ಹಿಸ್ಸೋಪ್(Hyssop)‌

ಗ್ರೀಕ್ಭಾಷೆಯಲ್ಲಿ 'ಹಿಸ್ಸೊಪ್‌' ಎಂದು ಕರೆಯಲಾಗುವ ಸಸ್ಯಕ್ಕೆ ಹೀಬ್ರೂ ಭಾಷೆಯಲ್ಲಿ, 'ಎಜ಼ೋವ್‌' ಎನ್ನಲಾಗುತ್ತದೆಯಾದರೂ ಖಚಿತವಾಗಿ ಇದು ಯಾವ ಸಸ್ಯ ಎಂದು ಇನ್ನೂ ಗುರುತಿಸಲಾಗಿಲ್ಲ. ಇತ್ತೀಚೆಗಿನ ಕೆಲವು ವಿದ್ವಾಂಸರ ಪ್ರಕಾರ ಪ್ರಾಯಶಃ ಇದು 'ಒರಿಗಾನುಮ್ ಮಾರು' ಜಾತಿಯ 'ಮಾರ್ಜೊರಮ್‌' ಎಂಬ ಸಸ್ಯವಿರಬೇಕು ಎನ್ನಲಾಗುತ್ತಿದೆ. ಇದು ಪ್ಯಾಲೆಸ್ಟಿನ್ನಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುವ ಸುವಾಸನಾಭರಿತ ಗಿಡವಾಗಿದೆ. ಅನುಕೂಲಕರ ವಾತಾವರಣದಲ್ಲಿ ಸಾಮಾನ್ಯವಾಗಿ ಒಂದೂವರೆ ಅಡಿಯಿಂದ ಮೂರು ಅಡಿಗಳ ಎತ್ತರಕ್ಕೆ ಬೆಳೆಯುವ ಗಿಡದ ಕೊಂಬೆಗಳ ದಪ್ಪನಾದ ಎಲೆಗಳು ಕೂದಲಿನಂತಿರುತ್ತವೆ. ಬಂಡೆಗಳ ಬಿರುಕುಗಳು, ಸಂದುಗಳು ಮತ್ತು ಗೋಡೆಗಳ ಮೇಲೂ ಇವು ಬೆಳೆಯುತ್ತವೆ. ಇವುಗಳ ಬಗ್ಗೆ ಬೈಬಲ್ ಅರಸುಗಳು ಕೃತಿಯಲ್ಲಿ ಉಲ್ಲೇಖವಿದ್ದು, 'ಅವು ಗೋಡೆಗಳ ಮೇಲೆ ಬೆಳೆಯಲಾಗುವ ವನಸ್ಪತಿಯ ಒಂದು ಗಿಡ' ಎಂದು ಹೇಳಲಾಗಿದೆ(1ಅರಸು4:33). ಇಸ್ರೇಲಿಗರು ಸಸ್ಯದಿಂದ ಪಾಸ್ಕ ಬಲಿಯ ರಕ್ತವನ್ನು ಮನೆಯ ಬಾಗಿಲ ಪಟ್ಟಿಗಳ ಮೇಲೆ ನಿಲುವುಗಂಬಗಳ ಮೇಲೆ ಚಿಮುಕಿಸಿದರು ಎಂಬ ವರ್ಣನೆ ಬೈಬಲ್ನಲ್ಲಿದೆ(ವಿಮೋ 12:21-22). 'ಮೋಶೆ ಧರ್ಮಶಾಸ್ತ್ರದ ಆಜ್ಞೆಗಳನ್ನೆಲ್ಲಾ ಸಾರಿ ಹೇಳಿ, ಹೋತ ಹಾಗೂ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅದಕ್ಕೆ ನೀರು ಬೆರೆಸಿದನು; ಅದನ್ನು ಕೆಂಪು ಉಣ್ಣೆಯ ನೂಲಿನಿಂದ ಕಟ್ಟಿದ ಹಿಸ್ಸೋಪ್ಕಡ್ಡಿಗಳಿಂದ ಪವಿತ್ರಗ್ರಂಥದ ಮೇಲೂ ಜನರ ಮೇಲೂ ಚಿಮುಕಿಸಿದನು,' ಎನ್ನುತ್ತದೆ ಹಿಬ್ರಿಯರಿಗೆ ಬರೆದ ಪತ್ರ(9:19-20). ಚರ್ಮರೋಗ ಅಥವಾ ಕುಷ್ಟರೋಗವು ಗುಣವಾದ ಮೇಲೆ ರೋಗಿಯನ್ನು ಶುದ್ದೀಕರಣ ಮಾಡುವಾಗ ಸಜೀವವಾದ ಎರಡು ಶುದ್ಧಪಕ್ಷಿಗಳನ್ನು ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್ಗಿಡದ  ಬರಲನ್ನೂ ತೆಗೆದುಕೊಂಡು ಒರತೆ ಮೇಲಿನ ನೀರಿನಲ್ಲಿ ವಧಿಸಿದ ಒಂದು ಪಕ್ಷಿಯ ರಕ್ತದಲ್ಲಿ ಅವುಗಳನ್ನೂ ಉಳಿದ ಪಕ್ಷಿಯನ್ನೂ ಅದ್ದಿ ಶುದ್ದೀಕರಣ ಮಾಡುವವನ ಮೇಲೆ ಏಳು ಸಲ ಪ್ರೋಕ್ಷಿಸಿ ಅವನನ್ನು ಶುದ್ಧನೆಂದು ನಿರ್ಣಯಿಸಿ ಪಕ್ಷಿಯನ್ನು ಅಡವಿಯ ಕಡೆಗೆ ಬಿಟ್ಟುಬಿಡಬೇಕು' ಎಂಬ ವಿವರವು ಯಾಜಕಕಾಂಡದಲ್ಲಿದೆ(14:1-7). 'ಹಿಸ್ಸೋಪಿನಿಂದ ನೀ ಚಿಮುಕಿಸೆ, ನಾ ಶುದ್ಧನಾಗುವೆ. ನೀ ತೊಳೆದೆಯಾದರೆ ಹಿಮಕ್ಕಿಂತ ನಾ ಬೆಳ್ಳಗಾಗುವೆ' ಎಂದು ಕೀರ್ತನೆಯಲ್ಲಿ ಕಾಣಬಹುದು(51:7).


ಯೇಸು ಶಿಲುಬೆಯಲ್ಲಿ ಮರಣಹೊಂದುವ ಮೊದಲು ತಮಗೆ ದಾಹವಾಗಿದೆ ಎಂದು ನುಡಿದಾಗ, ಬಳಿಯಿದ್ದ ಸೈನಿಕರು ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ ಹಿಸ್ಸೋಪ ಗಿಡದ ಕೋಲಿಗೆ ಸಿಕ್ಕಿಸಿ, ಯೇಸುವಿನ ಬಾಯಿಗೆ ಮುಟ್ಟಿಸಿದರು ಎನ್ನುತ್ತದೆ ಯೊವಾನ್ನನ ಸುಸಂದೇಶ(19:29). ಆದರೆ ಇದು ಹಲವು ಸಂದೇಹಗಳಿವೆ ಆಸ್ಪದವಾಗಿದೆ; ಸಾಮಾನ್ಯವಾಗಿ ಗಿಡಗಳು ಮೂರು ಅಡಿಗಿಂತಲೂ ಎತ್ತರವಾಗುವ ಸಂಭವ ತೀರಾ ಕಮ್ಮಿ. ಅಲ್ಲದೆ ಇವುಗಳ ಕೊಂಬೆಗಳು ಅಷ್ಟು ಬಲವಾಗಿಯೂ ಇರುವುದಿಲ್ಲ ಎಂಬುದು ತಿಳಿದು ಬರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ