ಬೆತ್ಲೆಹೆಮ್ನಲ್ಲಿ ಶಿಶುಯೇಸು ಹುಟ್ಟಿದ ಸಂದರ್ಭದಲ್ಲಿ ಮೂಡಣ ದಿಕ್ಕಿನಿಂದ ಆ ಮೂವರು ಜ್ಞಾನಿಗಳು
ಶಿಶು ಯೇಸುವನ್ನು ಅರಸುತ್ತಾ ಬಂದು ಅವರನ್ನು ಕಂಡು ಸಾಷ್ಟಾಂಗವೆರಗಿ ಆರಾಧಿಸಿ ಕೊಡುಗೆಗಳನ್ನು ನೀಡಿ ಹೊರಡುತ್ತಾರೆ. ಆದರೆ ಅವರ ಹೆಸರು ಕುಲಗೋತ್ರಗಳು ಮಾತ್ರ ಬೈಬಲ್ನ ಪುಟಗಳನ್ನೆಲ್ಲಾ ತಿರುವಿ
ಹಾಕಿದರೂ ಲಭ್ಯವಾಗುವುದಿಲ್ಲ. ಅಲ್ಲಿ ತಿಳಿದು ಬರುವುದು ಅವರು ಜ್ಯೋತಿಷಿಗಳೆಂಬುದು ಮಾತ್ರವೇ.
ಆ
ಮೂವರೂ ಗಗನದಲ್ಲಿ ಮೂಡಿದ ಯೆಹೂದ್ಯರ ಅರಸನನ್ನು ಸೂಚಿಸುವ ಹೊಳೆಯುವ
ತಾರೆಯೊಂದನ್ನು ಕಂಡು ಗ್ರಂಥಗಳನ್ನು ಅಭ್ಯಸಿಸುವುದರ ಮೂಲಕ ವಿವರಗಳನ್ನು ಸಂಗ್ರಹಿಸಿ ಹೊರಟುಬಂದವರೆಂದು ತಿಳಿಯುತ್ತದೆ. ಅವರು ಮೊದಲು ಹೆರೋದನನ್ನು ಭೇಟಿಯಾದರೂ ಹೆರೋದನ ಸೂಚನೆಯಂತೆ ಶಿಶುಯೇಸುವನ್ನು ಕಂಡ ಬಳಿಕ ಹೆರೋದನ ಬಳಿಗೆ ಹಿಂದಿರುಗದೆ ಬೇರೆ ದಾರಿಯನ್ನು ಹಿಡಿದು ಹೋಗುತ್ತಾರೆ ಎಂಬ ವಿವರಗಳು ಲಭ್ಯವಾದರೂ ಅವರ ಇತಿವೃತ್ತಗಳು ಮಾತ್ರ ತಿಳಿದು ಬರುವುದಿಲ್ಲ. ಅದಷ್ಟೇ ಅಲ್ಲ; ಅವರೆಷ್ಟು ಮಂದಿ, ಅವರು ಬಂದಿದ್ದು ಎಲ್ಲಿಂದ? ಎಂಬ
ವಿವರಗಳೂ ಬೈಬಲ್ನಲ್ಲ್ಲಿ ದೊರಕುವುದಿಲ್ಲ. ಸಾಂಪ್ರದಾಯಿಕವಾಗಿ ಅವರನ್ನು ಮೂವರು ಎಂಬಂತೆ ಚಿತ್ರಿಸಲಾಗುತ್ತಿದೆ. ಅವರು ಯೇಸು ಕಂದನಿಗೆ ನೀಡಿದ್ದು ಚಿನ್ನ, ಧೂಪ ಮತ್ತ ರಕ್ತಬೋಳಗಳಂತಹ ಅಮೂಲ್ಯ ಕೊಡುಗೆಗಳನ್ನು. ಇಲ್ಲಿ ಮೂರು ವಸ್ತುಗಳನ್ನು ಶಿಶು ಯೇಸುವಿಗೆ ನೀಡಿರುವ ಪಟ್ಟಿ ಇರುವುದರಿಂದ ಅವುಗಳನ್ನು ನೀಡಿದ್ದು ಮೂವರು ಎನ್ನಲಾಗುತ್ತಿದೆಯಷ್ಟೆ. ಅದರಾಚೆಗಿನ ವಿವರಗಳು ಲಭ್ಯವಾಗುವುದಿಲ್ಲ. ಬೈಬಲ್ ಪಂಡಿತರು ಮತ್ತ ಸಂಶೋಧಕರು ಅವರು ಮೂವರಲ್ಲ; ಅದಕ್ಕಿಂತಲೂ ಹೆಚ್ಚಿನ ಮಂದಿ ಬಂದಿರಬೇಕು ಎನ್ನುತ್ತಾರೆ. ಅವರು ಒಟ್ಟು ಎಂಟು ಮಂದಿಯಿದ್ದರು ಎಂದು ವಾದ ಮಂಡಿಸುವವರೂ ಇದ್ದಾರೆ. ಅದೇನೇ ಇರಲಿ ಬಹುತೇಕರ ನಂಬಿಕೆಯ ಪ್ರಕಾರ ಅವರು ಮೂವರೇ ಎನ್ನುವುದಂತೂ ಸತ್ಯ.
ಆ
ಮೂವರು ಜ್ಯೋತಿಷಿಗಳ ಹೆಸರು; ಬಾಲ್ತಜ಼ಾರ್, ಮೆಲ್ಕಿಯೋರ್ ಮತ್ತು ಗಾಸ್ಪರ್. ಅವರು ಕಂಡಂತಹ ಉಜ್ವಲ ನಕ್ಷತ್ರ ಒಂದು ಮಿಲಿಯ ವರ್ಷಗಳಿಗೊಮ್ಮೆ ಸಂಭವಿಸುವ ಮೂರು ಮಹಾಗ್ರಹಗಳ ಸಂಗಮ. ಗುರು, ಮಂಗಳ ಮತ್ತು ಶನಿ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಸಂಗಮಿಸಿದ್ದರಿಂದ ಆ ಮಹಾಬೆಳಕು ಕಾಣಿಸಿಕೊಂಡಿತ್ತು
ಎಂಬುದು ಹಲವು ಸಂಶೋಧಕರ ಅಭಿಪ್ರಾಯ ಅಗಿದೆ.
ಕೆಲವು
ಬಾಹ್ಯದಾಖಲೆಗಳಲ್ಲಿ ಶಿಶುಯೇಸುವಿಗೆ ಯಾರು ಯಾರು, ಯಾವ ವಸ್ತುಗಳನ್ನು ನೀಡಿದರು ಎಂಬ ಉಲ್ಲೇಖವಿದೆ. ಮೆಲ್ಖಿಯೋರನು ಚಿನ್ನವನ್ನು ನೀಡಿದನೆಂದೂ, ಬಾಲ್ತಜ಼ಾರನು ರಕ್ತಬೋಳವನ್ನೂ ಹಾಗೂ ಗಾಸ್ಪರನು ಸುಗಂಧದ್ರವ್ಯ(ಧೂಪ)ಗಳನ್ನು ನೀಡಿದನೆಂದೂ ತಿಳಿದುಬರುತ್ತದೆ. ಅವರು ಬೆತ್ಲೆಹೆಮ್ನಲ್ಲಿ ಜನಿಸಿದ ಶಿಶುಯೇಸುವಿಗೆ ಕೊಡುಗೆಯಾಗಿ ನೀಡಿದ್ದು ಅಂದಿನ ಮಟ್ಟಿಗೆ ಅಮೂಲ್ಯವಾದ(ಬೆಲೆಬಾಳುವ) ವಸ್ತುಗಳೇ ಆಗಿದ್ದವ್ತು. ಅಂದ ಮೇಲೆ ಅವರು ಕೇವಲ ಜ್ಯೋತಿಷಿಗಳಾಗಿರಲು ಸಾಧ್ಯವಿರಲಿಕ್ಕಿಲ್ಲ. ಅದಕ್ಕಿಂತ ಮಿಗಿಲಾಗಿ ಇನ್ನೇನೋ ಆಗಿರಬೇಕು ಎಂಬ ಸಂದೇಹಗಳು ಬರುವುದು ಸಹಜ. ಈ ಬಗ್ಗೆ ಹುಡುಕಾಟ
ನಡೆಸಿ ಮಾಹಿತಿಗಳನ್ನು ಕಲೆ ಹಾಕುತ್ತಾ ಹೋದಂತೆ ರೋಚಕ ವಿಷಯವೊಂದು ನನ್ನ ಗಮನವನ್ನು ಸೆಳೆಯಿತು.
ಆ
ಮೂವರಲ್ಲಿ ಕೊನೆಯವನಾದ 'ಗಾಸ್ಪರ್' ಓರ್ವ ಭಾರತೀಯ ರಾಜನೆಂಬ ವಿಷಯವನ್ನು ಬಿಟಾನಿಕಾ ಎನ್ಸೈಕ್ಲೋಪೇಡಿಯಾ ಎತ್ತಿ ತೋರಿಸುತ್ತದೆ ಆದರೆ ಆಗಿನ ಭಾರತವೆಂದರೆ ಈಗಿನ ಭಾರತವಲ್ಲ. ಅಂದು ಆಫ್ಘಾನಿಸ್ತಾನದಿಂದ ಬರ್ಮಾ(ಈಗಿನ ಮಯನ್ಮಾರ್)ದವರೆಗೆ ವಿಶಾಲವಾಗಿ ಹರಡಿ ನಿಂತಿತ್ತು ನಮ್ಮ ಅಖಂಡ ಭರತ ಖಂಡ. ಆ ಪುರಾತನ ಭಾರತದ
ನಿವಾಸಿ ಗಾಸ್ಪರ್. ಕೆಲವೆಡೆ ಆತ ಕೇರಳದಿಂದ ಬಂದವನೆಂಬ
ಅಭಿಪ್ರಾಯವೂ ಇದೆ. ಆದರೆ ಸೂಕ್ತವಾದ ಪುರಾವೆಗಳು ಲಭ್ಯವಾಗುವುದಿಲ್ಲ. ಹಿಲ್ಡೆಶೀಮಿನ ಜಾನ್ ಎಂಬ ಇತಿಹಾಸಜ್ಞನು ಗಾಸ್ಪರ್ ಪುರಾತನ 'ತಕ್ಷಶಿಲೆ' ಎಂಬ ನಗರದ ಮುಖೇನ ಬೆತ್ಲೆಹೆಮ್ಗೆ ಪ್ರಯಾಣಿಸಿದ್ದನೆಂದು ದಾಖಲಿಸಿದ್ದಾನೆ.
ಉಳಿದವರಲ್ಲಿ
ಬಾಲ್ತಜ಼ಾರ್ ಅರೇಬಿಯಾದವನೂ ಮೆಲ್ಕಿಯೋರ್ ಪರ್ಷಿಯಾದವನೂ ಆಗಿದ್ದನೆಂಬುದನ್ನೂ ಬಿಟಾನಿಕಾ ಎನ್ಸೈಕ್ಲೋಪೇಡಿಯಾ ಹೇಳುತ್ತದೆ. ಆದರೆ ಇತರ ಕೆಲವು ಸಂಶೋಧಕರು ಬಾಲ್ತಜ಼ಾರನನ್ನು ಬ್ಯಾಬಿಲೋನಿಯಾದವನೆಂದೂ ಹೇಳುತ್ತಾರೆ. ಅವನು ಅರ್ಮೇನಿಯಾದವನೆಂದು ವಾದಿಸುವವರೂ, ಅವನು ಈಜಿಪ್ಟಿನ ರಾಜನಾಗಿದ್ದ ಎನ್ನುವವರೂ ಇದ್ದಾರೆ.
ಸಿರಿಯನ್ನರ
ಸಂಪ್ರದಾಯದ ಪ್ರಕಾರ ಈ ಮೂವರನ್ನು ಲಾರ್ವಾಂದದ್,
ಹೋರ್ಮಿಸ್ದಸ್ ಮತ್ತು ಗುಶ್ನಸಾಫ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅರ್ಮೇನಿಯನ್ನರು ಕಾಖ್ಬ, ಬಡದಖರೀದ ಮತ್ತು ಬಡದಿಲ್ಮ ಎಂಬ ಹೆಸರಿನಿಂದ ಅವರನ್ನು ಗುರುತಿಸುತ್ತಾರೆ.
ಒಂದು
ವಿವರಣೆಯ ಪ್ರಕಾರ ಈ ಮೂವರೂ ಅಕ್ಕಪಕ್ಕದ
ದೇಶಗಳಿಂದ ಹೊರಟು ಬಂದ ಅರಸರಾಗಿದ್ದರು. ಬೇರೆ ಬೇರೆ ಪ್ರದೇಶಗಳ ಆ ಮೂವರೂ ಒಟ್ಟಿಗೆ
ಹೊರಟು ಬಂದಿದ್ದಾರೆಂದರೆ ಅವರುಗಳ ನಡುವೆ ರಾಜತಾಂತ್ರಿಕ ಸಂಬಂಧವಿದ್ದಿರರಬೇಕೆಂಬ ಅಭಿಪ್ರಾಯವೂ ಇದೆ. ಇದನ್ನು ಪ್ರತಿಪಾದಿಸುವಂತೆ ಆ ಮೂರೂ ದೇಶಗಳು
ಒಮ್ಮೆ ಒಂದನ್ನೊಂದು ಬೆಸೆದುಕೊಂಡಿತ್ತು ಎಂಬುದೂ ನೈಜಸಂಗತಿಯೇ. ಭೌಗೋಳಿಕವಾಗಿ ಆಗಿನ ಪರ್ಷಿಯಾ(ಪ್ರಸಕ್ತ ಇರಾನ್) ದೇಶದ ಎಡಬಲಗಳಲ್ಲಿ ಅರೇಬಿಯಾ ಮತ್ತು ಭಾರತ(ಇಂದಿನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳೆರಡೂ ಸೇರಿದ್ದ)ದೇಶಗಳಿದ್ದವು ಎಂಬುದು ಇಲ್ಲಿ ಗಮನಿಸಬೇಕಾದಂತಹ ಅಂಶ.
ಇನ್ನೊಂದು
ವಿವರಣೆಯ ಪ್ರಕಾರ ಈ ಮೂವರಲ್ಲಿ ಒಬ್ಬನಷ್ಟೇ
ಜ್ಯೋತಿಶಾಸ್ತ್ರವನ್ನು ಬಲ್ಲವನಾಗಿದ್ದ. ನಿಸ್ಸಂದೇಹವಾಗಿಯೂ ಆತ ಬೇರೆ ಯಾರೂ
ಆಗಿರದೆ ಭಾರತದಿಂದ ಶಿಶುಯೇಸುವನ್ನು ಸಂದರ್ಶಿಸಲು ಹೋದ ಗಾಸ್ಪರನೇ ಆಗಿದ್ದ ಎಂಬ ವಿವರ ಲಭ್ಯವಾಗುತ್ತದೆ. ಆದರೆ ಅದು ಎಷ್ಟರ ಮಟ್ಟಿಗೆ ನಂಬಲರ್ಹವೆಂಬುದು ಖಚಿತವಾಗಿಲ್ಲ. ಆ ಮೂವರೂ ಒಂದೊಂದು
ಪ್ರದೇಶಗಳ ರಾಜರಾಗಿದ್ದರು ಎಂಬ ವಿವರ ಲಭ್ಯವಿದೆಯಾದರೂ ಅವರು ರಾಜರಲ್ಲ ತತ್ವಜ್ಞಾನಿಗಳು, ವಿದ್ವಾಂಸರು, ಶ್ರೀಮಂತ ವ್ಯಕ್ತಿಗಳು ಎಂದೂ ವಾದಿಸುವವರ ಸಂಖೈಯೇನೂ ಕಮ್ಮಿ ಇಲ್ಲ. ಇನ್ನೊಂದು ವಾದವು ಆ ಮೂವರನ್ನೂ ಯೆಹೂದಿಗಳೆಂದು
ಹೇಳುತ್ತದೆ. ಅವರು ಯೆಹೂದಿಗಳೇ ಆಗಿದ್ದಲ್ಲಿ ಅವರು ಬೇರೆ ದೇಶಗಳ ರಾಜರಾಗಿರುವ ಸಾಧ್ಯತೆ ಕಮ್ಮಿಯೇ.
ಕ್ರಿ.ಶ.೫೦೦ರ ಗ್ರೀಕ್
ಮೂಲ ಹಸ್ತಪ್ರತಿಯೊಂದರಲ್ಲಿ ಬಾಲ್ತಜ಼ಾರನು ಅರ್ಮೇನಿಯಾದಲ್ಲಿ ಕ್ರಿ.ಶ.೫೪ರಲ್ಲಿ ಕ್ರಿಸ್ತಜಯಂತಿಯನ್ನು
ಆಚರಿಸಿದ ಉಲ್ಲೇಖವಿದೆ. ಈ ವೇಳೆಯಲ್ಲಿ ಮೆಲ್ಖಿಯೋರನು
ಸಹ ಅಲ್ಲಿಗೆ ಆಗಮಿಸಿದ್ದನೆಂದು ಹೇಳಲಾಗುತ್ತಿದೆ. ಮರುವರ್ಷ ತನ್ನ ೧೧೨ನೇ ವಯಸ್ಸಿ(೬,ಜನವರಿ ೫೫)ನಲ್ಲಿ ಬಾಲ್ತಜ಼ಾರನು ಮೃತನಾದನೆಂಬುದು ತಿಳಿದುಬರುತ್ತದೆ. ಅದಕ್ಕೂ ಕೇವಲ ಐದು ದಿನಗಳ ಮೊದಲೇ ಮೆಲ್ಖಿಯೋರನು ತನ್ನ ೧೧೬ನೇ ವಯಸ್ಸಿನಲ್ಲಿ ದೈವಾಧೀನನಾಗಿರುತ್ತಾನೆ.
ಈ
ಮೂವರು ರಾಜರ ಸಮಾಧಿಯನ್ನು ಪರ್ಷಿಯಾದಲ್ಲಿ ಗುರುತಿಸಿದ ರೋಮ್ನ ಅಂದಿನ ಚಕ್ರವರ್ತಿನಿಯಾಗಿದ್ದ
ಸಂತ ಹೆಲೆನಳು ಅವರುಗಳ ಅವಶೇಷಗಳನ್ನು ತೆಗೆದುಕೊಂಡು ಹೋಗಿ ಕಾನ್ಸ್ಟಾಂಟಿನೋಪಲ್ನಲ್ಲಿ ಪುನರ್ಸ್ಥಾಪಿಸಿದಳೆಂದೂ ಬಳಿಕ ಅವುಗಳನ್ನು ಅಲ್ಲಿಂದ ಇಟಲಿಯ ಮಿಲಾನ್ಗೆ ಸಾಗಿಸಲಾಯಿತೆಂದೂ ಹೇಳಲಾಗುತ್ತಿದೆ.
ಫ್ರೆಡ್ರಿಕ್ ಬಾರ್ಬರೋಸ ಎಂಬಾತನು ಮಿಲಾನ್ ನಗರವನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಅಲ್ಲಿದ್ದ ಅವಶೇಷಗಳನ್ನು ಜರ್ಮನಿಯ ಕೊಲೊನ್ನ ಆರ್ಚ್‌ಬಿಷಪ್ರವರಿಗೆ ಹಸ್ತಾಂತರಿಸಿದನೆಂದು ತಿಳಿದುಬರುತ್ತದೆ. ಆ ಅವಶೇಷಗಳನ್ನು ಕೊಲೊನ್ನ ಕೆಥಡ್ರಲ್ನಲ್ಲಿ
ಸ್ಥಾಪಿಸಲಾಗುತ್ತದೆ. ಅವು ಈಗಲೂ ಕೆಥಡ್ರೆಲ್ನ ಉನ್ನತ ಬಲಿಪೀಠದ
ಹಿಂಭಾಗದಲ್ಲಿದೆ ಎನ್ನಲಾಗುತ್ತಿದೆ. ಧರ್ಮಸಭೆಯು ಈ ಮೂವರನ್ನೂ ಸಂತರೆಂದು
ಘೋಷಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ