ಪರ್ಣಕುಟೀರಗಳ ಹಬ್ಬ

ಈಜಿಪ್ಟ್ ದಾಸ್ಯದಿಂದ ವಿಮೋಚಿತರಾಗಿ ಬಂದ ಯೆಹೂದ್ಯರು ನಲ್ವತ್ತು ವರ್ಷಗಳ ಕಾಲ ತಂಗುತ್ತಿದ್ದುದು ತಾತ್ಕಾಲಿಕ ಗುಡಾರ(ಡೇರೆ)ಗಳಲ್ಲಿ. ಡೇರೆಗಳನ್ನು ಪರ್ಣಕುಟೀರಗಳೆಂದೂ ಕರೆಯುತ್ತಾರೆ. ಇವುಗಳನ್ನು ಬೆಂಗಾಡಿನಲ್ಲಿ ನಿರ್ಮಿಸಿದುದರ ನೆನಪಿಗಾಗಿ ಆಚರಿಸುವ ಹಬ್ಬವೇ, 'ಗುಡಾರಗಳ ಹಬ್ಬ'.  ಹಬ್ಬವನ್ನು ಹೀಬ್ರೂ ಭಾಷೆಯಲ್ಲಿ 'ಸುಕ್ಕೋತ್‌‌' ಎಂದು ಕರೆಯುತ್ತಾರೆ. ನೈಜವಾಗಿ ಹಬ್ಬವು ಸುಗ್ಗಿಯ ಹಬ್ಬವಾಗಿದೆ.

'ಬಿತ್ತನೆ ಮಾಡಿದ ಹೊಲಗದ್ದೆಗಳಲ್ಲಿ ಮೊದಲ ಫಲ ದೊರೆತಾಗ ಇಲ್ಲವೇ ವರ್ಷದ ಕೊನೆಯಲ್ಲಿ ಹೊಲ-ತೋಟಗಳಿಂದ ಬೆಳೆಯನ್ನು ಸಂಗ್ರಹಿಸುವಾಗ ಸುಗ್ಗಿಯ ಹಬ್ಬವನ್ನು ಆಚರಿಸಬೇಕು; ಹೀಗೆ ನನ್ನ ಸನ್ನಿಧಿಗೆ ಬರಬೇಕು' ಎಂದು ಹೀಬ್ರೂ ಜನಾಂಗಕ್ಕೆ ಮೋಸೆಸ ಮೂಲಕ ದೇವರು ಆಜ್ಞಾಪಿಸುತ್ತಾರೆ, ಎಂಬುದನ್ನು 'ವಿಮೋಚನಾ ಕಾಂಡ'ದಲ್ಲಿ ನೋಡಬಹುದು(23:16). ಅಂತೆಯೇ, 'ಏಳನೆಯ ತಿಂಗಳ ಹದಿನೈದನೆಯ ದಿನದಿಂದ ಆರಂಭವಾಗಿ ಏಳು ದಿನಗಳ ಕಾಲ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು' ಎನ್ನುತ್ತದೆ 'ಯಾಜಕಕಾಂಡ'(23:34). 'ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರೇಲರು ಪರ್ಣಕುಟೀರಗಳಲ್ಲಿ ವಾಸಿಸಬೇಕಾಗಿತ್ತು. ನಿಯಮದ ಪ್ರಕಾರ ಪರ್ಣಕುಟೀರಗಳ ನಿರ್ಮಾಣಕ್ಕಾಗಿ ಗುಡ್ಡಕ್ಕೆ ಹೋಗಿ ಓಲಿವ್‌, ಕಾಡು ಓಲಿವ್‌, ಸುಗಂಧ, ಖರ್ಜೂರ ಮುಂತಾದ ಮರಗಳ ದಟ್ಟವಾದ ಎಲೆಗಳ ಕೊಂಬೆಗಳನ್ನು ತರಬೇಕಾಗಿತ್ತು,' ಎನ್ನುತ್ತದೆ ನೆಹೆಮೀಯ ಪ್ರವಾದಿಯ ಗ್ರಂಥ(8:14). ಯೆಹೂದ್ಯರ ಪಂಚಾಂಗದ ಅನುಸಾರ 'ತಿಸ್ರಿ' ಮಾಸದ 15ನೇ ದಿನದಿಂದ 23ನೇ ದಿನಗಳ ನಡುವೆ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಏಳು ದಿನಗಳ ಹಬ್ಬ. ದಿನದಿಂದ ದಿನಕ್ಕೆ ಹಬ್ಬದ ಆಚರಣೆಯು ಒಂದೊಂದಾಗಿ ಅದರ ಕವಚಗಳನ್ನು ತೆರೆದಂತೆ ವ್ಯತ್ಯಸ್ತವಾಗುತ್ತಾ ಹೋಗುತ್ತದೆ. ಅಂತಿಮ ದಿನದ ಆಚರಣೆಯೇ ಅತ್ಯಂತ ವಿಜೃಂಬಣೆಯ ಹಬ್ಬ. ಹಬ್ಬದ ಸಂದರ್ಭದಲ್ಲಿ ಯೆಹೂದ್ಯರ ಮನೆಮನೆಗಳಲ್ಲಿ ಗುಡಾರಗಳ ಮಾದರಿಗಳನ್ನು ಮಾಡಿ ಇಡಲಾಗುತ್ತದೆ. ಕೆಲವರು ಇಂತಹ ಗುಡಾರಗಳಲ್ಲಿ ವಾಸವನ್ನೂ ಮಾಡುವುದಿದೆ.

ಇಷ್ಟೆಲ್ಲಾ ನಿಯಮಗಳಿದ್ದರೂ ಪರ್ಣಕುಟೀರಗಳ ಹಬ್ಬವನ್ನು ಸರಿಯಾದ ರೀತಿಯಲ್ಲಿ ಆಚರಿಸಲು ಆರಂಭಿಸಿದ್ದು ಇಸ್ರಯೇಲರು ಬ್ಯಾಬಿಲೋನಿನ ಬಂಧನದಿಂದ ಬಿಡುಗಡೆಯಾದ ನಂತರವೇ ಇರಬೇಕು. ನೆಹೆಮೀಯನ ಗ್ರಂಥವು ಇದನ್ನು ಸ್ಪಷ್ಟಪಡಿಸುತ್ತದೆ. ಮೋಸೆಸ ಉತ್ತರಾಧಿಕಾರಿಯಾದ ನೂನನ ಮಗ ಯೆಹೋಶುವ ಕಾಲದಿಂದ ಇಸ್ರಯೇಲರು ಬ್ಯಾಬಿಲೋನಿಗೆ ಸೆರೆಹೋದ ದಿನಗಳವರೆಗೂ ಪರ್ಣಕುಟೀರಗಳ ಹಬ್ಬವನ್ನು ಆಚರಿಸಿರಲಿಲ್ಲವೆಂಬುದನ್ನು ಗ್ರಂಥವು ಹೇಳುತ್ತದೆ(ನೆಹೆಮೀಯ 8:17).

ಯೊವಾನ್ನ ಸುಸಂದೇಶದಲ್ಲೂ ಪರ್ಣಕುಟೀರಗಳ ಹಬ್ಬದ ಕುರಿತು ಅತ್ಯಲ್ಪ ವಿವರ ಲಭ್ಯವಿದೆ; 'ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಸಮೀಪಿಸುತ್ತಿತ್ತು'. ಯೇಸು ಗಲಿಲೇಯದಲ್ಲಿದ್ದಾಗ ಹಬ್ಬದ ಸಮಯದಲ್ಲಿ ಅವರ ಸಹೋದರರು, "'ನೀನು ಜುದೇಯಕ್ಕೆ ಹೋಗು; ಅಲ್ಲಿ ನೀನು ಮಾಡುವುದನ್ನೆಲ್ಲಾ ನಿನ್ನ ಅನುಯಾಯಿಗಳು ನೋಡಲಿ", ಎನ್ನುತ್ತಾರೆ. ಅದಕ್ಕೆ ಯೇಸು, "ನನಗೆ ಸೂಕ್ತ ಸಮಯವಿನ್ನೂ ಬಂದಿಲ್ಲ. ನಿಮಗಾದರೋ ಎಲ್ಲಾ ಸಮಯವೂ ಒಂದೇ...ಹಬ್ಬಕ್ಕೆ ನೀವೇ ಹೋಗಿರಿ. ನನಗೆ ಸಮಯವು ಇನ್ನೂ ಬಂದಿಲ್ಲವಾದ ಕಾರಣ ನಾನು ಹಬ್ಬಕ್ಕೆ ಈಗ ಹೋಗುವುದಿಲ್ಲ," ಎಂದು ಹೇಳಿ ಯೇಸು ಗಲಿಲೇಯದಲ್ಲೇ ಉಳಿದುಕೊಂಡರು' ಎನ್ನುತ್ತದೆ ಯೊವಾನ್ನನ ಸುಸಂದೇಶ(7:2-9).

ಇದೇ ದಿನದಂದು ಯೇಸುವಿನ ಮಾತೆ ಮರಿಯಾ ಹಾಗೂ ಸೋದರರೂ ಸೇರಿದಂತೆ ಕ್ರೈಸ್ತಸಭೆಯಲ್ಲಿದ್ದ ನೂರಾಇಪ್ಪತ್ತು ಮಂದಿ ಕ್ರೈಸ್ತವಿಶ್ವಾಸಿಗಳ ಮೇಲೆ ಅಗ್ನಿಜ್ವಾಲೆಯ ರೂಪದಲ್ಲಿ 'ಪವಿತ್ರಾತ್ಮ'ರು ಇಳಿದು ಬಂದಿದ್ದರು(ಪ್ರೇಷಿತರು2:1-4). ಇದೇ ಕಾರಣಕ್ಕಾಗಿ ಪಂಚಾಶತ್ತಮ ದಿನವನ್ನು ಕ್ರೈಸ್ತರು 'ಪವಿತ್ರಾತ್ಮರ ಹಬ್ಬ'ವನ್ನಾಗಿ ಆಚರಿಸುತ್ತಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ