ಸೊಲೊಮೋನನ ದೇಗುಲದ ಮಾದರಿ |
ಹೀಬ್ರೂ
ಭಾಷೆಯಲ್ಲಿ 'ದೇಗುಲ' ಪದವನ್ನು 'ಬೆತ್
ಕೆನೆಸ್ಸೆತ್' ಎನ್ನಲಾಗುತ್ತದೆ. ಗ್ರೀಕ್ ಭಾಷೆಯಲ್ಲಿ 'ಸಿನಗೊಗ್'
ಎನ್ನುತ್ತಾರೆ. ಇದನ್ನು 'ದಿವ್ಯನೆಲೆ', 'ಆರಾಧನಾಗೃಹ',
'ಜೊತೆಗೂಡುವ ತಾಣ' ಎಂದೂ ಅರ್ಥೈಸಬಹುದು.
ದೇವರಿಗಾಗಿ
ಒಂದು ಆಲಯವನ್ನು ಕಟ್ಟಿಸಬೇಕೆಂಬ ಹೆಬ್ಬಯಕೆ ಅರಸ ದಾವೀದನದಾಗಿರುತ್ತದೆ. ಮೋಸೆಸನ
ಕಾಲದಿಂದಲೂ ಗುಡಾರದಲ್ಲಿರಿಸಲಾಗಿದ್ದ 'ಒಡಂಬಡಿಕೆಯ ಮಂಜೂಷ'ವನ್ನು ಆ
ಆಲಯದಲ್ಲಿರಿಸಬೇಕೆಂಬ ಆಲೋಚನೆ ಅವನದಾಗಿತ್ತು. ಅವನು
ಜೆಬೂಸಿಯಾದ ಅರೌನ(ಒರ್ನಾನ್)ನಿಂದ
ಮೊರೀಯ ಎಂಬ ಬೆಟ್ಟದ ಮೇಲೆ
ಒಂದು ನಿವೇಶನವನ್ನು ಖರೀದಿಸಿ ಅಲ್ಲೊಂದು ಬಲಿಪೀಠವನ್ನು
ಕಟ್ಟಿಸುತ್ತಾನೆ. ಆ ಬಲಿಪೀಠದಲ್ಲಿ ಮೊದಲು
ಬಲಿಯರ್ಪಿಸಿ ಅನಂತರ ದೇಗುಲದ ನಿರ್ಮಾಣಕ್ಕೆ
ಅಗತ್ಯವಾದ ಸಾಮಾನು ಸರಂಜಾಮುಗಳನ್ನು ಸಿದ್ಧಪಡಿಸುತ್ತಾನೆ.
ಆದರೆ ದೇಗುಲ ನಿರ್ಮಾಣಕ್ಕೆ ಸರ್ವೇಶ್ವರ
ದೇವರ ಅನುಮತಿ ಅವನಿಗೆ ದೊರಕುವುದಿಲ್ಲ.
ದಾವೀದನ
ಬಳಿಕ ಅರಸನಾದ ಸೊಲೊಮೋನನು ತನ್ನ
ಆಳ್ವಿಕೆಯ ನಾಲ್ಕನೆಯ ವರ್ಷ(ಕ್ರಿ.ಪೂ.1034)ದಲ್ಲಿ ದೇಗುಲವನ್ನು ಕಟ್ಟಿಸಲು
ಆರಂಭಿಸುತ್ತಾನೆ. ವೈಶಾಖ ಮಾಸದಲ್ಲಿ ದೇಗುಲಕ್ಕೆ
ಅಡಿಪಾಯವನ್ನು ಹಾಕಿಸುತ್ತಾನೆ. ಸಾಂಗೋಪಾಂಗವಾಗಿ ನಡೆದ ನಿರ್ಮಾಣಕಾರ್ಯದಿಂದಾಗಿ ಯೋಜನೆಯ
ಪ್ರಕಾರ ಏಳನೆಯ ವರ್ಷದ ಎಂಟನೆಯ
ತಿಂಗಳಾದ ಕಾರ್ತಿಕಮಾಸದಲ್ಲಿ ದೇಗುಲವು ಅತ್ಯದ್ಭುತವಾಗಿ
ಸಿದ್ದಗೊಳ್ಳುತ್ತದೆ
ದೇಗುಲ
ನಿರ್ಮಾಣವಾದ 420 ವರ್ಷಗಳ ಬಳಿಕೆ ಜೆರುಸಲೇಮಿನ
ಪತನವಾಗುತ್ತದೆ. ಬ್ಯಾಬಿಲೋನಿಯಾದ ದೊರೆ ನೆಬೂಕದ್ನೆಚ್ಚರನು ದೇಗುಲದ
ಆಸ್ತಿಪಾಸ್ತಿಗಳನು ಲೂಟಿಮಾಡಿ ದೇಗುಲವನ್ನು ನಾಶಪಡಿಸುತ್ತಾನೆ. ಯೆಹೂದ್ಯರನ್ನು ಬಂಧಿಸಿ ಬ್ಯಾಬಿಲೋನಿಗೆ ಸಾಗಿಸುತ್ತಾನೆ.
ಬ್ಯಾಬಿಲೋನಿನಿಂದ
ಬಿಡುಗಡೆ ಹೊಂದಿ ಹೊರಬಂದ ಮೊದಲ
ತಂಡದಲ್ಲಿದ್ದ ಜೆರುಬ್ಬಾಬೆಲ್ ಮತ್ತು ಜೆಷುವಾ ಎಂಬುವವರು ದೇಗುಲದ
ನಿರ್ಮಾಣಕಾರ್ಯಕ್ಕೆ ಮೊದಲು ಕೈಹಾಕುತ್ತಾರೆ.
ದೇಗುಲಕ್ಕೆ ಹೊಸ ಅಡಿಪಾಯವನ್ನು ಹಾಕಲಾಗುತ್ತದೆ.
ಕ್ರಿ.ಪೂ. 515ರಲ್ಲಿ ಹೊಸದೇಗುಲದ
ನಿರ್ಮಾಣಕಾರ್ಯ ಮುಗಿದು ಉದ್ಘಾಟನೆಯಾಗುತ್ತದೆ. ಉದ್ಘಾಟನೆಯ
ಬೆನ್ನ ಹಿಂದೆಯೇ ಪಾಸ್ಕಹಬ್ಬದ ಆಚರಣೆಯೂ
ನೆರವೇರುತ್ತದೆ. ಆದರೆ ಒಡಂಬಡಿಕೆಯ ಮಂಜೂಷ ದ್ವಿತೀಯ ದೇಗುಲದಲ್ಲಿ ಇರುವುದಿಲ್ಲ. ಪ್ರಾಯಶಃ ನೆಬೂಕದ್ನೆಚ್ಚರನ ಆಕ್ರಮಣಕ್ಕೂ
ಮೊದಲೇ ಅದು ಅಲ್ಲಿಂದ ಸ್ಥಳಾಂತರಗೊಂಡಿರಬೇಕು.
ದ್ವಿತೀಯ
ದೇಗುಲವೂ ಕ್ರಾಸಸ್ ಎಂಬುವವನಿಂದ ಲೂಟಿಯಾಗುತ್ತದೆ. ಮುಂದೆ ಹೆರೋದನು ಆ
ದೇಗುಲವನ್ನು ಪುನರ್ ನಿರ್ಮಾಣಗೊಳಿಸಿದನಾದರೂ ಕ್ರಿ.ಶ.70ರಲ್ಲಿ ಅದೂ
ನಾಶವಾಗುತ್ತದೆ. 'ಇಲ್ಲಿ ಕಲ್ಲುಗಳ ಮೇಲೆ
ಕಲ್ಲು ಉಳಿಯುವುದಿಲ್ಲ' ಎಂದು ಯೇಸು ಹಿಂದೊಮ್ಮೆ ನುಡಿದ ಆ ಭವಿಷ್ಯದ
ಮಾತುಗಳು ನಿಜವಾಗುತ್ತದೆ. ಈಗ ಉಳಿದಿರುವುದು ದೇಗುಲಕ್ಕೆ
ಸಂಬಂಧಿಸಿದ ಪೂರ್ವದ ಗೋಡೆಯೊಂದೆ. ಇಂದು
ಯೆಹೂದ್ಯರು ಆ ಗೋಡೆಗೆ ಮುಖಮಾಡಿ
ಪ್ರಾರ್ಥಿಸುತ್ತಾರೆ. ಇದರ ಸನಿಹದಲ್ಲೇ 'ಡೋಮ್ ಆಫ್ ದ
ರಾಕ್' ಎಂದು ಕರೆಯಲಾಗುವ ಇಸ್ಲಾಮಿಯರ
ಮಸೀದಿಯಿದೆ.
ದ್ವಿತೀಯ ದೇಗುಲದ ಮಾದರಿ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ