ನಿರೂಪಗಳು(Epistles)

ಯೇಸುವಿನ ಅನುಯಾಯಿಗಳಾದ ಪೇತ್ರ, ಯೊವಾನ್ನರಲ್ಲದೆ ಯೇಸು ಬದುಕಿದ್ದಾಗ ಅವರನ್ನು ಕಡೆಗಣಿಸುತ್ತಿದ್ದ ಆದರೆ ಮರಣಾನಂತರ ಅವರನ್ನು ತಮ್ಮ ಪ್ರಭುವೆಂದು ಸ್ವೀಕರಿಸಿದ ಯೇಸುವಿನ ಸೋದರರಾದ ಯಕೋಬ ಮತ್ತು ಯೂದರೂ ಸೇರಿದಂತೆ ಯೇಸುವಿನ ಮರಣ ಪುನರುತ್ಥಾನಗಳ ಬಳಿಕ ಯೇಸುವಿನ ಅನುಯಾಯಿಗಳನ್ನು ಹಿಂಸಿಸುತ್ತಿದ್ದು ಬಳಿಕ ಯೇಸುವಿನ ಕಟ್ಟಾ ಅನುಯಾಯಿಯಾಗಿ ಮಾರ್ಪಟ್ಟ ಪೌಲನೂ ಆಯಾ ಕ್ರೈಸ್ತಸಭೆಗಳಿಗೆಂದು ಅಥವಾ ಅವುಗಳ ಪ್ರಮುಖ ವ್ಯಕ್ತಿಗಳಿಗೆಂದು ಧಾರ್ಮಿಕವಾಗಿ ಬರೆದ ಪತ್ರಗಳನ್ನು 'ನಿರೂಪಗಳು' ಎಂದು ಹೇಳಲಾಗುತ್ತದೆ. ಬೈಬಲ್ ಹೊಸ ಒಡಂಬಡಿಕೆಯಲ್ಲಿ ಇಂತಹ ಅನೇಕ ನಿರೂಪಗಳನ್ನು ನೋಡಬಹುದು. ಬೈಬಲ್ನಲ್ಲಿ ದಾಖಲಾಗಿರುವ ನಿರೂಪಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ನಿರೂಪಗಳನ್ನು ಬರೆದವನು ಸಂತ ಪೌಲ. ಈತ ರೋಮನ್‌, ಗಲಾತ್ಯ, ಎಫೆಸೆಸ್‌, ಫಿಲಿಪ್ಪಿಯ, ಕೊಲೊಸ್ಸೆಯ ಸಭೆಗಳಿಗೆ ತಲಾ ಒಂದೊಂದು ನಿರೂಪಗಳನ್ನು ಬರೆದರೆ; ಕೊರಿಂಥ ಮತ್ತು ಥೆಸಲೋನಿಕದವರಿಗೆ ಎರೆಡೆರಡು ನಿರೂಪಗಳನ್ನು ಕಳುಹಿಸಿಕೊಟ್ಟಿದ್ದಾನೆ. ವೈಯುಕ್ತಿಕವಾಗಿಯೂ ಕೆಲವರಿಗೆ ನಿರೂಪಗಳನ್ನು ಬರೆದಿರುವ ಪೌಲನು ಒಂದೊಂದು ನಿರೂಪಗಳನ್ನು ತೀತ ಮತ್ತು ಫಿಲೆಮೋನನಿಗೆ ಬರೆದಿದ್ದಾನೆ. ಅಂತೆಯೇ ತಿಮೋಥೇಯನಿಗಾಗಿ ಎರಡು ನಿರೂಪಗಳನ್ನು ರಚಿಸಿದ್ದಾನೆ. ಇಬ್ರಿಯರಿಗೆ ಬರೆದ ನಿರೂಪ ಪೌಲನದೇ ಎಂದು ಮೊದಲು ಹೇಳಲಾಗುತ್ತಿದ್ದರೂ ಅನಂತರ ಅದು ಪೌಲನದಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ ಅದನ್ನ ಬರೆದವರು ಯಾರು ಎಂಬ ಸುಳಿವು ಇನ್ನೂ ದೊರೆತಿಲ್ಲ. ನಿರೂಪವನ್ನು ಹೊರತುಪಡಿಸಿದಂತೆ ಪೌಲನು ಬರೆದ ಒಟ್ಟು ನಿರೂಪಗಳ ಸಂಖ್ಯೆ ಹದಿಮೂರು. ಉಳಿದಂತೆ ಎರಡು ನಿರೂಪಗಳನ್ನು ಪೇತ್ರನೂ, ಮೂರು ನಿರೂಪಗಳನ್ನು ಯೊವಾನ್ನನೂ ಬರೆದಿದ್ದಾನೆ. ಯೇಸುವಿನ ನಾಲ್ವರು ಸಹೋದರರಲ್ಲಿ ಇಬ್ಬರು ಅವರ ಮರಣಾನಂತರ ಸಕ್ರಿಯರಾಗಿ ಕ್ರೈಸ್ತಧರ್ಮಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಎರಡು ನಿರೂಪಗಳು ಬೈಬಲ್ನಲ್ಲಿ ದಾಖಲಾಗಿವೆಯಲ್ಲದೆ ಆ ಮೂಲಕ ಅವರ ಹೆಸರುಗಳನ್ನೂ ಅಜರಾಮರಗೊಳಿಸಿವೆ. ಎರಡೂ ನಿರೂಪಗಳನ್ನು ಬರೆದವರು ಯಕೋಬ ಮತ್ತು ಯೂದ. ಎಲ್ಲಾ ನಿರೂಪಗಳು ಸೇರಿ ಬೈಬಲ್ ಹೊಸ ಒಡಂಬಡಿಕೆಯಲ್ಲಿರುವ ಒಟ್ಟು ನಿರೂಪಗಳ ಸಂಖ್ಯೆ ಇಪ್ಪತ್ತೊಂದು. ಇವುಗಳನ್ನೂ ಪ್ರತ್ಯೇಕ ಗ್ರಂಥಗಳೆಂದೇ ಪರಿಗಣಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ