ಆನ್ನಾ, ಆನ್ನಾಸ್

1.  ಆನ್ನಾಹೊಸ ಒಡಂಬಡಿಕೆ ಲೂಕನ ಸುಸಂದೇಶದಲ್ಲಿ ಕಂಡು ಬರುವ 'ಆನ್ನಾ' ಎಂಬ ಹೆಸರು ಓರ್ವ ಪ್ರವಾದಿನಿಯದು. ಈಕೆ ವಿಧವೆ; ಅಶೇರನ ವಂಶಕ್ಕೆ ಸೇರಿದ ಫನುವೇಲ ಎಂಬಾತನ ಮಗಳು. ಮದುವೆಯಾಗಿ ಗಂಡನ ಜೊತೆಗೆ ಬಾಳಿದ್ದು ಕೇವಲ ಏಳು ವರ್ಷಗಳು ಮಾತ್ರ. ಆದರೆ ಆಕೆಯ ಗಂಡನ ಹೆಸರು ಬೈಬಲ್‌ನಲ್ಲಿ ಎಲ್ಲೂ ಕಾಣಲು ಸಿಗುವುದಿಲ್ಲ. ವೈಧವ್ಯದೊಂದಿಗೆ ಆಕೆ ಮಹಾದೇಗುಲದ ಸೋಪಾನವನ್ನೇರುತ್ತಾಳೆ. ದೇವರ ಸನ್ನಿಧಿಯಲ್ಲಿ ಕಾಲ ಕಳೆಯತೊಡಗುತ್ತಾಳೆ. ದೇಗುಲವನ್ನು ತೊರೆದು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ. ಹಗಲಿರುಳು ಉಪವಾಸ, ಪ್ರಾರ್ಥನೆ ಮತ್ತು ದೇವರ ಆರಾಧನೆಯಲ್ಲಿ ನಿರತಳಾಗಿರುತ್ತಿದ್ದಳು.

ಜೋಸೆಫ್ಮತ್ತು ಮೇರಿಯು ಯೇಸುಬಾಲರನ್ನು ಮಹಾದೇಗುಲಕ್ಕೆ ಸಮರ್ಪಿಸಲು ಬಂದಾಗ ಆಕೆಗೆ ಎಂಬತ್ನಾಲ್ಕರ ಹರೆಯ. ಶಿಶು ಯೇಸುವನ್ನು ಕಂಡ ಅವಳು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದವರಿಗೆಲ್ಲಾ ಶಿಶುವಿನ ಬಗ್ಗೆ ಹೇಳುತ್ತಾಳೆ. ಆಕೆ ಮಹಾದೇಗುಲದಲ್ಲಿದ್ದುದರಿಂದಲೇ ಯೇಸುವನ್ನು ಕಾಣಲು ಸಾಧ್ಯವಾಗಿದ್ದು. ಈಕೆಯ ಬಗೆಗಿನ ವಿವರಗಳು ಲಭ್ಯವಾಗುವುದು ಲೂಕನ ಸುಸಂದೇಶದಲ್ಲಿ ಮಾತ್ರವೇ(ಲೂಕ 2:36-38).


2ಆನ್ನಾಸ್ : ಯೇಸುವಿನ ಬಾಲ್ಯಕಾಲದಲ್ಲಿ ಜೆರುಸಲೇಂ ಮಹಾದೇಗುಲ ಪ್ರಧಾನ ಅರ್ಚಕನಾಗಿದ್ದವನು ‘ಆನ್ನಾಸ್‌’. ‘ಕೃಪೆದೋರುವುದು’, ‘ದಯೆ ತೋರುವುದು’, ‘ಅನುಗ್ರಹಿಸುವುದು’ ಎಂಬ ಅರ್ಥಗಳನ್ನು ಈತನ ಹೆಸರಿನ ಪದವು ನೀಡುತ್ತದೆ. ಕ್ರಿ.. 6 ಅಥವಾ 7ರಲ್ಲಿ ಸಿರಿಯಾದ ರಾಜ್ಯಪಾಲ 'ಕ್ವಿರೇನಿಯುಸ್‌' ಎಂಬಾತನ ಕೃಪೆಯಿಂದ ಈತನು ಮಹಾದೇಗುಲ ಅತ್ಯುನ್ನತ(ಪ್ರಧಾನ) ಯಾಜಕನಾಗಿ ನೇಮಿಸಲ್ಪಟ್ಟಿರುತ್ತಾನೆ. ಕ್ರಿ.. 15ರವರೆಗೆ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾನೆ. ಕಾಲದ ಯಾಜಕರಲ್ಲಿ ಧೀರ್ಘಾವಧಿಯ ಕಾಲ ಮಹಾಯಾಜಕನಾಗಿದ್ದ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದ.

ಬಾಲಯೇಸುವಿನೊಂದಿಗೆ ಜೋಸೆಫ್‌ ಮತ್ತು ಮೇರಿಯು ಮಹಾದೇಗುಲಕ್ಕೆ ಭೇಟಿಯಿತ್ತು ಹಿಂದಿರುಗಿದಾಗ ಮಹಾದೇಗುಲದಲ್ಲೇ ಯೇಸು ಉಳಿದುಬಿಟ್ಟಿರುತ್ತಾರೆ. ಆನಾಸ್‌ ಆ ಸಮಯದಲ್ಲಿ ಮಹಾದೇಗುಲದ ಪ್ರಧಾನ ಅರ್ಚಕನಾಗಿದ್ದ. ಮುಂದೆ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಎಂಬ ಕಾರಣಕ್ಕೆ ಈತನನ್ನು ಕೆಳಗಿಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಈತನ ಮಕ್ಕಳೂ ಬಳಿಕ ಅಳಿಯ ಕಾಯಫಾಸನೂ ಅಧಿಕಾರದ ಗದ್ದುಗೆಗೆ ಏರುತ್ತಾರೆ. ಇವರೆಲ್ಲರ ಕಾಲದಲ್ಲೂ ಅಧಿಕಾರ ಮತ್ತು ಎಲ್ಲಾ ರೀತಿಯ ಪ್ರಭಾವಗಳಿದ್ದುದು ಆನಾಸ್ ಕೈಯಲ್ಲೇ ಎಂಬುದು ಗಮನಾರ್ಹ. ಈತನ ನಂತರದಲ್ಲಿ ಪ್ರಧಾನ ಅರ್ಚಕರು ಎನಿಸಿಕೊಂಡವರು ಈತನ ಕೈಗೊಂಬೆಗಳಾಗಿದ್ದರಷ್ಟೆ. ಯೇಸುವನ್ನು ಬಂಧಿಸಲು ಕಾರಣನಾದದ್ದು ಕಾಯಫಾಸನೆಂಬುದು ಇತಿಹಾಸವಾದರೂ ಮೊದಲು ಯೇಸುವನ್ನು ಕರೆದೊಯ್ದದ್ದು ಆನಾಸ್ ಬಳಿಗೆ(ಯೊವಾ.18:13). ಆತನಿಂದ ವಿಚಾರಣೆಯಾದ ಬಳಿಕ ನಾಮಕಾವಸ್ಥೆಗೆ ಕಾಯಫನು ವಿಚಾರಣೆ ನಡೆಸಿದ್ದ. ಆದರೆ ಯೇಸುವಿನ ವಿರೋಧಿಗಳಲ್ಲಿ ಕಾಯಫನೇ ಪ್ರಮುಖನಾದವನಾಗಿದ್ದ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ