ನೆಬೊ(ಪಿಸ್ಗಾ) ಪರ್ವತ


ಜಗತ್ತಿನ ಅತ್ಯಂತ ತಗ್ಗಿನಲ್ಲಿರುವ ಸರೋವರ ಅಥವಾ ಸಮುದ್ರವೆಂದರೆ ಮಧ್ಯ ಪ್ರಾಚ್ಯದ ಮೃತಸಮುದ್ರ. ಇದು ಸಮುದ್ರ ಮಟ್ಟದಿಂದ ಸುಮಾರು -೧೩೩೦ ಅಡಿ ತಗ್ಗಿನಲ್ಲಿದೆ. ಆಳದಲ್ಲಿರುವ ಮೃತ ಸಮುದ್ರದ ದಂಡೆಗಳು ಕ್ರಮೇಣ ಮೇಲಕ್ಕೇರುತ್ತಾ ಸಾಗುತ್ತವೆ;  ಅದರಲ್ಲೂ ಪೂರ್ವದ ದಂಡೆಯಂತೂ ಇನ್ನಷ್ಟು ಮೇಲಕ್ಕೇರಿ ಉತ್ತರದತ್ತ ಹೊರಳಿರುವ ಬೆಟ್ಟಗಳ ಶ್ರೇಣಿಗಳಲ್ಲಿ ವಿಲೀನಗೊಳ್ಳುತ್ತದೆ.  ಈ ಬೆಟ್ಟಗಳ ಶ್ರೇಣಿಗಳನ್ನು 'ಅಬಾರಿಮ್'1  ಬೆಟ್ಟಗಳು, ಅಥವಾ 'ಕಾವಲುಗಾರರ ಬೆಟ್ಟಗಳು'2 ಎಂಬುದಾಗಿ ಬೈಬಲ್‌ನಲ್ಲಿ ಕರೆಯಲಾಗಿದೆ. ಇವು ಬಹು ಹಿಂದೆ ಬೈಬಲ್‌ನಲ್ಲಿ ಕಾಣಸಿಗುವ ಮೊವಾಬ್ಯರ ನಾಡಿನಲ್ಲಿದ್ದು ಪ್ರಸ್ತುತ ಜೋರ್ಡಾನ್ ದೇಶಕ್ಕೆ ಸೇರಿದೆ. ಜೋರ್ಡಾನ್ ಮತ್ತು ಇಸ್ರೇಲನ್ನು ವಿಂಗಡಿಸುವ ಸರಹದ್ದು ಹಾದು ಹೋಗುವುದೇ ಮೃತ ಸಮುದ್ರದ ನಡುವಿನಿಂದ. ಇದು ಜೋರ್ಡಾನ್ ನದಿಯ ಮೂಲಕ ಮುಂದುವರಿಯುತ್ತದೆ. ಮೃತಸಮುದ್ರದ ಪಶ್ಚಿಮ ದಿಕ್ಕಿನಲ್ಲಿರುವುದೇ ಅಂದು ಇಸ್ರಾಯೇಲರಿಗೆ ದೇವರಿತ್ತ ವಾಗ್ದತ್ತ ನಾಡು; ಪ್ರಸಕ್ತ 'ಇಸ್ರೇಲ್' ಮತ್ತು 'ವೆಸ್ಟ್ ಬ್ಯಾಂಕ್' ಎಂಬ ವಿಭಜಿತ ಪ್ರದೇಶಗಳು.

ಕ್ರಿ.ಪೂ. 1600ರ ಮಧ್ಯಭಾಗದಲ್ಲಿ ಮೋಸೆಸನ ನಾಯಕತ್ವದಲ್ಲಿ ಈಜಿಪ್ಟ್‌ನಿಂದ ಹೊರನಡೆದ ಇಸ್ರಾಯೇಲರು ಕೆಂಪು ಸಮುದ್ರವನ್ನು ದಾಟಿ ನಲವತ್ತು ವರ್ಷಗಳ ಕಾಲ ಮರಳುಗಾಡಿನಲ್ಲಿ ಅಲೆದು ಕಡೆಗೆ ದೇವರ ಸಂಕಲ್ಪದಂತೆ ವಾಗ್ದತ್ತ ನಾಡಿನತ್ತ ಹೆಜ್ಜೆಯಿಕ್ಕುತ್ತಾರೆ. ಸಣ್ಣಪುಟ್ಟ ತಪ್ಪಿಗೂ ನಾವು ನಮ್ಮ ಹಿರಿಯರನ್ನು ಅಥವಾ ನಾಯಕರನ್ನು ಹಳಿಯುವುದು ಅಥವಾ ಅವರ ವಿರುದ್ಧ ಗೊಣಗುಟ್ಟುವುದು ಸಾಮಾನ್ಯ. ಹಾಗೆಯೇ ವಾಗ್ದತ್ತ ನಾಡಿಗೆ ಹೋಗುವ ಹಾದಿಯಲ್ಲಿ ಇಸ್ರಾಯೇಲರು ಅನೇಕ ಸಲ ಮೋಸೆಸನ ವಿರುದ್ದ ಗೊಣಗುಟ್ಟಿರುತ್ತಾರೆ. ಮೋಸೆಸನು ದೇವರ ಸಹಾಯದಿಂದ ಹೇಗೋ ಅವುಗಳನ್ನು ಬಗೆಹರಿಸಿಕೊಳ್ಳುತ್ತಾನೆ.

ಒಂದು ಸಲವಂತೂ ಇಸ್ರಾಯೇಲರ ಗೊಣಗುಟ್ಟುವಿಕೆ ಮೇರೆ ಮೀರುತ್ತದೆ. ಆಗ ದೈವಪ್ರಕೋಪದಿಂದ ಕಾಣಿಸಿಕೊಂಡ ಸರ್ಪಗಳು ಇಸ್ರಾಯೇಲರನ್ನು ಕಚ್ಚುತ್ತವೆ. ಅದರ ವಿಷದಿಂದ ಗೊಣಗುಟ್ಟಿದವರಲ್ಲಿ ಅನೇಕರು ಸಾಯುತ್ತಾರೆ. ಉಳಿದವರು ತಮ್ಮನ್ನು ರಕ್ಷಿಸುವಂತೆ ಮೋಸೆಸನಲ್ಲಿ ಮೊರೆಯಿಡುತ್ತಾರೆ.  ಆಗ ದೇವರ ಇಚ್ಚೆಗನುಸಾರ ಮೋಸೆಸನು ಕಂಚಿನಲ್ಲಿ ಸರ್ಪದ ಆಕೃತಿಯನ್ನು ಮಾಡಿ ಅದನ್ನು ದ್ವಜಸ್ಥಂಭದಲ್ಲಿ ಇರಿಸಿ ಎತ್ತಿಹಿಡಿಯುತ್ತಾನೆ. ಆ ಆಕೃತಿಯನ್ನು ನೋಡಿದವರು ವಿಷಬಾಧೆಯಿಂದ ಮುಕ್ತರಾಗುತ್ತಾರೆ. ಇದಾದ ಬಳಿಕ ಅವರು ವಾಗ್ದತ್ತ ನಾಡಿನತ್ತ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾರೆ. ಹಾಗೆ ಮುಂದುವರಿದ ಅವರು ಮತ್ತಾನ, ನಹಲಿಯೇಲ್ ಮತ್ತು ಬಾಮೋತ್ ಮೂಲಕ 'ಅಬಾರಿಮ್' ಬೆಟ್ಟಗಳ ಬಳಿಗೆ ತಲುಪುತ್ತಾರೆ(ಈ ಬೆಟ್ಟದ ಮೇಲೆ ಸರ್ಪದ ಆಕೃತಿಯ ಸ್ಥಂಭವೊಂದನ್ನು ರಚಿಸಿರುವುದನ್ನು ಕಾಣಬಹುದು).

ಮೋಸೆಸ್ ಮತ್ತು ಅವನ ಸೋದರ ಆರೋನನು ಮೆರಿಬಾ ಪ್ರವಾಹದ ಬಳಿಗೈದ ತಪ್ಪಿನಿಂದಾಗಿ ಅವರಿಬ್ಬರಿಗೂ. ವಾಗ್ದತ್ತ ನಾಡಿಗೆ ಕಾಲಿರಿಸಲು ದೇವರ ಅನುಮತಿ ಇರುವುದಿಲ್ಲ. ಇಬ್ಬರಿಗೂ ಜೋರ್ಡಾನ್ ನದಿಯನ್ನು  ದಾಟಕೂಡದೆಂದು ದೇವರು ಆಜ್ಞಾಪಿಸಿರುತ್ತಾರೆ. ಯಾಜಕನಾಗಿದ್ದ ಆರೋನನು ದೇವರ ಆಜ್ಞೆಯಂತೆ ಹೋರ್ ಬೆಟ್ಟದಲ್ಲಿ ತನ್ನ ಮಗ ಎಲ್ಲಾಜ಼ಾರನಿಗೆ ತನ್ನ ಪ್ರತಿಷ್ಟಿತ ಯಾಜಕ ಉಡುಪನ್ನು ತೆಗೆದುಕೊಟ್ಟ ಬಳಿಕ ಅಲ್ಲಿಯೇ ಪ್ರಾಣತ್ಯಾಗ ಮಾಡುತ್ತಾನೆ. ಅದಾದ ಬಳಿಕ ಮೋಸೆಸನು ಇಸ್ರಾಯೇಲರನ್ನು ಕರೆದುಕೊಂಡು ವಾಗ್ದತ್ತ

ನಾಡಿನತ್ತ ಮುಂದುವರಿಯುತ್ತಾನೆ; ಆದರೆ ವಾಗ್ದತ್ತ ನಾಡಿಗೆ ಕಾಲಿಡಲು ಅನುಮತಿಯಿಲ್ಲದೆ ಅವನು ದೂರದಿಂದ ಅದನ್ನು ನೋಡುವ ಅವಕಾಶವನ್ನು ದೇವರಿಂದ ಪಡೆದುಕೊಂಡಿರುತ್ತಾನೆ. ದೈವಚಿತ್ತಕ್ಕೆ ಅನುಸಾರವಾಗಿ ಅವನೊಂದು ಬೆಟ್ಟವನ್ನೇರಿ ವಾಗ್ದತ್ತ ನಾಡು(ಕಾನಾನ್ ದೇಶ)ವನ್ನು ವೀಕ್ಷಿಸುತ್ತಾನೆ. ಅವನು ಏರಿದ ಆ ಬೆಟ್ಟವನ್ನು 'ನೆಬೊ ಬೆಟ್ಟ'3(ಹೀಬ್ರೂ ಭಾಷೆಯಲ್ಲಿ ಇದನ್ನು 'ಹರ್‌ ನಿವೊ' ಎನ್ನಲಾಗುತ್ತದೆ) ಅಥವಾ 'ಪಿಸ್ಗಾ'4* ಎಂಬ ಬೆಟ್ಟದ ಶಿಖರವೆಂದು ಬೈಬಲ್‌ನ ಧರ್ಮೋಪದೇಶ ಕಾಂಡದಲ್ಲ್ಲಿ ಹೇಳಲಾಗಿದೆ. 'ಪಿಸ್ಗಾ'5 ಎಂಬ ಹೆಸರು ಬೈಬಲ್‌ನ ಇನ್ನಿತರ ಪುಸ್ತಕಗಳಲ್ಲೂ ಕಂಡು ಬರುತ್ತದೆ. ಪ್ರಸ್ತುತ ಈ ಶಿಖರವನ್ನು 'ಸ್ಯಾಘಾ ಪರ್ವತ(ಜಬಲ್ ಸ್ಯಾಘಾ)' ಪ್ರದೇಶವೆಂದು ಕರೆಯುತ್ತಾರೆ. ಇಲ್ಲಿ ಹಸಿರು ಕಣ್ಣಿಗೆ ಕಾಣಿಸುವುದು ಅಪರೂಪ. ಅಲ್ಲಲ್ಲಿ ಕೊಂಚ ಹಸಿರಿರುವುದನ್ನು ಹೊರತು ಪಡಿಸಿದರೆ ಇದರಾಚೆಗಿನ ಪ್ರದೇಶಗಳು ಒಂದು ರೀತಿಯ ಮರುಭೂಮಿಯೇ. ಮರಗಿಡಗಳು ಅಲ್ಲಲ್ಲಿ ಕಾಣಿಸಿಕೊಂಡರೆ ಹೆಚ್ಚು. ಮರಳು ಈ ಬೆಟ್ಟಗಳಲ್ಲಿ ವಿರಳ ಎನ್ನುವುದಷ್ಟೇ ಇಲ್ಲಿಯ ವಿಶೇಷ.


ಸಮುದ್ರ ಮಟ್ಟದಿಂದ ಸುಮಾರು 2338 ಅಡಿ ಎತ್ತರದ ಪಿಸ್ಗಾ ಶಿಖರದ ಕೆಳಭಾಗದಲ್ಲಿ ಇಸ್ರಾಯೇಲರು ಸಾಗಿಬಂದ ಬಾಮೋತ್ ಎಂಬ ಸ್ಥಳವೂ, ಇನ್ನೂ ಕೆಳಗೆ ಮೃತ ಸಮುದ್ರದ ಬಳಿ ನಹಲಿಯೇಲ್(ಲಾಷಾ)6 ಎಂಬ ಪ್ರದೇಶವೂ ಇರುವುದು ಪಿಸ್ಗಾ ಪರ್ವತಕ್ಕೆ ಒಂದು ಪ್ರಮುಖ ಸಾಕ್ಷಿಯೆನಿಸಿದೆ. ಸಾಮಾನ್ಯವಾಗಿ ಈ ಶಿಖರವು ವೆಸ್ಟ್ ಬ್ಯಾಂಕಿನಲ್ಲಿರುವ 'ಜೆರಿಕೋ' ಪಟ್ಟಣಕ್ಕೆ ಎದುರಾಗಿದ್ದು7  ಜೆರಿಕೊ ಪಟ್ಟಣವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಈ ಬೆಟ್ಟದಿಂದ ಇನ್ನಷ್ಟು ದೂರಕ್ಕೆ(ಪಶ್ಚಿಮ ದಿಕ್ಕಿಗೆ) ಕಣ್ಣು ಹಾಯಿಸಿದರೆ ದೂರದ ದಿಗಂತದ ಅಂಚಿನಲ್ಲಿ ಇಸ್ರೇಲಿನ ಜೆರುಸಲೇಂ ನಗರವೂ, ಅನತಿ ದೂರದಲ್ಲಿ ವೆಸ್ಟ್ ಬ್ಯಾಂಕಿನ ಬೆತ್ಲೆಹೇಮ್ ಪಟ್ಟಣವೂ ಗೋಚರಿಸುತ್ತವಾದರೂ ಅದು ತಿಳಿಯಾದ ವಾತಾವರಣವಿದ್ದಾಗ ಮಾತ್ರ ಸಾಧ್ಯ. ಅವುಗಳನ್ನಲ್ಲದೆ ಇನ್ನೂ ಹಲವಾರು ಪಟ್ಟಣ ಪ್ರದೇಶಗಳನ್ನೂ ಇಲ್ಲಿಂದ ವೀಕ್ಷಿಸಬಹುದಾಗಿದೆ.

ಈ ಪ್ರದೇಶವು ಮೋಸೆಸ್‌ನ ಕಾಲದಲ್ಲಿ ಮೊವಾಬ್ಯರ ನಾಡಾಗಿದ್ದು, ಚಿಪ್ಪೋರನ ಮಗ ಬಾಲಾಕನು ಇಲ್ಲಿಯ ಅರಸನಾಗಿರುತ್ತಾನೆ. ಈ ಶಿಖರದ ಕಿಬ್ಬಿಯಲ್ಲಿ ಅಪಾರ ಸಂಖ್ಯೆಯಲ್ಲಿ ಇಸ್ರಾಯೇಲರು ಬಂದು ಬೀಡುಬಿಟ್ಟಿರುವುದನ್ನು ಕಂಡು ಆತ ಭಯಪಡುತ್ತಾನೆ. ಬಳಿಕ ಅವನು ಬಯೋರನ ಮಗ ಬೀಳಾಮನೆಂಬ ಪ್ರವಾದಿಯಲ್ಲಿ ಮೊರೆಹೋಗಿ ಇಸ್ರಾಯೇಲರನ್ನು ಶಪಿಸಲು ಕೇಳಿಕೊಳ್ಳುತ್ತಾನೆ. ಅವರನ್ನು ಶಪಿಸಿದ ಬಳಿಕ ಅವರನ್ನು ಅನಾಯಾಸವಾಗಿ ಯುದ್ದದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಅವನದು. ಆದರೆ ಪ್ರವಾದಿಯು ಇಸ್ರಾಯೇಲರ ಮೇಲೆ ದೇವರ ಕೃಪಾಕಟಾಕ್ಷವಿರುವುದನ್ನು ದೇವರಿಂದಲೇ ತಿಳಿದು ಅವರನ್ನು ಶಪಿಸಲು ಹಿಂದೇಟು ಹಾಕುತ್ತಾನಲ್ಲದೇ ದೇವರ ಆಜ್ಞೆಯಂತೆ ಅವನು ನಡೆದುಕೊಳ್ಳುತ್ತಾನೆ8.

ಮೋಸೆಸ್‌ನು ದೈವೇಚ್ಚೆಯಂತೆ ವಾಗ್ದತ್ತ ನಾಡನ್ನು ಪರ್ವತದ ಶಿಖರದ ಮೇಲಿನಿಂದ ನೋಡಿದ ಬಳಿಕ ಮೃತನಾಗುತ್ತಾನೆ. ಅವನ ಶರೀರವನ್ನು ಬೆಟ್ಟದಲ್ಲಿಯೇ ಸಮಾಧಿ9 ಮಾಡಲಾಯಿತು ಎಂದು ಹೇಳುತ್ತದೆ ಬೈಬಲ್. ಇಸ್ಲಾಂ ಧರ್ಮವೂ ಇದನ್ನು ಸಮರ್ಥಿಸುತ್ತದೆ. ಹೀಬ್ರೂ ಬೈಬಲ್‌ನಲ್ಲಿ, ಸರ್ವೇಶ್ವರರೇ ಸ್ವಯಂ ಮೋಸೆಸ್‌ನ ಶರೀರವನ್ನು ಸಮಾಧಿ ಮಾಡಿದರು ಎಂದು ಹೇಳಲಾಗಿದೆ. ಆದರೆ ಜೆರಿಕೋದಿಂದ ದಕ್ಷಿಣಕ್ಕೆ ಹನ್ನೊಂದು ಕಿಲೋಮೀಟರ್ ದೂರದಲ್ಲಿ 'ಮಕಾಂ ಎಲ್-ನಬಿ ಮೂಸ' ಎಂಬಲ್ಲಿ ಮೋಸೆಸನದು ಎಂದು ಹೇಳಲಾಗುವ ಸಮಾಧಿಯೊಂದಿದೆ. ಪ್ರಾಯಶಃ ಅನೇಕ ವರ್ಷಗಳ ಬಳಿಕ ಮೋಸೆಸ್‌ನ ಶರೀರವನ್ನು ಬೆಟ್ಟದಿಂದ ತಂದು ಅಲ್ಲಿ ಸಮಾಧಿ ಮಾಡಿರಬೇಕು ಎಂದು ಅಲ್ಲಿಯ ಜನರು ಹೇಳುತ್ತಾರೆ.
ಯೆರೆಮೀಯ ಪ್ರವಾದಿಯು ಈ ಬೆಟ್ಟದಲ್ಲಿ ಕಾಣಿಸಿದ ಗುಹೆಯೊಂದರಲ್ಲಿ ದೇವದರ್ಶನದ ಗುಡಾರವನ್ನು, ಒಡಂಬಡಿಕೆಯ ಮಂಜೂಷವನ್ನು ಹಾಗೂ ಧೂಪವೇದಿಕೆಯನ್ನು ಇಟ್ಟು ಅದರ ದ್ವಾರವನ್ನು ಮುಚ್ಚಿ ಭದ್ರಪಡಿಸಿದ್ದನು ಎಂಬುದಾಗಿ ೨ಮಕ್ಕಾಬಿಯರ10 ಗ್ರಂಥದಲ್ಲಿ ವಿವರಿಸಲಾಗಿದೆ.


ಗಮನಾರ್ಹ ಅಂಶವೆಂದರೆ ಅಬಾರಿಮ್ ಬೆಟ್ಟಗಳ ಈ ಶ್ರೇಣಿಗಳನ್ನು ನೆಬೊ ಬೆಟ್ಟಗಳು ಎಂದೂ ಕರೆಯುವುದುಂಟು. ಪಿಸ್ಗಾ ಎಂಬುದು ಆ ಬೆಟ್ಟ ಶ್ರೇಣಿಯ ಒಂದು ಉನ್ನತ ಶಿಖರ ಮಾತ್ರ. ಇದಿರುವುದು ಮೃತ ಸಮುದ್ರದ ಉತ್ತರದ ತುದಿಯಿಂದ ನೇರ ಪೂರ್ವ ದಿಕ್ಕಿನಲ್ಲಿ. ಅಲ್ಲಿ ಕಾಣಸಿಗುವ ಒಂದು ಉನ್ನತ ಶಿಖರವೇ ಇದು ಎಂದು ಹೇಳಲಾಗುತ್ತದೆ. ಅದು ಪಿಸ್ಗಾ ಶಿಖರವಲ್ಲ ಎಂದು ತರ್ಕಿಸುವವರೂ ಇದ್ದಾರೆ. ಪಿಸ್ಗಾ ಬೆಟ್ಟದ ಬಳಿಗೆ ಪಾರಾನ್ ಮರಳುಗಾಡಿನ ಮೂಲಕ ಸಾಗುವಾಗ ಮೃತಸಮುದ್ರವನ್ನು ಬಳಸಿಯೇ ಸಾಗಬೇಕಿತ್ತು. ಆದರೆ ಮೋಸೆಸ್ ಪಿಸ್ಗಾದ ಬಳಿಗೆ ಹೋಗುವಾಗ ಎಲ್ಲೂ ಮೃತಸಮುದ್ರದ ಬಗ್ಗೆ ಪ್ರಸ್ತಾವಿಸುವುದಿಲ್ಲ ಅಥವಾ ಮೋಸೆಸ್ ಬರೆದ ಕೃತಿಗಳಲ್ಲಿ ಎಲ್ಲೂ ಮೃತಸಮುದ್ರದ ಬಗ್ಗೆ ಉಲ್ಲೇಖವಿಲ್ಲ.  ಮೋಸೆಸ್ 'ಅರ್ನೋನ್' ನದಿಯ ಬಳಿ ಬೀಡುಬಿಟ್ಟಿದ್ದ್ಟ ಬಗ್ಗೆ ಉಲ್ಲೇಖವಿದೆ. ಅರ್ನೋನ್ ನದಿ ಅಂದಿನ ಮೊವಾಬ್ಯರ ನಾಡಿನಲ್ಲಿ ಹರಿದು ಮೃತಸಮುದ್ರವನ್ನು ಸೇರುತ್ತದೆ. ಮೃತ ಸಮುದ್ರಕ್ಕೆ ಹೆಚ್ಚು ನೀರನ್ನುಣಿಸುವ ನದಿಗಳಲ್ಲಿ ಇದು ಎರಡನೆಯದು. ಮೊದಲ ಸ್ಥಾನದಲ್ಲಿರುವುದು ಜೋರ್ಡಾನ್ ನದಿ.

ಪ್ರಸ್ತುತ ಈ ಬೆಟ್ಟದಲ್ಲಿ ಮೋಸೆಸರ ಸ್ಮರಣಾರ್ಥ ನಿರ್ಮಿಸಲಾದ ಬೈಜಾಂಟಿಯನ್ ಕಾಲದ ಕ್ರೈಸ್ತ ದೇವಾಲಯವೊಂದು ಇದೆ. ಶಾಂತಿ ಸಂಕೇತದ ದೇವಾಲಯವೆಂಬ ಹೆಸರಿರುವ ಇದನ್ನು ಬಸಿಲಿಕಾ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮೋಸೆಸ್ ನಿಧನ ಹೊಂದಿದ ಸ್ಥಳವೆಂದು ಹೇಳಲಾಗುವ ಸ್ಥಳದಲ್ಲಿ ಈ ದೇವಾಲಯವಿದ್ದು ಇದರಡಿಯಲ್ಲಿ ಆರು ಸಮಾಧಿಗಳಿವೆ ಎಂದು ಹೇಳಲಾಗುತ್ತಿದೆ. ನಾಲ್ಕನೆಯ ಶತಮಾನದಲ್ಲಿ ಈ ದೇವಾಲಯವನ್ನು ಸಣ್ಣದಾಗಿ ನಿರ್ಮಿಸಿದ್ದು, ಐದನೆಯ ಶತಮಾನದಲ್ಲಿ ವಿಸ್ತರಿಸಲಾಯಿತು. 2007ರಿಂದ 2006ರವರೆಗಿನ ಅವಧಿಯಲ್ಲಿ ಈ ದೇವಾಲಯವನ್ನು ಸಂಪೂರ್ಣವಾಗಿ ನವೀಕರಿಸಲಾಯಿತು. ಈ ದೇವಾಲಯದ ಸನಿಹದಲ್ಲೇ ಒಂದು ವಿರಕ್ತಮಠವೂ ಇದ್ದು, ದೇವಾಲಯವೂ ಸೇರಿದಂತೆ ಇವುಗಳನ್ನು 1933ರಲ್ಲಿ ಪತ್ತೆ ಮಾಡಲಾಯಿತು ಎನ್ನಲಾಗುತ್ತಿದೆ. ಸನಿಹದಲ್ಲೇ ಸರ್ಪದ ಆಕೃತಿಯಿರುವ ಕಂಬವೊಂದಿದ್ದು ಮೋಸೆಸ್‌ನು ಮರಳುಗಾಡಿನಲ್ಲಿ ಸರ್ಪಗಳಿಂದ ಉಂಟಾದ ಉಪದ್ರವಗಳಿಂದ ತನ್ನ ಜನರನ್ನು ರಕ್ಷಿಸಲು ಮಾಡಿದ ಕಂಚಿನ ಸರ್ಪದ ಆಕೃತಿ ಇದೆಂದು ಹೇಳಲಾಗುತ್ತಿದೆ.

ಮಾರ್ಚ್ 2000ದಲ್ಲಿ ದ್ವಿತೀಯ ಪೋಪ್ ಜಗದ್ಗುರು ಜಾನ್ ಪೌಲ್ ಅವರು 'ಪವಿತ್ರ ಭೂಮಿ'ಯನ್ನು ಸಂದರ್ಶಿಸುವುದಕ್ಕೆ ಬಂದಾಗ ಈ ಪರ್ವತ ಪ್ರದೇಶಕ್ಕೂ ಭೇಟಿಯನ್ನು ಇತ್ತಿದ್ದರು. ಬಳಿಕ 2009ರಲ್ಲಿ ಪೋಪ್ ಜಗದ್ಗುರು ಹದಿನಾರನೆಯ ಬೆನೆಡಿಕ್ಟ್ ಅವರೂ ಸಹ ಈ ಸ್ಥಳಕ್ಕೆ ಭೇಟಿ ನೀಡಿದ್ದರು.

*ಬೈಬಲ್‌ನಲ್ಲಿ ಒಂದೆಡೆ 'ನೆಬೊ ಬೆಟ್ಟ'ವೆಂದೂ, ಇನ್ನೊಂದೆಡೆ 'ಪಿಸ್ಗಾ' ಎಂದು ಹೇಳಲಾಗಿದೆಯಾದರೂ ಅವೆರಡೂ ಒಂದೇ

1.       ಧರ್ಮೋಪದೇಶಕಾಂಡ 32:48-49       
2.       ಸಂಖ್ಯಾಕಾಂಡ 23:14
3.       ಧರ್ಮೋಪದೇಶಕಾಂಡ 32:48-49
4.       ಧರ್ಮೋಪದೇಶಕಾಂಡ 34:1                                    
5.       ಸಂಖ್ಯಾಕಾಂಡ 21:20 
6.       ಧರ್ಮೋಪದೇಶಕಾಂಡ 3:17, 3:27, 4:49, 34:1, ಯೆಹೋಶುವ 12:3, 13:20
7.       ಸಂಖ್ಯಾಕಾಂಡ 21:19
8.       ಸಂಖ್ಯಾಕಾಂಡ 22:1-44, 23:1-30, 24:1-25
9.       ಧರ್ಮೋಪದೇಶಕಾಂಡ 34:5
10.    2ಮಕ್ಕಾಬಿ 2:4-7


ಚಿತ್ರಗಳು: ಗೂಗಲ್‌ ಕೃಪೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ