ಯೇಸುಕ್ರಿಸ್ತರು

'ಯೇಸು' ಎಂಬ ಪದವು ಲ್ಯಾಟಿನ್‌ ಪದವಾಗಿದ್ದು ಇದು ಗ್ರೀಕ್‌ನ 'ಇಸೋವಸ್‌' ಪದದ ರೂಪಾಂತರವಾಗಿದೆ.  ಪ್ರಾಯಶಃ ಹೀಬ್ರೂನ 'ಯೆಹೋಶುವ' ಅಥವಾ 'ಜೋಷುವ'(ಅರ್ಥಾತ್‌ 'ದೇವರೇ ಮೋಕ್ಷ') ಎನ್ನುವ ಪದವೇ ಅದರ ಮೂಲವಾಗಿರಬೇಕು ಎನ್ನಲಾಗುತ್ತಿದೆ. ಈ ಪದಗಳು ಹಳೆಯ ಒಡಂಬಡಿಕೆಯಲ್ಲಿ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡಿವೆ. ಮೋಸೆಸ್‌ನ ಕಾಲದಲ್ಲಿದ್ದ 'ಯೆಹೋಶುವ' ಎಂಬಾತ ಇಸ್ರಯೇಲರನ್ನು ವಾಗ್ದತ್ತ ನಾಡಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಂತೆಯೇ ಯೇಸುವಿನ ವಂಶಾವಳಿಯಲ್ಲೂ ಇದೇ ಹೆಸರಿನ ವ್ಯಕ್ತಿಯ ಉಲ್ಲೇಖವಿದೆ(ಲೂಕ 3:29). ಸಂತ ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರದಲ್ಲಿ ತನಗೆ 'ಯೇಸು'  ಎಂಬ ಹೆಸರಿನ ಒಡನಾಡಿಯೊಬ್ಬ ಇದ್ದ ಎಂಬುದಾಗಿ ಬರೆದಿದ್ದಾನೆ(ಕೊಲೊ 4:11). ಒಟ್ಟಾರೆ 'ಯೇಸು' ಮತ್ತ್ತು 'ಯೆಹೋಶುವ' ಎಂಬ ಎರಡೂ ಪದಗಳ ಅರ್ಥ ಒಂದೇ ಆಗಿರಬಹುದು ಎಂಬ ಶಂಕೆಯಿದೆ.
'ಕ್ರಿಸ್ತ' ಅಥವಾ 'ಕ್ರಿಸ್ತೋಸ್‌' ಎಂಬ ಪದವು ಹೀಬ್ರೂ ಭಾಷೆಯ 'ಮೆಸ್ಸಿಯ' ಅರ್ಥಾತ್‌ 'ಅಭಿಷಿಕ್ತನು' ಎನ್ನುವುದರ ಗ್ರೀಕ್‌ ಪದವಾಗಿದೆ. ಒಂದು ವಿಶಿಷ್ಠ ಕೆಲಸಕ್ಕೆ ಆಯ್ಕೆಯಾದವನನ್ನು ಗೌರವಿಸಲು ಸುಗಂಧತೈಲದಿಂದ ಅಭಿಷೇಕಿಸಲಾಗುತ್ತಿತ್ತು. ಇಸ್ರಯೇಲಿನ ಅರಸರು ಅಧಿಕಾರವನ್ನು ಸ್ವೀಕರಿಸುವ ಮುನ್ನ ಅಭಿಷೇಕವನ್ನು ಪಡೆಯುತ್ತಿದ್ದರು. ಅವರನ್ನು 'ಅಭಿಷಿಕ್ತರು' ಎಂದು ಕರೆಯಲಾಗುತ್ತಿತ್ತು.  ಹೀಬ್ರೂ ಭಾಷೆಯಲ್ಲಿ ಅಭಿಷಿಕ್ತನಾದವನನ್ನು 'ಮೆಸ್ಸಿಯ' ಎಂದು ಕರೆಯಲಾಗುತ್ತಿತ್ತು. ಯೇಸುವನ್ನೂ 'ಮೆಸ್ಸಿಯ' ಎಂದು ಕರೆಯಲಾಗುತ್ತದೆ. ಅದರ ಗ್ರೀಕ್‌ ಭಾಷೆಯ ಪದವೇ 'ಕ್ರಿಸ್ತ(ಕ್ರಿಸ್ತೋಸ್‌)' (ಯೊವಾ. 1:41-42, ಕೀರ್ತನೆ 132:10). ಇದು ಯೇಸುವಿನ ನಾಮಕ್ಕೆ ಸೇರಿದ ಉತ್ತರಾಂಕಿತವಷ್ಟೆ; ಆದರೆ 'ಕ್ರಿಸ್ತ'ನೆಂಬುದು ಅವರ ಹೆಸರಲ್ಲ.
ಯೇಸು ಸರ್ವೇಶ್ವರ ದೇವರ ಏಕಮಾತ್ರ ಕುಮಾರರು, ಕನ್ಯೆಯಲ್ಲಿ ಜನಿಸಿ ಜಗತ್ತನ್ನು ಉದ್ಧರಿಸಲು ಬಂದವರು ಎಂಬುದು ಕ್ರೈಸ್ತ ವಿಶ್ವಾಸಿಗಳ ನಂಬಿಕೆ. ಯೇಸು ಜನಿಸುವ ಮೊದಲೇ ಸೃಷ್ಟಿಯಾದ ಬೈಬಲ್‌ನ 'ಹಳೆಯ ಒಡಂಬಡಿಕೆ'ಯಲ್ಲಿ ಇವರ ಕುರಿತಾದ ಹಲವಾರು ಉಲ್ಲೇಖಗಳು ದೊರೆಯುತ್ತವೆ. ಯೇಸು ಹುಟ್ಟಿದ ನಂತರ ರಚನೆಯಾದ ಬೈಬಲ್‌ನ 'ಹೊಸ ಒಡಂಬಡಿಕೆ' ಎಂಬ ಭಾಗದಲ್ಲಿ ಅಡಕಗೊಂಡಿರುವ ಎಲ್ಲಾ ಪುಸ್ತಕಗಳು ಇದನ್ನೇ ಸಾರುತ್ತವೆ. 'ಯೇಸು ದೇವರ ಏಕ ಮಾತ್ರ ಕುಮಾರರು. ಆದಿಯಿಂದಲೇ ಇದ್ದವರು' ಎನ್ನುವುದನ್ನು ಯೊವಾನ್ನನ ಸುಸಂದೇಶವು ಸ್ಪಷ್ಟವಾಗಿ ಸಾರುತ್ತದೆ(1:1-2,). ಅಲ್ಲದೆ ಯೇಸುವನ್ನು, ಒಮ್ಮೆ ಯೆಹೂದ್ಯರು, 'ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ?' ಎಂದು ಪ್ರಶ್ನಿಸಿದಾಗ ಯೇಸು; 'ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,' ಎಂದು ಉತ್ತರಿಸುವುದರ ಮೂಲಕ ಮೇಲಿನ ವಾಕ್ಯವನ್ನು ರುಜುವಾತುಗೊಳಿಸುತ್ತಾರೆ(ಯೊವಾ.8:58). ಅಲ್ಲದೆ ಯೊವಾನ್ನನು ಯೇಸುವಿನ ಕುರಿತಾಗಿ, 'ಸ್ವರ್ಗಲೋಕದಿಂದ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ'(ಯೊವಾ. 3:13) ಎಂದೂ ಹೇಳಿದ್ದಾನೆ.
'ನಜರೇತಿನ ಯೇಸು' ಎಂದೇ ತಮ್ಮ ಕಾಲದಲ್ಲಿ ಪ್ರಖ್ಯಾತರಾಗಿದ್ದ ಯೇಸು ದೇವರ ವರಪ್ರಸಾದದಿಂದ ಕನ್ಯೆಯಾದ ಮೇರಿಯಲ್ಲಿ ಜನಿಸಿದ ದೇವಕುಮಾರರು. ಇದು ಕ್ರೈಸ್ತರ ವಿಶ್ವಾಸವೂ ಕೂಡ. ಕ್ರೈಸ್ತಮತ ತಳವೂರಿ ನಿಂತಿರುವುದೇ ಈ ಆಧಾರದ ಮೇಲೆ. ತಮ್ಮ ಜೀವಿತಾವಧಿಯಲ್ಲಿ ಅವರು ನೀಡಿದ ಬೋಧನೆ, ಮಾಡಿದ ಸೂಚಕ ಕಾರ್ಯಗಳು ಮತ್ತು  ಶಿಲುಬೆಯ ಮರಣ ಮಾತ್ರವಲ್ಲದೆ ಪುನರುತ್ಥಾನದ ಮೂಲಕವೂ ಜನರೊಂದಿಗೆ ಪ್ರೀತಿಯ ಸಮನ್ವಯ ಸಾಧಿಸಿದರೆಂಬುದು ಜಗತ್ತಿನ ಕ್ರೈಸ್ತ ಸಮುದಾಯದ ನಂಬುಗೆ. ಯೇಸುವೇ ಹಳೆಯ ಒಡಂಬಡಿಕೆಯ ಸರ್ವೇಶ್ವರ ಮತ್ತು ಹೊಸ ಒಡಂಬಡಿಕೆಯ 'ಮೆಸ್ಸಿಯ(ರಕ್ಷಕ)' ಎಂದು ಹೇಳುವವರೂ ಇದ್ದಾರೆ.
ಯೇಸು ಹುಟ್ಟಿದ್ದು ಯೆಹೂದ್ಯ ಕುಟುಂಬದಲ್ಲಿ. ಕ್ರಿ.ಪೂ. 4 ಅಥವಾ 2ರಲ್ಲಿ ಎನ್ನುತ್ತದೆ ಕೆಲವೊಂದು ಆಧಾರಗಳು. ಇವೆರಡರಲ್ಲಿ ಯಾವುದು ಸರಿ ಎನ್ನುವುದರ ಬಗ್ಗೆ ಖಚಿತತೆಯಿಲ್ಲ. ಇವರ ತಂದೆ-ಜೋಸೆಫ್‌ ಮತ್ತು ತಾಯಿ-ಮೇರಿ. ಹುಟ್ಟಿದ್ದು ಬೆತ್ಲಹೇಂ ಎಂಬ ಆಗಿನ ಪುಟ್ಟ ಗ್ರಾಮವೊಂದರಲ್ಲಾದರೂ ವಾಸವಿದ್ದುದು ಗಲಿಲೇಯದ ನಜರೇತ್‌ ಎಂಬ ಊರಲ್ಲಿ. ಆಗ ನಡೆದ ಜನಗಣತಿಯ ಕಾರಣಕ್ಕೆ ಜೋಸೆಫ್‌ ಕುಟುಂಬ ಸಮೇತ ನಜರೇತ್‌ನಿಂದ ಬೆತ್ಲೆಹೇಂಗೆ ಪ್ರಯಾಣಿಸಬೇಕಾಗಿ ಬರುತ್ತದೆ. ಜೋಸೆಫ್‌ ದಾವೀದನ ಮನೆತನದವನೂ ಗೋತ್ರದವನೂ ಆಗಿದ್ದ ಕಾರಣ ದಾವೀದನ ಊರಾದ ಬೆತ್ಲೆಹೇಮಿಗೆ ತನ್ನ ಮತ್ತು ಕುಟುಂಬದ ಹೆಸರನ್ನು ನೋಂದಾಯಿಸಲು ಅರಸನ ಆಜ್ಞೆಯ ಮೇರೆಗೆ ಕರೆದುಕೊಂಡು ಹೋಗಿರುತ್ತಾನೆ. ಆಗ ಮೇರಿ ತುಂಬು ಗರ್ಭಿಣಿ. ಉಳಿದುಕೊಳ್ಳಲು ಮನೆಯೊಂದೂ ಸಿಗದಾದಾಗ ಅವರು ವಾಸ್ತವ್ಯ ಹೂಡಬೇಕಾಗಿ ಬಂದುದು ಕೊಟ್ಟಿಗೆಯೊಂದರಲ್ಲಿ. ಯೇಸುವಿನ ಜನನವಾಗುವುದು ಆ ಕೊಟ್ಟಿಗೆಯಲ್ಲೇ!. ಈ ವಿವರಗಳು ಲಭ್ಯವಾಗುವುದು ಲೂಕ(2:4)ನ ಸುಸಂದೇಶದಲ್ಲಿ. ಯೇಸು ಹುಟ್ಟಿದಾಗ ವಿಶೇಷವಾದ ನಕ್ಷತ್ರವೊಂದು ಆಗಸದಲ್ಲಿ ಗೋಚರಿಸುತ್ತದೆ. ಅದರ ಜಾಡನ್ನು ಹಿಡಿದು ದೂರದ ದೇಶಗಳಿಂದ ಮೂವರು ಜ್ಯೋತಿಷಿಗಳು ಆಗಮಿಸಿ ಯೇಸುವನ್ನು ಕಂಡು ಆನಂದಿಸುತ್ತಾರಲ್ಲದೆ, ಇವರ ಮುಖಾಂತರ ಯೆಹೂದ್ಯರ ಅರಸನಾಗಲಿರುವ ಯೇಸು ಹುಟ್ಟಿರುವ ವಿಷಯ ಹೆರೋದನಿಗೂ ತಲುಪುತ್ತದೆ. ಆದರೆ ದೇವದೂತರರ ಎಚ್ಚರಿಕೆಯ ಫಲವಾಗಿ ಜೋಸೆಫ್‌ ಮತ್ತು ಮೇರಿ ಮಗುವಿನೊಂದಿಗೆ ಈಜಿಪ್ಟ್‌ಗೆ ಪಲಾಯನಗೈಯುತ್ತಾರೆ. ಬಳಿಕ ಹೆರೋದನು ಬೆತ್ಲೆಹೇಮಿನಲ್ಲಿ ಎರಡು ವರ್ಷಗಳೊಳಗಿನ ಕೂಸುಗಳನ್ನು ಕೊಲ್ಲಿಸುತ್ತಾನೆ ಎಂಬ ವಿವರಗಳು ಮತ್ತಾಯ(2:1-18)ನ ಸುಸಂದೇಶದಿಂದ ಲಭ್ಯವಾಗುತ್ತದೆ. ಹೆರೋದನ ಮರಣಾನಂತರ ದಂಪತಿಗಳು ಮಗುವಿನ ಸಮೇತ ನಜರೇತಿಗೆ ಮರಳುತ್ತಾರೆ.
ಯೇಸು ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಸ್ನಾನಿಕ ಯೊವಾನ್ನನಿಂದ ಸ್ನಾನದೀಕ್ಷೆಯನ್ನು ಪಡೆದು ನಂತರ ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತಾರೆ ಎನ್ನುವುದನ್ನು ಮತ್ತಾಯ, ಮಾರ್ಕ, ಲೂಕ ಹಾಗೂ ಯೊವಾನ್ನನ ಸುಸಂದೇಶಗಳು ಸಾರುತ್ತವೆ. ಅವರು ಕಣ್ಣಿಲ್ಲದವರಿಗೆ ಕಣ್ಣನ್ನೂ, ಕಾಲಿಲ್ಲದವರಿಗೆ ಕಾಲನ್ನೂ, ಕೈ ಬತ್ತಿದವರಿಗೆ ಕೈಯನ್ನೂ, ಅನಾರೋಗ್ಯವಂತರಿಗೆ ಆರೋಗ್ಯವನ್ನೂ ನೀಡುವಂತಹ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಐದು ರೊಟ್ಟಿಗಳನ್ನೂ ಮತ್ತು ಮೀನುಗಳನ್ನು ಐದು ಸಾವಿರ ಜನರಿಗೆ ಕೊಡುವ, ಸತ್ತುಹೋದವನನ್ನು ಬದುಕಿಸುವ, ನೀರಿನ ಮೇಲೆ ನಡೆದು ಬರುವ, ಬಿರುಗಾಳಿಯನ್ನು ಸ್ಥಬ್ದಗೊಳಿಸುವ ಮುಂತಾದ ಅನೇಕ ಪವಾಡಗಳನ್ನು ಮಾಡುತ್ತಾರೆ. ಅವುಗಳನ್ನು ಜನರು ನೋಡಲಿ ಎಂದವರು ಮಾಡುವುದಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಅವುಗಳನ್ನು ಅವರು ಮಾಡಿರುತ್ತಾರೆ. ಒಮ್ಮೆ ತಮಗಿಚ್ಚೆಯಿಲ್ಲದಿದ್ದರೂ ತಾಯಿಯ ಬಲವಂತಕ್ಕೆ ಮಣಿದು ಅವರು ನೀರನ್ನು ಅತ್ಯುತ್ಕೃಷ್ಟ ದ್ರಾಕ್ಷಾರಸವನ್ನಾಗಿಯೂ ಪರಿವರ್ತಿಸುತ್ತಾರೆ.
ಈ ಕಾರ್ಯಚಟುವಟಿಕೆಗಳು ನಡೆದುದು ಕೇವಲ ಅವರ ಯೌವನದ ಮೂರು ವರ್ಷಗಳಲ್ಲಿ ಮಾತ್ರವೇ. ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಆರಂಭಿಸಿದ ಈ ಕಾರ್ಯಚಟುವಟಿಕೆಗಳು ಮೂವತ್ತ್ಮೂರನೆಯ ವಯಸ್ಸಿನಲ್ಲಿ ಅವರು ಶಿಲುಬೆಯ ಮರಣ ಹೊಂದುವವರೆಗೆ ನಡೆಯುತ್ತದೆ. ಅನಂತರ ಮೂರನೆಯ ದಿನ ಅವರು ಪುನರುತ್ಥಾನರಾಗಿ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಾರೆ ಮಾತ್ರವಲ್ಲ ತಮ್ಮ ಸುಸಂದೇಶಗಳನ್ನು ಜಗತ್ತಿಗೆ ಸಾರಿ ಎಂದು ಶಿಷ್ಯರಿಗೆ ಆದೇಶಿಸಿ ಸ್ವರ್ಗಕ್ಕೆ ಏರಿಹೋಗುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ