂದರ್ಭದಲ್ಲಿ
'ಕಾನಾ' ಎಂಬ ಊರಲ್ಲಿ ನಡೆದ
ಮದುವೆಯ ಒಂದು ಪ್ರಸ್ತಾಪವಿರುವ ಬೈಬಲ್
ವಾಚನವನ್ನು ಚರ್ಚ್‌ಗಳಲ್ಲಿ ಓದಲಾಗುತ್ತದೆ.
ಬೈಬಲ್ನ 'ಹೊಸ ಒಡಂಬಡಿಕೆ'ಯ ಯೊವಾನ್ನನ ಸುಸಂದೇಶದಲ್ಲಿ
ಮಾತ್ರವೇ ಕಾಣಬರುವ 'ಕಾನಾ ಮದುವೆ'ಯ
ಕುರಿತ ವಿವರಗಳು ಸುಸಂದೇಶದ ಎರಡನೆಯ
ಅಧ್ಯಾಯದಲ್ಲೇ ಕಾಣಸಿಗುತ್ತದೆ.
ಈ ಪ್ರಸಂಗದಲ್ಲಿ 'ಮದುವೆ'ಯೆಂಬ ವಿಷಯಕ್ಕೆ ಅಂತಹ
ಪ್ರಾಧಾನ್ಯತೆ ಇಲ್ಲವಾದರೂ ಯೇಸುಕ್ರಿಸ್ತರ ಮೊಟ್ಟಮೊದಲ ಸೂಚಕಕಾರ್ಯದ ಬಗೆಗಿನ ವಿವರವೇ ಇಲ್ಲಿ
ಎದ್ದುಕಾಣುತ್ತದೆ. ಈ
ಘಟನೆ ನಡೆದದ್ದು ‘ಕಾನಾ’ ಊರಲ್ಲಿ ಎಂಬುದು
ಗಮನಾರ್ಹ. ಕಾನಾ ಊರಲ್ಲಿ ನಡೆಯುವ
ಮದುವೆಗೆ ಯೇಸುವಿನ ಮಾತೆ ಹಾಗೂ
ಸಹೋದರರೂ ಆಗಮಿಸಿರುತ್ತಾರೆ(ಯೊವಾ 2:12). ಯೇಸು ತಮ್ಮ ಶಿಷ್ಯರೊಂದಿಗೆ
ತಾವೂ ಆ ಮದುವೆಗೆ ಹಾಜರಾಗಿರುತ್ತಾರೆ. ಪ್ರಾಯಶಃ
ಕಾನಾದಲ್ಲಿ ನಡೆದ ಆ ಮದುವೆಯು
ಯೇಸುವಿನ ಮಾತೆಯ ಸಂಬಂಧಿಗಳ ಮದುವೆಯಾಗಿದ್ದಿರಬೇಕು;
ಅಥವಾ ಅಂತಹ ಸಾಧ್ಯತೆಯೇ ಹೆಚ್ಚು.
ಏಕೆಂದರೆ ಆ ಮದುವೆಗೆ ಆಗಮಿಸಿದ
ಗಣ್ಯಜನರಿಗಾಗಿ ಕುಡಿಯಲು ಸಿದ್ದಪಡಿಸಿದ್ದ ದ್ರಾಕ್ಷಾರಸ
ಸಾಲುವುದಿಲ್ಲ ಎಂಬ ವಿಷಯ ಯೇಸುವಿನ
ಮಾತೆಯ ಗಮನಕ್ಕೆ ಬಂದಾಗ ಅದನ್ನವರು
ಒಂದು ಪ್ರತಿಷ್ಟೆಯ ವಿಷಯವಾಗಿ ತೆಗೆದುಕೊಳ್ಳುತ್ತಾರೆ.
ಅವರು ಹಿಂದೂಮುಂದೂ
ನೋಡದೆ ತಮ್ಮ ಮಗನಲ್ಲಿ ವಿಷಯವನ್ನು
ಅರುಹುತ್ತಾರೆ. ಮದುವೆಯ ಆ ಘಳಿಗೆಯಲ್ಲಿ
ಮರಿಯಮ್ಮನವರು ಅಂತಹ ಮಹತ್ವದ ಕಾರ್ಯಕ್ಕೆ
ಇಳಿಯಲು ಕಾರಣ ಆ ಮದುವೆಯಲ್ಲಿ ಅವರಿಗೂ ಒಂದು ಪ್ರಮುಖ ಪಾತ್ರವಿದ್ದಿರಬೇಕು. ಹಾಗೆ ಅವರಿಗೆ
ಪ್ರಮುಖ ಪಾತ್ರವಿದೆಯೆಂದಾದರೆ ಖಂಡಿತವಾಗಿಯೂ ಅದು ಅವರ
ಸಂಬಂಧಿಕರೊಬ್ಬರ ಮದುವೆಯಾಗಿರಬೇಕು
ಎನ್ನುತ್ತಾರೆ ಬೈಬಲ್ ತಜ್ಞರು. ತಾಯಿಯ ಕೋರಿಕೆಯನ್ನು ಯೇಸು, ‘ತಮ್ಮ ಸಮಯವಿನ್ನೂ ಬಂದಿಲ್ಲ’
ಎಂದು ಹೇಳುವ ಮೂಲಕ ನಿರಾಕರಿಸುತ್ತಾರಾದರೂ ಅವರ ಮಾತನ್ನು
ಕಿವಿಗೆ ಹಾಕಿಕೊಳ್ಳದ ಮರಿಯಮ್ಮನವರು ಅಲ್ಲಿದ್ದ ಸೇವಕರಿಗೆ, "ಆತ ಹೇಳಿದಂತೆ ಮಾಡಿ,"
ಎಂದು ಹೇಳಿ ಹೊರಟುಹೋಗುತ್ತಾರೆ. ಹಾಗೆ
ಹೇಳಿ ಹೋಗಲು ಅವರಿಗೆ ತಮ್ಮ
ಮಗನ ಮೇಲಿದ್ದ ಅತೀವ ನಂಬಿಕೆ
ಮತ್ತು ವಿಶ್ವಾಸವೇ ಕಾರಣವಾಗಿರುತ್ತದೆ; ಜೊತೆಗೆ ಯೇಸು ಸರ್ವೇಶ್ವರ
ದೇವರ ಏಕೈಕ ಕುವರ ಎಂಬ ವಿಶ್ವಾಸವೂ ಅವರಲ್ಲಿರುತ್ತದೆ. ಅಂತೆಯೇ ಯೇಸು ತಮ್ಮ ಮಾತೆಯ ನುಡಿಯನ್ನು
ಶಿರಸಾವಹಿಸಿ ಪಾಲಿಸುತ್ತಾರೆ.
ಮದುವೆಯ
ಶುಭಕಾರ್ಯಕ್ಕೆ ಆಗಮಿಸುವ ಅತಿಥಿಗಳ ಕೈಕಾಲುಮುಖಗಳನ್ನು
ತೊಳೆಯಲೆಂದು ನೀರನ್ನು ಇರಿಸಿದ್ದ ಆರು
ಕಲ್ಲಿನ ಬಾನೆಗಳಲ್ಲಿ ನೀರನ್ನು ತುಂಬಲು ಸೇವಕರಿಗೆ
ತಿಳಿಸುವ ಯೇಸು, ಬಾನೆಗಳಲ್ಲಿ ನೀರು ತುಂಬಿಯಾದ ಬಳಿಕ
ಅದರಲ್ಲಿ ತಮ್ಮ ಕೈಬೆರಳನ್ನು ಅದ್ದಿ
ನೀರನ್ನು ಶ್ರೇಷ್ಟವಾದ ದ್ರಾಕ್ಷಾರಸವನ್ನಾಗಿ ಮಾರ್ಪಡಿಸುತ್ತಾರೆ(ಯೊವಾ 2:1-12). ಯೇಸುವಿನ ಈ ಮೊದಲ
ಸೂಚಕಕಾರ್ಯಕ್ಕೆ ಪ್ರೇರಕ ಶಕ್ತಿಯಾದದ್ದು ಮಾತೆ
ಮರಿಯಮ್ಮ. ಅಂತಹ ಕೀರ್ತಿಗೆ ಭಾಜನವಾದದ್ದು
ಕಾನಾ ಎಂಬ ಆ ಊರು.
ಯೇಸು
ಮಾಡಿದ ಇನ್ನೊಂದು ಸೂಚಕಕಾರ್ಯಕ್ಕೂ ಇದೇ ಊರು ಸಾಕ್ಷಿಯಾಗುತ್ತದೆ.
ಕಫೆರ್ನೌಮಿನಲ್ಲಿ ರಾಜಸೇವೆಯಲ್ಲಿದ್ದ ಅಧಿಕಾರಿಯ ಮಗನೊಬ್ಬ ವಿಪರೀತ ಕಾಯಿಲೆಯಿಂದ
ನರಳುತ್ತಾ ಸಾವು-ಬದುಕಿನ ನಡುವೆ
ಹೋರಾಟ ನಡೆಸುತ್ತಿದ್ದ. ಯೇಸು ಕಾನಾಗೆ ಬಂದಿರುವ
ಸುದ್ದಿಯನ್ನು ಕೇಳಿ ತಿಳಿದ ಕೂಡಲೇ ಆ ರಾಜಸೇವಕ
ತ್ವರಿತವಾಗಿ ಯೇಸುವನ್ನು ಕಾಣಲು ಬರುತ್ತಾನೆ. ಯೇಸುವಿನ
ಬಳಿ ಮಗನ ಪರಿಸ್ಥಿತಿಯನ್ನು ತಿಳಿಸಿ
ಹೇಗಾದರೂ ಮಾಡಿ ತನ್ನ ಮಗ
ಸಾಯುವ ಮೊದಲೇ ಅವನಿರುವ ಸ್ಥಳಕ್ಕೆ
ಬಂದು ಅವನನ್ನು ಸಾವಿನ ದವಡೆಯಿಂದ
ಪಾರುಮಾಡಲು ಕೇಳಿಕೊಳ್ಳುತ್ತಾನೆ. ಅದಕ್ಕೆ ಯೇಸು, "ಹೋಗು,
ನಿನ್ನ ಮಗನು ಬದುಕುತ್ತಾನೆ," ಎಂದಷ್ಟೇ
ಹೇಳಿ ಅವನನ್ನು ಕಳುಹಿಸಿಕೊಡುತ್ತಾನೆ. ಯೇಸು
ಅಲ್ಲಿಂದ ಕದಲುವುದಿಲ್ಲ. ಊರಿನ ಹಾದಿ ಹಿಡಿದ
ಆ ರಾಜಸೇವಕ ಅರ್ಧದಾರಿಯಲ್ಲಿದ್ದಾಗಲೇ
ಆತನ ಮಗ ಚೇತರಿಸಿಕೊಂಡನೆಂಬ ಸುದ್ದಿ
ಆತನ ಸೇವಕರಿಂದ ತಿಳಿದು ಬರುತ್ತದೆ. ಹೀಗೆ
ಯೇಸು ತಾವಿದ್ದ ಸ್ಥಳದಿಂದಲೇ ರಾಜಸೇವಕನ
ಮಗನನ್ನು ಉಳಿಸಿಕೊಡುತ್ತಾರೆ(ಯೊವಾ 4:46-54). ಇವೆರಡೂ ಸೂಚಕಕಾರ್ಯಗಳಿಗೆ ಸಾಕ್ಷಿಯಾದದ್ದು
'ಕಾನಾ' ಎಂಬ ಊರು. ಯೇಸುವಿನ
ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ
'ನತಾನಿಯೇಲ್'ನ ಊರು ಸಹ
ಕಾನಾ(ಯೊವಾ 4:46) ಎಂಬುದು ಇಲ್ಲಿ ಗಮನಾರ್ಹ.
ಕಾನಾ
ಎಂದು ಹೇಳಲಾಗುವ ಒಂದು ಊರಿನ ಹೆಸರು
ಯೆಹೋಶುವನ ಗ್ರಂಥದಲ್ಲೂ ಪ್ರಸ್ತಾಪವಾಗಿದೆ. ಇಸ್ರಾಯೇಲರ ಹನ್ನೆರಡು ಕುಲಗಳಲ್ಲಿ ಒಂದಾದ ಅಶೇರರಿಗಾಗಿ ಸ್ಥಳಗಳನ್ನು
ನಿಗದಿಪಡಿಸುವಾಗ ಆ ಸ್ಥಳಗಳ ಪಟ್ಟಿಯಲ್ಲಿ
ಕಾನಾ ಎಂಬ ಊರು ಸಹ
ಇರುವುದನ್ನು ಯೆಹೋಶುವ(19:28)ನ ಗ್ರಂಥದಲ್ಲಿ ಕಾಣಬಹುದು.
ಆದರೆ ಅದು ಗಲಿಲೇಯದ ಬಳಿಯ
'ಕಾನಾ' ಎಂಬ ಪ್ರದೇಶವೇ ಎಂಬುದಕ್ಕೆ
ಸರಿಯಾದ ಸಾಕ್ಷ್ಯಾಧಾರಗಳಿಲ್ಲ. ಪ್ರಸ್ತುತ ನಜರೇತಿನಿಂದ ಕೆಲವೇ ಮೈಲುಗಳ ದೂರದಲ್ಲಿರುವ
'ಖಿರ್ಬೆತ್ ಖಾನಾ' ಎಂಬ ಊರೇ
'ಕಾನಾ' ಆಗಿದ್ದಿರಬೇಕು ಎಂದು ಹೇಳಲಾಗುತ್ತಿದೆ. ಇದು
ನಜರೇತಿನ ಉತ್ತರಭಾಗದಲ್ಲಿ ಸುಮಾರು 13 ಕಿ.ಮೀ. ದೂರದಲ್ಲಿದೆ.
ಪುರಾತನ ಗ್ರಾಮವೊಂದರ ಅವಶೇಷಗಳು ಇಲ್ಲಿನ ಬೆಟ್ಟವೊಂದರ ಕಿಬ್ಬಿಯಲ್ಲಿ
ಕಾಣಲು ಸಿಗುತ್ತದೆ.
_________________________
ಚಿತ್ರಗಳು:
ಮೇಲಿನ ಚಿತ್ರ: ಖಿರ್ಬೆತ್ ಖಾನಾ ಪಟ್ಟಣ
ಕೆಳಗಿನದು: ಪುರಾತನ ಕಾನಾ ಗ್ರಾಮದ ಅವಶೇಷಗಳು
ಚಿತ್ರಗಳು:
ಮೇಲಿನ ಚಿತ್ರ: ಖಿರ್ಬೆತ್ ಖಾನಾ ಪಟ್ಟಣ
ಕೆಳಗಿನದು: ಪುರಾತನ ಕಾನಾ ಗ್ರಾಮದ ಅವಶೇಷಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ