'ಕಿರ್ಬತ್
ಖುಮ್ರಾನ್' ಎಂಬುದು ಮೃತ ಸಮುದ್ರದ
ವಾಯುವ್ಯ ದಿಕ್ಕಿನಲ್ಲಿರುವ ಒಂದು ಪುಟ್ಟ ಗ್ರಾಮ.
ಇದು ಜೆರಿಕೊ ಪಟ್ಟಣದಿಂದ ಹತ್ತು ಕಿ.ಮೀ.
ದೂರದಲ್ಲಿದೆ. ಮೃತ ಸಮುದ್ರದ ದಂಡೆಯಿಂದ
ಸುಮಾರು ಒಂದೂವರೆ ಕಿ.ಮೀ.
ದೂರದಲ್ಲಿದೆ. ಈ ಗ್ರಾಮದಿಂದ ಮೃತ
ಸಮುದ್ರದತ್ತ ಹೆಜ್ಜೆಗಳನ್ನು ಹಾಕಿದಾಗ ಮುಂದೆ ಸಿಗುವುದೇ
ಮೃತಸಮುದ್ರದ ತಗ್ಗಾದ ಪ್ರದೇಶ. ಆ
ತಗ್ಗಿನಲ್ಲಿ ಹಲವಾರು ಗವಿಗಳಿದ್ದು ಕ್ರಿ.ಶ.1947ರಲ್ಲಿ ಒಮ್ಮೆ
ಬೆದೂಯಿನ್ ಅಲೆಮಾರಿ ಗುಂಪಿನ ಕುರಿಗಾಹಿ
ಹುಡುಗನೊಬ್ಬ ತನ್ನ ಕುರಿಗಳನ್ನು ಮೇಯಿಸುತ್ತಾ
ನಡೆದಿದ್ದಾಗ ದಿಬ್ಬದ ಮೇಲಿದ್ದ ಒಂದು
ಗುಹೆಯೊಳಕ್ಕೆ ಆಕಸ್ಮಿಕವಾಗಿ ಕಲ್ಲೊಂದನ್ನು
ತೆಗೆದು ಎಸೆದ. ಕೂಡಲೇ ಒಳಗಿನಿಂದ
ಯಾವುದೋ ವಸ್ತುವೊಂದು ಒಡೆದು ಹೋದ ಸದ್ದು
ಕೇಳಿಬಂತು. ಕುತೂಹಲಗೊಂಡ ಆ ಹುಡುಗ ಕಷ್ಟಪಟ್ಟು
ಆ ದಿಬ್ಬವನ್ನೇರಿ ಗುಹೆಯೊಳಕ್ಕೆ
ಹೋದ. ಅವನಿಗೆ ಅಲ್ಲಿ ಕಾಣಿಸಿದ್ದು
ಕೆಲವಾರು ಜಾಡಿಗಳು; ಅದರೊಳಗಿದ್ದ ಕೆಲವು, ಬಹುತೇಕ ಚರ್ಮದ
ತೆಳುವಾದ ಸುರುಳಿಗಳು. ಅವನು ಸುರುಳಿಯನ್ನು ಬಿಡಿಸಿ
ನೋಡಿದಾಗ ಅದರಲ್ಲಿ ಅರ್ಥವಾಗದ ಭಾಷೆಯ
ಬರಹಗಳು ಕಾಣಿಸಿದವು. ಅವನು ತಾನು ಕಂಡುದನ್ನು
ತನ್ನ ಗುಂಪಿನ ಹಿರಿಯನಿಗೆ ತಿಳಿಸಿದನಾದರೂ
ಅವರು ಅದರತ್ತ ಹೆಚ್ಚಿನ ಆಸಕ್ತಿಯನ್ನು
ತೋರಲಿಲ್ಲ.
ಕೆಲವು
ದಿನಗಳ ಬಳಿಕ ಅಲ್ಲಿಗೆ ಆಗಮಿಸಿದ
ಪ್ರಾಕ್ತನ ಸಂಶೋಧಕರಿಗೆ ಹೇಗೋ ವಿಷಯ ತಿಳಿದು ಆ ದಿಬ್ಬಗಳನ್ನೇರಿ
ಸಂಶೋಧಿಸಿದಾಗ ಅವರಿಗೆ ಅಚ್ಚರಿಯೊಂದು
ಕಾದಿತ್ತು. ಅಲ್ಲಿದ್ದ
ಹಲವಾರು ಮಣ್ಣಿನ ಜಾಡಿಗಳಲ್ಲಿ ದೊರೆತದ್ದು
ಸುಮಾರು 400 ಚರ್ಮದ ಸುರುಳಿಗಳು! ಮತ್ತಷ್ಟು
ಸಂಶೋಧನೆಗಳನ್ನು ನಡೆಸಿದಾಗ ಅದೇ ಪ್ರದೇಶದಲ್ಲಿ ಇನ್ನೂ
ಹತ್ತು ಗುಹೆಗಳಿರುವುದು ಕಂಡು ಬಂತು; ಮಾತ್ರವಲ್ಲದೆ
ಅಲ್ಲಿ ಇನ್ನೂ ಒಂದಷ್ಟು ಸುರುಳಿಗಳು ಲಭ್ಯವಾದವು.
ಹೀಗೆ
ಕ್ರಿ.ಶ.1947ರಿಂದ ಕ್ರಿ.ಶ.1956ರ ನಡುವೆ ನಡೆಸಿದ
ಅನೇಕ ಸಂಶೋಧನೆಗಳಿಂದ ವಿವಿಧ ಸ್ಥಿತಿಯಲ್ಲಿದ್ದ ಸುಮಾರು
900 ಸುರುಳಿಗಳನ್ನು ಸಂಗ್ರಹಿಸಲಾಯಿತು. ಚರ್ಮದ ಸುರುಳಿಗಳಲ್ಲದೇ ಪಾಪಿರಸ್
ಹಾಗು ಹಿತ್ತಾಳೆಯ ಹಾಳೆಗಳ ಮೇಲೂ ಸಹ
ಕೃತಿಗಳನ್ನು ರಚಿಸಿರುವುದು ಪತ್ತೆಯಾಯಿತು. ಆ ಸುರುಳಿಗಳು ಹೀಬ್ರೂಗಳ
ಪವಿತ್ರ ಗ್ರಂಥದ ಭಾಗಗಳಾಗಿದ್ದವು. 'ಎಸ್ತೆರ್'
ಎಂಬ ಕೃತಿಯನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲಾ ಕೃತಿಗಳೂ ಅಲ್ಲಿ ದೊರೆತಿದ್ದವು.
ವಾಸ್ತವವಾಗಿ ಆ ಗುಹೆಗಳೆಂಬುದು ಯೆಹೂದ್ಯರ
ಧಾರ್ಮಿಕ ವಿಭಾಗವಾದ 'ಎಸಿನ್' ಎಂಬ ಒಂದು
ಗ್ರಂಥಾಲಯವೇ ಆಗಿತ್ತು.
ಪ್ರಾಕ್ತನ
ಸಂಶೋಧಕರು ಇನ್ನಷ್ಟು ಸಮೀಕ್ಷೆಯನ್ನು ನಡೆಸಿ ಆ ಪ್ರದೇಶದಲ್ಲಿ
ಉತ್ಖನನ ನಡೆಸಿದಾಗ ಅಲ್ಲೊಂದು ವಿರಕ್ತಮಠವಿದ್ದುದು ಗೋಚರಿಸಿತು. ಪ್ರಾಯಶಃ ಆ ವಿರಕ್ತ ಮಠದಲ್ಲೇ ಅಂದಿನ
ರಬ್ಬಿಗಳು ತಮ್ಮ ಪವಿತ್ರ ಗ್ರಂಥವನ್ನು
ಬರೆದು ಸಿದ್ದಪಡಿಸುತ್ತಿದ್ದರಬೇಕು. ಅಲ್ಲಿ ದೊರೆಕಿದ ಕೃತಿಗಳನ್ನು ಕಾರ್ಬನ್14ರ ಡೇಟಿಂಗ್ ಪರಿಶೋಧನೆಗೊಳಪಡಿಸಿದಾಗ
ಅವು ಸುಮಾರು ಕ್ರಿ.ಪೂ.200ರಿಂದ ಕ್ರಿ.ಪೂ.70ರ ಒಳಗೆ ರಚಿಸಿದ್ದೆಂದು ತಿಳಿದುಬಂತು.
ಅಂದರೆ ಅವು ಸುಮಾರು 2000 ವರ್ಷಗಳ
ಪುರಾತನ ಕೃತಿಗಳಾಗಿದ್ದವು. ಆ ಗುಹೆಗಳಲ್ಲಿ ದೊರೆತ
ಕೃತಿಗಳಲ್ಲೇ ಅತ್ಯಂತ ಪುರಾತನವಾದುದು ಯೇಶಾಯ
ಪ್ರವಾದಿಯ ಕೃತಿಯಾಗಿತ್ತು. ಈಗಾಗಲೇ ಲಭ್ಯವಿದ್ದ ಇದೇ
ಪ್ರವಾದಿಯ ಕೃತಿಗೂ ಗುಹೆಯಲ್ಲಿ ದೊರೆತ
ಕೃತಿಗೂ ಹೋಲಿಸಿ ನೋಡಿದಾಗ ಅವೆರಡರ
ನಡುವೆ 1000 ವರ್ಷಗಳ ಅಂತರವಿರುವುದು ತಿಳಿದು
ಬಂದರೂ ಅವೆರಡೂ ಸಾದೃಶ್ಯಪೂರ್ಣವಾಗಿದ್ದವು ಎಂಬುದು ಗಮನಾರ್ಹ.
ಎರಡೂ ಕೃತಿಗಳ ರಚನೆಯೂ ಒಂದೇ
ರೀತಿಯಲ್ಲಿದ್ದವು ಎಂಬುದನ್ನು ಗಮನಿಸಿದಾಗ ಪವಿತ್ರ ಗ್ರಂಥದ ರಚನೆಗೆ
ಸಂಬಂಧಿಸಿದಂತೆ ಹೀಬ್ರೂಗಳು ಅದೆಷ್ಟು ಜಾಗ್ರತೆ ವಹಿಸುತ್ತಾರೆ
ಮತ್ತು ಅವುಗಳ ರಚನೆ ಎಷ್ಟು
ನಿಖರವಾಗಿರುತ್ತದೆಯೆಂಬುದು ಪ್ರಾಕ್ತನ ಸಂಶೋಧಕರಿಗೆ ಅರಿವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ