ಈತ
ಪೇತ್ರನ ಕಿರಿಯ ಸಹೋದರ. ಈತ ಮೂಲತಃ ಬೆತ್ಸಾಯಿದ ಎಂಬ ಊರಿನವನು (ಯೊವಾನ್ನ1:44). ಇವರಿಬ್ಬರ ತಂದೆ ಜೋನ್ನ ಅಥವಾ
ಯೊವಾನ್ನ. ಅಂದ್ರೆಯ ಎಂಬ ಹೆಸರಿನ
ಅರ್ಥ ಪ್ರಾಯಶಃ 'ಗಂಡುಗಲಿ' ಅಥವಾ 'ಶೂರ' ಇರಬೇಕು.
ಇವನು ಯೇಸುವಿನ ಆಪ್ತಶಿಷ್ಯ ಯೊವಾನ್ನನಿಗೆ ಸ್ನೇಹಿತನೂ ಹೌದು. ಯೇಸುವನ್ನು ತನ್ನ
ಸಹೋದರ ಪೇತ್ರನಿಗೆ ಪರಿಚಯಿಸಿಕೊಡುವವನು ಇವನೇ. ಮದುವೆಯಾದ ಬಳಿಕ ಪೇತ್ರನು ಕಫೆರ್ನಾವುಮ್ನಲ್ಲಿರುವ ಅತ್ತೆಯ ಮನೆಯಲ್ಲಿ ವಾಸ್ತವ್ಯವನ್ನು
ಹೂಡಿದರೆ ಅವನೊಂದಿಗೆ ಅಂದ್ರೇಯನೂ ಅಲ್ಲೇ ತಂಗುತ್ತಾನೆ. ಈ
ಸಹೋದರರಿಬ್ಬರೂ ಬೆಸ್ತರು. ಗಲಿಲೇಯ ಸಮುದ್ರ ಇವರ
ಮೀನುಗಾರಿಕೆಯ ತಾಣ. ಸೌಮ್ಯ ಸ್ವಭಾವದ
ಇವನು ಮಾತುಗಾರನಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು
ತೆರೆಮರೆಯಲ್ಲಿ ಉಳಿಯಲು ಬಯಸುವಾತ. ಇವನು ಯೊವಾನ್ನನೊಂದಿಗೆ ಮೊದಲು ಸ್ನಾನಿಕ ಯೊವಾನ್ನನ
ಶಿಷ್ಯನಾಗಿದ್ದ. ಸ್ನಾನಿಕ ಯೊವಾನ್ನನೇ ಇವರಿಬ್ಬರಿಗೂ
'ದೇವರ ಕುರಿಮರಿ' ಅಥವಾ 'ರಕ್ಷಕ' ಯಾರೆಂದು
ತೋರಿಸಿಕೊಡುವಾತ. ಆಗಲೇ ಅವರು ಯೇಸುವನ್ನು ಹಿಂಬಾಲಿಸುವುದು.
ಗಲಿಲೇಯ ಸಮುದ್ರದ ಬಳಿ ಪೇತ್ರನೂ,
ಯಕೋಬನೂ ಸೇರಿದಂತೆ ನಾಲ್ವರು ಯೇಸುವಿನ ಶಿಷ್ಯರಾಗುತ್ತಾರೆ.
ಆ ಬಳಿಕ ಅಂದ್ರೆಯನ
ವಿವರಗಳು ಬೈಬಲ್ನಲ್ಲಿ ವಿರಳಗೊಳ್ಳುತ್ತಾ ಹೋಗುತ್ತವೆ.
ಯೇಸು ಗಲಿಲೇಯ ಸಮುದ್ರವನ್ನು ದಾಟಿ ಆಚೆಯ ದಡಕ್ಕೆ ಹೋದಾಗ ಅವರನ್ನು ಹಿಂಬಾಲಿಸಿ ಬಂದ ಐದು ಸಾವಿರ ಮಂದಿಗೆ ಆಹಾರವನ್ನು ಒದಗಿಸುವುದು ಹೇಗೆಂಬ ಚಿಂತನೆಯಲ್ಲಿ ಮಗ್ನರಾಗಿದ್ದಾಗ, ಯೇಸುವಿನೊಂದಿಗೆ ಚರ್ಚಿಸಿದವರು ಅಂದ್ರೆಯ ಮತ್ತು ಫಿಲಿಪ್ಪ. 'ಇಲ್ಲಿ ಒಬ್ಬ ಹುಡುಗನ ಬಳಿ ಜವೆ ಗೋದಿಯ ಐದು ರೊಟ್ಟಿಗಳೂ ಎರಡು ಮೀನುಗಳೂ ಇವೆ' ಎಂಬುದಾಗಿ ಯೇಸುವಿಗೆ ತಿಳಿಸಿದವನು ಅಂದ್ರೇಯ(ಯೋಹಾನ 6: 8-9). ಅದರ ಹೊರತಾಗಿ ಅಂದ್ರೆಯನ
ವಿಷಯ ಮತ್ತೆ ಕಾಣಲು ಸಿಗುವುದು ಯೇಸುವು ಕೊನೆಯ ಪಾಸ್ಕ ಹಬ್ಬವನ್ನು
ಆಚರಿಸಲಿದ್ದ ಸಂದರ್ಭದಲ್ಲಿ. ಹಬ್ಬಕ್ಕೆ ಬಂದ ಗ್ರೀಕರಲ್ಲಿ ಕೆಲವರು ಯೇಸುವನ್ನು ನೋಡಲು ಫಿಲಿಪ್ಪನ ಬಳಿಗೆ
ಬಂದು ಕೇಳಿಕೊಂಡಾಗ ಫಿಲಿಪ್ಪನು ಅಂದ್ರೆಯನ ಬಳಿಹೋಗಿ ವಿಷಯವನ್ನು ತಿಳಿಸುತ್ತಾನೆ.
ಅನಂತರ ಅವರಿಬ್ಬರೂ ಹೋಗಿ ಯೇಸುವಿನೊಂದಿಗೆ ಚರ್ಚಿಸುತ್ತಾರೆ(ಯೊವಾನ್ನ 12:20-22). ಯೇಸು ಮಹಾದೇವಾಲಯದ ಕಟ್ಟಡದ
ಕಲ್ಲುಗಳು ಒಂದರ ಮೇಲೆ ಒಂದು
ಉಳಿಯುವುದಿಲ್ಲವೆಂದು ನುಡಿದು ಓಲಿವ್ ಗುಡ್ಡದ
ಮೇಲೆ ಒಂಟಿಯಾಗಿ ಇದ್ದಾಗ ಅವರ ಬಳಿ
ಬಂದು, "ಇವು ಸಂಭವಿಸುವುದು ಯಾವಾಗ?"
ಎಂದು ಪ್ರಶ್ನಿಸುವ ನಾಲ್ವರಲ್ಲಿ ಅಂದ್ರೆಯನೂ ಓರ್ವ(ಮಾರ್ಕ 13:1-9). ಸಾಮಾನ್ಯವಾಗಿ
ಅಂದ್ರೆಯನ ಹೆಸರು ಮೊದಲ ನಾಲ್ಕು
ಹೆಸರುಗಳಲ್ಲಿ ಒಂದಾಗಿ ಕಾಣಲು ಸಿಗುತ್ತದೆ.
ನಾಲ್ಕು ಸುಸಂದೇಶಗಳ ಹೊರತಾಗಿ ಅಂದ್ರೆಯನ ಹೆಸರು
'ಪ್ರೇಷಿತರ ಕ್ರಿಯಾಕಲಾಪಗಳು' ಎಂಬ ಕೃತಿಯಲ್ಲಿ ಮಾತ್ರ
ನೋಡಬಹುದು; ಅದೂ ಒಮ್ಮೆ; ಪ್ರೇಷಿತರ
ಪಟ್ಟಿಯಲ್ಲಿ ಮಾತ್ರ.
ಚಕ್ರವರ್ತಿ ನೀರೋನ ಆಳ್ವಿಕೆಯ ಅವಧಿಯಲ್ಲಿ ಅಂದ್ರೆಯನು ಹುತಾತ್ಮನಾದನೆಂದು ತಿಳಿದು ಬರುತ್ತದೆ. ಕ್ರಿ.ಶ. 60 ನವೆಂಬರ್, 30ರಂದು 'X' ಆಕಾರದ ಶಿಲುಬೆಯಲ್ಲಿ ಅಂದ್ರೆಯನು ತನ್ನ ಪ್ರಾಣವನ್ನು ಅರ್ಪಿಸಿದನೆನ್ನಲಾಗುತ್ತಿದೆ.
3ನೇ ಶತಮಾನದ್ದೆನ್ನಲಾದ 'ಪವಿತ್ರ ಧರ್ಮಪ್ರಚಾರಕ ಅಂದ್ರೇಯನ ಕ್ರಿಯಾಕಲಾಪಗಳು ಎಂಬ ನಂಬಿಕೆಗೆ ಅರ್ಹವಲ್ಲವೆಂದು ಪರಿಗಣಿಸಲಾದ ಕೃತಿಯೊಂದು ಅಂದ್ರೇಯನ ಧರ್ಮಪ್ರಚಾರ ಕಾರ್ಯಗಳನ್ನೂ ಮತ್ತು ಅದನ್ನು ಕೈಗೊಂಡಾಗ ಆದಂತಹ ಕಿರುಕುಳವನ್ನು ವಿವರಿಸುತ್ತದೆ. 'ನರಭಕ್ಷಕರ ನಗರದಲ್ಲಿ ನಡೆಸಲಾದ ಆಂಡ್ರ್ಯೂ ಮತ್ತು ಮಥಿಯಾಸ್ ಅವರ ಕ್ರಿಯೆಗಳನ್ನು ಹೆಚ್ಚು ಸ್ಪಷ್ಟವಾಗಿ ವಿವರಿಸಲಾಗಿದೆ. ನರಭಕ್ಷಕರಿಂದ ಬಂಧನಕ್ಕೊಳಗಾದ ಮತ್ತೀಯನನ್ನು ರಕ್ಷಿಸುವ ಸಲುವಾಗಿ ಆಂಡ್ರ್ಯೂನನ್ನು ದೇವತೆಗಳು ಹೊತ್ತು ನಡೆಯುತ್ತಾರೆ' ಎಂಬ ವಿವರಗಳು ಅದರಲ್ಲಿ ಕಂಡುಬರುತ್ತದೆ.
ಅಂದ್ರೇಯನನ್ನು ಶಿಲುಬೆಗೇರಿಸಿದಾಗ ಮೂರು ದಿನಗಳ ಕಾಲ ಜೀವಂತವಾಗಿ ಶಿಲುಬೆಯಲ್ಲಿ ಉಳಿದು ಆ ದಾರಿಯಲ್ಲಿ ಬಂದ ದಾರಿಹೋಕರಿಗೆ ಯೇಸುವಿನ ಸಂದೇಶಗಳನ್ನು ನೀಡಿದನೆಂಬ ವಿವರಗಳೂ ಸಹ ಆ ಕೃತಿಯಲ್ಲಿ ದೊರೆಯುತ್ತವೆ.
'ಅಂದ್ರೆಯನು ಸಿಥಿಯನ್ನರಿಗೂ[ಜಾರ್ಜಿಯಾ] ಮತ್ತು ಥ್ರೇಸಿಯನ್ನರಿಗೂ[ಬಲ್ಗೇರಿಯಾ] ಬೋಧಿಸಿದನು. ಅಚಾಯಾ[ಗ್ರೀಸ್]ದ ಪಟ್ಟಣವಾದ ಪೇತ್ರೆಯಲ್ಲಿ ಆತನನ್ನು ಶಿಲುಬೆಗೇರಿಸಲಾಯಿತು. ಆ ಶಿಲುಬೆಯನ್ನು ಆಲಿವ್ ಮರದ ಮೇಲೆ ತೂಗು ಹಾಕಲಾಯಿತು. ಆತನ ಮರಣಾನಂತರ ಅಲ್ಲಿಯೇ ಅವನನ್ನು ಸಮಾಧಿ ಮಾಡಲಾಯಿತು' ಎಂಬುದು ಹಿಪ್ಪೊಲಿಟಸ್ ಎಂಬ ಇತಿಹಾಸ ತಜ್ಞನ ಬರಹದಿಂದ ತಿಳಿದುಬರುವ ಅಂಶಗಳು.
ಅಂದ್ರೆಯನ ಧರ್ಮಪ್ರಚಾರ ಕಾರ್ಯಾಲಯವು ಸಿಥಿಯಾದಲ್ಲಿತ್ತು ಎಂಬುದಾಗಿ ಯುಸೀಬಿಯುಸ್ ತಿಳಿಸಿದ್ದಾನೆ.
ಅಂದ್ರೇಯನು ಹುತಾತ್ಮನಾದ ದಿನವನ್ನು ಸಂತನ
ಸ್ಮರಣಾರ್ಥ ಲತೀನ್ ಮತ್ತು ಗ್ರೀಕ್
ಚರ್ಚ್ಗಳಲ್ಲಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ.
ಕ್ರಿ.ಶ. 357ರಲ್ಲಿ ಸಂತ
ಅಂದ್ರೆಯನ ಅವಶೇಷಗಳನ್ನು 'ಪತ್ರೇ' ಎಂಬ ಸ್ಥಳದಿಂದ
'ಕಾನ್ಸ್ಟಾಂಟಿನೋಪಲ್'ಗೆ ಸ್ಥಳಾಂತರಿಸಿ ಅಲ್ಲಿನ 'ಅಪೋಸ್ಟಲ್ಸ್ ಚರ್ಚ್'ನಲ್ಲಿ ಇಡಲಾಗುತ್ತೆ. ಪ್ರೆಂಚರು ಕಾನ್ಸ್ಟಾಂಟಿನೋಪಲನ್ನು ಹಿಡಿದಾಗ
'ಕಪುವಾ'ದ ಕಾರ್ಡಿನಲ್ ಆದ
ಪೀಟರ್ ಅದನ್ನು ಎತ್ತಿ ತಂದು
ಇಟಲಿಯ ಅಮಾಲ್ಫಿ ಪ್ರಧಾನಾಲಯದಲ್ಲಿ ಇರಿಸಿದರು
ಎನ್ನಲಾಗುತ್ತಿದೆ.
ಪ್ರಸ್ತುತ
ಸಂತ ಅಂದ್ರೆಯರನ್ನು ರಷ್ಯಾ ಮತ್ತು ಸ್ಕಾಟ್ಲ್ಯಾಂಡ್ನ ಮುಖ್ಯ
ಪಾಲಕರನ್ನಾಗಿ ಮಾಡಿ ಅವರಿಗೆ ಗೌರವಾರ್ಪಣೆಯನ್ನು
ಸಲ್ಲಿಸಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ