.
ಇದು ಯೆಹೂದ್ಯರ ‘ಸುಗ್ಗಿಹಬ್ಬ’ದ ದಿನ. ಮೋಸೆಸನು ದೇವರಿಂದ ದಶಾಜ್ಞೆಗಳನ್ನು ಪಡೆದ ಸ್ಮರಣಾರ್ಥವಾಗಿ ಆಚರಿಸಲಾಗುವ ದಿನ. 'ಹೊಸ ಗೋದಿ ಬೆಳೆಯ ಪ್ರಥಮ ಸಮರ್ಪಣೆಯ ದಿನ. ಪಾಸ್ಕ ಹಬ್ಬದ ಬಳಿಕ ಐವತ್ತನೆಯ ದಿನ ಆಚರಿಸಲಾಗುವ ಹಬ್ಬ.
ಪಾಸ್ಕವಾದ ಏಳು ವಾರಗಳ ಮೇಲೆ ನೀವು ಸುಗ್ಗಿ ಹಬ್ಬವನ್ನು ಆಚರಿಸಬೇಕು' (ವಿಮೋ 34:22). ಏಳು ವಾರಗಳ ಮೇಲೆ (ನಲ್ವತ್ತೊಂಭತ್ತು ದಿನಗಳ ಬಳಿಕ) ಅಂದರೆ ಐವತ್ತನೆಯ ದಿನ ಆಚರಿಸಬೇಕು ಎಂಬುದೇ ಅದರರ್ಥ. ಪಾಸ್ಕಹಬ್ಬದ ನಂತರ ಐವತ್ತನೆಯ ದಿನ ಈ ಹಬ್ಬಾಚರಣೆಯನ್ನು ಮಾಡಲಾಗುತ್ತದೆ. ಆದುದರಿಂದಲೇ ಈ ಹಬ್ಬವನ್ನು 'ಪಂಚಾಶತ್ತಮ' ಹಬ್ಬ ಎಂದು ಕರೆಯಲಾಗುತ್ತದೆ. 'ನೀವು ಬಿತ್ತನೆ ಮಾಡಿದ ಹೊಲಗದ್ದೆಗಳಲ್ಲಿ ಮೊದಲನೆಯ ಫಲ ದೊರೆತಾಗ ಸುಗ್ಗಿಯ ಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಅಂದರೆ, ಹೊಲ ತೋಟಗಳಿಂದ ನೀವು ಬೆಳೆಯನ್ನು ಕೂಡಿಸುವಾಗ, ಸುಗ್ಗಿಯ (ಫಲ ಸಂಗ್ರಹದ) ಹಬ್ಬವನ್ನು ಆಚರಿಸಬೇಕು. ಹೀಗೆ ವರ್ಷಕ್ಕೆ ಮೂರು ಬಾರಿ ನಿಮ್ಮ ಗಂಡಸರೆಲ್ಲರೂ ಸರ್ವೇಶ್ವರನೂ ದೇವರೂ ಆದ ನನ್ನ ಸನ್ನಿಧಿಗೆ ಬರಬೇಕು,' ಎನ್ನುತ್ತದೆ ವಿಮೋಚನಾಕಾಂಡ(23:16-17). ಈ ಹಬ್ಬವನ್ನು 'ಪ್ರಥಮ ಕಳಿತ ಹಣ್ಣುಗಳ ದಿನ' ವೆಂದು ಸಂಖ್ಯಾಕಾಂಡ(28:26)ದಲ್ಲಿ ಹೇಳಲಾಗಿದೆ. ಈ ಹಬ್ಬವನ್ನು ಹೇಗೆ ಆಚರಿಸಬೇಕು ಎನ್ನುವುದಕ್ಕೆ ಅಗತ್ಯವಾದ ನಿರ್ದೇಶನಗಳನ್ನು ಲೇವಿಯರು(23:15-21) ಸಂಖ್ಯಾಕಾಂಡ(28:26-31) ಹಾಗೂ ಧರ್ಮೋಪದೇಶ ಕಾಂಡ(16:9-12)ಗಳಲ್ಲಿ ವಿವರಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ