ಸಿನಾಯ್‌

ಅದೊಂದು  ವಿಸ್ತಾರವಾದ  ಮರಳುಗಾಡಿನ  ಭಾಗ. ತ್ರಿಕೋನಾಕೃತಿಯಲ್ಲಿರುವ ಅದು ಒಂದು ಪರ್ಯಾಯ ದ್ವೀಪವೂ ಆಗಿದೆ. ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರವಿದ್ದು, ತ್ರಿಕೋನಾಕಾರದ ಕೆಳಭಾಗದ ಎರಡೂ ಪಕ್ಕದಲ್ಲಿ ಕೆಂಪು ಸಮುದ್ರದ ಕವಲುಗಳು ಆವರಿಸಿಕೊಂಡಿವೆ. ಎಡ ಪಕ್ಕದ ಕವಲನ್ನು ಪ್ರಕೃತಿಯೊಂದಿಗೆ ಸೆಣಸಿ ಕೊರೆದ ಮನುಜ ಅದನ್ನು ಉತ್ತರದ ಮೆಡಿಟರೇನಿಯನ್ ಸಮುದ್ರದೊಂದಿಗೆ ಬೆಸೆದ. ಅಂದಿನಿಂದಲೇ ಐರೋಪ್ಯಕ್ಕೆ ಭಾರತ ಸನಿಹವಾದದ್ದು. ಮಾನವ ಶ್ರಮ ಹಾಗೂ ತಂತ್ರಜ್ಞಾನದ ಸಂಕೇತವಾದ ಅದನ್ನು 'ಸೂಯೆಜ಼್ ಕಾಲುವೆ' ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಪೂರ್ವದಲ್ಲಿರುವ ಇನ್ನೊಂದು ಕವಲು ಈ ಪ್ರದೇಶವನ್ನು ಅರೇಬಿಯಾದಿಂದ ಬೇರ್ಪಡಿಸುತ್ತದೆ. ಕವಲೇ 'ಅಖಾಬ ಕೊಲ್ಲಿ'.

ಪ್ರದೇಶದ ಉತ್ತರ ಬಾಗ ಸಸ್ಯ ಪ್ರಬೇಧಗಳ ಸುಳಿವೇ ಇಲ್ಲದ ಬೆಂಗಾಡು. ಪ್ರಯೋಜನಕ್ಕೆ ಬಾರದ, ಈಜಿಪ್ಟ್‌ನ ಪ್ರಾಂತ್ಯವೂ ಆದ ಬೆಂಗಾಡಿಗಾಗಿ ಎರಡು ರಾಷ್ಟ್ರಗಳ ನಡುವೆ ಕಿತ್ತಾಟ ನಡೆದದ್ದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಬೆಂಗಾಡಿನ ಹೆಸರೇ, 'ಸಿನಾಯ್'.

ಇಲ್ಲಿಯ ಮೂಲನಿವಾಸಿಗಳು ಒಂದೊಮ್ಮೆ ಆರಾಧಿಸುತ್ತಿದ್ದುದು 'ಸಿನ್' ಎಂದು ಕರೆಯಲ್ಪಡುತ್ತಿದ್ದ ಚಂದ್ರ ದೇವತೆಯನ್ನು. ಅದಕ್ಕೆ ಪ್ರದೇಶವನ್ನು 'ಸಿನಾಯ್' ಎಂದು ಕರೆದಿರಬೇಕು. ಅದು ನಿಜವೂ ಹೌದು! ಆದರೆ ಕೆಲವು ಯೆಹೂದ್ಯರ ಪ್ರಕಾರ ಇದು 'ಸಿನ್-ಅಹ್' ಎಂಬ ಹೀಬ್ರೂ ಪದದಿಂದ ಹುಟ್ಟಿದ ಹೆಸರು. 'ಹಗೆತನ' ಎಂಬುದೇ ಅದರರ್ಥ! 'ದೇವರಿಂದ ನೇರವಾಗಿ 'ದಶಾಜ್ಞೆ'(Ten Commandments)ಗಳನ್ನು ಪಡೆದ ಸುಯೋಗ ಹೀಬ್ರೂಗಳದ್ದು. ಅದು ದೊರೆತದ್ದು ಸಿನಾಯ್ನಲ್ಲಿ. ದೇವರ ದಶಾಜ್ಞೆಗಳನ್ನು ಪಡೆದ ಹೀಬ್ರೂಗಳ ಬಗ್ಗೆ ಜಗತ್ತಿಗೆ ಹೊಟ್ಟೆಕಿಚ್ಚು ಮತ್ತು ಹಗೆತನ ಮೂಡಿತು. ಹಾಗಾಗಿ ಹಗೆತನವೇ ಈ ಪ್ರದೇಶದ ಹೆಸರಾಗಿ ಉಳಿಯಿತು', ಎನ್ನುವುದು ಯೆಹೂದ್ಯರ ನಂಬಿಕೆ.


ಆಫ್ರಿಕಾ ಖಂಡದ ಶಿರಭಾಗದ ಸಹರಾ ಎಂಬ ಅಗಾಧವಾದ ಮರುಭೂಮಿಯು ಕೆಂಪು ಸಮುದ್ರವನ್ನು ದಾಟಿ ಈಶಾನ್ಯ ದಿಕ್ಕಿನಲ್ಲಿರುವ ಸಿನಾಯ್ ಪ್ರದೇಶವನ್ನೂ ಆವರಿಸಿದೆ. ಜನವಸತಿ ತೀರಾ ಕಮ್ಮಿ ಇರುವ ಪ್ರದೇಶದಲ್ಲಿ, ಉತ್ತರದ ಮೆಡಿಟರೇನಿಯನ್ ತೀರವನ್ನು ಹೊರತುಪಡಿಸಿದರೆ, ದಕ್ಷಿಣದ ಅಪರೂಪದ 'ಓಯಸಿಸ್'ಗಳ ಸನಿಹವೇ ಕೊಂಚ ಮಟ್ಟಿಗೆ ಜನವಸತಿ ಕಾಣಸಿಗುತ್ತದೆ. ಹೆಚ್ಚಿನ ಸಂಖ್ಯೆಯ ಜನರು 'ಬೆದೂಯಿನ್' ಎಂದು ಕರೆಯಲ್ಪಡುವ ಅಲೆಮಾರಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ