ಯೇಸುವಿನ
ಹನ್ನೆರಡು ಮಂದಿ ಪ್ರೇಷಿತರಲ್ಲಿ ಒಬ್ಬ.
ನಥಾನಿಯೇಲನನ್ನು ಯೇಸುವಿನ ಬಳಿಗೆ ಕರೆದುಕೊಂಡು
ಹೋದ ಆತನ ಸ್ನೇಹಿತ. ಇವನ
ತಂದೆ-ತಾಯಿಯ ವಿವರಗಳು ಅಲಭ್ಯ.
ಸ್ವಂತ ಊರು ಗಲಿಲೇಯ ತೀರದ
ಬೆತ್ಸಾಯಿದ. ಈತನ ಬಗ್ಗೆ ಹೆಚ್ಚು ವಿವರಗಳು ಲಭ್ಯವಾಗುವುದು
ಯೊವಾನ್ನನ ಸುಸಂದೇಶವೊಂದರಲ್ಲೇ. ಅದನ್ನು ಹೊರತು ಪಡಿಸಿದರೆ
ಪ್ರೇಷಿತರ ಕ್ರಿಯಾಕಲಾಪಗಳಲ್ಲಿ ಫಿಲಿಪ್ಪನ ಬಗ್ಗೆ ಎರಡು ಪುಟಗಳ
ವಿವರಣೆ ಕಾಣಸಿಗುತ್ತದೆ.
ಹೇಗೆ
ಅಂದ್ರೆಯ ತನ್ನ ಸಹೋದರ ಸಿಮೋನ್
ಪೇತ್ರನನ್ನು ಯೇಸುವಿನ ಬಳಿಗೆ ಕರೆದೊಯ್ಯುತ್ತಾನೋ
ಅದೇ ರೀತಿಯಲ್ಲಿ ಫಿಲಿಪ್ಪನೂ ಗೆಳೆಯ ನಥಾನಿಯೇಲನನ್ನು ಯೇಸುವಿನ ಬಳಿಗೆ ಕರೆದೊಯ್ಯತ್ತಾನೆ.
ಫಿಲಿಪ್ಪನು ನಥಾನಿಯೇಲನಿಗೆ, "ಧರ್ಮಶಾಸ್ತ್ರದಲ್ಲಿ ಮೋಶೆಯು ಉಲ್ಲೇಖಿಸಿದ ಮತ್ತು
ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು
ನಮಗೆ ಸಿಕ್ಕಿದ್ದಾರೆ. ಇವರೇ ನಜ಼ರೆತ್ ಊರಿನ
ಜೋಸೆಫನ ಮಗನಾದ ಯೇಸು," ಎಂದು
ಹೇಳುತ್ತಾನೆ. ಅದಕ್ಕೆ ನಥಾನಿಯೇಲನು ವ್ಯಂಗವಾಗಿ, "ಏನು? ನಜ಼ರೇತಿನಿಂದ ಒಳ್ಳೆಯದೇನಾದರೂ
ಬರುವುದುಂಟೆ?" ಎಂದು ಕೇಳುತ್ತಾನೆ. ಫಿಲಿಪ್ಪನು,
"ಬಾ ನೋಡುವಿಯಂತೆ," ಎಂದು ನಥಾನಿಯೇಲನಿಗೆ ಹೇಳುತ್ತಾನೆ(ಯೊವಾನ್ನ 1:41-42). ಅವರು ಯೇಸುವನ್ನು ಕಾಣುತ್ತಾರೆ. ಬಳಿಕ
ಅವರಿಬ್ಬರೂ ಯೇಸುವಿನ ಪ್ರೇಷಿತರಾಗುತ್ತಾರೆ.
ಒಮ್ಮೆ
ಗಲಿಲೇಯ ಸಮುದ್ರದ ಬಳಿಯ ಬೆಟ್ಟವೊಂದರ
ಮೇಲೆ ಯೇಸುವಿನ ಜೊತೆಗೆ ನಿಂತಿದ್ದಾಗ
ಬೆಟ್ಟವನ್ನೇರಿ ಬರುತ್ತಿರುವ ಜನಸಮೂಹವನ್ನು ಕಂಡು ಯೇಸು ಫಿಲಿಪ್ಪನನ್ನು
ಪರೀಕ್ಷಿಸುವ ಸಲುವಾಗಿ, "ಈ ಜನರ ಊಟಕ್ಕೆ
ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?"
ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಫಿಲಿಪ್ಪನು, "ಇನ್ನೂರು
ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ
ಆಳಿಗೊಂದು ತುಂಡೂ ಸಾಕಾಗುವುದಿಲ್ಲ," ಎನ್ನುತ್ತಾನೆ(ಯೊವಾನ್ನ
6:5-7). ಪ್ರಾಯಶಃ ಆ ವೇಳೆಯಲ್ಲಿ ಅವರ
ಬಳಿಯಿದ್ದ ಒಟ್ಟಾರೆ ಮೊತ್ತ ಇನ್ನೂರು
ದಿನಾರಿ ನಾಣ್ಯಗಳೆಂದೇ ಕಾಣುತ್ತದೆ. ಆ ಹಣವನ್ನೆಲ್ಲಾ ಖರ್ಚು
ಮಾಡಿದರೂ ಬರುತ್ತಿರುವ ಜನಸಮೂಹಕ್ಕೆ ಅದು ಸಾಲದು ಎನ್ನುವುದು
ಅವನ ಅಭಿಪ್ರಾಯವಿರಬೇಕು. ಆದರೆ ಹಣವಿಲ್ಲದಿದ್ದರೂ ಸರ್ವೇಶ್ವರ
ದೇವರ ಕೃಪೆಯಿಂದ ಅವರಿಗೆಲ್ಲಾ ಹೊಟ್ಟೆತುಂಬುವಷ್ಟು ಆಹಾರ ಒದಗಿಸಬಹುದು ಎನ್ನುವ
ವಿಸ್ಮಯಕಾರಿ ಪವಾಡವನ್ನು ಅನಂತರ ಯೇಸು ಮಾಡಿ
ತೋರಿಸುತ್ತಾರೆ.
ಅದಾದ
ಬಳಿಕ ಫಿಲಿಪ್ಪನ ಬಗ್ಗೆ ಸುಸಂದೇಶದಲ್ಲಿ ಓದಲು
ಸಿಗುವುದು ಯೇಸು ಅರಸರಂತೆ ಜೆರುಸಲೇಂಗೆ ಪ್ರವೇಶಿಸುವ ವೇಳೆಯಲ್ಲಿ.
ಆಗ ಕೆಲವು ಗ್ರೀಕರು ಯೇಸುವನ್ನು
ನೋಡಬೇಕೆಂದು ಫಿಲಿಪ್ಪನ ಬಳಿ ಕೇಳಿಕೊಳ್ಳುತ್ತಾರೆ. ಫಿಲಿಪ್ಪನು
ಆ ವಿಷಯವನ್ನು ಅಂದ್ರೆಯನಿಗೆ
ವರ್ಗಾಯಿಸುತ್ತಾನೆ. ಅವರಿಬ್ಬರು ಯೇಸುವಿಗೆ ಈ ಸಮಾಚಾರವನ್ನು ತಿಳಿಸುತ್ತಾರೆ(ಯೊವಾನ್ನ 12:21-22). ಅನಂತರ ಯೇಸು ಯೆಹೂದ್ಯರ
ಬಂಧನಕ್ಕೀಡಾಗುವ ಮೊದಲು ತಮ್ಮ ಶಿಷ್ಯರಿಗೆ,
"ಮಾರ್ಗವೂ, ಸತ್ಯವೂ, ಜೀವವೂ ನಾನೇ"
ಎಂದು ಹೇಳುತ್ತಾ ತಮ್ಮ ಮುಖಾಂತರ ಬಾರದ
ಹೊರತು ಯಾರೂ ಪಿತನ ಬಳಿಗೆ
ಬರಲಾರರು ಎಂಬ ಸತ್ಯವನ್ನು ತಿಳಿಸುತ್ತಾರೆ.
ಆಗ ಫಿಲಿಪ್ಪನು, "ಪ್ರಭು, ನಮಗೆ ಪಿತನನ್ನು
ತೋರಿಸಿರಿ, ಅಷ್ಟೇ ಸಾಕು," ಎಂದು
ಮುಗ್ದನಾಗಿ ಕೇಳುತ್ತಾನೆ. ಅದಕ್ಕೆ ಯೇಸು, "ಇಷ್ಟು
ಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು
ನೀನು ಅರಿತುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ ಫಿಲಿಪ್ಪನೇ, 'ನಮಗೆ ಪಿತನನ್ನು ತೋರಿಸಿರಿ',
ಎಂದು ಹೇಗೆ ಕೇಳುವೆ? ನಾನು
ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ
ಇದನ್ನು ನೀನು ವಿಶ್ವಾಸಿಸುವುದಿಲ್ಲವೇ?" ಎಂದು ಕೇಳುತ್ತಾರೆ(ಯೊವಾನ್ನ 14:6-10).
ಯೊವಾನ್ನನ
ಸುಸಂದೇಶದಲ್ಲಿ ಫಿಲಿಪ್ಪನು ಅಂತಿಮವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದು ಪುನರುತ್ಥಾನರಾದ
ಯೇಸು ಮೂರನೆಯ ಸಲ ತಮ್ಮ
ಶಿಷ್ಯರಿಗೆ ಕಾಣಿಸಿಕೊಳ್ಳುವ ವೇಳೆಯಲ್ಲಿ. ಆಗ ಏಳು ಮಂದಿ
ಗಲಿಲೇಯ ಸಮುದ್ರದಲ್ಲಿ ಮೀನನ್ನು ಹಿಡಿಯುತ್ತಾ ಇರುತ್ತಾರೆ.
ಅವರಲ್ಲಿ ನಥಾನಿಯೇಲನೂ ಒಬ್ಬನಾಗಿರುತ್ತಾನೆ. ನಥಾನಿಯೇಲ ಬೆಸ್ತನೆಂಬುದನ್ನು ಬೈಬಲ್ನಲ್ಲಿ ಎಲ್ಲೂ
ಹೇಳಿಲ್ಲ. ಆದರೆ ಅವನು ಯೇಸುವಿನ
ಶಿಷ್ಯನಾದ ಬಳಿಕ ಉಳಿದ ಶಿಷ್ಯರ
ಜೊತೆಗೆ ಬೆಳೆದ ಗೆಳೆತನದ ಕಾರಣಕ್ಕೆ
ಗೆಳೆಯರಿಗಾಗಿ ಮೀನುಗಾರಿಕೆಯಲ್ಲಿ ಪಾಲ್ಗೊಳ್ಳುತ್ತಾನೆ. ನಥಾನಿಯೇಲನು ಅಲ್ಲಿದ್ದ ಎಂದ ಮೇಲೆ ಅಲ್ಲಿದ್ದ
ಹೆಸರಿಲ್ಲದ ಇಬ್ಬರು ಯೇಸುವಿನ ಶಿಷ್ಯರಲ್ಲಿ
ಫಿಲಿಪ್ಪನೂ ಒಬ್ಬನಾಗಿರಲೇಬೇಕಲ್ಲವೇ(ಯೊವಾನ್ನ 21:2).
ಪ್ರೇಷಿತರ
ಕ್ರಿಯಾಕಲಾಪಗಳಲ್ಲಿ ಫಿಲಿಪ್ಪನ ಬಗ್ಗೆ ಎರಡು ಪುಟಗಳಲ್ಲಿ
ಕಾಣಲು ಸಿಗುವ ಗಮನ ಸೆಳೆಯುವಂತಹ(ಪ್ರೇಷಿತ8:4-40) ವಿವರಣೆಗಳು ಇನ್ಯಾವ ಪ್ರೇಷಿತನಿಗೂ ದೊರೆಕ್ಕಿಲ್ಲವೆಂದೇ
ಹೇಳಬಹುದು. ಸ್ಟೇಫನನು ಹತ್ಯೆಯಾದ ಬಳಿಕ ಸೌಲನು ಯೇಸುಕ್ರಿಸ್ತರ
ಅನುಯಾಯಿಗಳ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳನ್ನು
ಆರಂಭಿಸುತ್ತಾನೆ. ಇದೇ ವೇಳೆಯಲ್ಲಿ ಫಿಲಿಪ್ಪನು
ಸಮಾರಿಯದ ಪ್ರಮುಖ ಪಟ್ಟಣವೊಂದರಲ್ಲಿ ಅಲ್ಲಿಯ
ಜನರಿಗೆ 'ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕ'
ಎಂದು ಸಾರಿದಾಗ ಅಭೂತಪೂರ್ವ ಸಂಚಲನೆಯೊಂದು
ಅಲ್ಲಿ ಕಂಡು ಬರುತ್ತದೆ. ಸ್ತ್ರೀಪುರುಷರೆನ್ನದೆ
ಅನೇಕರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಾರೆ. ಜನಸಮೂಹವು ಅವನ ಮಾತಿಗೆ ಕಿವಿಗೊಡುತ್ತದೆ.
ಫಿಲಿಪ್ಪನು ಅನೇಕರಲ್ಲಿದ್ದ ದೆವ್ವಗಳನ್ನು ಬಿಡಿಸುವ, ಅಸ್ವಸ್ಥರನ್ನು ಸ್ವಸ್ಥರನ್ನಾಗಿಸುವ ಕೈಂಕರ್ಯವನ್ನು ಮಾಡುತ್ತಾನೆ. ಈ ಅದ್ಭುತಕಾರ್ಯಗಳನ್ನು ಕಣ್ಣಾರೆ
ಕಾಣುವ ಸುಯೋಗ ಅಲ್ಲಿಯ ಜನರದಾಗುತ್ತದೆ.
ಇದು ಆ ಪಟ್ಟಣದ ಜನತೆ
ಅಪಾರವಾಗಿ ಸಂತೋಷಿಸುವಂತೆ ಮಾಡುತ್ತದೆ. ಅವನ ಬೋಧನೆಯನ್ನು ಒಮ್ಮನಸ್ಸಿನಿಂದ
ಸ್ವೀಕರಿಸುತ್ತದೆ. ಅವನ ಶುಭಸಂದೇಶಕ್ಕೆ ತಲೆಬಾಗಿದ
ಅಪಾರ ಜನರು ಯೇಸುಕ್ರಿಸ್ತರಲ್ಲಿ ವಿಶ್ವಾಸವನ್ನು
ತಾಳುತ್ತಾರೆ; ದೀಕ್ಷಾಸ್ನಾನವನ್ನು ಪಡೆಯುತ್ತಾರೆ. ಅದೇ ಪಟ್ಟಣದಲ್ಲಿದ್ದ ಸಿಮೋನನೆಂಬ
ದುಷ್ಟ ಮಂತ್ರವಾದಿಯು ಫಿಲಿಪ್ಪನ ಕಾರ್ಯವೈಖರಿಗೆ ಮರುಳಾಗುತ್ತಾನೆ. ಫಿಲಿಪ್ಪನು ಮಾಡಿದ ಅದ್ಭುತಕಾರ್ಯಗಳನ್ನು ಕಂಡು
ಬೆಕ್ಕಸಬೆರಗಾಗುತ್ತಾನೆ.
ಫಿಲಿಪ್ಪನ
ಕಾರ್ಯಕ್ಷಮತೆ, ಆಕರ್ಷಣೆಗೆ ಒಳಗಾಗುತ್ತಿರುವ ಅಪಾರ ಜನಸಂದಣಿ ಇವುಗಳ
ಬಗ್ಗೆ ಕೇಳಿ ತಿಳಿದ ಪೇತ್ರ
ಮತ್ತು ಯೊವಾನ್ನರು ಅವನ ಸಹಾಯಕ್ಕಾಗಿ ಧಾವಿಸಿ
ಬರುತ್ತಾರೆ. ಇವರೆಲ್ಲರೂ
ಸೇರಿ ಹಸ್ತನಿಕ್ಷೇಪ ಮಾಡಿ ಭಕ್ತರಿಗೆ ಪವಿತ್ರಾತ್ಮ
ವರಪ್ರದಾನವಾಗುವಂತೆ ಮಾಡುತ್ತಾರೆ. ಇದನ್ನು ಕಂಡ ಮಂತ್ರವಾದಿ
ಸಿಮೋನ ಅವರಿಗೆ ಹಣದಾಸೆ ತೋರಿಸಿ
ತನಗೂ ಆ ಶಕ್ತಿ ಬರುವಂತೆ
ಮಾಡಿ ಎಂದು ಕೇಳಿಕೊಳ್ಳುತ್ತಾನೆ. ಆ
ಮೂವರೂ ಅವನ ಕೋರಿಕೆಯನ್ನು ತಳ್ಳಿಹಾಕುತ್ತಾರೆ.
ಅನಂತರ
ದೇವದೂತರ ಪ್ರೇರೆಪಣೆಯಿಂದ ಫಿಲಿಪ್ಪನು ದಕ್ಷಿನಾಭಿಮುಖವಾಗಿ ಸಾಗಿ ಜೆರುಸಲೇಮಿನಿಂದ ಗಾಜ಼ಕ್ಕೆ
ಹೋಗುವ ಅರಣ್ಯಮಾರ್ಗ ಹಿಡಿಯುತ್ತಾನೆ. ಅಲ್ಲಿ ಇಥಿಯೋಪಿಯಾದ ಅಧಿಕಾರಿಯೊಬ್ಬನನ್ನು
ಕಾಣುತ್ತಾನೆ. ರಥದಲ್ಲಿ ಕುಳಿತು ಯೆಶಾಯ
ಪ್ರವಾದಿಯ ಗ್ರಂಥವನ್ನು ಓದುತ್ತಿದ್ದ ಅವನ ಸಹಾಯಕ್ಕೆ ಫಿಲಿಪ್ಪನು
ಧಾವಿಸಿ ಯೆಶಾಯ ಪ್ರವಾದಿಯ ಪ್ರವಾದನೆಯನ್ನು
ಅರ್ಥ ಮಾಡಿಸಿಕೊಡುತ್ತಾನೆ ಮಾತ್ರವಲ್ಲ ಯೇಸುವಿನ ಶುಭಸಂದೇಶವನ್ನೂ ಅವನಿಗೆ
ಸಾರುತ್ತಾನೆ. 'ಯೇಸುವೇ ದೇವರಪುತ್ರ' ಎಂದು
ಅವನಿಗೆ ಮನವರಿಕೆ ಮಾಡಿಕೊಡುತ್ತಾನೆ. ಅವನ
ಕೋರಿಕೆಯಂತೆ ಅವನಿಗೆ ದೀಕ್ಷಾಸ್ನಾನವನ್ನೂ ಮಾಡಿಸುತ್ತಾನೆ.
ದೀಕ್ಷಾಸ್ನಾನದ ಬಳಿಕ ನೀರಿನಿಂದ ತಲೆಯೆತ್ತಿದ
ಅಧಿಕಾರಿ ವಿಸ್ಮಿತನಾಗುವಂತೆ ಫಿಲಿಪ್ಪನು ಅಲ್ಲಿಂದ ಅದೃಶ್ಯನಾಗಿ ಹೋಗಿರುತ್ತಾನೆ. 'ಯೇಸುಕ್ರಿಸ್ತರ ಆತ್ಮ
ಅವನನ್ನು ಎತ್ತಿಕೊಂಡು ಹೋಗುತ್ತದೆ'(ಪ್ರೇಷಿತ8:4-40). ಮುಂದೆ ಫಿಲಿಪ್ಪನು ಅಜೋತ್
ಎಂಬ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಲ್ಲಿಂದ ಸೆಜರೇಯವನ್ನು
ತಲುಪುವವರೆಗೆ ಅನೇಕ ಊರುಗಳಲ್ಲಿ ಶುಭಸಂದೇಶವನ್ನು
ಸಾರುತ್ತಾನೆ,
ಫಿಲಿಪ್ಪನನ್ನು
ಶಿಲುಬೆಗೆ ಏರಿಸಲಾಯಿತು ಎನ್ನುವ ಒಂದು ವದಂತಿಯಿದೆ.
ಇನ್ನೊಂದು ವದಂತಿಯ ಪ್ರಕಾರ ಫಿಲಿಪ್ಪನ
ಶಿರಚ್ಛೇದನ ಮಾಡಲಾಯಿತು ಎನ್ನಲಾಗುತ್ತದೆ. ಇವೆರಡರಲ್ಲಿ ಯಾವುದು ನಿಜವಾದರೂ ಫಿಲಿಪ್ಪನು
ಹುತಾತ್ಮನಾದಂತೆಯೇ.
ಮೇ
3ರಂದು ಸಂತ ಫಿಲಿಪ್ಪನ ಹಬ್ಬ.
‘ಲತೀನ್ ಶಿಲುಬೆ’ ಸಂತ ಫಿಲಿಪ್ಪನ
ಚಿಹ್ನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ