ಯೆಹೂದ್ಯರ
ಹನ್ನೆರಡು ಪಂಗಡಗಳಲ್ಲಿ 'ಲೇವಿ'ಯರೆಂದು ಕರೆಯಲಾಗುವ
ಪಂಗಡವೂ ಒಂದು. ಯಕೋಬನಿಗೆ ಹೊಳಪಿನ
ಕಣ್ಣಿನವಳಾದ ಲೇಯಳಲ್ಲಿ ಹುಟ್ಟಿದ ಐವರು ಪುತ್ರರಲ್ಲಿ
ಮೂರನೆಯವನೇ ಈ 'ಲೇವಿ'. 'ಲೇವಿ'ಯ ಹೀಬ್ರೂ ಅರ್ಥ
'ನಿಷ್ಟೆ' ಅಥವಾ 'ಸೇರಿಕೊಂಡದ್ದು' ಎಂಬುದಾಗಿದೆ. ಈ ಲೇವಿಯ ವಂಶಜರನ್ನೇ 'ಲೇವಿಯರು' ಎಂದು ಕರೆಯಲಾಗುತ್ತದೆ. ಈತ
ಹುಟ್ಟಿದ್ದು ; ಮೆಸಪೊಟೇಮಿಯಾದ
'ಖಾರಾನ್' ಎಂಬ ಸ್ಥಳದಲ್ಲಿ. ಇವನ
ಸಹೋದರಿ 'ದೀನಾ'ಳನ್ನು ಹಿವಿಯನಾದ
ಹಮೋರನ ಮಗನೂ ಆ ನಾಡಿಗೆ
ಒಡೆಯನೂ ಆದ ಶೆಕೆಮನು ಅಪವಿತ್ರಗೊಳಿಸಿದ
ಕಾರಣಕ್ಕೆ ಶೆಕೆಮನು ಆಕೆಯಲ್ಲಿ ಮರುಳಾಗಿ
ಮದುವೆಯಾಗಲು ನಿರ್ಧರಿಸಿದ್ದರೂ ಲೇವಿಯನೂ ಅವನ ಸೋದರರೂ
ಕ್ರೋಧದಿಂದ ಹಮೋರ ಮತ್ತು ಶೆಕೆಮನನ್ನೂ
ಹಾಗೂ ಅವನ ಊರಿನ ಗಂಡಸರನ್ನೂ
ಮೋಸದಿಂದ ಕೊಲ್ಲುತ್ತಾರೆ. ವಿಷಯ ತಿಳಿದ ಯಕೋಬನು
ಬಹು ವಿಷಾದ ವ್ಯಕ್ತಪಡಿಸುತ್ತಾನೆ.
ಲೇವಿಯರ
ಮೂರು ಮಕ್ಕಳಾದ 'ಗೆರ್ಷಾಮ್', 'ಕೆಹಾಥ್' ಮತ್ತು 'ಮೆರಾರಿ' ಎಂಬುವವರು
ಲೇವಿಯರ ಪ್ರಮುಖ ವಿಭಾಗಗಳ ಸ್ಥಾಪಕರು. ಮುಂದೆ
ಈ ಮೂರು ವಂಶಸ್ಥರು
ಮೋಸೆಸ್ನ ಕಾಲದಲ್ಲಿ ಸ್ಥಾಪಿಸಲಾದ
ಡೇರೆ ಅಥವಾ ಪರ್ಣಕುಟೀರ(ಗುಡಾರ)ದ ನಾಲ್ಕು ದಿಕ್ಕುಗಳಲ್ಲಿಯೂ
ಸೇವೆಯನ್ನು ಸಲ್ಲಿಸಲು ನೇಮಿತರಾಗುತ್ತಾರೆ. ಪೂರ್ವ ದಿಕ್ಕಿನಲ್ಲಿರುವ ಡೇರೆಯ ಮುಂಭಾಗದಲ್ಲಿ
ಕಹಾಥನ ವಂಶಜನಾದ ಆರೋನ(ಆರೋನನು
ಯಾಜಕತ್ವವನ್ನು ವಹಿಸಿಕೊಂಡ ನಂತರ ಅವನ ವಂಶದವರನ್ನು
'ಲೇವಿ' ಎನ್ನದೆ ಬರಿಯ ಯಾಜಕ
ವಂಶದವರು ಎನ್ನಲಾಗುತ್ತದೆ)ನ ಕುಟುಂಬವು ಯಾಜಕರಾಗಿ
ಕಾರ್ಯ ನಿರ್ವಹಿಸಲು ನಿಂತರೆ, ಕಹಾಥನ ವಂಶದ
ಉಳಿದವರು ದಕ್ಷಿಣ ದಿಕ್ಕಿನಲ್ಲೂ, ಗೆರ್ಷೋನ್ಯರು
ಮತ್ತು ಮೆರಾರಿಯರು ಕ್ರಮವಾಗಿ ಪಶ್ಚಿಮ ಮತ್ತು ಉತ್ತರ
ದಿಕ್ಕುಗಳಲ್ಲಿಯೂ ನಿಲ್ಲುತ್ತಾರೆ. ಲೇವಿಯರೆನ್ನುವ ಈ ಪಂಗಡದವರು ಯೇಸುವಿನ
ಕಾಲದಲ್ಲಿ ಜೆರುಸಲೇಮಿನ ದೇವಾಲಯದಲ್ಲಿ ನಡೆಯುವ ಆರಾಧನಾ ವಿಧಿಗಳಲ್ಲಿ
ಯಾಜಕರಿಗೆ ನೆರವಾಗುತ್ತಿದ್ದರು. ಮೋಸೆಸ್, ಆರೋನ ಮುಂತಾದವರು ಲೇವಿಯ
ವಂಶಜರು ಎನ್ನುವುದು ಗಮನಾರ್ಹ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ