ಸಂತ ಪೌಲ |
ಈ ಸೌಲನು
ಸ್ತೇಫನನ ಕೊಲೆಗೆ ಸಮ್ಮತಿಸುತ್ತಾನೆ. ಸ್ಟೇಫನನ
ಕೊಲೆಯೊಂದಿಗೆ ಆ ದಿನವೇ
ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆಗಳು
ಪ್ರಾರಂಭವಾಗುತ್ತವೆ. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು
ಜುದೇಯ ಮತ್ತು ಸಮಾರಿಯಾ ಪ್ರಾಂತ್ಯಗಳೆಲ್ಲೆಲ್ಲಾ
ಚದುರಿಹೋಗುತ್ತಾರೆ. ಕೆಲವು ಭಕ್ತಾದಿಗಳು ಸ್ತೇಫನನನ್ನು
ಸಮಾಧಿಮಾಡಿ ಅವನಿಗಾಗಿ ಅತ್ತು ಗೋಳಾಡುತ್ತಾರೆ. ಇತ್ತ
ಸೌಲನು ಧರ್ಮಸಭೆಯನ್ನು ನಾಶಪಡಿಸುವ ಪ್ರಯತ್ನದಲ್ಲಿ ತೊಡಗುತ್ತಾನೆ; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು
ಎಳೆದು ತಂದು ಸೆರೆಮನೆಗೆ ತಳ್ಳುತ್ತಾನೆ. ಈ ವಿವರಗಳು ಪ್ರೇಷಿತರ ಕ್ರಿಯಾಕಲಾಪ(7:60;
8:1-3)ಗಳು ಗ್ರಂಥದಲ್ಲಿ ಕಾಣಲು ಸಿಗುತ್ತದೆ.
ಸೌಲನು
ಯೇಸುವಿನ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು
ಸಂಹರಿಸಬೇಕೆಂದಿದ್ದನು. ಈ ಹೊಸಮಾರ್ಗವನ್ನು ಅವಲಂಬಿಸುವವರು
ಹೆಂಗಸರೇ ಆಗಿರಲಿ, ಗಂಡಸರೇ ಆಗಿರಲಿ,
ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ
ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು
ಕೇಳುವುದಕ್ಕಾಗಿ ಪ್ರಧಾನ ಯಾಜಕನ ಬಳಿಗೆ
ಹೋಗುತ್ತಾನೆ. ದಮಸ್ಕಸಿನಲ್ಲಿರುವ ಪ್ರಾರ್ಥನಾಮಂದಿರದ ಅಧಿಕಾರಗಳಿಗೆ ತೋರಿಸಲು ಆ ಪತ್ರಗಳನ್ನು
ಪಡೆಯುತ್ತಾನೆ.
ಅವನು ಅಲ್ಲಿಂದ ಪ್ರಯಾಣಮಾಡುತ್ತಾ ದಮಸ್ಕಸ್
ಪಟ್ಟಣವನ್ನು ಸಮೀಪಿಸುತ್ತಾನೆ. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ
ಆವರಿಸುತ್ತದೆ. ಅವನು ನೆಲಕ್ಕುರುಳುತ್ತಾನೆ. "ಸೌಲನೇ, ಸೌಲನೇ
ನನ್ನನೇಕೆ ಹಿಂಸಿಸುತ್ತಿರುವೆ?" ಎಂಬ ವಾಣಿಯೊಂದು ಅವನಿಗೆ ಕೇಳಿಸುತ್ತದೆ.
ಆಗ ಅವನು, "ಪ್ರಭೂ, ನೀವಾರು?" ಎನ್ನುತ್ತಾನೆ.
"ನೀನು ಹಿಂಸೆ ಪಡಿಸುತ್ತಿರುವ ಯೇಸುವೇ
ನಾನು. ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು
ನಿನಗೆ ಅಲ್ಲಿ ತಿಳಿಸಲಾಗುವುದು," ಎಂದು ಆ
ವಾಣಿ ಹೇಳುತ್ತದೆ. ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ
ವಾಣಿ ಕೇಳಿಸಿತೇ ಹೊರತು ಯಾರೂ ಕಾಣಿಸುವುದಿಲ್ಲ.
ಅವರು ಸ್ಥಬ್ದರಾಗಿ ನಿಲ್ಲುತ್ತಾರೆ. ಸೌಲನು ಮೇಲಕ್ಕೆದ್ದು ಕಣ್ಣರಳಿಸಿ
ನೋಡಿದರೂ ಅವನಿಗೇನೂ ಕಾಣಿಸುವುದಿಲ್ಲ(ಪ್ರೇಷಿತ:1-8).
"ಸೌಲನೇ, ಸೌಲನೇ ನನ್ನನೇಕೆ ಹಿಂಸಿಸುತ್ತಿರುವೆ?" ಎಂಬ ವಾಣಿ ಅವನಿಗೆ ಕೇಳಿಸಿತು. |
ಹೀಗೆ
ಜೆರುಸಲೇಮ್ನಿಂದ ಡಮಾಸ್ಕಸ್ಗೆ
ಹೋಗುವ ಹಾದಿಯಲ್ಲಿ ತನ್ನ ಯೆಹೂದಿ ಧರ್ಮಕ್ಕೆ
ವಿರೋಧಿಗಳು ಎನಿಸಿದವರನ್ನು ಹಣಿಸಲುದ್ಯುಕ್ತನಾದ ಪೌಲ ಅನಂತರ ಕ್ರಿಸ್ತನ
ಅನುಯಾಯಿಯಾಗಿ ಪ್ರೇಷಿತರಲ್ಲಿ
ಪ್ರಮುಖನಾಗುತ್ತಾನೆ. ಯೇಸುವಿನ ಕಟ್ಟಾ ಅನುಯಾಯಿಯಾಗುವ
ಮೊದಲು ಪೌಲನು ಹಣತೆತ್ತು ರೋಮಿನ
ಪೌರತ್ವವನ್ನು ಪಡೆದುಕೊಂಡಿರುತ್ತಾನೆ(ಪ್ರೇಷಿತ 22:28).
ಸೌಲನೆಂಬ ಪೌಲನು
ಮೂಲತಃ ಓರ್ವ ಫರಿಸೇಯ. ಬೈಬಲ್ನಲ್ಲಿ
ಆತನ ತಂದೆ-ತಾಯಿಯ ಬಗ್ಗೆ
ಹೆಚ್ಚಿನ ವಿವರಗಳೇನೂ ದೊರಕುವುದಿಲ್ಲ. ಪೌಲನಿಗೊಬ್ಬಳು ತಂಗಿಯೂ, ತಂಗಿಯ ಮಗನೂ
ಇರುವುದು ತಿಳಿದು ಬರುತ್ತದೆ(ಪ್ರೇಷಿತ 23:16). 'ಆಂಡ್ರೋನಿಕಸ್ ಮತ್ತು ಯೂನಿಯ' ಎಂಬವರು
ಅವನ ಸಂಬಂಧಿಕರೆಂಬ ಅಂಶವೂ ತಿಳಿಯುತ್ತದೆ. ಪ್ರಸ್ತುತ
ಟರ್ಕಿಯಲ್ಲಿರುವ 'ತಾರ್ಸಸ್' ಎಂಬಲ್ಲಿ ಪ್ರಾಯಶಃ ಕ್ರಿ.ಶ.4ರಲ್ಲಿ ಹುಟ್ಟಿದ
ಪೌಲನು ಬೆಳೆದದ್ದು ಜೆರುಸಲೇಮಿನಲ್ಲಿ. 'ಗಮಲಿಯೇಲನ ಪಾದ ಸನ್ನಿಧಿಯಲ್ಲಿ ಧರ್ಮಶಾಸ್ತ್ರವನ್ನು
ಕಟ್ಟುನಿಟ್ಟಾಗಿ ಕಲಿತವನು' ಎಂದು ತಾನೆ ಹೇಳಿಕೊಂಡಿದ್ದಾನೆ(ಪ್ರೇಷಿತ 22:3). ಇವನ ಕಸುಬು ಗುಡಾರಗಳನ್ನು
ಕಟ್ಟುವುದು. ಯಾವ ಕ್ರೈಸ್ತಧರ್ಮಾನುಯಾಯಿಗಳನ್ನೂ, ಧರ್ಮಪ್ರಚಾರಕನನ್ನು ಹಿಡಿದು
ಕಗ್ಗೊಲೆ ಮಾಡಿಸಲು ಪ್ರಯತ್ನಪಟ್ಟನೋ ಅದೇ
ಧರ್ಮದ ಅನುಯಾಯಿಯೂ, ಧರ್ಮಪ್ರಚಾರಕನೂ ಆಗಿ ಇತರರಿಗಿಂತ ಹೆಚ್ಚು ನಿಷ್ಟೆಯಿಂದಲೂ, ಧೈರ್ಯದಿಂದಲೂ ಸಾರಿ ಕ್ರೈಸ್ತಧರ್ಮವು ಪ್ರಭಾವಶಾಲಿ ಧರ್ಮವಾಗುವಂತೆ ಮಾಡಿದವನು
ಪೌಲ.
ಕಟ್ಟುನಿಟ್ಟಿನ
ನಿಯಮಗಳನ್ನು ಫರಿಸೇಯರು ಪಾಲಿಸುವಂತೆಯೇ ಸ್ವಯಂ ಫರಿಸೇಯ(ಪ್ರೇಷಿತ
23:6)ನೇ ಆಗಿದ್ದ ಪೌಲನು ನಂಬಿದ
ಕೆಲಸಕಾರ್ಯಗಳನ್ನು ಅಷ್ಟೇ ನಿಷ್ಟೆಯಿಂದ ಪಾಲಿಸುತ್ತಿದ್ದ.
ಇತರರ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಖಂಡತುಂಡವಾಗಿ ಟೀಕಿಸಲು
ಹಿಂಜರಿಯುತ್ತಿರಲಿಲ್ಲ. ಪೇತ್ರನು ನುಡಿದಂತೆ ನಡೆಯುತ್ತಿಲ್ಲ
ಎಂದು ಪೌಲನು ಆಪಾದಿಸಿದ್ದಾನೆ. ಕೆಲವು
ವಿಷಯಗಳಲ್ಲಿ ಇವರಿಬ್ಬರ ನಡುವೆ ಜಟಾಪಟಿಗಳೂ ನಡೆದಿವೆ(ಗಲಾತಿ 2:11-14). ಆದಾಗ್ಯೂ ಪೇತ್ರ, ಯೊವಾನ್ನ
ಮತ್ತು ಯಕೋಬ(ಯೇಸುವಿನ ಸೋದರ)ರನ್ನು ಕ್ರೈಸ್ತಸಭೆಯ 'ಸಭಾಸ್ಥಂಭಗಳು'
ಎಂದು ಪೌಲನು ಘೋಷಿಸಿದ್ದಾನೆ(ಗಲಾತಿ
2:9). ಇದು ಪೌಲನ ಅಂತಃಶುದ್ದಿಯನ್ನು ತೋರಿಸುತ್ತದೆ.
ಪೌಲನು ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ತಕ್ಷಣವೇ ಮನಸ್ಸನ್ನು ಶುದ್ದೀಕರಿಸಿಕೊಳ್ಳುತ್ತಿದ್ದ
ಎನ್ನುವುದಕ್ಕೆ ಇದೊಂದು ಉದಾಹರಣೆ. ಮುಂದೆ
ಅವರೆಲ್ಲರೂ ಐಕ್ಯಮತ್ಯದಿಂದ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮುಂದುವರಿಯುತ್ತಾರೆ.
ಕ್ರೈಸ್ತಸಭೆಯನ್ನು ಬೆಳೆಸುತ್ತಾರೆ. ಕ್ರೈಸ್ತರು ಜಗತ್ತಿನಲ್ಲೆಡೆ ಹಬ್ಬಿ ಹರಡುವಲ್ಲಿ ಪೌಲನ
ಸಾಧನೆ ಗಮನಾರ್ಹ ಎಂಬುದನ್ನು ಯಾರೂ ತಳ್ಳಿಹಾಕುವಂತಿಲ್ಲ.
ಪೌಲನ
ಜೊತೆಗಾರರಾಗಿ, ಸಹಧರ್ಮಪ್ರಚಾರಕರರಾಗಿ ದುಡಿದು ಸಹಕರಿಸಿವರು ಹಲವರು. ಇವನ ಸ್ನೇಹಿತನಾಗಿದ್ದು
ಕ್ರೈಸ್ತಧರ್ಮಕ್ಕೆ ಕಾಲಿರಿಸಿದ್ದ ಸುಸಂದೇಶಕರ್ತ ಲೂಕ, ಪೇತ್ರನ ಸಾಕುಪುತ್ರ
ಹಾಗೂ ಸುಸಂದೇಶಕರ್ತ ಮಾರ್ಕ, ಮಾರ್ಕನ ಸಂಬಂಧಿ
ಬಾರ್ನಬ ಇವರೇ ಪೌಲನ ಪ್ರಮುಖ ಸಹವರ್ತಿಗಳು. ಏಷ್ಯಾ ಮೈನರ್ ಮತ್ತು
ಯೂರೋಪಿನಲ್ಲಿ ಅನೇಕ ಕ್ರೈಸ್ತಸಭೆಗಳನ್ನು ಕಟ್ಟಿದ
ಪೌಲನು ತನ್ನ ಕ್ರೈಸ್ತಸಭೆಗಳಿಗೆ ಮತ್ತು
ಸಭಾಪ್ರಮುಖರಿಗೆ ಪತ್ರಗಳನ್ನು ಬರೆದು ಅವರ ವಿಶ್ವಾಸವನ್ನು
ಹೆಚ್ಚಿಸುವ ಪ್ರಯತ್ನಗಳನ್ನೂ ನಡೆಸಿದ್ದಾನೆ. ಅವು ಬೈಬಲ್ನಲ್ಲಿ
ದಾಖಲಾಗಿವೆ. ಬೈಬಲ್ನಲ್ಲಿರುವ ಇಪ್ಪತ್ತೇಳು
'ನಿರೂಪ'ಗಳಲ್ಲಿ ಪೌಲನು ಬರೆದ
ಪತ್ರಗಳೇ ಹೆಚ್ಚು. ವಿವಿಧ ಕ್ರೈಸ್ತಸಭೆಗಳಿಗೆ
ಮತ್ತು ಸಭೆಯ ಪ್ರಮುಖರಿಗೆ ಬರೆದ
ಹದಿನಾಲ್ಕು ಪತ್ರಗಳು ಬೈಬಲ್ನಲ್ಲಿ
ಸೇರ್ಪಡೆಯಾಗಿವೆ. ಇವು ಇಂದು ದೈವಶಾಸ್ತ್ರ
ಮತ್ತು ಪೂಜಾವಿಧಿಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಕಡೆಯ
'ಇಬ್ರಿಯರಿಗೆ' ಎಂದು ಬರೆಯಲಾದ ಪತ್ರವು ಪೌಲನದಲ್ಲ
ಎಂಬ ಒಂದು ವಿವಾದವೂ ಇದೆ.
ಅದರಂತೆಯೇ ಇನ್ನೂ ಆರು ಪತ್ರಗಳನ್ನು
ಪೌಲನ ಹೆಸರಿನಲ್ಲಿ ಬೇರೆ ಯಾರೋ ಬರೆದಿರಬೇಕೆಂಬ
ಊಹಾಪೋಹಗಳೂ ಇವೆ.
ಫಿಲಿಪ್ಪಿಯಲ್ಲಿ
ಧರ್ಮಪ್ರಚಾರ ಮಾಡುತ್ತಿದ್ದ ವೇಳೆಯಲ್ಲಿ ಪೌಲನು ಬಂಧಿತನಾಗಿ ಛಡಿಯೇಟು
ತಿಂದು ಸೆರಮನೆವಾಸವನ್ನು ಅನುಭವಿಸಬೇಕಾಗುತ್ತದೆ. ಪೌಲನೊಂದಿಗೆ ಜೊತೆಗಾರ ಧರ್ಮಪ್ರಚಾರಕ ಸೀಲನು
ಬಂಧಿಯಾಗುತ್ತಾನೆ. ಅವರಿಬ್ಬರ ಕಾಲುಗಳನ್ನೂ ಮರದ ದಿಮ್ಮಿಗೆ ಬಿಗಿಸಲಾಗುತ್ತದೆ.
ನಡುರಾತ್ರಿಯಲ್ಲಿ ಭೂಕಂಪವಾಗಿ ಕೈದಿಗಳ ಬಂಧನ ಕಳಚಿಬೀಳುತ್ತದೆ.
ಕೈದಿಗಳು ತಪ್ಪಿಸಿಕೊಂಡರೆಂದು ಭಾವಿಸಿ ಸೆರೆಮನೆಯ ಅಧಿಕಾರಿ
ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಪರಾರಿಯಾಗದೇ, "ನಾವಿಲ್ಲೇ ಇದ್ದೇವೆ" ಎಂದು ಪೌಲ ಮತ್ತು
ಸೀಲ ಅವನ ಮುಂದೆ ಬಂದು
ನಿಲ್ಲುತ್ತಾರೆ. ಆಗ ಪೌಲ ಮತ್ತು
ಸೀಲರ ಕಾಲಿಗೆ ಬಿದ್ದ ಸೆರೆಮನೆಯ
ಅಧಿಕಾರಿ ಕುಟುಂಬ ಸಮೇತ ಕ್ರೈಸ್ತನಾಗಿ
ಪರಿವರ್ತನೆ ಹೊಂದುತ್ತಾನೆ. ಮರುದಿನ ಅವರನ್ನು ಬಿಡುಗಡೆಗೊಳಿಸಲು
ನ್ಯಾಯಾಧಿಪತಿಗಳ ಆಜ್ಞೆಯೂ ಆಗುತ್ತದೆ. ಆದರೆ
ಪೌಲನು ತಾನು ರೋಮಿನ ಪೌರನಾಗಿದ್ದೂ
ತನ್ನದೇನೂ ಅಪರಾಧವಿಲ್ಲದಿದ್ದರೂ ಬಂಧಿಸಿ ಛಡಿಯೇಟು ನೀಡಲಾಗಿದೆ;
ನ್ಯಾಯಾಧಿಪತಿಗಳೇ ಖುದ್ದಾಗಿ ಇಲ್ಲಿಗೆ ಬಂದು ಬಿಡುಗಡೆಗೊಳಿಸಲಿ
ಎನ್ನುತ್ತಾನೆ. ನ್ಯಾಯಾಧಿಪತಿಯು ಪೌಲನು ರೋಮಿನ ಪೌರನೆಂಬುದನ್ನು
ತಿಳಿದು ಭಯಗೊಂಡು ಖುದ್ದಾಗಿ ಬಂದು
ಕ್ಷಮೆಕೋರಿ ಅವನನ್ನೂ ಸೀಲನನ್ನೂ ಬಿಡುಗಡೆಗೊಳಿಸುತ್ತಾನೆ.
ಆದರೆ ದ್ವಿತೀಯ ಬಾರಿಗೆ ಬಂಧಿತನಾಗುವ
ಪೌಲನ ಶಿರಚ್ಛೇಧನವಾಗುತ್ತದೆ. ಅವನು ರಕ್ತಸಾಕ್ಷಿಯಾಗುತ್ತಾನೆ. ಒಂದು ಅಂದಾಜಿನ
ಪ್ರಕಾರ ಪೌಲನು ಹುತಾತ್ಮನಾದದ್ದು ಕ್ರಿ.ಶ.62-64ರ ನಡುವೆ. ಸಂತ
ಪೇತ್ರನೊಂದಿಗೆ ಸಂತ ಪೌಲನ ಹಬ್ಬವನ್ನು
ಜೂನ್ 29ರಂದೇ ಆಚರಿಸಲಾಗುತ್ತದೆ. ಪೌಲನು
ಪರಿವರ್ತನೆ ಹೊಂದಿದ ದಿನವಾಗಿ ಜನವರಿ
25ನ್ನು ವಿಶಿಷ್ಟ ಹಬ್ಬದ ದಿನವನ್ನಾಗಿ
ಆಚರಿಸಲಾಗುತ್ತದೆ.
ಸಂತ
ಪೌಲನನ್ನು ಧರ್ಮಪ್ರಚಾರಕರ, ಸುಸಂದೇಶಕರ್ತರ, ಬರಹಗಾರರ, ಪತ್ರಕರ್ತರ, ಗುಡಾರ ನಿರ್ಮಿಸುವವರ ಪಾಲಕ
ಸಂತನಾಗಿ ನೇಮಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ