ಕಾಯಫಾಸ್‌

ಧೂರ್ತತೆಗೆ ಮತ್ತೊಂದು ಹೆಸರು 'ಕಾಯಫಾ'. ಈತನಿಗೆ ರೋಮನರನ್ನು ಕಂಡರೆ ಕಡುವೈರ. ಆದರೆ 'ರೋಮ್‌ ಚಕ್ರವರ್ತಿಯ ಹೊರತು ನಮಗೆ ಬೇರೆ ಅರಸನಿಲ್ಲ' ಎಂದು ಬಡಾಯಿ ಬಿಡುತ್ತಾನೆ. ರೋಮನರ ವಿರುದ್ಧ ಮಾತ್ರವಲ್ಲ ಯೇಸುವಿನ ವಿರುದ್ಧವೂ ಈತ ಪಿತೂರಿ ಮಾಡುತ್ತಾನೆ; ಗಲಭೆಗಳನ್ನೂ ಮಾಡಿಸುತ್ತಾನೆ. ತನಗಿಷ್ಟವಿಲ್ಲದ ಮಾತುಗಳು ಕೇಳಿ ಬಂದಾಗ ತನ್ನ ಉಡುಪನ್ನೂ ಹರಿದು ಬಿಸಾಡುತ್ತಾನೆ. ದ್ವಂದ್ವ ಹಾಗೂ ವಿಲಕ್ಷಣ ವ್ಯಕ್ತಿತ್ವವುಳ್ಳ ಈತ ಜೆರುಸಲೇಮಿನ ಪ್ರಧಾನ ಅರ್ಚಕನ ಹುದ್ದೆಗೆ ಏರಿದ್ದು ಒಂದು ವಿಪರ್ಯಾಸ.

ಕಾಯಫಾಸ್‌ ಹಿಂದಿನ ಪ್ರಧಾನ ಯಾಜಕ ಆನಾಸ್‌ನ ಅಳಿಯ(ಯೊವಾ.18:13). ಈತನ ಪೂರ್ಣ ಹೆಸರು ಜೋಸೆಫ್‌ ಕಾಯಫಾಸ್‌. ಪೋಂತಿಯುಸ್‌ ಪಿಲಾತನಿಗೂ ಮೊದಲು ಜುದೇಯದ ರಾಜ್ಯಪಾಲನಾಗಿದ್ದ ವಲೇರಿಯುಸ್‌ ಗ್ರೇಟಸ್‌ನ ಕಾಲದಲ್ಲಿ ಈತ ಮಹಾದೇಗುಲದ ಪ್ರಧಾನ ಯಾಜಕನಾಗುತ್ತಾನೆ. ಆದರೆ ಪಿಲಾತನಿಗೂ ಈತನಿಗೂ ಗಳಸ್ಯ ಕಂಠಸ್ಯ ಸ್ನೇಹವಿತ್ತು. ಈತನೊಬ್ಬ ಸದ್ದೂಕಾಯ(ಪ್ರೇ.ಕಾ.5:17).

ಕಾಯಫನು ಪ್ರಧಾನ ಯಾಜಕನಾದದ್ದು ಕ್ರಿ.ಶ.18ರಲ್ಲಿ ಎನ್ನುತ್ತದೆ ಒಂದು ಮಾಹಿತಿ. ಇನ್ನೊಂದು ಮಾಹಿತಿಯು ಕ್ರಿ.ಶ. 26ರಲ್ಲಿ ಎನ್ನುತ್ತದೆ. ಯೊವಾನ್ನನ ಸುಸಂದೇಶದ ಪ್ರಕಾರ ಕಾಯಫನು ಪ್ರಧಾನ ಯಾಜಕನಾದದ್ದುಯೇಸು ಶಿಲುಬೆಗೆ ಏರಿದ ವರ್ಷ ಅಥವಾ ಅದರ ಹಿಂದಿನ ವರ್ಷ. ಇದು ನಿಜವೇ ಆಗಿದ್ದಲ್ಲಿ ಕ್ರಿ.ಶ. 30 ಅಥವಾ 31ರಲ್ಲಿ ಅವನು ಪ್ರಧಾನಯಾಜಕನಾಗುತ್ತಾನೆ. ಈ ಹುದ್ದೆಯಲ್ಲಿ ಅವನಿದ್ದುದು ಕೇವಲ 6 ವರ್ಷಗಳು ಮಾತ್ರ. 

ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದ ಯೇಸುವನ್ನು ಯೆಹೂದ್ಯರೆಲ್ಲಾ ವಿಶ್ವಾಸಿಸತೊಡಗಿದಾಗ ಆತಂಕಕ್ಕೊಳಗಾದ ಕಾಯಫ ರಾಷ್ಟ್ರದ್ರೋಹ ಮತ್ತು ಧರ್ಮದ್ರೋಹದ ಆಪಾದನೆಗಳನ್ನು ಯೇಸುವಿನ ಮೇಲೆ ಹೊರಿಸುತ್ತಾನೆ, "ಈತನನ್ನು ಹೀಗೆಯೇ ಬಿಟ್ಟರೆ ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು," ಎಂದು ಯೆಹೂದ್ಯರನ್ನು ಯೇಸುವಿನ ವಿರುದ್ಧ ಪ್ರಚೋದಿಸಿ ಎತ್ತಿ ಕಟ್ಟುತ್ತಾನೆ. ಅದೇ ಕಾಯಫನು ಮುಂದೆ ಹೇಗೆ ಬಣ್ಣ ಬದಲಾಯಿಸುತ್ತಾನೆಂದರೆ; ಬಂಧಿಸಿ ತಂದಿದ್ದ ಯೇಸುವಿನ ವಿಚಾರಣೆಯನ್ನು ಪಿಲಾತನು ಕೈಗೊಂಡಿದ್ದಾಗ, ಹೊರಗಿದ್ದ ಯೆಹೂದ್ಯರ ಕೈಯಲ್ಲಿ, "ಕೊಲ್ಲಿರಿ, ಕೊಲ್ಲರಿ, ಶಿಲುಬೆಗೇರಿಸಿರಿ" ಎಂದು ಗಲಭೆ ಮಾಡಿಸುತ್ತಾನೆ.

ಆಗ ಪಿಲಾತನು, "ನಿಮ್ಮ ಅರಸನನ್ನು ಶಿಲುಬೆಗೇರಿಸಲೇ?" ಎಂದು ಪ್ರಶ್ನಿಸಿದಾಗ ಸನಿಹದಲ್ಲೇ ಇದ್ದ ಕಾಯಫನು, "ರೋಮ್‌ ಚಕ್ರವರ್ತಿಯ ಹೊರತು ನಮಗೆ ಬೇರೆ ಅರಸನಿಲ್ಲ," ಎನ್ನುವ ಮೂಲಕ ತಾನು ರೋಮನರ ಪರ ಎಂಬುದಾಗಿ ತೋರ್ಪಡಿಸಿಕೊಳ್ಳುತ್ತಾನೆ(ಯೊವಾ.9:15). 

ತಾಳ್ಮೆ, ಸಹನೆ ಈತನಿಗೆ ಲವಲೇಶವೂ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಇನ್ನೊಂದು ನಿದರ್ಶನವಿದೆ. ಯೇಸುವಿನ ವಿಚಾರಣೆಯನ್ನು ನಡೆಸುತ್ತಿದ್ದ ಕಾಯಫನಿಗೆ ಯೇಸು, "ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ," ಎಂದಾಗ ಕೋಪದಿಂದ ಆತ ತನ್ನ ಉಡುಪನ್ನು ಹರಿದುಕೊಳ್ಳುವ ಮಟ್ಟಕ್ಕೆ ಇಳಿಯುತ್ತಾನೆ(ಮತ್ತಾ.26:65). ಅಲ್ಲದೆ ಯೇಸುವನ್ನು ಕೊಲ್ಲಿಸಿ ಬರಬ್ಬನನ್ನು ಬಿಡುಗಡೆಗೊಳಿಸಲು ಕೇಳುವಂತೆ ಜನರನ್ನೂ ಎತ್ತಿ ಕಟ್ಟುತ್ತಾನೆ(ಮತ್ತಾ.27:20).

ಯೇಸು ಶಿಲುಬೆಗೇರಿದ ನಂತರವೂ ಕಾಯಫನ ಅಟ್ಟಹಾಸ ನಿಲ್ಲುವುದಿಲ್ಲ. ಯೇಸುವಿನ ಅನುಯಾಯಿಗಳಿಗೂ ಈತ ಕಿರುಕುಳ ನೀಡುತ್ತಾನೆ. ಪೇತ್ರ ಮತ್ತು ಯೊವಾನ್ನರನ್ನು ಬಂಧನಕ್ಕೀಡು ಮಾಡುತ್ತಾನೆ. ಆದರೆ ವಿಶ್ವಾಸಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದುದನ್ನು ಕಂಡು ಕಂಗಾಲಾಗುತ್ತಾನೆ(ಪ್ರೇ.ಕಾ.4:3,4). ಸ್ಟೀಫನನ ಸಾವಿನ ನೆತ್ತರು ಇವನ ಅಂಗಿಗಳಿಗೆ ಮೆತ್ತುತ್ತದೆ(ಪ್ರೇ.ಕಾ.7:1). ಯೇಸುವಿನ ಅನುಯಾಯಿಗಳನ್ನು ಹಿಂಸಿಸಲೂ, ಸಂಹರಿಸಲೂ, ದಮಾಸ್ಕಸ್‌ನಿಂದ ಅವರನ್ನು ಎಳೆದು ತರಲೂ ಅಗತ್ಯವಾದ ಕಾಗದ ಪತ್ರಗಳನ್ನು ಸೌಲನಿಗೆ ನೀಡಿದ್ದು ಇದೇ ಕಾಯಫ. ಆದರೆ ಯೇಸುವಿನ ಅನುಯಾಯಿಗಳನ್ನು ಬಂಧಿಸಿ ತರಲು ಹೊರಟ ಸೌಲ ಶಿಲುಬೆಯಲ್ಲಿ ಮೃತಪಟ್ಟು ಮೂರನೆಯ ದಿನ ಪುನರುತ್ಥಾನ ಹೊಂದಿ ಸ್ವರ್ಗಕೇರಿ ಹೋಗಿದ್ದ ಯೇಸುವಿನ ಅನುಯಾಯಿಯಾಗಿ ಪರಿವರ್ತಿತನಾಗುತ್ತಾನೆ.

ಕಾಯಫನು ಬಹುಕಾಲ  ಪ್ರಧಾನ ಯಾಜಕನ ಹುದ್ದೆಯಲ್ಲಿ ಉಳಿಯುವುದಿಲ್ಲ. ವೈಟೇಲಿಯುಸ್‌ ಎಂಬ ರೋಮನ್ ಆಧಿಕಾರಿ ಅವನನ್ನು ಪ್ರಧಾನ ಯಾಜಕನ ಹುದ್ದೆಯಿಂದ ಕಿತ್ತುಹಾಕುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ